ಶುಕ್ರವಾರ, ಮೇ 7, 2021
22 °C

ಕ್ರೀಡೆಗೆ ರಾಜಕೀಯ ಬೆರೆಸಬೇಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೊಡ್ಡಬಳ್ಳಾಪುರ: `ಶೈಕ್ಷಣಿಕ ಮತ್ತು ಕ್ರೀಡಾಭಿವೃದ್ಧಿ ವಿಚಾರದಲ್ಲಿ ರಾಜಕೀಯ ಬೆರೆಸಬೇಡಿ. ಇದರಿಂದ ಮಕ್ಕಳ ಭವಿಷ್ಯದ ಮೇಲೆ ದುಷ್ಪರಿಣಾಮ ಬೀರಲಿದೆ~ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಸಿ.ವಿ.ಲಕ್ಷ್ಮೀಪತಿ ಹೇಳಿದರು.  ತಾಲ್ಲೂಕಿನ ಸಾಸಲು ಹೋಬಳಿ ಹಿರಿಯ ಪ್ರಾಥಮಿಕ ಶಾಲೆಗಳ ಕ್ರೀಡಾ ಕೂಟದಲ್ಲಿ ಭಾಗವಹಿಸಿ ಅವರು ಮಾತನಾಡಿದರು.`ಅಧಿಕಾರ ಯಾರಿಗೂ ಶಾಶ್ವತ ಅಲ್ಲ. ಆದರೆ ಸ್ಥಳೀಯ ಚುನಾಯಿತ ಜನಪ್ರತಿನಿಧಿಗಳು ಸರಿಯಾದ ನಿರ್ಧಾರಗಳನ್ನು ಕೈಗೊಂಡು ವಿದ್ಯಾರ್ಥಿಗಳ ಯಶಸ್ಸಿಗೆ ಪೂರಕವಾಗುವಂತಹ ಯೋಜನೆಗಳನ್ನು ರೂಪಿಸಬೇಕು. ಗ್ರಾಮೀಣ ಪ್ರದೇಶದಲ್ಲಿ ಕ್ರೀಡಾ ಪಟುಗಳಿಗೆ ಕೊರತೆ ಇಲ್ಲ. ಆದರೆ ಸೂಕ್ತ ವೇದಿಕೆ ಕಲ್ಪಿಸಿ ಪ್ರೋತ್ಸಾಹಿಸುವ ಅಗತ್ಯವಿದೆ~ ಎಂದು ಹೇಳಿದರು.ಹೋಬಳಿ ಮಟ್ಟದ ಕ್ರೀಡಾ ಕೂಟ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಜಿ.ಭೀಮರಾಜು `ಕ್ರೀಡೆಗಳು ನಗರಗಳಿಗಷ್ಟೇ ಸೀಮಿತವಾಗುತ್ತಿವೆ ಎಂದರು. ಕಾರ್ಯಕ್ರಮದಲ್ಲಿ ದೈಹಿಕ ಶಿಕ್ಷಣ ಸಂಯೋಜಕ ಬಿ.ಜಿ.ಅಮರ್‌ನಾಥ್, ಶಿಕ್ಷಣ ಸಂಯೋಜಕ ಎಂ.ರಾಮಚಂದ್ರಯ್ಯ, ರಂಜಾನಾಯ್ಕ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ಬಿ.ಎಸ್.ಸಿದ್ದಗಂಗಯ್ಯ, ಕಾರ್ಯದರ್ಶಿ ಮಲ್ಲಿಕಾರ್ಜುನರೆಡ್ಡಿ, ತಾಲ್ಲೂಕು ಖಾಸಗಿ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಸಿದ್ದಗಂಗಾ ಮುಂತಾದವರು ಹಾಜರಿದ್ದರು.ನೇಣಿಗೆ ಶರಣು

ದೊಡ್ಡಬಳ್ಳಾಪುರ: ನಗರದ ಟಿ.ಬಿ ವೃತ್ತದ ಸಮೀಪವಿರುವ ಅರಣ್ಯ ಇಲಾಖೆ ಕಚೇರಿ ಹಿಂಭಾಗ ಅಪರಿಚಿತ ವೃದ್ದರೊಬ್ಬರು ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.ಸುಮಾರು 65 ವರ್ಷ ವಯಸ್ಸಿನ ಈ ವ್ಯಕ್ತಿ ಸುಮಾರು 5.5 ಅಡಿ ಎತ್ತರವಿದ್ದಾರೆ. ಕಪ್ಪು ಬಿಳಿ ಮಿಶ್ರಿತ ಕೂದಲು ಇದ್ದು, ಕುರುಚಲು ಗಡ್ಡವಿದೆ. ಇವರ ವಾರಸುದಾರರು ನಗರ ಪೊಲೀಸ್ ಠಾಣೆಯನ್ನು ಸಂಪರ್ಕಿಸಬಹುದಾಗಿದೆ.ಕಂಬ ಏರಿದ ವ್ಯಕ್ತಿ

ಆನೇಕಲ್:  ಬನ್ನೇರುಘಟ್ಟ ಪೊಲೀಸ್ ಠಾಣೆ ವ್ಯಾಪ್ತಿಯ ಲಕ್ಷ್ಮೀಪುರದ ಬಳಿ ವ್ಯಕ್ತಿಯೊಬ್ಬ ತನ್ನ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ  ವಿದ್ಯುತ್ ಕಂಬ ಏರಿದ ಘಟನೆ ನಡೆದಿದೆ.ಲಕ್ಷ್ಮೀಪುರದ ಚಂದ್ರಶೇಖರ್ ಎಂಬಾತ ಅಣ್ಣಾ ಹಜಾರೆ ಅವರು ಬರಬೇಕು, ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಬೇಕು ಎಂಬ ಬೇಡಿಕೆಯೊಂದಿಗೆ ಸಂಜೆ ಐದರ ಸುಮಾರಿಗೆ ಲಕ್ಷ್ಮೀಪುರದ ಬಳಿ ಹೈ ಟೆಂನ್ಷನ್ ವಿದ್ಯುತ್ ಕಂಬ ಏರಿದ ಈ ವ್ಯಕ್ತಿ ಪೊಲೀಸರು ಹಾಗೂ ಸಾರ್ವಜನಿಕರು ಮನವಿ ಮಾಡಿದರೂ ಇಳಿಯಲೇ ಇಲ್ಲ.ಸುಮಾರು 9.45ರ ವೇಳೆಗೆ ಕಂಬದಿಂದ ಕೆಳಗಿಳಿದಿದ್ದಾನೆ. ಈತನ ಹುಚ್ಚಾಟದಿಂದಾಗಿ ಬನ್ನೇರುಘಟ್ಟ, ಗೊಟ್ಟಿಗೆರೆ, ಜಿಗಣಿ ಸೇರಿದಂತೆ ಹಲವು ಗ್ರಾಮಗಳು ಐದು ಗಂಟೆಗಳಿಗೂ ಹೆಚ್ಚುಕಾಲ ವಿದ್ಯುತ್ ಇಲ್ಲದೇ ಪರದಾಡುವಂತಾಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.