ಗುರುವಾರ , ಫೆಬ್ರವರಿ 25, 2021
26 °C
ವಾರದ ಸಂದರ್ಶನ: ಪ್ರೊ. ಕೆ.ಗುಣಪಾಲ ಕಡಂಬ ಕಂಬಳ ಸಂಘಟಕ, ಪ್ರಧಾನ ತೀರ್ಪುಗಾರ

ಕ್ರೌರ್ಯ ನಿಲ್ಲಿಸದಿದ್ದರೆ ಕಂಬಳಕ್ಕೂ ನಿಷೇಧ ನಿಶ್ಚಿತ

ಎಂ.ಜಿ.ಬಾಲಕೃಷ್ಣ Updated:

ಅಕ್ಷರ ಗಾತ್ರ : | |

ಕ್ರೌರ್ಯ ನಿಲ್ಲಿಸದಿದ್ದರೆ ಕಂಬಳಕ್ಕೂ ನಿಷೇಧ ನಿಶ್ಚಿತ

ಜಲ್ಲಿಕಟ್ಟು ಮತ್ತು ಹೋರಿ ಓಟದ ಸ್ಪರ್ಧೆಗಳಿಗೆ ಸುಪ್ರೀಂ ಕೋರ್ಟ್‌ ತಡೆ ಒಡ್ಡಿದೆ. ಇದರ ಪ್ರಭಾವ ಕರಾವಳಿ ಕರ್ನಾಟಕದ ಸಾಂಪ್ರದಾಯಿಕ ಕ್ರೀಡೆ ಕಂಬಳದ ಮೇಲೂ ಆಗುವ ಸಾಧ್ಯತೆಗಳು ಕಾಣಿಸತೊಡಗಿವೆ. ರಾಜ್ಯ ಸರ್ಕಾರ ಷರತ್ತುಬದ್ಧ ಕಂಬಳ ನಡೆಸಲು ಸದ್ಯ ಅವಕಾಶ ನೀಡಿದ್ದರೂ ಕಂಬಳದಲ್ಲಿ ಕೋಣಗಳಿಗೆ ಹಿಂಸೆ ನೀಡಲಾಗುತ್ತಿದೆ ಎಂಬುದನ್ನು ಸಾಕ್ಷ್ಯ ಸಹಿತ ಬಿಂಬಿಸಿದರೆ ಕಂಬಳವೂ ನಿಷೇಧದ ಪಟ್ಟಿಯಲ್ಲಿ ಸೇರುವ ಅಪಾಯ ಇದ್ದೇ ಇದೆ.46 ವರ್ಷಗಳಿಂದ ಕಂಬಳದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಹಾಗೂ ಆಧುನಿಕ ಕಂಬಳಕ್ಕೆ ನಿಯಮ ರೂಪಿಸಿ, ಶಿಸ್ತಿನ ಚೌಕಟ್ಟಿಗೆ ಒಳಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುವ ನಿವೃತ್ತ ಪ್ರಾಚಾರ್ಯ ಪ್ರೊ. ಕೆ.ಗುಣಪಾಲ ಕಡಂಬ ಅವರು ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.

* ಸುಪ್ರೀಂ ಕೋರ್ಟ್‌ ಆದೇಶ ಕಂಬಳಕ್ಕೆ ಅನ್ವಯಿಸುವುದಿಲ್ಲವೇ?

ಸುಪ್ರೀಂ ಕೋರ್ಟ್‌ ಆದೇಶದಲ್ಲಿ ಕಂಬಳದ ಉಲ್ಲೇಖವೇ ಇಲ್ಲ. ಕಂಬಳ ಬಿಡಿ, ಕೋಣನ ಹೆಸರೇ ಇಲ್ಲ. ಈ ಹಿಂದೆಯೂ ಕಂಬಳದ ಉಲ್ಲೇಖ ಎಲ್ಲಿಯೂ ಆಗಿಲ್ಲ. ಸುಪ್ರೀಂ ಕೋರ್ಟ್‌ ಹೇಳಿರುವುದು ಏನಿದ್ದರೂ ಜಲ್ಲಿಕಟ್ಟು ಮತ್ತು ಹೋರಿ ಓಟದ ಸ್ಪರ್ಧೆ ಬಗ್ಗೆ ಮಾತ್ರ. ಅಂದರೆ ಹೋರಿಗಳ ಓಟದ ಸಂಬಂಧ ಉಂಟಾಗುವ ಹಿಂಸೆ, ಸಾವು–ನೋವಿನ ಕಾರಣಕ್ಕೆ ಸುಪ್ರೀಂ ಕೋರ್ಟ್‌ ಆದೇಶ ನೀಡಿದೆ.* ಮತ್ತೇಕೆ ಕಂಬಳವೂ ನಿಷೇಧಗೊಳ್ಳುತ್ತದೆಂಬ ಆತಂಕ?

ಪ್ರಾಣಿಗಳಿಗೆ ಹಿಂಸೆ ಆಗುತ್ತದೆ ಎಂಬ ಪ್ರಾಣಿ ದಯಾ ಸಂಘದ ವಾದವನ್ನು ಪುರಸ್ಕರಿಸಿದ ಸುಪ್ರೀಂ ಕೋರ್ಟ್‌ ಜಲ್ಲಿಕಟ್ಟು, ಹೋರಿ ಓಡಿಸುವ ಸ್ಪರ್ಧೆಗಳಲ್ಲಿ ಈ ಮೊದಲು ನಡೆದಿದ್ದ ಹಿಂಸೆ, ಸಾವು–ನೋವುಗಳನ್ನು ಗಮನಿಸಿ ತನ್ನ ಆದೇಶ ನೀಡಿದೆ.  ಕಂಬಳದಲ್ಲಿ ಇದುವರೆಗೆ ಯಾವುದೇ ಪ್ರಾಣಹಾನಿಯೂ ಸಂಭವಿಸಿಲ್ಲ. ಹೀಗಿದ್ದರೂ ನಿಷೇಧದ ಆತಂಕ ಏಕೆಂದರೆ ಕೆಲವೇ ಮಂದಿ ಮಾಡುವ ತಪ್ಪಿನಿಂದ. ಎಷ್ಟೇ ಹೇಳಿದರೂ ಬುದ್ಧಿಮಾತನ್ನು ಕಿವಿಗೆ ಹಾಕಿಕೊಳ್ಳದ ಕೆಲವು ಮಂದಿ ಕೋಣಗಳಿಗೆ ಮನಬಂದಂತೆ ಹೊಡೆಯುವ ಪ್ರವೃತ್ತಿ ಮುಂದುವರಿಸಿರುವುದರಿಂದ. ಅವರು ಮಾಡುವ ತಪ್ಪಿಗೆ ಶತಮಾನಗಳಿಂದ ಮುಂದುವರಿದುಕೊಂಡು ಬಂದಿರುವ ಕೃಷಿ ಪದ್ಧತಿಯ ಪರಂಪರೆಯೇ ಅಪಾಯಕ್ಕೆ ಸಿಲುಕುವ ಸ್ಥಿತಿ ಬಂದಿದೆ.* ಕೋಣಗಳಿಗೆ ಹೊಡೆಯಬೇಡಿ ಎಂದು ನೀವು ಹೇಳುವುದಿಲ್ಲವೇ?

ನಾವು ಪದೇ ಪದೇ ಹೇಳುತ್ತೇವೆ. ಈಗ ಹೊಡೆಯುವ ಪ್ರಮಾಣ ಬಹುಮಟ್ಟಿಗೆ ಕಡಿಮೆಯಾಗಿದೆ. ಆದರೆ ಕಂಬಳದ ಗದ್ದೆಯಿಂದ ದೂರದಲ್ಲಿರುವ ಟೆಂಟ್‌ಗಳಲ್ಲಿ ಕೋಣಗಳಿಗೆ ಹೊಡೆದಾಗ ನಾವು ಏನೂ ಮಾಡುವಂತಿಲ್ಲ. ಸರ್ಕಾರ ವಿಧಿಸಿದ ಷರತ್ತಿನಂತೆ ಈಗ  ತಹಶೀಲ್ದಾರ್‌, ಪೊಲೀಸ್ ಇನ್‌ಸ್ಪೆಕ್ಟರ್‌ ಸಮ್ಮುಖದಲ್ಲೇ ಕಂಬಳ ನಡೆಯುತ್ತಿದೆ. ಆದರೂ ಕೋಣಗಳಿಗೆ ಹೊಡೆಯುತ್ತಾರೆ ಎಂದರೆ ಅದು ನಮ್ಮಲ್ಲೇ ತಪ್ಪು ಇರುವುದನ್ನು ತೋರಿಸುತ್ತದೆ. ಸ್ವಯಂ ನಿಯಂತ್ರಣದ ಹೊರತು ಬೇರೊಂದು ದಾರಿಯೂ ಇದೆ. ಕೋಣಗಳಿಗೆ ಹೊಡೆಯುವವರನ್ನು ಪೊಲೀಸರು ಬಂಧಿಸಲಿ, ಒಂದಿಬ್ಬರನ್ನು ಬಂಧಿಸಿದಾಗ ಕೋಣಗಳ ಮೇಲೆ ಕ್ರೌರ್ಯ ನಡೆಸುವವರ ಪ್ರಮಾಣ ಇನ್ನಷ್ಟು ತಗ್ಗಬಹುದು.* ಪೊಲೀಸರು ಬಂಧಿಸಲಿ ಎನ್ನುತ್ತೀರಿ, ಬಂಧಿಸಿದವರನ್ನು ಪ್ರಭಾವ ಬೀರಿ ನೀವೇ ತಕ್ಷಣ ಬಿಡಿಸಿಕೊಳ್ಳುವುದಿಲ್ಲವೇ?

ಕೋಣಗಳ ಮೇಲೆ ಕ್ರೌರ್ಯ ಮಾಡಿ ಬಂಧಿತರಾದವರ ನೆರವಿಗೆ ನಾವು ಖಂಡಿತ ಬರುವುದಿಲ್ಲ. ಕರಾವಳಿ ಭಾಗದಲ್ಲಿ ಕಂಬಳದಲ್ಲಿ ಪಾಲ್ಗೊಳ್ಳುವ ಕೋಣಗಳ ಜೋಡಿ ಇರುವುದು ಸುಮಾರು 200 ಮಾತ್ರ. ಕೋಣ ಓಡಿಸುವವರ ಪೈಕಿ ಶೇ 60ರಷ್ಟು ಮಂದಿ ಕಂಬಳ ಸಂರಕ್ಷಣೆ, ನಿರ್ವಹಣೆ ಮತ್ತು ತರಬೇತಿ ಅಕಾಡೆಮಿಯಿಂದ ತರಬೇತಿ ಪಡೆದವರು. ಇವರು ಆತ್ಮರಕ್ಷಣೆಯ ಹೊರತು ಅನಗತ್ಯವಾಗಿ ಕೋಣಗಳಿಗೆ ಹೊಡೆಯುವುದಿಲ್ಲ ಎಂಬ ಬಲವಾದ ನಂಬಿಕೆ ನನ್ನದು. ಆದರೂ ದಾರಿ ತಪ್ಪಿದವರನ್ನು ತಕ್ಷಣ ತಿದ್ದುವ, ಮೈಕ್‌ನಲ್ಲೇ ಅವರ ವರ್ತನೆ ತಿಳಿಸಿ, ಕೋಣಗಳ ಯಜಮಾನರ ಹೆಸರನ್ನೂ ಕರೆದು ಹೇಳಿದಾಗ ಅವರು ತಮ್ಮ ತಪ್ಪನ್ನು ತಿದ್ದಿಕೊಳ್ಳುತ್ತಿದ್ದಾರೆ. ಆದರೂ ಏಳೆಂಟು ಜೋಡಿ ಕೋಣಗಳನ್ನು ಓಡಿಸುವವರು ಈಗಲೂ ಕೋಣಗಳಿಗೆ ಹೊಡೆಯುತ್ತಾರೆಂಬ ಸಂಶಯ ಇದೆ. ಮುಂದಿನ ದಿನಗಳಲ್ಲಿ ಹೊಡೆಯುವುದನ್ನು ಸಂಪೂರ್ಣವಾಗಿ ಇಲ್ಲವಾಗಿಸಲು ಖಂಡಿತ ಪ್ರಯತ್ನಿಸುತ್ತೇವೆ.* ಹಾಗೆ ಹೇಳುವವರು ಕೋಲನ್ನು ಇನ್ನೂ ಜತೆಯಲ್ಲೇ ಇಟ್ಟುಕೊಂಡಿದ್ದೀರಲ್ಲ?

ಕೋಲು ಇರುವುದು ಆತ್ಮರಕ್ಷಣೆಗಾಗಿ. ಕೊಬ್ಬಿದ ಕೋಣವನ್ನು ನಿಯಂತ್ರಿಸುವುದು ಅಷ್ಟು ಸುಲಭವಲ್ಲ. ಮೇಲಾಗಿ ಸಾಲಲ್ಲಿ ಓಡುತ್ತಿರುವ ಕೋಣ ಸಾಲು ತಪ್ಪಿ ನಡೆದಾಗ ಅದನ್ನು ನಿಯಂತ್ರಿಸಲು ಕೋಲು ಬೇಕೇ ಬೇಕು. ಕೋಣವನ್ನು ಕಂಬಳದ ಗದ್ದೆಗೆ ಇಳಿಸುವಾಗ ಕೋಣನ ಯಜಮಾನ ಮತ್ತು ಓಡಿಸುವಾತನ ಕೈಯಲ್ಲಿ ಕೋಲು ಇರುವುದು ಒಂದು ಗೌರವದ ಪ್ರತೀಕ. ಹಾಗಂತ ಕೋಲನ್ನು ಕೈಯಲ್ಲಿ ಹಿಡಿಯದೆಯೂ ಕಂಬಳ ನಡೆಸುವ ಪ್ರಯೋಗವೂ ಆರಂಭವಾಗಿದೆ. ಮೂಗಿನ ದಾರ ಹಾಕುವುದೂ ಅಗತ್ಯ. ಆದರೆ ಕೆಲವರು ಮೂರು ಮೂರು ಮೂಗಿನ ದಾರ ಹಾಕುವುದಿದೆ. ಇದು ತಪ್ಪು.* ಆದರೆ ಹೊಡೆಯುವ, ಬಡಿಯುವ ದೃಶ್ಯಗಳು ಅಲ್ಲಲ್ಲಿ ಹರಿದಾಡುತ್ತಲೇ ಇವೆಯಲ್ಲ?

ನೋಡಿ, ನಾವು ತಪ್ಪಿರುವುದು ಇಲ್ಲೇ. ನೀವೆಲ್ಲ ನೋಡಿದ್ದೀರಲ್ಲ ಕೋಣಗಳಿಗೆ ಹೊಡೆಯುವ ಕ್ರೌರ್ಯದ ದೃಶ್ಯ. ಅದು ಆಗಿರುವುದು ಮಂಗಳೂರಿನ ಕದ್ರಿ ಕಂಬಳದಲ್ಲಿ. ಅಲ್ಲಿಗೆ ಏಳು ಜತೆ ಕೋಣಗಳೂ ಬರುತ್ತಿರಲಿಲ್ಲ. ಅಲ್ಲಿ ಕೆಸರು ಗದ್ದೆಯಲ್ಲಿ ಬಿದ್ದಿದ್ದ ಕೋಣವನ್ನು ಎಬ್ಬಿಸಲು ಹೊಡೆದು ಹಿಂಸೆ ಕೊಟ್ಟ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಯಿತು. ವಿಡಿಯೊ ರೂಪದಲ್ಲಿ ಅದಕ್ಕೆ ಬಹಳ ಪ್ರಚಾರ ಸಿಕ್ಕಿಬಿಟ್ಟಿತು. ಸಚಿವೆ ಮೇನಕಾ ಗಾಂಧಿ ಅವರು ಸಹ ಇದೇ ವಿಡಿಯೊ ನೋಡಿ ಕಂಬಳ ನಿಷೇಧಿಸಬೇಕು ಎಂಬ ಹಟಕ್ಕೆ ಬಿದ್ದಿರುವುದು. ಆದರೆ ಇಂದು ಯಾವ ಕಂಬಳ ಗದ್ದೆಯಲ್ಲೂ ಹೀಗೆ ಹೊಡೆಯುವ ದೃಶ್ಯ ಕಾಣಲು ಸಾಧ್ಯವೇ ಇಲ್ಲ.ಕಂಬಳ ಗದ್ದೆಯಿಂದ ದೂರದಲ್ಲಿ ಎಲ್ಲೋ ಕೋಣಗಳಿಗೆ ಹೀಗೆ ಹೊಡೆಯುವುದನ್ನೂ ಮಾಡಬಾರದು ಎಂಬುದೇ ನಮ್ಮ ಕಳಕಳಿ. ಕಂಬಳ ನೋಡದವರೂ ಕಂಬಳ ನಿಷೇಧಿಸಬೇಕೆಂದು ಟಿ.ವಿ. ವಾಹಿನಿಗಳ ಸ್ಟುಡಿಯೊಗಳಲ್ಲಿ ಬಂದು ಕುಳಿತು ಒತ್ತಾಯಿಸುವುದು ಇಂಥ ಕೆಲವು ವಿಡಿಯೊ ತುಣುಕುಗಳಿಂದ. ಕೋಣಗಳಿಗೆ ಹೊಡೆಯುವುದು ಬೇರೆ, ಹೊಡೆದು ಹಿಂಸಿಸಿ ಕ್ರೌರ್ಯ ಮೆರೆಯುವುದು ಬೇರೆ. ಕೋಣಗಳನ್ನು ಪ್ರೀತಿಯಿಂದ ಸಾಕಿ ವರ್ಷದ ಒಂದೋ, ಎರಡೋ ದಿನ ಕಂಬಳದ ದಿನ ಹೊಡೆಯುವುದು ಅವುಗಳು ಸರಿಯಾಗಿ ಓಡಲಿ ಎಂದೇ ಹೊರತು ದುರುದ್ದೇಶದಿಂದಲ್ಲ. ಕೋಣಗಳಿಗೆ ಹೆಂಡ ಕುಡಿಸಲಾಗುತ್ತಿದೆ, ಬಾಲ ತಿರುಚಲಾಗುತ್ತಿದೆ ಎಂಬ ಆರೋಪಗಳೆಲ್ಲ ಸತ್ಯಕ್ಕೆ ದೂರ.* ಹಿಂಸೆ ನಡೆಯುತ್ತಿದೆ ಎಂದು ಗೊತ್ತಿದ್ದರೂ ಕಂಬಳ ಮುಂದುವರಿಯಲೇಬೇಕು ಎಂದು ಹೇಳುತ್ತೀರಲ್ಲ ಏಕೆ?

ಕಂಬಳ ಎಂದರೆ ಕೋಣಗಳ ಓಟದ ಸ್ಪರ್ಧೆ ಎಂಬ ತಪ್ಪು ಕಲ್ಪನೆಯೇ ಎಲ್ಲೆಡೆ ಮನೆ ಮಾಡಿದೆ. ಕಂಬಳದ ಬಗ್ಗೆ ಅಪಸ್ವರ ಏಳಲು ಇದೇ ಕಾರಣ. ಈಗ ನೀವೆಲ್ಲ ನೋಡುತ್ತಿರುವ ಆಧುನಿಕ ಕಂಬಳ ಇದೆಯಲ್ಲ ಇದಕ್ಕೆ ಕೇವಲ 46 ವರ್ಷಗಳ ಇತಿಹಾಸ.  ಆದರೆ ಸಾಂಪ್ರದಾಯಿಕ ಕಂಬಳಕ್ಕೆ ನೂರಾರು ವರ್ಷಗಳ ಇತಿಹಾಸ ಇದೆ. ಸಾಂಪ್ರದಾಯಿಕ ಕಂಬಳ ಎಂದರೆ ಅದು ಭಕ್ತಿ ಪ್ರಧಾನವಾದ ಕೃಷಿ ಚಟುವಟಿಕೆಯ ಒಂದು ಭಾಗ. ಅಲ್ಲಿ ವ್ರತ, ನಿಯಮಗಳು ಬಹಳ ಮುಖ್ಯ. ಉಡುಪಿ ತಾಲ್ಲೂಕಿನ ವಂಡಾರಿನ ಕಂಬಳ, ಬೆಳ್ತಂಗಡಿ ತಾಲ್ಲೂಕಿನ ಕೊಕ್ಕಡಕೋರಿ ಕಂಬಳಗಳಲ್ಲಿ ಇಂದಿಗೂ ಅಂತಹ ಸಂಪ್ರದಾಯವನ್ನು ನೋಡಬಹುದು. ಮೂಲ್ಕಿ ಅರಸು ಕಂಬಳ, ಐಕಳ ಬಾವ ಕಂಬಳಗಳಲ್ಲಿ ಸಹ ಹಳೆಯ ಸೊಗಡನ್ನು ನೋಡಲು ಸಾಧ್ಯ. ಕರಾವಳಿಯಲ್ಲಿ ಇಂತಹ ಸುಮಾರು 200 ಕಂಬಳಗಳಿವೆ. ಸುಗ್ಗಿ, ಕಾರ್ತಿ, ಕೊಳಕೆ ಬೆಳೆಗಳ ಅವಧಿಯಲ್ಲಿ ಮಾತ್ರ ಉಳುಮೆಗೆ ಬಳಸಿದ ಕೋಣಗಳನ್ನು ಸಾಲಾಗಿ ನಿಲ್ಲಿಸಿ ಓಡಿಸುವ ಸಂಪ್ರದಾಯ ಇತ್ತು. ಹಲವು ಶಾಸನಗಳಲ್ಲೂ ಕಂಬಳದ ಉಲ್ಲೇಖ ಇದೆ. ಒಂದಿಷ್ಟು ಮನರಂಜನೆ ಇರಲಿ ಎಂಬ ಕಾರಣಕ್ಕೆ ಸಾಂಪ್ರದಾಯಿಕ ಕಂಬಳಕ್ಕೆ ಸ್ಪರ್ಧೆಯ ರೂಪ ಕೊಡಲಾಯಿತು. ಅದುವೇ ಆಧುನಿಕ ಕಂಬಳ ಆರಂಭವಾಗಲು ಕಾರಣ. ಆಧುನಿಕ ಕಂಬಳ ನಡೆಯುವುದು ಸುಮಾರು 28 ಕಡೆಗಳಲ್ಲಿ ಮಾತ್ರ.* ಕೃಷಿಗೂ–ಕಂಬಳಕ್ಕೂ ಸಂಬಂಧ ಎನ್ನುತ್ತೀರಲ್ಲ ಹೇಗೆ?

ಹಿಂದೆ ಜನರಿಗೆ ಈಗಿನಂತೆ ವಿವಿಧ ಮನರಂಜನೆಗಳಿಗೆ ಅವಕಾಶ ಇರಲಿಲ್ಲ. ಕಂಬಳ ಎಂಬುದು ಸುಮಾರು ಒಂದು ತಿಂಗಳ ಜಾತ್ರೆಯೇ ಆಗಿತ್ತು. ನೊಗ, ನೇಗಿಲು, ಬಳ್ಳ, ಗೆರಸೆ, ತುರಿಮಣೆ ಸಹಿತ ಕೃಷಿ, ಮನೆ ಬಳಕೆಗೆ ಬೇಕಾದ ಎಲ್ಲ ವಸ್ತುಗಳನ್ನು ಅಲ್ಲಿ ಮಾರಾಟ ಮಾಡಲಾಗುತ್ತಿತ್ತು. ಆ ಸಂಬಂಧ ಈಗಲೂ ಕೊನೆಗೊಂಡಿಲ್ಲ. ಕಂಬಳದ ಕೋಣಗಳನ್ನು ಉಳಿದ ದಿನಗಳಲ್ಲಿ ಉಳುಮೆಗೆ ಬಳಸಲಾಗುತ್ತಿದೆ. ಕೇವಲ ಕಂಬಳಕ್ಕಾಗಿಯೇ ಕೋಣಗಳನ್ನು ಸಾಕುವವರು ಯಾರೂ ಇಲ್ಲ.* ಕಂಬಳಕ್ಕೆ ಇಷ್ಟೆಲ್ಲ ಇತಿಹಾಸ ಇದ್ದರೂ ಕಳೆದ ವರ್ಷ ಉಡುಪಿಯ ಜಿಲ್ಲಾಧಿಕಾರಿ ಕಂಬಳ ನಿಷೇಧಿಸಿ ಹೇಗೆ ಆದೇಶ ನೀಡಿದರು?

ಕಳೆದ ವರ್ಷ ಪ್ರಾಣಿ ದಯಾ ಸಂಘದವರು ಮೊದಲು ಕಂಬಳಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಅವರು ನೇರವಾಗಿ ಸಂಪರ್ಕಿಸಿದ್ದು ಪಶುಸಂಗೋಪನಾ ಇಲಾಖೆಯ ಅಂದಿನ ಪ್ರಧಾನ ಕಾರ್ಯದರ್ಶಿಯಾಗಿದ್ದ ಹರ್ಷ ಗುಪ್ತ ಅವರನ್ನು. ಹರ್ಷ ಗುಪ್ತ ಅವರು ಯಾವ ಜನಪ್ರತಿನಿಧಿಯನ್ನೂ ಸಂಪರ್ಕಿಸದೆ ಕಂಬಳ ನಿಷೇಧಿಸಲು ಸೂಚಿಸಿ ಉಡುಪಿ ಜಿಲ್ಲಾಧಿಕಾರಿ ಅವರಿಗೆ ಮೇಲ್‌ ಮಾಡಿದರು.ಹಿಂದಿನ ದಿನವಷ್ಟೇ ಉಡುಪಿಗೆ ವರ್ಗವಾಗಿ ಬಂದಿದ್ದ ಜಿಲ್ಲಾಧಿಕಾರಿ ಅವರಿಗೂ ಕಂಬಳದ ಇತಿಹಾಸದ ಪರಿಚಯ ಇದ್ದಂತಿರಲಿಲ್ಲ. ಅವರೂ ಕಂಬಳ ನಿಷೇಧಿಸಲು ಸೂಚಿಸಿ ಪಶುಸಂಗೋಪನಾ ಇಲಾಖೆಯ ಉಪನಿರ್ದೇಶಕರಿಗೆ ಮೇಲ್‌ ಮಾಡಿದರು. ಹೈಕೋರ್ಟ್‌ನಲ್ಲಿ ಎಂಟು ವಾರಗಳ ತಡೆಯಾಜ್ಞೆ ತೆರವಾದ ಬಳಿಕ ಕಂಬಳದ ಮೇಲಿನ ನಿಷೇಧ ಕೊನೆಗೊಂಡಿತು. ಪಶುವೈದ್ಯಕೀಯ ವಿಶ್ವವಿದ್ಯಾಲಯದ ಪರಿಣತರ ತಂಡ ಸಮಗ್ರವಾಗಿ ಅಧ್ಯಯನ ನಡೆಸಿ ವರದಿ ನೀಡಿದ ಮೇರೆಗೆ ಕಂಬಳದ ಮೇಲಿನ ನಿಷೇಧದ ಭಯ ದೂರವಾಗುವಂತಾಗಿದೆ. ಇತ್ತೀಚೆಗೆ ಮತ್ತೆ ಕಂಬಳ ವಿವಾದ ಎದುರಾದಾಗಲೂ ಸರ್ಕಾರ ಮತ್ತೆ ಷರತ್ತುಬದ್ಧ ಕಂಬಳಕ್ಕೆ ಆದೇಶ ನೀಡಿದೆ. ನಾವು ಇದೀಗ ಸರ್ಕಾರದ ಸೂಚನೆಯಂತೆ ಕಟ್ಟುನಿಟ್ಟಾಗಿ ಅಹಿಂಸಾತ್ಮಕವಾಗಿ ಕಂಬಳ ನಡೆಸುತ್ತಿದ್ದೇವೆ.* ಕಂಬಳದಲ್ಲೂ ಬೆಟ್ಟಿಂಗ್‌ ನಡೆಯುತ್ತಿದೆಯಂತೆ, ನಿಜವೇ?

ಬೆಟ್ಟಿಂಗ್‌ ಯಾವ ಕ್ಷೇತ್ರದಲ್ಲಿ ಇಲ್ಲ ಹೇಳಿ? ಕಂಬಳದಲ್ಲೂ ಅಂತಹ ದಂಧೆ ಆರಂಭವಾಗಿದೆ ಎಂಬ ಮಾತು ನನ್ನ ಕಿವಿಗೂ ಬಿದ್ದಿದೆ. ಅಷ್ಟೇಕೆ ಆನ್‌ಲೈನ್‌ನಲ್ಲೇ ಕಂಬಳ ಬೆಟ್ಟಿಂಗ್ ನಡೆಯುತ್ತಿರುವ ಮಾಹಿತಿಯೂ ಇದೆ. ಇಂತಹ ದಂಧೆ ತಪ್ಪಿಸುವ ಸಲುವಾಗಿ ಕಳೆದ ವರ್ಷದಿಂದ ‘ಚಾಂಪಿಯನ್‌ ಆಫ್‌ ದಿ ಇಯರ್‌’ ಪ್ರಶಸ್ತಿ ನೀಡುವುದನ್ನು ಕೈಬಿಡಲಾಗಿದೆ. ಕಂಬಳದಲ್ಲಿ ಅನೌನ್‌್ಸ ಮಾಡುವಾಗ ನಾವು ಪರೋಕ್ಷವಾಗಿ ಬೆಟ್ಟಿಂಗ್‌ ದಂಧೆಯಲ್ಲಿ ತೊಡಗಬೇಡಿ ಎಂಬ ಸೂಚನೆ ನೀಡುತ್ತಲೇ ಇರುತ್ತೇವೆ.* ನೀವೊಂದು ಅಕಾಡೆಮಿ ಸಂಚಾಲಕರು, ಕಂಬಳ ಸುಧಾರಣೆಗೆ ನಿಮ್ಮ ಅಕಾಡೆಮಿ ಕೈಗೊಂಡ ಕ್ರಮಗಳೇನು?

ಕಂಬಳ ಸಂರಕ್ಷಣೆ, ನಿರ್ವಹಣೆ ಮತ್ತು ತರಬೇತಿ ಅಕಾಡೆಮಿ ಕಳೆದ 5 ವರ್ಷಗಳಿಂದ 110 ಆಸಕ್ತ ಯುವಕರಿಗೆ ಕಂಬಳ ಕೋಣ ಓಡಿಸುವ ತರಬೇತಿ ನೀಡಿದೆ. ಕೋಣಗಳಿಗೆ ಹೊಡೆಯಬಾರದು ಎಂಬ ನಿಯಮವನ್ನು ಇವರು ಕಟ್ಟುನಿಟ್ಟಾಗಿ ಪಾಲಿಸುತ್ತಾ ಬಂದಿದ್ದಾರೆ. ಇವರಲ್ಲೂ ಕೆಲವರು ಕೋಣಗಳಿಗೆ ಹೊಡೆದುದು ಕಂಡುಬಂದಾಗ ಎಚ್ಚರಿಕೆ ನೀಡಿ ಅವರು ಹಾಗೆ ಮಾಡದಂತೆ ಕ್ರಮ ಕೈಗೊಳ್ಳಲಾಗಿದೆ.ಅಕಾಡೆಮಿಯಲ್ಲಿ ತರಬೇತಿ ಪಡೆದವರು ಮಾತ್ರ ಮುಂದಿನ ದಿನಗಳಲ್ಲಿ ಕಂಬಳ ಕೋಣ ಓಡಿಸುವ ನಿಟ್ಟಿನಲ್ಲಿ ಪ್ರಯತ್ನ ಸಾಗಿದೆ. ಕಂಬಳದ ತೀರ್ಪು ನೀಡುವಲ್ಲೂ ಬಹಳ ಸುಧಾರಣೆಗಳಾಗಿವೆ. ಲೇಸರ್‌ ಸ್ಕ್ರೀನ್‌ ನೆಟ್‌ವರ್ಕ್‌ ಸಿಸ್ಟಮ್‌ನಂತಹ ಅತ್ಯಾಧುನಿಕ ವ್ಯವಸ್ಥೆಗಳಿಂದಾಗಿ ಫಲಿತಾಂಶದಲ್ಲಿ ಆಗುತ್ತಿದ್ದ ವಿವಾದಗಳು ಬಹುತೇಕ ಕೊನೆಗೊಂಡಿವೆ. ಆದರೆ ಇಂತಹ ಸುಧಾರಣಾ ಕ್ರಮಗಳಿಗಾಗಿ ನನಗೆ ಜೀವ ಬೆದರಿಕೆಗಳೂ ಎದುರಾಗಿವೆ. ಶ್ರೀಮಂತರೇ ಒಂದು ಕಾಲಕ್ಕೆ ಕಂಬಳದ ಫಲಿತಾಂಶದಲ್ಲೂ ಮುಂದೆ ಇರುತ್ತಿದ್ದರು. ಇಂದು ಪ್ರತಿಭಾವಂತ ಕೋಣಗಳಿಗೆ ಮತ್ತು ಕೋಣ ಓಡಿಸುವವರಿಗೆ ನ್ಯಾಯ ಸಿಗುವಂತಾಗಿದೆ. ಇಂತಹ ವ್ಯವಸ್ಥೆ ಮಾಡಿದ್ದಕ್ಕೇ ನನಗೆ ಬೆದರಿಕೆಗಳು ಬಂದಿದ್ದವು. ಆದರೆ ನಾನು ಅವುಗಳಿಗೆ ಅಂಜಿಲ್ಲ.* ಜೀವ ಬೆದರಿಕೆಗಳಿಗೆ ಅಂಜಿಲ್ಲ, ಆದರೆ ನಿಷೇಧದ ಬೆದರಿಕೆಗೆ ಈಗ ಅಂಜಲೇಬೇಕಲ್ಲ, ಏನಂತೀರಿ?

ಇದೀಗ ರಾಜ್ಯ ಸರ್ಕಾರದ ಆದೇಶದಂತೆ ಕಂಬಳ ನಡೆಯುತ್ತಿದೆ. ಕೆಲವು ಷರತ್ತುಗಳನ್ನು ವಿಧಿಸಿ ಕಂಬಳ ನಡೆಯುವುದಕ್ಕೆ ಅವಕಾಶ ಕಲ್ಪಿಸಲಾಗಿದೆ. ಕಂಬಳ ಕೋಣಗಳ ಯಜಮಾನರು, ಕೋಣಗಳನ್ನು ಓಡಿಸುವವರು, ಕೋಣಗಳ ಪರಿಚಾರಕರು ಈ ಷರತ್ತುಗಳನ್ನು ಪಾಲಿಸಲೇಬೇಕು. ಕೋಣಗಳ ಮೇಲೆ ಕ್ರೌರ್ಯ ಎಸಗುವುದಕ್ಕೆ ಯಾವ ಕಾರಣಕ್ಕೂ ಸಾಧ್ಯವಿಲ್ಲ.

ಇನ್ನು ಮುಂದೆ ಕ್ರೌರ್ಯ ನಡೆಸಿದ್ದು ಸಾಬೀತಾದರೆ ಪ್ರಾಣಿ ದಯಾ ಸಂಘದವರು ಮಾತ್ರವಲ್ಲ, ಸಾರ್ವಜನಿಕರೂ ಕಂಬಳ ನಿಷೇಧಿಸಬೇಕೆಂದು ಒತ್ತಾಯಿಸುವ ಸಂದರ್ಭ ಒದಗಬಹುದು. ಅದಕ್ಕೆ ಅವಕಾಶ ಮಾಡಿಕೊಡುವುದು ಬೇಡ, ಸಾಂಪ್ರದಾಯಿಕ ಕಂಬಳಕ್ಕೆ ಖಂಡಿತ ಸಾವಿಲ್ಲ. ಅದನ್ನು ನಿಷೇಧಿಸಲೂ ಸಾಧ್ಯವಿಲ್ಲ. 46 ವರ್ಷ ಇತಿಹಾಸದ ಆಧುನಿಕ ಕಂಬಳವೂ ನೂರಾರು ವರ್ಷ ನಿರಾತಂಕವಾಗಿ ಸಾಗಬೇಕೆಂದಾದರೆ ಕೋಣಗಳನ್ನು ನಿರ್ವಹಿಸುವವರಲ್ಲಿ ಸ್ವಯಂ ನಿಯಂತ್ರಣವಂತೂ ಬೇಕೇ ಬೇಕು. ಇಲ್ಲವಾದರೆ ನಿಷೇಧದ ಕತ್ತಿ ಯಾವ ಹೊತ್ತಲ್ಲಾದರೂ ತಲೆ ಮೇಲೆ ಬೀಳಬಹುದು ಎಂಬ ಎಚ್ಚರಿಕೆಯನ್ನು ನಾನು ಎಲ್ಲರಿಗೂ ನೀಡಲು ಬಯಸುತ್ತೇನೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.