ಸೋಮವಾರ, ಮೇ 23, 2022
30 °C

ಕ್ಷೇತ್ರ ಬಿಟ್ಟು ಕೊಡದ ಮರಿತಿಬ್ಬೇಗೌಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ದಕ್ಷಿಣ ಶಿಕ್ಷಕರ ಕ್ಷೇತ್ರದ ಮತದಾರರು ಸತತ ಮೂರನೇ ಬಾರಿಗೂ ಮರಿತಿಬ್ಬೇಗೌಡ ಅವರಿಗೆ ವಿಜಯಮಾಲೆ ಹಾಕಿದ್ದಾರೆ. ಇದರೊಂದಿಗೆ  ಮರಿತಿಬ್ಬೇಗೌಡ ಕ್ಷೇತ್ರದ ಮೇಲೆ ಹಿಡಿತವನ್ನು ಮತ್ತಷ್ಟು ಬಿಗಿಗೊಳಿಸಿದ್ದಾರೆ.ಈ ಬಾರಿ ಗೌಡರ ಗೆಲುವಿಗೆ `ಬ್ರೇಕ್~ ಹಾಕುವ ಮೂಲಕ `ಹ್ಯಾಟ್ರಿಕ್~ ಗೆಲುವು ತಪ್ಪಿಸಲು ಕಾಂಗ್ರೆಸ್‌ನ ಎಂ.ಲಕ್ಷ್ಮಣ್, ಬಿಜೆಪಿಯ ಎಸ್.ಎಂ.ಗುರುನಂಜಯ್ಯ ಕಳೆದ 9 ತಿಂಗಳಿಂದ ಹಗಲು-ರಾತ್ರಿ ಕೆಲಸ ಮಾಡಿದ್ದರು. ಆದರೂ ಗೌಡರನ್ನು ಸೋಲಿಸಲು ಸಾಧ್ಯವಾಗಲೇ ಇಲ್ಲ.ಮೂರು ಪ್ರಮುಖ ಪಕ್ಷಗಳ ಅಭ್ಯರ್ಥಿಗಳಾದ ಮರಿತಿಬ್ಬೇಗೌಡ, ಎಂ.ಲಕ್ಷ್ಮಣ್, ಎಸ್.ಎಂ.ಗುರುನಂಜಯ್ಯ ಗೆಲುವಿಗಾಗಿ ಎಲ್ಲ ರೀತಿಯ ತಂತ್ರಗಾರಿಕೆ ಮತ್ತು ಕಸರತ್ತು ನಡೆಸಿದ್ದರು. ಆದರೆ ಅಂತಿಮವಾಗಿ ಜೆಡಿಎಸ್‌ನ ಮರಿತಿಬ್ಬೇಗೌಡ ಗೆಲುವು ಸಾಧಿಸಿದರು.ಕ್ಷೇತ್ರದಲ್ಲಿ ಒಟ್ಟು 22,062 ಮತದಾರರಿದ್ದು, ಇವರಲ್ಲಿ 14,739 ಮಂದಿ (ಶೇ. 66.81) ಮತ ಚಲಾಯಿಸಿದ್ದರು. ಇದರಿಂದಾಗಿ 7066 ಮತಗಳ ಕೋಟಾವನ್ನು ನಿಗದಿಪಡಿಸಲಾಯಿತು. ಪ್ರಥಮ ಪ್ರಾಶಸ್ತ್ಯ ಮತಗಳ ಎಣಿಕೆಯಲ್ಲಿ ಜೆಡಿಎಸ್ ಮರಿತಿಬ್ಬೇಗೌಡ 5936, ಕಾಂಗ್ರೆಸ್ ಎಂ.ಲಕ್ಷ್ಮಣ್ 4217, ಬಿಜೆಪಿಯ ಎಸ್. ಎಂ.ಗುರುನಂಜಯ್ಯ 3869, ಪಕ್ಷೇತರ ಲಕ್ಷ್ಮಣ್ 56, ಸಮಾಜವಾದಿ ಜನತಾ ಪಾರ್ಟಿಯ ದ್ಯಾವಪ್ಪ ನಾಯ್ಕ 38, ಜೆ.ಜಯರಾಜ್ 14 ಮತಗಳನ್ನು ಪಡೆದರು. ಪ್ರಥಮ ಸುತ್ತಿನಲ್ಲಿ ಯಾವ ಅಭ್ಯರ್ಥಿಯೂ ಕೋಟಾವನ್ನು ತಲುಪಲಿಲ್ಲ. ಹೀಗಾಗಿ ಕಡಿಮೆ ಮತಗಳನ್ನು ಪಡೆದವರನ್ನು ಎಣಿಕೆ ಯಿಂದ ಹೊರಗಿಡುವ ಸುತ್ತು ಆರಂಭವಾಯಿತು. ಕ್ರಮವಾಗಿ ಜೆ.ಜಯರಾಜ್, ದ್ಯಾವಪ್ಪ ನಾಯ್ಕ, ಲಕ್ಷ್ಮಣ್ ಎಣಿಕೆಯಿಂದ ಹೊರಗಳಿದರು.ಗುರುನಂಜಯ್ಯ ಹೊರಕ್ಕೆ: ಈ ವೇಳೆಗೆ ಆಡಳಿತಾರೂಢ ಬಿಜೆಪಿ ಅಭ್ಯರ್ಥಿ ಗುರುನಂಜಯ್ಯ 3890 ಮತಗಳನ್ನು ಪಡೆದಿದ್ದರು. ಇವರಿಂದ ಎರಡನೇ ಪ್ರಾಶಸ್ತ್ಯದ ಮತಗಳನ್ನು ಮರಿತಿಬ್ಬೇಗೌಡ ಹಾಗೂ ಎಂ.ಲಕ್ಷ್ಮಣ್‌ಗೆ ವರ್ಗಾ ಯಿಸ ಲಾಯಿತು. ಗುರುನಂಜಯ್ಯನವರಿಂದ ಮರಿತಿಬ್ಬೇಗೌಡರಿಗೆ 1072 ಮತಗಳು, ಎಂ.ಲಕ್ಷ್ಮಣ್‌ಗೆ 1371 ಮತಗಳು ವರ್ಗಾವಣೆಗೊಂಡವು. ಆದರೂ ಮರಿತಿಬ್ಬೇಗೌಡ ಕೋಟಾ ತಲುಪಲು 29 ಮತಗಳ ಕೊರತೆ ಉಂಟಾಯಿತು. ಹೀಗಾಗಿ ಎಂ.ಲಕ್ಷ್ಮಣ್ ಅವರಿಂದ ಮತಗಳನ್ನು ವರ್ಗಾಯಿಸುವ ಪ್ರಕ್ರಿಯೆ ಮುಗಿದಾಗ ಮರಿತಿಬ್ಬೇಗೌಡ 10,354 ಮತ ಪಡೆದು ಜಯ ಗಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.