ಶುಕ್ರವಾರ, ಫೆಬ್ರವರಿ 26, 2021
25 °C
ಮನದ ಮಾತು ಕಾರ್ಯಕ್ರಮ

ಖಾದಿ ಬಳಕೆ, ಬೆಳೆವಿಮೆ ಮತ್ತು ಸ್ಟಾರ್ಟ್‌ಅಪ್‌ ಯೋಜನೆ....

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಖಾದಿ ಬಳಕೆ, ಬೆಳೆವಿಮೆ ಮತ್ತು ಸ್ಟಾರ್ಟ್‌ಅಪ್‌ ಯೋಜನೆ....

ನವದೆಹಲಿ (ಪಿಟಿಐ): ಖಾದಿ ಬಳಕೆ, ಸೌರಶಕ್ತಿಯ ಉಪಯೋಗ, ಸ್ಟಾರ್ಟ್ಅಪ್ ಯೋಜನೆಯ ಅಮಿತ ಅವಕಾಶಗಳು ಹಾಗೂ ಪ್ರಧಾನ ಮಂತ್ರಿ ಬೆಳೆ ವಿಮೆ ಯೋಜನೆಯ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ‘ಮನದ ಮಾತು’ ರೇಡಿಯೊ ಕಾರ್ಯಕ್ರಮದಲ್ಲಿ ಭಾನುವಾರ ಪ್ರಸ್ತಾಪಿಸಿದರು.

ಹೊಸ ವರ್ಷದ ಮೊದಲ ಕಾರ್ಯಕ್ರಮವನ್ನು ಮೋದಿ ಅವರು ಮಹಾತ್ಮ ಗಾಂಧಿ ಅವರ ಪುಣ್ಯತಿಥಿ ಆಚರಣೆಯ ಪ್ರಸ್ತಾಪ‌ದೊಂದಿಗೆ ಆರಂಭಿಸಿದರು.

ಬಳಿಕ ಖಾದಿ ವಿಷಯ ಕುರಿತು ಅವರು ಮಾತನಾಡಿದರು. ಈ ಸಂಬಂಧ ಸರ್ದಾರ್ ವಲ್ಲಭ್‌ಭಾಯ್‌ ಪಟೇಲ್ ಅವರ ಮಾತುಗಳನ್ನು ನೆನಪಿಸಿಕೊಂಡರು.

‘ಭಾರತದ ಸ್ವಾತಂತ್ರ್ಯ ಖಾದಿಯಲ್ಲಿಯೇ ಇದೆ. ಭಾರತದ ಸಭ್ಯತೆಯೂ ಅದರಲ್ಲಿಯೇ ಇದೆ. ಭಾರತೀಯರು ಬಲವಾಗಿ ನಂಬುವ ಅಹಿಂಸೆಯೂ ಖಾದಿಯಲ್ಲಿಯೇ ಉಂಟು. ಭಾರತೀಯ ರೈತರ ಕಲ್ಯಾಣವೂ ಖಾದಿಯಲ್ಲಿಯೇ ಅಡಗಿದೆ’ ಎಂದು ಪ್ರಧಾನಿ ಸರ್ದಾರ್  ಪಟೇಲ್ ಅವರ ಮಾತುಗಳನ್ನು ಉಲ್ಲೇಖಿಸಿದರು.

ಖಾದಿಯು ಇತ್ತೀಚೆಗೆ ಒಂದು ಸಂಕೇತವಾಗಿ ಮಾರ್ಪಟ್ಟಿದೆ. ವಿಶಿಷ್ಠ ಗುರುತನ್ನು ತನ್ನದಾಗಿಸಿಕೊಂಡಿದೆ. ಯುವಶಕ್ತಿಯ ಆಕರ್ಷಣೆಯ ಕೇಂದ್ರವೂ ಎನಿಸಿದೆ. ಫ್ಯಾಷನ್ ರೂಪದಲ್ಲೂ ಖಾದಿ ಸ್ಥಾನಗಿಟ್ಟಿಸಿದೆ ಎಂದರು.

ಹಿಂದೆಲ್ಲ ಖಾದಿಯ ವಿಪುಲ ಬಳಕೆಯಾಗುತ್ತಿತ್ತು. ಆದರೆ, ಆಧುನಿಕತೆಯ ಹೆಸರಲ್ಲಿ ಅದೆಲ್ಲವೂ ಕಡಿಮೆಯಾಯಿತು. ಖಾದಿಯನ್ನು ನೆಚ್ಚಿಕೊಂಡಿದ್ದ ಬಡವರು ನಿರುದ್ಯೋಗಿಗಳಾಗುತ್ತ ಬಂದರು. ಆದರೆ, ಕೋಟ್ಯಂತರ ಜನರಿಗೆ ಉದ್ಯೋಗ ನೀಡುವ ಸಾಮರ್ಥ್ಯ ಖಾದಿಯಲ್ಲಿದೆ ಎಂದು ಪ್ರತಿಪಾದಿಸಿದರು. ಅದಕ್ಕೆ ಹಲವು ಉದಾಹರಣೆಗಳನ್ನೂ ನೀಡಿದರು.

ಬಳಿಕ ಅವರು ಮಾತು ಸೋಲಾರ್ ಚರಕ ಹಾಗೂ ಅದರ ಅಗತ್ಯ, ಉಪಯೋಗ, ಗುಣಮಟ್ಟದತ್ತ ವಾಲಿತು.

ನಂತರ ಅವರು ಜನವರಿ 26 ಗಣ್ಯರಾಜ್ಯೋತ್ಸವ ಸಡಗರವನ್ನು ನೆನೆದು, ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆಯ ಯಶಸ್ಸಿನ ಕುರಿತು ಮಾತನಾಡಿದರು. ಗಣತಂತ್ರ ದಿನದಂದು ಹರಿಯಾಣ ಹಾಗೂ ಗುಜರಾತ್ ರಾಜ್ಯಗಳ ಸರ್ಕಾರಿ ಶಾಲೆಗಳು ಉನ್ನತ ಶಿಕ್ಷಣ ಪಡೆದ ಹೆಣ್ಣು ಮಕ್ಕಳನ್ನು ಆಹ್ವಾನಿಸಿ ಅವರಿಂದ  ಧ್ವಜಾರೋಹಣಕ್ಕೆ ಮಾಡಿಸಿದವು. ಈ ಮೂಲಕ ಯೋಜನೆಯನ್ನು ಉತ್ತೇಜಿಸಿದವು ಎಂದರು.

ಬಳಿಕ ಪ್ರಧಾನ ಮಂತ್ರಿ ಬೆಳೆ ವಿಮಾ ಯೋಜನೆಯ ಹೆಗ್ಗಳಿಕೆಯ ಕುರಿತು ಮಾತನಾಡಿದರು. ಜನವರಿಯಲ್ಲಿ 16ರಂದು ಜಾರಿಗೊಂಡ ಸ್ಟಾರ್ಟ್ಅಪ್‌ ಯೋಜನೆ ಕೇವಲ ಐಟಿ ವಲಯಕ್ಕೆ ಸೀಮಿತವಲ್ಲ. ಅದು ಎಲ್ಲರಿಗೂ ಅಪರಿಮಿತ ಅವಕಾಶಗಳನ್ನು ಒದಗಿಸುತ್ತದೆ ಎಂದರು.

ಬಳಿಕ ಸ್ವಚ್ಛತೆ, ಅಂತರರಾಷ್ಟ್ರೀಯ ಸೇನಾ ಸಹಕಾರ ಹಾಗೂ ವಿದ್ಯಾರ್ಥಿಗಳ ಪರೀಕ್ಷೆಯ ವಿಷಯಗಳನ್ನು ಪ್ರಸ್ತಾಪಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.