ಶನಿವಾರ, ಫೆಬ್ರವರಿ 27, 2021
23 °C

ಖಾರ ಮೆಣಸಿನಕಾಯಿಗೆ ಒಳ್ಳೆಯ ದರ

ವೈ.ಗ. ಜಗದೀಶ್‌ Updated:

ಅಕ್ಷರ ಗಾತ್ರ : | |

ಖಾರ ಮೆಣಸಿನಕಾಯಿಗೆ ಒಳ್ಳೆಯ ದರ

ಬೆಂಗಳೂರು: ಬ್ಯಾಡಗಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ(ಎಪಿಎಂಸಿ)ಯಲ್ಲಿ  ಆನ್‌ಲೈನ್‌ ಟೆಂಡರ್‌ ಜಾರಿಯಿಂದಾಗಿ ಒಣಮೆಣಸಿನ ಕಾಯಿ ಆವಕ  ಹೆಚ್ಚಾಗಿದ್ದರೂ ರೈತರಿಗೆ ಉತ್ತಮ ಬೆಲೆ ಸಿಕ್ಕಿದೆ.ಕರ್ನಾಟಕ ಸರ್ಕಾರ ಒಂದೂವರೆ ವರ್ಷದ ಹಿಂದೆ ಆರಂಭಿಸಿದ್ದ ರಾಷ್ಟ್ರೀಯ ಇ –ಮಾರುಕಟ್ಟೆ ಸೇವೆ (ಆರ್‌ಇಎಂಎಸ್‌) ರೈತರ ಲಾಭದ ಪ್ರಮಾಣವನ್ನು ಗಣನೀಯವಾಗಿ ಹೆಚ್ಚಿಸಿದೆ.2014ರಲ್ಲಿ 8.61 ಲಕ್ಷ ಕ್ವಿಂಟಲ್‌ ಆವಕವಾಗಿದ್ದರೆ, 2015ರಲ್ಲಿ 9.81 ಲಕ್ಷ ಕ್ವಿಂಟಲ್‌ ಆವಕವಾಗಿದೆ.  ಪ್ರತಿ ಕ್ವಿಂಟಲ್‌ಗೆ ಸರಾಸರಿ ₹1,000 ಹೆಚ್ಚಿನ ದರ ರೈತರಿಗೆ ಸಿಕ್ಕಿದೆ.ಒಣಮೆಣಸಿನ ಕಾಯಿ ಅತಿ ಹೆಚ್ಚು ಆವಕವಾಗುವ ದಕ್ಷಿಣಭಾರತದ ಮಾರುಕಟ್ಟೆಗಳ ಪೈಕಿ ಹಾವೇರಿ ಜಿಲ್ಲೆ ಬ್ಯಾಡಗಿ ಎಪಿಎಂಸಿ ಮುಂಚೂಣಿ ಮಾರುಕಟ್ಟೆಯಾಗಿದೆ. ಕಳೆದ ಆರು ದಶಕಗಳಿಂದ ಇಲ್ಲಿ ಒಣಮೆಣಸಿನಕಾಯಿ ವ್ಯಾಪಾರ ಅವಿರತ ನಡೆಯುತ್ತಿದೆ. ಆಂಧ್ರಪ್ರದೇಶ, ತಮಿಳುನಾಡು, ಮಹಾರಾಷ್ಟ್ರದ ರೈತರು ಇಲ್ಲಿಗೆ ಮೆಣಸಿನಕಾಯಿ ತಂದು ಮಾರಾಟ ಮಾಡುತ್ತಾರೆ. ಈ ಮಾರುಕಟ್ಟೆಯಲ್ಲಿ ಹರಾಜು ಕೂಗುವ ಮೆಣಸಿನಕಾಯಿ ವಿದೇಶಗಳಿಗೆ ರಫ್ತಾಗುವ ಗುಣಮಟ್ಟದ್ದು ಎಂಬ ಹೆಗ್ಗಳಿಕೆ ಪಡೆದಿದೆ.ಆನ್‌ಲೈನ್‌ ಟ್ರೇಡಿಂಗ್ ಆರಂಭಿಸುವ ಮೊದಲು (2014ರ ನವೆಂಬರ್‌) ಸಿಬ್ಬಂದಿ ಅವಲಂಬಿತ ಪದ್ಧತಿಯಲ್ಲಿ ವಹಿವಾಟು ನಡೆಯುತ್ತಿತ್ತು.  ಸೋಮವಾರ ಮತ್ತು ಗುರುವಾರ ರೈತರು ಉತ್ಪನ್ನ  ತರುತ್ತಿದ್ದರು. ಚೀಲದ ಮೇಲಿನ ಸಂಖ್ಯೆಗೆ (ಲಾಟ್‌ ಸಂಖ್ಯೆ) ಎಷ್ಟು ದರ ನೀಡುತ್ತೇವೆ ಎಂದು ಬರೆದ ಚೀಟಿಯನ್ನು ಖರೀದಿದಾರರು ಟೆಂಡರ್‌ ಡಬ್ಬಿಗಳಲ್ಲಿ ಹಾಕುತ್ತಿದ್ದರು.ಖರೀದಿದಾರ ಯಾವ ಲಾಟ್‌ನ ಸಂಖ್ಯೆಗೆ ಎಷ್ಟುದರ ನಿಗದಿಮಾಡಿದ್ದಾನೆ ಎಂಬ ಚೀಟಿಯನ್ನು ಪರಿಶೀಲಿಸಿದ ಎಪಿಎಂಸಿ ಸಿಬ್ಬಂದಿಗಳು, ರೈತರ ಹುಡುಕಿ ನೀವು ತಂದ ಚೀಲಕ್ಕೆ ಇಷ್ಟು ದರದಲ್ಲಿ ಟೆಂಡರ್‌ ಕೂಗಲಾಗಿದೆ ಎಂದು ವಿವರಿಸಬೇಕಿತ್ತು.  ರೈತರು ದರಪಟ್ಟಿ ಒಪ್ಪಿಕೊಂಡ ಬಳಿಕ, ರೈತರ ಉತ್ಪನ್ನಗಳನ್ನು ತೂಕ ಮಾಡಿ, ರೈತರಿಗೆ ಹಣ ಕೊಡಿಸಿ ಹಾಗೂ ಖರೀದಿದಾರರಿಗೆ ಉತ್ಪನ್ನ ಸಾಗಿಸಲು ಪರವಾನಗಿ ನೀಡಬೇಕಿತ್ತು.ಕೆಲವೇ ಟೆಂಡರ್‌ದಾರರು ಖರೀದಿಯಲ್ಲಿ ಪಾಲ್ಗೊಳ್ಳುತ್ತಿದ್ದರು.  ಹೆಚ್ಚಿನ ಪ್ರಮಾಣದಲ್ಲಿ ಉತ್ಪನ್ನಗಳು ಆವಕವಾದಾಗ, ತಮ್ಮಲ್ಲಿಯೇ ಮಾತನಾಡಿಕೊಂಡು ಕಡಿಮೆ ದರಕ್ಕೆ ಹರಾಜು ಕೂಗುವ ಪದ್ಧತಿಯನ್ನೂ ಖರೀದಿದಾರರು ಅಳವಡಿಸಿಕೊಂಡು ಬಂದಿದ್ದರು. ಇದರಿಂದಾಗಿ ಸ್ಪರ್ಧಾತ್ಮಕತೆ ಇಲ್ಲದೇ, ರೈತರಿಗೆ ನಷ್ಟವಾಗುತ್ತಿತ್ತು. ವಹಿವಾಟಿನಲ್ಲಿ ಪಾರದರ್ಶಕತೆ ಇಲ್ಲವೆಂಬ ಅಪವಾದವೂ ಇತ್ತು.ಆನ್‌ಲೈನ್‌ ವಹಿವಾಟು: ರಾಷ್ಟ್ರೀಯ ಇ–ಮಾರುಕಟ್ಟೆ ಸೇವೆ ಆರಂಭಿಸಿದ ಬಳಿಕ ಆನ್‌ಲೈನ್‌ ಟೆಂಡರ್‌ ವ್ಯವಸ್ಥೆಯು ಬ್ಯಾಡಗಿ ಎಪಿಎಂಸಿಯಲ್ಲಿ  ಸ್ಪರ್ಧಾತ್ಮಕತೆ ಹೆಚ್ಚಿಸಿದೆ. ದೇಶದ ಯಾವುದೇ ಮೂಲೆಯಲ್ಲಿ ಕುಳಿತ ಖರೀದಿದಾರ ಆನ್‌ಲೈನ್‌ನಲ್ಲಿಯೇ ಮೆಣಸಿನಕಾಯಿ ಗುಣಮಟ್ಟ, ದರ ತಿಳಿದು ಖರೀದಿ ಮಾಡಲು ಅವಕಾಶ ಕಲ್ಪಿಸಲಾಗಿದೆ.ಇದರಿಂದಾಗಿ 2014ರಲ್ಲಿ  ಸರಾಸರಿ 60 ಖರೀದಿದಾರರು ಪಾಲ್ಗೊಂಡು ಟೆಂಡರ್‌ ಕೂಗುತ್ತಿದ್ದ ಎಪಿಎಂಸಿಯಲ್ಲಿ 2015ರಲ್ಲಿ 195 ಖರೀದಿದಾರರು ಪಾಲ್ಗೊಳ್ಳುವಂತಾಗಿದೆ. ಉತ್ಪನ್ನ ಖರೀದಿಯಲ್ಲಿ ಸ್ಪರ್ಧಾತ್ಮಕತೆ ಹೆಚ್ಚಾಗಿದ್ದರಿಂದಾಗಿ ಸಹಜವಾಗಿ ರೈತರಿಗೆ ಲಾಭದಾಯಕ ಬೆಲೆ ಸಿಕ್ಕಿದೆ ಎಂದು ಆರ್‌ಇಎಂಎಸ್‌ ನಡೆಸಿ ಅಧ್ಯಯನ ವಿವರಿಸಿದೆ. ವಹಿವಾಟಿನ ದಿನ ಮಾರಾಟಕ್ಕಿಟ್ಟ ಮೆಣಸಿನಕಾಯಿ ಚೀಲಗಳಿಗೆ ಅಥವಾ ಲಾಟ್‌ಗಳಿಗೆ ಪ್ರತ್ಯೇಕ ಸಂಖ್ಯೆ ನೀಡಿ ಆವಕ ಪಟ್ಟಿ ತಯಾರಿಸಲಾಗುತ್ತದೆ. ಗುಣಮಟ್ಟ ಆಧರಿಸಿ ವರ್ಗೀಕರಣ ಮಾಡಿ, ಮಾಹಿತಿಯನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್‌ ಮಾಡಲಾಗುತ್ತದೆ.ಬಳಿಕ ಆನ್‌ಲೈನ್‌ ಹಾಗೂ ಸ್ಥಳೀಯ ಖರೀದಿದಾರರು ನಮೂದಿಸಿದ ಗರಿಷ್ಠ ದರಗಳ ಪಟ್ಟಿಯನ್ನು ಅಂತಿಮಗೊಳಿಸಿ ಟೆಂಡರ್‌ ಡಿಕ್ಲರೇಷನ್‌ (ಯಾರು ಎಷ್ಟು ದರಕ್ಕೆ ಖರೀದಿಸಲು ಮುಂದೆ ಬಂದಿದ್ದಾರೆ ಎಂಬ ವಿವರ) ಮಾಡಲಾಗುತ್ತದೆ. ಈ ಮಾಹಿತಿಯನ್ನು ಎಸ್ಸೆಮ್ಮೆಸ್‌ ಮೂಲಕ ರೈತರ ಮೊಬೈಲ್‌ಗೂ ಕಳಿಸಿ, ಮಾಹಿತಿ ನೀಡಲಾಗುತ್ತದೆ.ಹರಾಜು  ಸಭಾಂಗಣದ  ಟಿ.ವಿ. ಪರದೆಯ ಮೇಲೆ ಯಾವ ಚೀಲ ಅಥವಾ ಲಾಟ್‌ನ್ನು ಎಷ್ಟು ಗರಿಷ್ಠ ದರಕ್ಕೆ ಖರೀದಿ ಮಾಡಲು ಖರೀದಿದಾರ ಮುಂದೆ ಬಂದಿದ್ದಾರೆಂದು ಪ್ರಕಟಿಸಲಾಗುತ್ತದೆ. ರೈತರು ಅಂದಿನ ದರಕ್ಕೆ ಒಪ್ಪಿಗೆ ಸೂಚಿಸಿದರೆ ರೈತರಿಗೆ ಉತ್ಪನ್ನ ಮಾರಾಟವಾದ ಲೆಕ್ಕ ತೀರುವಳಿ ಪಟ್ಟಿ ನೀಡಲಾಗುತ್ತದೆ. ಅದೇ ಸಂಜೆ ರೈತರಿಗೆ ತಮ್ಮ ಉತ್ಪನ್ನ ಮಾರಾಟ ಮಾಡಿದ ಮೊತ್ತ ಸಿಗುವ ವ್ಯವಸ್ಥೆ ಇದಾಗಿದೆ.ಮೆಣಸಿನಕಾಯಿ ಹರಾಜಿನಲ್ಲಿ ಬೇಕಾಬಿಟ್ಟಿ ದರ ಕೂಗುವ ವ್ಯವಸ್ಥೆ ತಪ್ಪಿದೆ. ಇದರಿಂದ ರೈತರಿಗೆ ಲಾಭದಾಯಕ ಬೆಲೆ ಸಿಗುತ್ತಿದೆ

-ರುದ್ರಪ್ಪ, ರೈತಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ 225ರಷ್ಟು ಸ್ಪರ್ಧಾತ್ಮಕತೆ ಹೆಚ್ಚಾಗಿದೆ. ರೈತರಿಗೆ ಉತ್ತಮ ಬೆಲೆ ಸಿಕ್ಕಿದ್ದು, ಎಪಿಎಂಸಿ  ಲಾಭಾಂಶವೂ ಹೆಚ್ಚಿದೆ

-ಮನೋಜ್‌ ರಾಜನ್‌, ಸಿಇಓ, ಆರ್‌ಇಎಂಎಸ್‌, ಹೆಚ್ಚುವರಿ ಕಾರ್ಯದರ್ಶಿ, ಸಹಕಾರ ಇಲಾಖೆ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.