ಶುಕ್ರವಾರ, ಮೇ 14, 2021
31 °C

ಖಾಸಗಿ ಬಿಸಿಯೂಟದ ಭರಾಟೆ

-ಹೇಮಾ ವೆಂಕಟ್ Updated:

ಅಕ್ಷರ ಗಾತ್ರ : | |

ಖಾಸಗಿ ಬಿಸಿಯೂಟದ ಭರಾಟೆ

ಹಸಿದ ಹೊಟ್ಟೆಗೆ ಊಟ ನೀಡುವುದಕ್ಕಿಂತ ಬೇರೆ ಸೇವೆ ಇರಲಾರದು. ಒಂದೆಡೆ ಬಡತನದಿಂದಾದ ಹಸಿವಿನಿಂದ ತತ್ತರಿಸುತ್ತಿರುವ ಕೋಟ್ಯಂತರ ಜನ. ಅಂಥವರಿಗೆ ಮಕ್ಕಳ ಶಿಕ್ಷಣದ ಬಗ್ಗೆ ಯೋಚಿಸುವುದು ಸಾಧ್ಯವಾಗದ ಮಾತು. ಶಿಕ್ಷಣದ ಹೊರತು ಬಡತನ ನೀಗಲು ಸಾಧ್ಯವಿಲ್ಲ ಎಂಬುದೂ ಸತ್ಯ. ಆದರೆ, ಹೀಗೆ ಶಿಕ್ಷಣದಿಂದ ವಂಚಿತರಾದ ಮಕ್ಕಳನ್ನು ಶಾಲೆಗೆ ಕರೆತರಲು ಸರ್ಕಾರ ಹತ್ತಾರು ಯೋಜನೆಗಳನ್ನು ಜಾರಿಗೊಳಿಸುತ್ತಾ ಬಂದಿದೆ.  ಎಲ್ಲಾ ಶಾಲೆಗಳಲ್ಲಿ ಮಧ್ಯಾಹ್ನ ಬಿಸಿಯೂಟ ಕೊಡುವ ಬಗ್ಗೆ ಯೋಚಿಸುವಂತಾದದ್ದು ಮಹತ್ವದ ಬೆಳವಣಿಗೆ. ಇದಕ್ಕೆ ಕಾರಣವಾದದ್ದು 2000ದಲ್ಲಿ ಇಸ್ಕಾನ್ ಸಂಸ್ಥೆಯವರು ಆರಂಭಿಸಿದ `ಅಕ್ಷಯ ಪಾತ್ರ'ಯೋಜನೆ. 2001ರಲ್ಲಿ ಎಲ್ಲ ಸರ್ಕಾರಿ ಶಾಲೆಗಳಲ್ಲಿ ಮಧ್ಯಾಹ್ನದ ಊಟವನ್ನು ಪೂರೈಸಬೇಕು ಎಂದು ಸುಪ್ರಿಂಕೋರ್ಟ್ ಆದೇಶ ನೀಡಲು ಅಕ್ಷಯಪಾತ್ರೆಯ ಯೋಜನೆಯೇ ಮಾದರಿಯಾಗಿತ್ತು.ನಗರದಲ್ಲಿ ಈಗಲೂ ಸರ್ಕಾರಿ ಮತ್ತು ಅನುದಾನಿತ ಶಾಲೆಯ ಲಕ್ಷಾಂತರ ಮಕ್ಕಳಿಗೆ ರುಚಿಕಟ್ಟಾದ ಮತ್ತು ಪೌಷ್ಟಿಕ ಆಹಾರವನ್ನು ನೀಡುವುದರಲ್ಲಿ ಸ್ವಯಂಸೇವಾ ಸಂಸ್ಥೆಗಳೇ ಮೇಲುಗೈ ಸಾಧಿಸಿವೆ. ಇವತ್ತಿಗೂ ಸರ್ಕಾರಿ ಶಾಲೆಗಳಲ್ಲಿ ತಯಾರಿಸಿ ನೀಡುತ್ತಿರುವ ಬಿಸಿಯೂಟ ಆರೋಪಗಳಿಂದ ಮುಕ್ತವಾಗಿಲ್ಲ. ಆದರೆ ಇಸ್ಕಾನ್‌ನ ಅಕ್ಷಯಪಾತ್ರೆ, ಅದಮ್ಯ ಚೇತನ ಮತ್ತು ಅನ್ನಪೂರ್ಣಾದಂತಹ ಸಂಸ್ಥೆಗಳು ನೀಡುವ ಬಿಸಿಯೂಟ ಬಹುತೇಕರ ಮೆಚ್ಚುಗೆ ಗಳಿಸಿದೆ. ಈ ಸಂಸ್ಥೆಗಳು ನಗರದ ಸರ್ಕಾರಿ ಮತ್ತು ಬಿಬಿಎಂಪಿ ಶಾಲೆಗಳ ಮಕ್ಕಳಿಗೆ ಶುಚಿ ಮತ್ತು ರುಚಿಯಾದ ಬಿಸಿಯೂಟ ನೀಡುತ್ತಿವೆ.800 ಶಾಲೆಗಳತ್ತ ಅಕ್ಷಯಪಾತ್ರ ವಾಹನಗಳು

2000ನೇ ಇಸವಿಯಲ್ಲಿ ಮೊದಲ ಬಾರಿಗೆ ದೇಶದ ನಾನಾ ಕಡೆ ಇಸ್ಕಾನ್ ಪ್ರಾಯೋಜಕತ್ವದಲ್ಲಿ ಸರ್ಕಾರಿ ಶಾಲೆಗಳಲ್ಲಿ ಬಿಸಿಯೂಟ ಆರಂಭವಾಯಿತು. ನಂತರ ರಾಜ್ಯ ಸರ್ಕಾರ `ಅಕ್ಷಯಪಾತ್ರ' ಯೋಜನೆಗೆ ಅಕ್ಕಿ ಮತ್ತು ನಿರ್ವಹಣಾ ವೆಚ್ಚ ನೀಡಲು ಆರಂಭಿಸಿತ್ತು. ಈಗ `ಅಕ್ಷಯಪಾತ್ರ' ಯೋಜನೆ ಸುಮಾರು 800 ಶಾಲೆಗಳಿಗೆ ವಿಸ್ತರಣೆಗೊಂಡಿದೆ. ಇವುಗಳಲ್ಲಿ 154 ಬಿಬಿಎಂಪಿ ಶಾಲೆಗಳು.ಈ ಯೋಜನೆಗೆಂದೇ ನಗರದಲ್ಲಿ ಎರಡು ಪಾಕಶಾಲೆಗಳಿವೆ. ಪ್ರತಿದಿನ ಎರಡು ಲಕ್ಷ ಮಕ್ಕಳಿಗೆ ಅವುಗಳಲ್ಲಿ ಆಹಾರ ತಯಾರಾಗುತ್ತದೆ. ಬೆಳಿಗ್ಗೆ 5.30ಕ್ಕೆ ಅಡುಗೆ ತಯಾರಾಗುತ್ತದೆ. 7 ಗಂಟೆ ಅಡುಗೆ ಹೊತ್ತ ವಾಹನಗಳು ಶಾಲೆಗಳ ಕಡೆ ತೆರಳುತ್ತವೆ. ಸುಮಾರು 70 ವಾಹನಗಳ ಮೂಲಕ ಎಲ್ಲ ಶಾಲೆಗಳಿಗೂ ಮಧ್ಯಾಹ್ನ 12ರ ಒಳಗೆ ಊಟ ತಲುಪಿಸಲಾಗುತ್ತದೆ. ಊಟ ಕೆಡದಂತೆ ಇರುವ ಪಾತ್ರೆಗಳನ್ನೇ ಬಳಸಲಾಗುತ್ತದೆ. ಹೆಚ್ಚೆಂದರೆ 25ರಿಂದ 30 ಕಿಲೋಮೀಟರ್ ದೂರಕ್ಕೆ ಊಟ ಸರಬರಾಜಾಗುತ್ತದೆ. ಎಂಟು ಬಗೆಯ ಸಾಂಬಾರು, ಎಂಟು ಬಗೆಯ ಅನ್ನದ ತಿನಿಸುಗಳು, ಒಂದು ದಿನ ಮೊಸರು ಇರುತ್ತದೆ.ಒಂದು ಊಟಕ್ಕೆ ಸರಾಸರಿ ರೂ7.50 ವೆಚ್ಚ ತಗಲುತ್ತದೆ. ಸರ್ಕಾರ ರೂ4 ಭರಿಸುತ್ತದೆ. ಉಳಿದಂತೆ ದಾನಿಗಳ ಮೂಲಕ ಸಂಗ್ರಹವಾದ ಹಣವನ್ನು ಸಂಸ್ಥೆ ಭರಿಸುತ್ತದೆ. ಈ ವರ್ಷ ಇನ್ನೆಷ್ಟು ಶಾಲೆಗಳಿಗೆ ಈ ಯೋಜನೆ ವಿಸ್ತರಿಸಲಿದೆ ಎಂಬುದರ ಸ್ಪಷ್ಟ ಮಾಹಿತಿ ಜುಲೈ ಅಂತ್ಯದ ಹೊತ್ತಿಗೆ ಸಿಗಲಿದೆ.ಎರಡು ಪಾಕಶಾಲೆಗಳಲ್ಲಿ ಏನೆಲ್ಲ...

`ಅಕ್ಷಯಪಾತ್ರ ಪಾಕಶಾಲೆ ಸುಸಜ್ಜಿತವಾಗಿದ್ದು ಶುಚಿತ್ವಕ್ಕೆ ಮಹತ್ವ ನೀಡಲಾಗಿದೆ. ಒಂದು ಕುಕ್ಕರ್‌ನಲ್ಲಿ ಸುಮಾರು ನೂರು ಕೆ.ಜಿ. ಅಕ್ಕಿ ಕೇವಲ 15 ನಿಮಿಷದಲ್ಲಿ ಬೇಯುತ್ತದೆ. ಸುಮಾರು 1000 ಮಕ್ಕಳಿಗೆ ಸಾಕಾಗುತ್ತದೆ. ಸಾಂಬಾರು ತಯಾರಿಸುವ ಕುಕ್ಕರಿನಲ್ಲಿ 1,200 ಲೀಟರ್ ಸಾಂಬಾರು ಎರಡು ಗಂಟೆಯಲ್ಲಿ ತಯಾರಾಗುತ್ತದೆ. ಇದು ಸುಮಾರು 6000 ಮಕ್ಕಳಿಗೆ ಸಾಕಾಗುತ್ತದೆ. ಸುಸಜ್ಜಿತ ಪಾಕಶಾಲೆ ಇದಾಗಿದ್ದು, ಶುಚಿತ್ವಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದೆ. ಅಡುಗೆ ತಯಾರಾದ ಮೇಲೆ ಯಾವುದೇ ಕಾರಣಕ್ಕೂ ಕೈಯಿಂದ ಮುಟ್ಟುವುದು ನಿಷಿದ್ಧ. ಎಲ್ಲ ಪ್ರಕ್ರಿಯೆಯೂ ಯಂತ್ರಗಳ ಮೂಲಕ ಸಾಗುತ್ತದೆ. ಮೊನ್ನೆ, ಪರಿಸರ ದಿನದಂದು ಫಿಲಿಪ್ಸ್ ಕಂಪೆನಿ  ರೂ15 ಲಕ್ಷ ವೆಚ್ಚದಲ್ಲಿ ಸುಸಜ್ಜಿತ ಜೈವಿಕ ಅನಿಲ ಘಟಕವನ್ನು ನಿರ್ಮಿಸಿಕೊಟ್ಟಿದೆ. ಇದರಿಂದ ಎಲ್‌ಪಿಜಿ ಉಳಿತಾಯವಾಗಲಿದೆ' ಎನ್ನುತ್ತಾರೆ ಅಕ್ಷಯಪಾತ್ರದ ಪ್ರಧಾನ ವ್ಯವಸ್ಥಾಪಕ ವಿನಯ್ ಎನ್.ಕುಮಾರ್.ಶಾಲೆಗಳಿಗೂ ಆಹಾರಕ್ಕೂ ದಿವ್ಯವಾದ ಸಂಬಂಧವಿದೆ ಎಂಬುದಕ್ಕೆ ಈ ಸಂಸ್ಥೆಗಳ `ಆಹಾರ ಪ್ರೀತಿ' ಕನ್ನಡಿ ಹಿಡಿಯುತ್ತದಲ್ಲವೇ?ಅದಮ್ಯ ಚೇತನ

ಇಸ್ಕಾನ್ ನಂತರ ಹೆಚ್ಚಿನ ಪ್ರಮಾಣದಲ್ಲಿ ಬಿಸಿಯೂಟ ಪೂರೈಸುತ್ತಿರುವ ಇನ್ನೊಂದು ಸಂಸ್ಥೆ `ಅದಮ್ಯ ಚೇತನ'. ಅದಕ್ಕೆ ಈಗ ದಶಮಾನೋತ್ಸವದ ಸಂಭ್ರಮ. ಇದರ ಶಾಖೆಗಳು ಹುಬ್ಬಳ್ಳಿ, ಗುಲ್ಬರ್ಗ ಮಾತ್ರವಲ್ಲದೆ ರಾಜಸ್ತಾನದಲ್ಲೂ ಇವೆ. ನಗರದಲ್ಲಿ ಸುಮಾರು 320 ಶಾಲೆಗಳಿಗೆ `ಅದಮ್ಯ ಚೇತನ' ಬಿಸಿಯೂಟ ಪೂರೈಸುತ್ತಿದೆ. ಸುಮಾರು 72 ಸಾವಿರ ಮಕ್ಕಳು ಇದರ ಪ್ರಯೋಜನ ಪಡೆದುಕೊಂಡಿದ್ದಾರೆ. ಅದಮ್ಯ ಚೇತನ ಅನೇಕ ವಿಚಾರಗಳಲ್ಲಿ ಭಿನ್ನವಾಗಿದೆ. ಮೆನು ವಿಚಾರದಲ್ಲಿ ಬದ್ಧತೆಯನ್ನು ಹೊಂದಿದೆ. ವಾರದ ನಾಲ್ಕು ದಿನ ಅನ್ನ, ಸಾಂಬಾರು ಇರುತ್ತದೆ. ಇದರಲ್ಲಿ ಒಂದು ದಿನ ಸೊಪ್ಪಿನ ಸಾರು ಕಡ್ಡಾಯ. ಶನಿವಾರ ಪುಲಾವ್ ಇರುತ್ತದೆ. ಇನ್ನು ಒಂದು ದಿನ ಸಿಹಿ ತಿನಿಸು ಅಥವಾ ಬಜ್ಜಿ ನೀಡಲಾಗುತ್ತದೆ.`ಇಂಧನ, ಕಸ, ನೀರಿನ ಸಮರ್ಪಕ ಬಳಕೆಗೆ ಸಂಸ್ಥೆ ಬದ್ಧವಾಗಿದೆ. ಇದೇ ಸಂಸ್ಥೆಯ ಘೋಷವಾಕ್ಯ ಕೂಡ. ಅದೃಷ್ಟವೆಂಬಂತೆ ಹನುಮಂತನಗರದಲ್ಲಿರುವ ಪಾಕಶಾಲೆಯ ಪಕ್ಕದಲ್ಲಿ ಕಲ್ಯಾಣಿಯ ನೀರಿನ ಸೆಲೆ ಇದೆ. ಅಲ್ಲಿ ಒಸರುವ ಸುಮಾರು 24,000 ಲೀಟರ್ ನೀರನ್ನು ಸಂಗ್ರಹಿಸಿ ಬಳಸುತ್ತೇವೆ. ಇಂಧನ ಉಳಿತಾಯದ ದೃಷ್ಟಿಯಿಂದ ಬ್ರಿಕೆಟ್ಸ್ (ಶೇಂಗಾ ಸಿಪ್ಪೆ, ಕಬ್ಬಿನ ಜಲ್ಲೆ, ಮರದ ಹುಡಿ, ಒಣ ಹುಲ್ಲು, ಬಳಸಿದ ಕಾಗದ, ತೌಡು ಮುಂತಾದ ಉರಿಯುವ ಸಾಮರ್ಥ್ಯವಿರುವ ಯಾವುದೇ ವಸ್ತುವಿನಿಂದ ಬ್ರಿಕೆಟ್ಸ್ ತಯಾರಿಸಬಹುದು), ಪೆಲೆಟ್ಸ್ ಹಾಗೂ ತೆಂಗಿನ ಚಿಪ್ಪು ಬಳಸಿದ ಉರುವಲು ಬಳಸುತ್ತೇವೆ. ಇದರಿಂದಾಗಿ ಕಸಮುಕ್ತವೂ ಆಗುತ್ತದೆ. ಇನ್ನು ತರಕಾರಿಯನ್ನು ನೇರವಾಗಿ ರೈತರಿಂದ ಖರೀದಿಸುವುದರಿಂದ ಬೆಲೆ ಹೆಚ್ಚಳ ಬಾಧಿಸುವುದಿಲ್ಲ. ಕೆಲ ದಾನಿಗಳು ಮೊದಲೇ ರೈತರಿಂದ ಹೇಳಿ ಬೇಕಾದ ತರಕಾರಿ ಬೆಳೆಸುವುದರಿಂದ ಕೊರತೆ ಇಲ್ಲ' ಎಂದು `ಅದಮ್ಯ ಚೇತನ'ದ ತೇಜಸ್ವಿನಿ ಅನಂತಕುಮಾರ್ ಹೇಳುತ್ತಾರೆ.ಇಷ್ಟೇ ಅಲ್ಲ...

ಕನ್ನಡ ಕಲಾ ಕಸ್ತೂರಿ ಸಂಘ 25 ಸಾವಿರ ಮಕ್ಕಳಿಗೆ, ಯಶವಂತಪುರದ ಗಾಯತ್ರಿದೇವಿ ದೇವಸ್ಥಾನದ ವತಿಯಿಂದ `ಅನ್ನಪೂರ್ಣಾ' ಮೂಲಕ ಸುಮಾರು 19 ಶಾಲೆಗಳಿಗೆ ಬಿಸಿಯೂಟ ಪೂರೈಕೆಯಾಗುತ್ತಿದೆ. `ಪ್ರಿಯಾ ಚಾರಿಟಬಲ್ ಟ್ರಸ್ಟ್' ಕೂಡ ಎರಡು ಶಾಲೆಗಳಿಗೆ ಊಟ ನೀಡುತ್ತಿದೆ. ಹೆಬ್ಬಾಳದ ಒಂದು ಶಾಲೆಗೆ ಸುಬ್ರಾಯ ಭಟ್ ಎಂಬ ವ್ಯಕ್ತಿ ಬಿಸಿಯೂಟ ಪೂರೈಸುತ್ತಿದ್ದಾರೆ.

-ಬಿಇಒ ಆಂಜನಪ್ಪಹೊಸರುಚಿಗೆ ತಯಾರಿ


ತರಕಾರಿ ಬೆಲೆ ವಿಪರೀತ ಏರಿದ ಪರಿಣಾಮ ಹೊಸ ರುಚಿ ತಯಾರಿಗೆ ಚಿಂತನೆ ನಡೆಸಲಾಗಿದೆ. ತರಕಾರಿ ಇಲ್ಲದೆಯೂ ರುಚಿಯಾದ ಸಾಂಬಾರು ತಯಾರಿಸುವುದು ಇದರ ಉದ್ದೇಶ. ಆದರೆ ಯಾವುದೇ ಕಾರಣಕ್ಕೆ ರುಚಿಯಲ್ಲಿ ಗುಣಮಟ್ಟದಲ್ಲಿ ಕಡಿಮೆಯಾಗಬಾರದು ಎಂಬುದು ನಮ್ಮ ಕಾಳಜಿ.

-ವಿನಯ್ ಎನ್.ಕುಮಾರ್, ಅಕ್ಷಯಪಾತ್ರ ಪ್ರಧಾನ ವ್ಯವಸ್ಥಾಪಕ

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.