ಬುಧವಾರ, ಮೇ 18, 2022
25 °C

ಖಾಸಗಿ ಸಹಭಾಗಿತ್ವದಲ್ಲಿ ಕುಡಿಯುವ ನೀರು ಪೂರೈಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಚಿತ್ರದುರ್ಗ ಮತ್ತು ವಿಜಾಪುರ ಜಿಲ್ಲೆಗಳಲ್ಲಿ ಖಾಸಗಿ ಸಹಭಾಗಿತ್ವದ ಅಡಿ ಕುಡಿಯುವ ನೀರು ಪೂರೈಸುವ ವಿಶೇಷ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಕೇಂದ್ರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಜೈರಾಂ ರಮೇಶ್ ಹೇಳಿದರು.ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರ ಜೊತೆ ಗೃಹ ಕಚೇರಿ `ಕೃಷ್ಣಾ~ದಲ್ಲಿ ಶನಿವಾರ ಸಭೆ ನಡೆಸಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, `ಈ ಕುರಿತು ಮುಖ್ಯಮಂತ್ರಿಗಳು ಪ್ರಸ್ತಾಪ ಮಾಡಿದ್ದಾರೆ. ಯೋಜನೆಯನ್ನು ಅನುಷ್ಠಾನಕ್ಕೆ ತರುವುದು ಹೇಗೆಂಬ ಬಗ್ಗೆ ವಿಸ್ತೃತ ಯೋಜನೆಯನ್ನು ನನ್ನ ಸಚಿವಾಲಯಕ್ಕೆ ಸಲ್ಲಿಸಿ ಎಂದು ಮುಖ್ಯಮಂತ್ರಿಗಳಿಗೆ ಹೇಳಿದ್ದೇನೆ~ ಎಂದರು.ಸಭೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಜಗದೀಶ್ ಶೆಟ್ಟರ್ ಅವರೂ ಪಾಲ್ಗೊಂಡಿದ್ದರು.

ಈ ಯೋಜನೆಯ ಅನುಷ್ಠಾನಕ್ಕೆ ಅಗತ್ಯವಿರುವ ಹಣದಲ್ಲಿ ಕೇಂದ್ರ ಸರ್ಕಾರ ಶೇಕಡ 30ರಷ್ಟು, ರಾಜ್ಯ ಶೇ 30ರಷ್ಟು ಮೊತ್ತವನ್ನು ಭರಿಸಲಿವೆ. ಇನ್ನುಳಿದ ಶೇ 40ರಷ್ಟನ್ನು ಖಾಸಗಿ ಹೂಡಿಕೆದಾರರಿಂದ ಸಂಗ್ರಹಿಸಲಾಗುವುದು ಎಂದು ವಿವರ ನೀಡಿದರು.ಯೋಜನೆಯ ಅನುಷ್ಠಾನಕ್ಕೆ ಪ್ರತಿ ಜಿಲ್ಲೆಗೆ ಅಂದಾಜು 800ರಿಂದ 1,000 ಕೋಟಿ ರೂಪಾಯಿ ಬೇಕು. ಇದು ಹೊಸ ಪ್ರಸ್ತಾವನೆ ಅಲ್ಲ. ನೀರಿನ ಕೊರತೆ ಎದುರಿಸುತ್ತಿರುವ ಪ್ರದೇಶಗಳಿಗೆ ನದಿ ಮೂಲದ ನೀರನ್ನೇ ಪೂರೈಸುವ ಯೋಜನೆ ಇದು ಎಂದು ಹೇಳಿದರು.ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ರಾಜ್ಯದ 2,000 ಕಿ.ಮೀ. ರಸ್ತೆಗಳನ್ನು ಮೇಲ್ದರ್ಜೆಗೇರಿಸುವ ಪ್ರಸ್ತಾವನೆಗೆ ಸಚಿವಾಲಯ ಜುಲೈ ಅಂತ್ಯದ ವೇಳೆಗೆ ಅನುಮತಿ ನೀಡಲಿದೆ ಎಂದು ಜೈರಾಂ ತಿಳಿಸಿದರು.ಇದಕ್ಕೆ ಅಂದಾಜು 600 ಕೋಟಿ ರೂಪಾಯಿ ಅಗತ್ಯವಿದೆ. ಈ ಪೈಕಿ ಅಂದಾಜು ಶೇ 75ರಷ್ಟನ್ನು ಕೇಂದ್ರ ಸರ್ಕಾರ ನೀಡುತ್ತದೆ ಎಂಬ ಭರವಸೆ ಜೈರಾಂ ಅವರಿಂದ ದೊರೆತಿದೆ. ಇನ್ನುಳಿದ ಮೊತ್ತವನ್ನು ರಾಜ್ಯ ಸರ್ಕಾರವೇ ಭರಿಸಲಿದೆ ಎಂದು ಶೆಟ್ಟರ್ ತಿಳಿಸಿದರು.ಪ್ರಕೃತಿ ವಿಕೋಪ ಪರಿಹಾರದಡಿ ರಾಜ್ಯಕ್ಕೆ 30 ಸಾವಿರ ಟನ್ ಅಕ್ಕಿ ಹಾಗೂ ಗೋಧಿ ಪೂರೈಸಲು 426 ಕೋಟಿ ರೂಪಾಯಿ ಒದಗಿಸಲಾಗುವುದು. 2.40 ಲಕ್ಷ ಟನ್ ಅಕ್ಕಿ ಮತ್ತು ಗೋಧಿಯನ್ನು ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ನೀಡಲಾಗುವುದು. ಬೀದರ, ಗುಲ್ಬರ್ಗ, ಚಿತ್ರದುರ್ಗ ಹಾಗೂ ದಾವಣಗೆರೆ ಜಿಲ್ಲೆಗಳಿಗೆ ಆರು ತಿಂಗಳು ಹೆಚ್ಚುವರಿಯಾಗಿ ಆಹಾರ ಧಾನ್ಯಗಳನ್ನು ಪೂರೈಸಲಾಗುವುದು ಎಂದು ಜೈರಾಂ ಪ್ರಕಟಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.