ಗುರುವಾರ , ಏಪ್ರಿಲ್ 15, 2021
31 °C

ಖಾಸಗಿ ಸಹಭಾಗಿತ್ವದಲ್ಲಿ ಬಸ್ ಟರ್ಮಿನಲ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಸಾರ್ವಜನಿಕರಿಗೆ ಉತ್ತಮ ಸಾರಿಗೆ ಸೌಲಭ್ಯ ಒದಗಿಸುವ ಉದ್ದೇಶದಿಂದ ಖಾಸಗಿ ಸಹಭಾಗಿತ್ವದೊಂದಿಗೆ ನಗರದಲ್ಲಿ ಇನ್ನೂ ಐದು ಬಸ್ ಟರ್ಮಿನಸ್‌ಗಳನ್ನು ನಿರ್ಮಿಸಲಾಗುವುದು’ ಎಂದು ಸಾರಿಗೆ ಸಚಿವ ಆರ್. ಅಶೋಕ ತಿಳಿಸಿದರು. ಬಿಎಂಟಿಸಿ ವತಿಯಿಂದ ನಗರದಲ್ಲಿ ಶನಿವಾರ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ, ವಿಜಯನಗರದಲ್ಲಿ ನಿರ್ಮಿಸಲಾಗಿರುವ ಸಂಚಾರ ಮತ್ತು ಸಾಗಣೆ ನಿರ್ವಹಣಾ ಕೇಂದ್ರ(ಟಿಟಿಎಂಸಿ)ವನ್ನು ಉದ್ಘಾಟಿಸಿ ಅವರು ಮಾತನಾಡಿದರು.‘ಹೆಬ್ಬಾಳ, ಜಯನಗರ, ಮಲ್ಲೇಶ್ವರ, ಕತ್ರಿಗುಪ್ಪೆ ಹಾಗೂ ಇಂದಿರಾನಗರಗಳಲ್ಲಿ 250 ಕೋಟಿ ರೂಪಾಯಿ ವೆಚ್ಚದಲ್ಲಿ ಟರ್ಮಿನಸ್‌ಗಳನ್ನು ಹೊಸ ವಿನ್ಯಾಸದಲ್ಲಿ ನಿರ್ಮಿಸಲಾಗುವುದು. ಹೆಬ್ಬಾಳದಲ್ಲಿ ರಾಷ್ಟ್ರೀಯ ಹೆದ್ದಾರಿ ಪಕ್ಕ ವಿಶಿಷ್ಟ ವಿನ್ಯಾಸದೊಂದಿಗೆ ಹೊಸ ಟರ್ಮಿನಸ್ ತಲೆ ಎತ್ತಲಿದೆ’ ಎಂದರು.‘ಕೆಂಗೇರಿ ಬಳಿಯ ಟಿಟಿಎಂಸಿ ಕಟ್ಟಡಕ್ಕೆ ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಅವರ ಹೆಸರು ಹಾಗೂ ಶಾಂತಿನಗರ ಕಟ್ಟಡಕ್ಕೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರಿಡಲಾಗಿದೆ. ಇದೇ ರೀತಿ ವಿಜಯನಗರ ಟಿಟಿಎಂಸಿ ಕಟ್ಟಡಕ್ಕೆ ರಾಷ್ಟ್ರಕವಿ ಕುವೆಂಪು ಅವರ ಹೆಸರಿಡಲಾಗುವುದು’ ಎಂದು ತಿಳಿಸಿದರು.‘ಸುಮಾರು 25 ಕೋಟಿ ರೂಪಾಯಿ ವೆಚ್ಚದಲ್ಲಿ ಹೆಬ್ಬಾಳದಿಂದ ಸಿಲ್ಕ್‌ಬೋರ್ಡ್‌ವರೆಗೆ ಬಸ್ ಮಾರ್ಗವನ್ನು ನಿರ್ಮಿಸಲಾಗುವುದು. ವಾಣಿಜ್ಯ ಉದ್ದೇಕ್ಕಾಗಿ ಬಳಕೆಯಾಗುವ ಟಿಟಿಎಂಸಿ ಬಸ್ ನಿಲ್ದಾಣಗಳಲ್ಲಿ ಸ್ಥಳೀಯರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು’ ಎಂದರು.ಸಂಸದ ಅನಂತಕುಮಾರ್ ಮಾತನಾಡಿ ‘ಕೆಂಗೇರಿ, ಕೆ.ಆರ್.ಪುರ, ಯಲಹಂಕ ಮುಂತಾದ ಸ್ಥಳಗಳನ್ನು ನಗರದ ಹೃದಯ ಭಾಗದೊಂದಿಗೆ ಸಂಪರ್ಕಿಸುವ ಲೋಕಲ್ ಟ್ರೇನ್‌ಗಳ ಸಂಚಾರ ಆರಂಭವಾದರೆ ಸಂಚಾರ ಸಮಸ್ಯೆ ನೀಗಲಿದೆ. ಇಂತಹ ವರ್ತುಲ ರೈಲು ಸಂಪರ್ಕ ನಗರಕ್ಕೆ ಅವಶ್ಯಕತೆ ಇದ್ದು ರಾಜ್ಯ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು’ ಎಂದು ಮನವಿ ಮಾಡಿದರು.‘ಅಂತರರಾಷ್ಟ್ರೀಯ ಹಾಗೂ ರಾಷ್ಟ್ರಮಟ್ಟದ ತಜ್ಞರನ್ನು ಒಳಗೊಂಡ ಉನ್ನತಾಧಿಕಾರದ ಸಂಚಾರ ಕಾರ್ಯಪಡೆಯನ್ನು ಸರ್ಕಾರ ಕೂಡಲೇ ಅಸ್ತಿತ್ವಕ್ಕೆ ತಂದು ಸಂಚಾರ ವ್ಯವಸ್ಥೆಯನ್ನು ಬಲಪಡಿಸಲು ಮುಂದಾಗಬೇಕು. ಇದರಿಂದ ಭವಿಷ್ಯದಲ್ಲಿ ಸಂಚಾರ ಸಮಸ್ಯೆಗಳು ಕಡಿಮೆಯಾಗಲಿವೆ’ ಎಂದು ಹೇಳಿದರು. ಮೇಯರ್ ಎಸ್.ಕೆ.ನಟರಾಜ್ ಮಾತನಾಡಿ ‘ನಗರದ ಎಲ್ಲಾ ಬಸ್ ನಿಲ್ದಾಣಗಳಲ್ಲಿ ಹವಾನಿಯಂತ್ರಿತ ಸೌಲಭ್ಯವನ್ನು ಒದಗಿಸಲು ನಿರ್ಧರಿಸಲಾಗಿದೆ’ ಎಂದರು.ಶಾಸಕ ಪ್ರಿಯಕೃಷ್ಣ ಮಾತನಾಡಿ ‘ವಿಜಯನಗರ ಟಿಟಿಎಂಸಿ ಕಟ್ಟಡದಲ್ಲಿ ವಿಭಾಗೀಯ ಕಚೇರಿ ಕಚೇರಿ ಆರಂಭವಾಗಬೇಕು.ಇದರಿಂದ ಸುತ್ತಮುತ್ತಲಿನ ಟಿಟಿಎಂಸಿಗಳಲ್ಲಿ ಕಾರ್ಯ ನಿರ್ವಹಿಸುವ ನೌಕರರಿಗೆ ಹೆಚ್ಚು ಅನುಕೂಲವಾಗಲಿದೆ’ ಎಂದರು.ಬೃಹತ್ ಸಾರ್ವಜನಿಕ ಕಾಮಗಾರಿ ಸ್ಥಾಯಿ ಸಮಿತಿ ಅಧ್ಯಕ್ಷ ಎಚ್. ರವೀಂದ್ರ, ಶಾಸಕ ಎಂ.ಕೃಷ್ಣಪ್ಪ, ಬಿಬಿಎಂಪಿ ಸದಸ್ಯ ವಿ.ವಾಗೀಶ್, ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ಸೈಯದ್ ಜಮೀರ್ ಪಾಷಾ, ಸಾರಿಗೆ ಆಯುಕ್ತ ಭಾಸ್ಕರ್ ರಾವ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಅಟೊ ಪರವಾನಗಿ ಸಂಖ್ಯೆ ಏರಿಕೆ

‘ಬೆಳೆಯುತ್ತಿರುವ ನಗರದಲ್ಲಿ ಆಟೊಗಳ ಅವಶ್ಯಕತೆ ಹೆಚ್ಚಿರುವುದರಿಂದ ಆಟೊ ಪರವಾನಗಿ ಸಂಖ್ಯೆಯನ್ನು 85 ಸಾವಿರದಿಂದ 1 ಲಕ್ಷ 25 ಸಾವಿರಕ್ಕೆ ಏರಿಸಲು ನಿರ್ಧರಿಸಲಾಗಿದೆ’ ಎಂದು ಸಾರಿಗೆ ಸಚಿವ ಆರ್. ಅಶೋಕ ತಿಳಿಸಿದರು.‘ಇದೇ ವೇಳೆ ಮಧ್ಯವರ್ತಿಗಳು ಆಟೊ ಪರವಾನಗಿ ದಂದೆಯನ್ನು ನಡೆಸದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪರಿಸರ ಸ್ನೇಹಿ ಆಟೊಗಳನ್ನು ರಸ್ತೆಗಿಳಿಸಲು ಕ್ರಮ ಕೈಗೊಳ್ಳಲಾಗಿದೆ’ ಎಂದು ಹೇಳಿದರು.

 

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.