ಶುಕ್ರವಾರ, ಜೂನ್ 25, 2021
22 °C

ಗಂಡಾದರೆ ದೊರೆ, ಹೆಣ್ಣಾದರೆ ಹೊರೆ; ಹೀಗೇಕೆ ?

ಡಾ. ಶಿವಮೂರ್ತಿ ಮುರುಘಾ ಶರಣರು,ಚಿತ್ರದುರ್ಗ Updated:

ಅಕ್ಷರ ಗಾತ್ರ : | |

ಕೆಲವು ದಿನಗಳ ಹಿಂದೆ ತಾಯಿ ಮತ್ತು ಮಗಳಿಂದ ಭೇಟಿ. ಅದು ಅವರ ಎರಡನೆಯ ಭೇಟಿ. ಪ್ರತಿಯೊಂದು ಭೇಟಿಗೂ ಉದ್ದೇಶ ಇರುತ್ತದೆ. ಅದರಂತೆ ಅವರ ಭೇಟಿಗೂ ಒಂದು ನಿರ್ದಿಷ್ಟವಾದ ಉದ್ದೇಶ. ಧಾರ್ಮಿಕ ಮಠ,-ಪೀಠಗಳಿಗೆ ದರ್ಶನ ಅಥವಾ ಆಶೀರ್ವಾದಕ್ಕೆ ಎಂದು ಬರುವವರ ಸಂಖ್ಯೆಯೇ ಅಧಿಕ.ಸ್ಥಾವರ ದೇವರುಗಳ ದರುಶನ ಅಂದರೆ ಮಂದಿರಗಳಲ್ಲಿರುವ ಮೂರುತಿಯ ದರ್ಶನ.  ಅಲ್ಲಿ ಮಾತನಾಡದ ದೇವರು. ಮಠಗಳಲ್ಲಿ ಮಾತನಾಡುವ ಧಾರ್ಮಿಕರು. ಆಸಕ್ತರು ತಮ್ಮ ಕುಂದುಕೊರತೆಗಳನ್ನು ಹಂಚಿಕೊಳ್ಳುತ್ತಾರೆ. ಅದರ ಪರಿಹಾರಕ್ಕಾಗಿ ಗುರುಗಳಿಂದ ಮಾರ್ಗದರ್ಶನ. ಅಲ್ಲಿ ದರ್ಶನಕ್ಕಾಗಿ ದರ್ಶನ; ಇಲ್ಲಿ ದರ್ಶನದಿಂದ ಮಾರ್ಗದರ್ಶನ. ಇದುವೇ ಮಠ ಮತ್ತು ಮಂದಿರದ ನಡುವೆ ಇರುವ ವ್ಯತ್ಯಾಸ. ಅಲ್ಲಿ ಹರಕೆ, ಇಲ್ಲಿ ಅನಿಸಿಕೆ. ಅದು ಅಗೋಚರ. ಇದು ಗೋಚರ. ಒಂದು ದೇವ, ಮತ್ತೊಂದು ಜೀ(ಶಿ)ವಭಾವ. ಎರಡರಲ್ಲೂ ಭಕ್ತಿಯೇ ಪ್ರಧಾನ.  ಎರಡೂ ಶ್ರದ್ಧಾಕೇಂದ್ರಗಳು. ಶೋಷಣೆಯ ಕೇಂದ್ರಗಳಾಗಬಾರದಷ್ಟೇ.ಒಂದು ಧಾರ್ಮಿಕ ಕೇಂದ್ರವನ್ನು ಸ್ಪಂದನಾ ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಬಂದವರ ಆಗುಹೋಗು­ಗಳನ್ನು ಆಲಿಸಬೇಕಾಗುತ್ತದೆ. ಯಾರು ಬಂದವರ ಭಾವನೆಗಳಿಗೆ ಸ್ಪಂದಿಸುತ್ತಾರೋ ಅಂಥವರ ಬಳಿಗೆ ಜನರು ಬರುತ್ತಾರೆ. ಇದಕ್ಕನುಗುಣವಾಗಿ ತಾಯಿ, -ಮಗಳು ಬಂದು ತಮ್ಮ ಕೊರತೆಯನ್ನು ಹೇಳಿಕೊಂಡರು. ಏನೆಂದರೆ, ತನಗೆ ವಿವಾಹವಾಗಿದೆ.  ಪತಿ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಾರೆ.  ಇಬ್ಬರು ಹೆಣ್ಣುಮಕ್ಕಳು ಇದ್ದಾರೆ ಎಂದು ಹೇಳಿಕೊಂಡರು. ನಾನು  - ‘ನಿಮ್ಮದು ಸುಖ ಸಂಸಾರ. ಮತ್ತೇನು ಕೊರತೆ’ ಎಂದು ಕೇಳಿದೆ.  ಮಗಳು ಹೇಳಿದಳು- ‘ಎರಡು ಹೆಣ್ಣುಮಕ್ಕಳು ಹುಟ್ಟಿದ ನಂತರ ಆಪರೇಷನ್ ಮಾಡಿಸಿಕೊಂಡೆ. ಮನೆಯಲ್ಲಿ ಅತ್ತೆಯವರು - ನೀನು ಮಗನನ್ನು ಮದುವೆ ಮಾಡಿಕೊಂಡು, ಸಂಸಾರ ವೃಕ್ಷವೇ ಮುಂದುವರಿಯದಂತೆ ಆಗಿದೆ ಎಂದು ಕಿರುಕುಳ ಕೊಡುತ್ತಿದ್ದಾರೆ’ ಎಂದರು. ‘ನಿಮಗೆ ಈಗಾಗಲೇ ಎರಡು ಹೆಣ್ಣುಮಕ್ಕಳು ಇದ್ದಾರಲ್ಲ!’ ಎಂದಾಗ ‘ಗಂಡು ಸಂತಾನವೇ ಬೇಕೆಂದು ಹಟ ಹಿಡಿದಿದ್ದಾರೆ. ಇಲ್ಲದಿದ್ದರೆ ಮನೆಬಿಟ್ಟು ಹೋಗು ಎಂದು ಒತ್ತಾಯಿಸುತ್ತಾರೆ’ನಾನು ಅವರಿಗೆ  - ‘ನೀವೂ ಒಬ್ಬ ಮಹಿಳೆ, ನಿಮ್ಮ ಅತ್ತೆಯೂ ಮಹಿಳೆ. ಹೀಗಿರುವಾಗ ಗಂಡು ಸಂತಾನವೇ ಆಗಬೇಕೆಂದು ಯಾಕೆ ಬಯಸುತ್ತಾರೆ’ ಎಂದು ಕೇಳಿದೆ. ತನ್ನ ಅಸಹಾಯಕ ಪರಿಸ್ಥಿತಿಯನ್ನು ತೋಡಿಕೊಳ್ಳುತ್ತ, ‘ನಿಮ್ಮ ಅನಾಥಾಶ್ರಮದಿಂದ ಒಂದು ಗಂಡು ಮಗುವನ್ನು ನೀಡಿದರೆ, ದತ್ತು ಸ್ವೀಕರಿಸುತ್ತೇನೆ’ ಎಂದು ಕೋರಿ ಕೊಂಡರು.   ನಾನು ಅವರಿಗೆ ಸಮಾಧಾನ ಹೇಳಿದೆ. ಆಶ್ರಮದಲ್ಲಿರುವ ಮಕ್ಕಳನ್ನು ನೋಡಲು ಅವಕಾಶ ಮಾಡಿಕೊಟ್ಟೆ. ಇಡೀ ಘಟನೆಯನ್ನು ಅವಲೋಕಿಸಿದಾಗ, ಅಂಕಿ-ಅಂಶಗಳ ಪ್ರಕಾರ  ಪುರುಷರ ಸಂಖ್ಯೆಗೆ ಅನುಗುಣವಾಗಿ ಮಹಿಳೆಯರ ಸಂಖ್ಯೆಯು ಅಷ್ಟೇ ಇರಬೇಕಾಗುತ್ತದೆ. ಲಿಂಗಾನುಪಾತವನ್ನು ಸರಿಯಾಗಿಸದಿದ್ದಲ್ಲಿ ಮುಂದೊಂದು ದಿನ ದೇಶವೇ ಒಂದು ದೊಡ್ಡ ಸವಾಲನ್ನು ಅನುಭವಿಸಬೇಕಾಗುತ್ತದೆ.ತೊಡಕಿನಲ್ಲಿ ಬೀಳುತ್ತದೆ. ಈ ಅನುಪಾತವನ್ನು ಸರಿಪಡಿಸಿ­ಕೊಳ್ಳುವಲ್ಲಿ ಪುರುಷನಷ್ಟೇ ಸ್ತ್ರೀಯ ಮೇಲೂ ಅತಿಯಾದ ಜವಾಬ್ದಾರಿಯಿದೆ. ಈ ಪ್ರಕರಣ­ದಲ್ಲಿ ಗಂಡುಸಂತಾನ ಬೇಕೆಂದು ಒತ್ತಾಯಿಸು­ತ್ತಿ­ರುವವಳು ಒಬ್ಬ ಮಹಿಳೆ. ತನ್ನ ಸೊಸೆಗೆ ಹುಟ್ಟಿ­ರುವ ಹೆಣ್ಣುಮಕ್ಕಳನ್ನು ತಮ್ಮ ಸಂಸಾರದ ಕುಡಿ ಅಥವಾ ಭಾಗ್ಯ ಎಂದೇಕೆ ಭಾವಿಸುತ್ತಿಲ್ಲ?ಪುರುಷ ಶ್ರೇಷ್ಠ, ಸ್ತ್ರೀಯು ಕನಿಷ್ಠ ಎಂಬ ತಾರತಮ್ಯ. ಈ ತಾರತಮ್ಯದ ಸೃಷ್ಟಿಯಲ್ಲಿ ಮಹಿಳೆ­ಯರ ಪಾತ್ರವಿದೆ. ತಾನೂ ಒಬ್ಬ ಮಹಿಳೆಯಾಗಿ, ತನ್ನ ಮಗನಿಗೆ ಜನಿಸಿದ ಹೆಣ್ಣುಮಕ್ಕಳನ್ನು ಸಂತಾನವೆಂದು ಸ್ವೀಕರಿಸಲು ಸಿದ್ಧರಿಲ್ಲ.ಇದಕ್ಕೆಲ್ಲ ಬಲವಾದ ಕಾರಣವಿದೆ. ಹೆಣ್ಣುಮಗು ದೊಡ್ಡದಾಗಿ, ಮುಂದೆ ಕೊಟ್ಟ ಮನೆಯನ್ನು ಸೇರಿಕೊಳ್ಳುತ್ತದೆ ಮತ್ತು ವರ

ದ­ಕ್ಷಿ­ಣೆ­­ಯಂಥ ದುಬಾರಿ ಲೇವಾದೇವಿಗೆ ಕಾರಣ­ವಾಗುತ್ತದೆ ಎಂಬ ಹಿಂಜರಿಕೆ. ಹೆಣ್ಣುಮಗಳನ್ನು ಚೆನ್ನಾಗಿ ಓದಿಸಿ, ಯಾವುದಾದರೂ ಹುದ್ದೆಯನ್ನು ಕೊಡಿಸಿದರೆ, ನೌಕರಿ ಮಾಡುವ ಯುವತಿ­ಯರನ್ನು ಯುವಕರು ಹುಡುಕಿಕೊಂಡು ಬರು­ತ್ತಾರೆ  ಎನ್ನುವುದನ್ನು ಮರೆಯಬಾರದು. ನಮ್ಮಲ್ಲಿ ಪುರುಷ ಸಂತಾನಕ್ಕೆ ಸಿಗುವಷ್ಟು ಮಹತ್ವವು ಸ್ತ್ರೀ ಸಂತಾನಕ್ಕೆ ಸಿಗುತ್ತಿಲ್ಲ. ಕೊಟ್ಟ ಮನೆಗೆ ಹೋಗುತ್ತಾಳೆಂಬ ಕಾರಣಕ್ಕಾಗಿ ಹೆಚ್ಚು ಓದಿಸಲಾರದ ಸಂದರ್ಭಗಳು ಉಂಟು.ಶಿಕ್ಷಣ ಮಹಿಳೆಯರ ಹಕ್ಕು. ಅದನ್ನು ಅವರಿಗೆ ಸಿಗುವಂತೆ ನೋಡಿಕೊಂಡರೆ, ಮುಂದೆ ಅವರು ಸ್ವಾವಲಂಬಿ ಬದುಕನ್ನು ನಡೆಸುತ್ತಾರೆ. ಯಾರು ಯಾರಿಗೂ ಹೊರೆ ಆಗುವುದಿಲ್ಲ. ಈ ಸಂಬಂಧ ಇಪ್ಪತ್ತು ವರ್ಷಗಳ ಹಿಂದೆ ನಾನು ಬರೆದ ವಚನಹೆಣ್ಣು ಹುಟ್ಟಿದರೆ ಪೀಡೆ ಹುಟ್ಟಿತೆಂಬರು

ಗಂಡು ಹುಟ್ಟಿದರೆ ಪೇಡ ಹಂಚುವರು

ಹೆಣ್ಣು ಹುಟ್ಟಲು ಹೊರೆ ಎನ್ನುವರು

ಗಂಡು ಹುಟ್ಟಲು ದೊರೆಯೆಂದು ಭಾವಿಸುವರು

ಮುರುಘಪ್ರಿಯ ಬಸವಪ್ರಭುವೆ

ಹೆಣ್ಣಿಲ್ಲದೆ ಗಂಡು ಬಂದಿದ್ದಾದರೂ ಹೇಗೆ ?ಮಹಿಳಾ ಜಗತ್ತನ್ನು ಕಾಡುವ ಬೃಹತ್ ಸಮಸ್ಯೆಯೆಂದರೆ, ಹೆಣ್ಣು ಭ್ರೂಣಹತ್ಯೆ. ಮಗು ಹೊಟ್ಟೆಯಲ್ಲಿ ಬೆಳೆಯುತ್ತಿರುವಾಗಲೇ ಹೊಸಕಿ ಹಾಕುವ ಕುತಂತ್ರಗಳು. ಇಂಥ ಅನಿರೀಕ್ಷಿತ ಬೆಳವಣಿಗೆಯಿಂದ ಸ್ತ್ರೀ-ಪುರುಷರ ನಡುವಿನ ಅಂತರ ಮತ್ತಷ್ಟು ಹೆಚ್ಚುತ್ತ ಹೋಗುತ್ತದೆ. ಮಾನವೀಯ ನೆಲೆಯಲ್ಲಿ ಚಿಂತಿಸಬೇಕಾದ ಅನಿವಾರ್ಯತೆ ಇದೆ. ಪ್ರತಿಯೊಬ್ಬ ಸ್ತ್ರೀಯಲ್ಲಿಯು ಸ್ಥೈರ್ಯ ಇರಲಿ.  ಪುರುಷನೇ ಹೆಣ್ಣು ಭ್ರೂಣಹತ್ಯೆಗೆ ಒತ್ತಾಯಿಸಬಹುದು. ಆದರೆ ಅನೇಕ ಘಟನೆಗಳಲ್ಲಿ ಸ್ತ್ರೀಯರೇ ಒತ್ತಾಯಿಸಿದ ಉದಾಹರಣೆಗಳು ಇವೆ. ಇದು ಸಮಕಾಲೀನ ಸಮಸ್ಯೆಯಾಗಿದ್ದು, ಸ್ತ್ರೀಯು ಸ್ತ್ರೀ ಸಂತಾನದ ಬಗೆಗೆ ಕಾಳಜಿವಹಿಸಬೇಕಾಗಿದೆ. ಬಸವಣ್ಣನವರ ವಚನದಲ್ಲಿ ಅದರ ವಿಡಂಬನೆ ಹೀಗಿದೆ -ಒಲೆ ಹತ್ತಿ ಉರಿದಡೆ ನಿಲಬಹುದಲ್ಲದೆ

ಧರೆ ಹತ್ತಿ ಉರಿದಡೆ ನಿಲಲುಬಾರದು.

ಏರಿ, ನೀರುಂಬಡೆ, ಬೇಲಿ ಕೆಯ್ಯ ಮೇವಡೆ,

ನಾರಿ  ತನ್ನ ಮನೆಯಲ್ಲಿ  ಕಳುವಡೆ,

ತಾಯ ಮೊಲೆವಾಲು ನಂಜಾಗಿ ಕೊಲುವಡೆ,

ಇನ್ನಾರಿಗೆ ದೂರುವೆ ಕೂಡಲಸಂಗಮದೇವಾ ?ತಾಯಿ ಅಂದರೆ ಕಾಯಿ. ಕಾಯುವವಳು, ಪೋಷಿಸುವವಳು. ಜಗದ್ರಕ್ಷಕಿ. ಮಾತೆ ಅಂದರೆ ಮಮತೆ, ವಾತ್ಸಲ್ಯ. ಅದೇಕೋ ಸ್ತ್ರೀ ಸಂತಾನದ ಬಗೆಗೆ ಆಕೆಯು ರಕ್ಷಕಿ ಆಗುವುದರ ಬದಲು ಭಕ್ಷಕಿ ಆಗುತ್ತಿದ್ದಾಳೆ. ಎಲ್ಲ ಸ್ತ್ರೀಯರು ಆ ಪಟ್ಟಿಗೆ ಸೇರುವುದಿಲ್ಲ.

ಓ ಮಾತೆ,  ಈ ಭುವಿಯಲ್ಲಿ ಮಹಿಳಾ ಸಂತತಿ  ಸದಾ ಮುಂದುವರಿಯುವಂತೆ ನೋಡಿ ಕೊಳ್ಳುವ ಜವಾಬ್ದಾರಿಯು ನಿನ್ನದೇ...ನಿನ್ನದೇ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.