ಶುಕ್ರವಾರ, ಮೇ 14, 2021
25 °C

ಗಂಧದ ಗುಡಿಯಲ್ಲಿ ಅಭಿಮಾನದ ಸಾಕ್ಷಾತ್ಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮೈಲು ದೂರಕ್ಕೆ ಕೇಳಿಸುವ ಸ್ಪೀಕರ್‌ಗಳಿಂದ ಹೊಮ್ಮುತ್ತಿದ್ದ `ಹುಟ್ಟಿದರೇ ಕನ್ನಡ ನಾಡಲ್ ಹುಟ್ಟಬೇಕು~ ಹಾಡಿನ ಗುಂಗು. ಸಣ್ಣ ಸಣ್ಣ ವೃತ್ತಗಳಲ್ಲೂ ಎದ್ದು ನಿಂತ ಫ್ಲೆಕ್ಸ್‌ಗಳಲ್ಲಿ ನಗುಮೊಗದ ರಾಜ್ ಕುಮಾರ್ ಭಾವಚಿತ್ರ. ನಗರದ ಬೀದಿ ಬೀದಿಗಳಲ್ಲಿ ಎದ್ದು ನಿಂತ ಪೆಂಡಾಲ್‌ಗಳಲ್ಲಿ ರಾಜ್ ಕುಮಾರ್ ಜನ್ಮದಿನದ ಆಚರಣೆಯ ಸಂಭ್ರಮ.ನಗರದಲ್ಲಿ ಮಂಗಳವಾರ 84 ನೇ ರಾಜ್‌ಕುಮಾರ್ ಜನ್ಮದಿನದ ಆಚರಣೆಯನ್ನು ಜನತೆ ತಮ್ಮ ಮನೆಯ ಹಬ್ಬವೆಂಬಂತೆ ಆಚರಿಸಿದರು. ಸಣ್ಣ ಸಣ್ಣ ಬೀದಿಗಳೂ ರಾಜ್ ಸ್ಮರಣೆಯಲ್ಲಿ ಮುಳುಗಿದ್ದವು. ರಾಜ್‌ಕುಮಾರ್ ಅಭಿನಯದ ಚಿತ್ರಗಳ ಗೀತೆಗಳು ಕಿವಿ ತುಂಬಿ ನಗರದ ಜನರು ಎಂದೂ ಮರೆಯಲಾಗದ ರಾಜ್ ನೆನಪನ್ನು ಹಸಿರಾಗಿಸಿಕೊಂಡರು.ಡಾ.ಸಿ.ಎನ್.ಅಶ್ವತ್ಥ ನಾರಾಯಣ್ ಫೌಂಡೇಶನ್ ಮಲ್ಲೇಶ್ವರ ಆಟದ ಮೈದಾನದಲ್ಲಿ ಆಯೋಜಿಸಿದ್ದ ರಾಜ್ ಹುಟ್ಟುಹಬ್ಬದ ಅಂಗವಾಗಿ ಬೃಹತ್ ಉದ್ಯೋಗ ಮೇಳ ಮತ್ತು ಉಚಿತ ಆರೋಗ್ಯ ಶಿಬಿರ ನಡೆಯಿತು. ರಾಜ್ ಅಭಿಮಾನಿಗಳು ನಗರದ ಮಲ್ಲೇಶ್ವರದ ಎಂಟನೇ ಅಡ್ಡರಸ್ತೆ, ರಾಜಾಜಿನಗರದ ರಾಮಮಂದಿರ, ಚಿಕ್ಕಪೇಟೆ ಮುಖ್ಯರಸ್ತೆ ಹಾಗೂ ಕೆ.ಜಿ.ರಸ್ತೆಯಲ್ಲಿರುವ ರಾಜ್‌ಕುಮಾರ್ ಅವರ ಪುತ್ಥಳಿಗಳಿಗೆ ಮಾಲಾರ್ಪಣೆ ಮಾಡಿದರು.`ಅಣ್ಣಾವ್ರನ್ನ ಕಳೆದುಕೊಂಡಿದ್ದೇವೆ ಅನ್ನೋ ಭಾವನೆಯೇ ಬರದ ಹಾಗೆ ಅವರ ಚಿತ್ರಗಳು ಮನಸ್ಸೊಳಗೆ ಅಚ್ಚೊತ್ತಿವೆ. ಅವರಂಥಾ ಮತ್ತೊಬ್ಬ ನಟ ಹುಟ್ಟಿ ಬರಲು ಸಾಧ್ಯ ಇಲ್ಲ. ಅಣ್ಣಾವ್ರಿಗೆ ಅಣ್ಣಾವ್ರೇ ಸಾಟಿ~ ಎಂದು ರಾಜಾಜಿನಗರದಲ್ಲಿ ರಾಜ್ ಜಯಂತಿ ಆಚರಣೆಯನ್ನು ಆಯೋಜಿಸಿದ್ದ ಚೇತನ್ ತಮ್ಮ ಅಭಿಮಾನವನ್ನು ಹಂಚಿಕೊಂಡರು.ಕೆಂಪೇಗೌಡನಗರ ನಾಗರಿಕರ ವೇದಿಕೆ ಹಾಗೂ ಅಭಿಮಾನಿ ಬಳಗ ಸೇವಾ ಟ್ರಸ್ಟ್‌ನ ವತಿಯಿಂದ ರಾಜ್ ಕುಮಾರ್ ಜಯಂತಿಯನ್ನು ಆಚರಿಸಲಾಯಿತು.ಪಾನಕ ಹಂಚಿಕೆ : ನಗರದ ವಿವಿಧ ಭಾಗಗಳಲ್ಲಿ ನಡೆದ ರಾಜ್ ಅಭಿಮಾನಿಗಳು ಪಾನಕ, ಮಜ್ಜಿಗೆ ಹಾಗೂ ಕೋಸಂಬರಿ ವಿತರಿಸಿ ರಾಜ್ ಹುಟ್ಟುಹಬ್ಬವನ್ನು ಆಚರಿಸಿದರು. ಬಿಸಿಲಿನ ಬೇಗೆಯಲ್ಲಿ ಬೇಯುತ್ತಿದ್ದ ನಗರದ ಜನರು ಪಾನಕ, ಮಜ್ಜಿಗೆ ಸವಿದು ತಂಪಾದರು.ಸಂಗೀತ ಕಾರ್ಯಕ್ರಮಗಳು : ರಾಜ್‌ಹುಟ್ಟುಹಬ್ಬದ ಅಂಗವಾಗಿ ಅನ್ನದಾನ ಹಾಗೂ ಪಾನಕ ವಿತರಣೆ ನಡೆದ ನಂತರ ರಾಜ್ ಅವರು ಅಭಿನಯಿಸಿರುವ ಚಿತ್ರಗಳ ಗೀತೆಗಳ ಗಾಯನ ಕಾರ್ಯಕ್ರಮಗಳು ನಡೆದವು. ರಾಜ್ ಅಭಿನಯದ `ಕಸ್ತೂರಿ ನಿವಾಸ~, `ಬಂಗಾರದ ಮನುಷ್ಯ~, `ಸಾಕ್ಷಾತ್ಕಾರ~, `ಬಬ್ರುವಾಹನ~ ಮತ್ತಿತರ ಚಿತ್ರಗಳ ಗೀತೆಗಳ ಗಾಯನ ನಡೆಯಿತು.ಸತ್ಯ ಹರೀಶ್ಚಂದ್ರ ಚಿತ್ರದ `ಕುಲದಲ್ಲಿ ಕೀಳಾವುದೋ ಹುಚ್ಚಪ್ಪ~ ಹಾಡಿಗೆ ರಾಜ್ ಅಭಿಮಾನಿಗಳು ಹೆಜ್ಜೆಯಾದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.