ಶನಿವಾರ, ಜೂಲೈ 11, 2020
28 °C

ಗಣಿ: ನೀತಿ ನಿರೂಪಣೆಗೆ ಸುಪ್ರೀಂ ಕೋರ್ಟ್ ತಾಕೀತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ರಾಜ್ಯ ಸರ್ಕಾರ ಎರಡು ವಾರದೊಳಗೆ ಅಕ್ರಮ ಗಣಿಗಾರಿಕೆಗೆ ಕಡಿವಾಣ ಹಾಕುವ ಹೊಸ ನಿಯಮ ಜಾರಿ  ಮಾಡಬೇಕು. ತಪ್ಪಿದರೆ ಅದಿರು ರಫ್ತಿನ ಮೇಲೆ ಹೇರಿರುವ ನಿಷೇಧ ಹಿಂದಕ್ಕೆ ಪಡೆಯಬೇಕೆಂದು ಸುಪ್ರೀಂ ಕೋರ್ಟ್ ಗುರುವಾರ ಸೂಚಿಸಿದೆ.

ರಫ್ತು ನಿಷೇಧ ಆದೇಶವನ್ನು ಬಹಳ ಕಾಲ ಮುಂದುವರಿಸಲು ಸಾಧ್ಯವಿಲ್ಲ ಎಂದು ಹೇಳಿರುವ ನ್ಯಾ.ಆರ್. ವಿ. ರವೀಂದ್ರನ್ ಮತ್ತು ನ್ಯಾ.ಎ.ಕೆ.ಪಟ್ನಾಯಕ್ ಅವರನ್ನು ಒಂಗೊಂಡ ಪೀಠ, ಎರಡು ವಾರದೊಳಗೆ ಅಕ್ರಮ ಗಣಿಗಾರಿಕೆ ತಡೆಯುವ ನೀತಿ ಪ್ರಕಟಿಸದಿದ್ದರೆ ಅದಿರು ರಫ್ತಿಗೆ ವಿಶೇಷ ವ್ಯವಸ್ಥೆ ಮಾಡಬೇಕು ಎಂದು ಹೇಳಿದೆ.

ಅಕ್ರಮ ಗಣಿಗಾರಿಕೆಗೆ ಕಡಿವಾಣ ಹಾಕುವ ಉದ್ದೇಶದಿಂದ ರಾಜ್ಯ ಸರ್ಕಾರ ಆರು ತಿಂಗಳು ರಫ್ತು ನಿಷೇಧ ಮಾಡುವ ತೀರ್ಮಾನ ಕೈಗೊಂಡಿದೆ. ಹೊಸ ಕಾನೂನು ರೂಪಿಸುವವರೆಗೆ ರಫ್ತು ನಿಷೇಧ ಜಾರಿಯಲ್ಲಿರುತ್ತದೆ ಎಂದು ಸರ್ಕಾರ ಈ ಮೊದಲು ಹೇಳಿತ್ತು

ರಾಜ್ಯ ಸರ್ಕಾರ ಅಕ್ರಮ ಗಣಿಗಾರಿಕೆ ತಡೆಗೆ ಕ್ರಮ ಕೈಗೊಳ್ಳಲಿ. ಆದರೆ, ಶಾಶ್ವತವಾಗಿ ರಫ್ತು ನಿಷೇಧ ಸಾಧ್ಯವಿಲ್ಲ. ಜನವರಿ ಬಳಿಕವೂ ಈ ನಿರ್ಬಂಧ ಮುಂದುವರಿಸುವುದು ಬೇಡ. ಹೊಸ ಕಾಯ್ದೆ ವಿಳಂಬವಾದರೆ ಕಟ್ಟುನಿಟ್ಟಿನ ನಿಯಂತ್ರಣದ ಅಡಿ ಅನುಮತಿ ನೀಡಿ ಎಂದು ‘ಸೆಸ ಗೋವಾ’ ಎಂಎಸ್‌ಪಿಎಲ್ ಹಾಗೂ ಎಸ್ ಬಿ ಮಿನರಲ್ಸ್ ಕಂಪೆನಿಗಳ ಅರ್ಜಿ ವಿಚಾರಣೆ ವೇಳೆ ನ್ಯಾಯಾಲಯ ತಿಳಿಸಿತು. ಗಣಿ ಗುತ್ತಿಗೆದಾರರು ದೊಡ್ಡ ಪ್ರಮಾಣದಲ್ಲಿ ಎಸಗುತ್ತಿರುವ ಅಕ್ರಮಗಳಿಗೆ ಕಡಿವಾಣ ಹಾಕಲು ಸರ್ಕಾರ ಲೋಕಾಯುಕ್ತ ವರದಿಗಾಗಿ ಕಾಯುತ್ತಿದೆ. ಮಾರ್ಚ್ ತಿಂಗಳಲ್ಲಿ ವರದಿ ನಿರೀಕ್ಷಿಸಲಾಗಿದೆ. ಇಡೀ ವ್ಯವಸ್ಥೆ ಸರಿಪಡಿಸುವ ಉದ್ದೇಶದಿಂದ ನಿಷೇಧ ಹೇರಲಾಗಿದೆ ಎಂದು ಸರ್ಕಾರ ಪ್ರತಿಪಾದಿಸಿತು.

ದೊಡ್ಡ ಪ್ರಮಾಣದಲ್ಲಿ ದಾಸ್ತಾನಿರುವ ಅದಿರು ರಫ್ತಿಗೆ ಅವಕಾಶ ನೀಡಬೇಕೆಂಬ ಗಣಿ ಗುತ್ತಿಗೆದಾರರ ಮನವಿಗೆ ಆಕ್ಷೇಪ ವ್ಯಕ್ತಪಡಿಸಿದ ಸರ್ಕಾರ, ಇದು ಅಕ್ರಮವಾಗಿ ತೆಗೆದಿರುವ ಅದಿರು ಇರಬಹುದು ಎಂದು ಅಭಿಪ್ರಾಯಪಟ್ಟಿತು. ಈ ಹಂತದಲ್ಲಿ ‘ನೆಗಡಿ ಬಂದರೆ ಮೂಗನ್ನೇ ಕತ್ತರಿಸುವಿರಾ’ ಎಂದು ಪೀಠ ಸರ್ಕಾರವನ್ನು ಪ್ರಶ್ನೆ ಮಾಡಿತು. ರಫ್ತು ನಿಷೇಧ ಆದೇಶವನ್ನು ವಿಸ್ತರಿಸಬಾರದು. ಅಕ್ರಮ ಗಣಿಗಾರಿಕೆ ವಿರುದ್ಧ ಕ್ರಮಕ್ಕೆ ಲೋಕಾಯುಕ್ತ ವರದಿ ಕಾಯುವ ಅಗತ್ಯವಿಲ್ಲ. ಈಗಾಗಲೇ ಲೋಕಾಯುಕ್ತರು ಗಣಿ ಇಲಾಖೆ ಅಧಿಕಾರಿಗಳನ್ನು ಭೇಟಿಯಾಗಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳವ ಕುರಿತು ಸಲಹೆ ನೀಡಿದ್ದಾರೆ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದರು.

‘ಈ ವಿಷಯದಲ್ಲಿ ವಾದವಿವಾದ ಬೇಡ. ನಾವು ರಾಜ್ಯ ಸರ್ಕಾರಕ್ಕೆ ಹತ್ತರಿಂದ ಹದಿನೈದು ದಿವಸ ಸಮಯ ಅವಕಾಶ ನೀಡುತ್ತೇವೆ. ಅಷ್ಟರೊಳಗೆ ನಿಷೇಧ ಹಿಂದಕ್ಕೆ ಪಡೆಯಿರಿ. ಇಲ್ಲದಿದ್ದರೆ ನ್ಯಾಯಾಲಯ ಷರತ್ತಿನ ಮೇಲೆ ಅನುಮತಿ ನೀಡಬೇಕಾಗುತ್ತದೆ’ ಎಂದು ಸೂಚಿಸಿತು. ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯ ಫೆಬ್ರುವರಿ ಮೊದಲ ವಾರಕ್ಕೆ ಮುಂದೂಡಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.