ಮಂಗಳವಾರ, ಮಾರ್ಚ್ 21, 2023
20 °C

ಗಣಿ ಹೊಂಡದಲ್ಲಿ ಅಲ್ಲೋಲ ಕಲ್ಲೋಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗಣಿ ಹೊಂಡದಲ್ಲಿ ಅಲ್ಲೋಲ ಕಲ್ಲೋಲ

ಹಗರಣಗಳ ‘ರಾಡಿ’ಯಲ್ಲಿ ದೇಶವನ್ನು ಅದ್ದಿದ 2010ನೇ ಇಸವಿಯ ಪ್ರಮುಖ ಬೆಳವಣಿಗಳಲ್ಲಿ ಗಣಿ ಕ್ಷೇತ್ರವೂ ಒಂದು. ಅಕ್ರಮ ಗಣಿಗಾರಿಕೆಯ ಮಹಾಮಾರಿ, ಗಣಿ ಸಂತಸ್ತರಿಗೆ ಗಣಿಗಾರಿಕೆಯಿಂದ ಬಂದ ಲಾಭಾಂಶದಲ್ಲಿ ಶೇ 26ರಷ್ಟು ಪಾಲು ನೀಡುವ ಕೇಂದ್ರದ ಪ್ರಸ್ತಾವ, ವೇದಾಂತ ಕಂಪೆನಿಗೆ ಗಣಿಗಾರಿಕೆಗೆ ಅನುಮತಿ ನಿರಾಕರಣೆಗಳಂತಹ ಪ್ರಸಂಗಗಳಿಂದ ವರ್ಷವಿಡೀ ಗಣಿ ವಿಚಾರ ಸುದ್ದಿಯಲ್ಲಿತ್ತು. 2ಜಿ ತರಂಗಾಂತರ ಹಗರಣ ಬಿಟ್ಟರೆ ಗಣಿಗಾರಿಕೆಯೇ ಸರಿದು ಹೋಗುತ್ತಿರುವ ವರ್ಷದಲ್ಲಿ ಮಾಧ್ಯಮಗಳಲ್ಲಿ ದೊಡ್ಡದಾಗಿ ಸುದ್ದಿ ಮಾಡಿದ ಕ್ಷೇತ್ರವಾಗಿತ್ತು.ಅಕ್ರಮ ಗಣಿಗಾರಿಕೆ ಗದ್ದಲ ಕರ್ನಾಟಕದ ರಾಜಕೀಯದಲ್ಲಿಯೂ ವರ್ಷವಿಡೀ ಸದ್ದು  ಮಾಡಿತು. ಒಂದು ಹಂತದಲ್ಲಿ ಅದು ಬಿ. ಎಸ್. ಯಡಿಯೂರಪ್ಪ ಸರ್ಕಾರವನ್ನೂ ಬೀಳಿಸುವ ಬೆದರಿಕೆ ತಂದೊಡ್ಡಿತ್ತು. ಅಕ್ರಮ ಗಣಿಗಾರಿಕೆ ನಡೆಸುತ್ತಿದೆ ಎಂದು ಆರೋಪಿಸಲಾದ ಓಬಳಾಪುರಂ ಗಣಿ ಕಂಪೆನಿಯ ಮಾಲೀಕರಾದ ಜಿ. ಜನಾರ್ದನ ರೆಡ್ಡಿ ಮತ್ತು ಜಿ. ಕರುಣಾಕರ ರೆಡ್ಡಿ ಅವರನ್ನು ರಕ್ಷಿಸುವ ಕೆಲಸವನ್ನು ಯಡಿಯೂರಪ್ಪ ಸರ್ಕಾರ ಮಾಡುತ್ತಿದೆ ಎಂಬ ಬಲವಾದ ಆರೋಪಗಳು ಸರ್ಕಾರಕ್ಕೆ ಭಾರಿ ಇರಿಸುಮುರಿಸು ಉಂಟುಮಾಡಿದ್ದವು.ಒತ್ತಡಕ್ಕೆ ಮಣಿದ ಸರ್ಕಾರ ಜುಲೈನಲ್ಲಿ ಅಕ್ರಮ ಗಣಿಗಾರಿಕೆ ಬಗ್ಗೆ ಲೋಕಾಯುಕ್ತ ತನಿಖೆಗೆ ಆದೇಶಿಸಿತು ಮತ್ತು ಕಬ್ಬಿಣದ ಅದಿರು ಮತ್ತು ಇತರ ಖನಿಜಗಳ ಸಾಗಾಟದ ಪರವಾನಗಿ ನೀಡುವುದಕ್ಕೆ ನಿಷೇಧ ಹೇರಿತು.ಅಧಿಕೃತ ಅಂದಾಜಿನ ಪ್ರಕಾರ ಕರ್ನಾಟಕದಲ್ಲಿ ದೇಶದ ಒಟ್ಟು ಕಬ್ಬಿಣದ ಅದಿರಿನ ಶೇ 11ರಷ್ಟು (9 ಸಾವಿರ ದಶಲಕ್ಷ ಟನ್) ದಾಸ್ತಾನು ಇದೆ ಎಂದು ಹೇಳಲಾಗಿದ್ದು, ಈ ಸಂಪನ್ಮೂಲ ಮುಖ್ಯವಾಗಿ ಬಳ್ಳಾರಿ, ಹೊಸಪೇಟೆ ಭಾಗದಲ್ಲಿ ಕೇಂದ್ರೀಕೃತವಾಗಿದೆ.  ಉಕ್ಕಿನ ಕಾರ್ಖಾನೆಗಳಿಂದ ಖನಿಜಗಳಿಗೆ ಬೇಡಿಕೆ ಹೆಚ್ಚಿದ್ದರಿಂದ ಕಳೆದ ಒಂದು ವರ್ಷದಲ್ಲಿ ಕಬ್ಬಿಣದ ಅದಿರಿನ ಬೆಲೆ ಟನ್‌ಗೆ ಶೇ 90ರಷ್ಟು ಅಂದರೆ 120ರಿಂದ 160 ಡಾಲರ್‌ನಷ್ಟು ಹೆಚ್ಚಿತ್ತು. ಇದು ಅಕ್ರಮ ಗಣಿಗಾರಿಕೆಗೆ ಜನರನ್ನು ಪ್ರಚೋದಿಸಿತು ಎಂದು ಗಣಿ ಸಚಿವಾಲಯದ ಅಧಿಕಾರಿಯೊಬ್ಬರು ಹೇಳುತ್ತಾರೆ.ಕೇವಲ ಕರ್ನಾಟಕಕ್ಕೆ ಮಾತ್ರ ಇದರ ಬಿಸಿ ತಟ್ಟಿದ್ದಲ್ಲ. ರಾಷ್ಟ್ರ ಮಟ್ಟದಲ್ಲೂ ರಾಜಕಾರಣಿಗಳ ತಲೆ ತಿಂದ ವಿಚಾರ ಇದು. ಅದೇ ಕಾರಣಕ್ಕೆ ಭಾರಿ ಆರೋಪಗಳು, ಪ್ರತ್ಯಾರೋಪಗಳು ಕೇಳಿಬಂದವು. ಕೊನೆಗೂ ನವೆಂಬರ್‌ನಲ್ಲಿ ಕೇಂದ್ರವು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಂ. ಬಿ. ಷಾ ನೇತೃತ್ವದ ಏಕ ಸದಸ್ಯ ತನಿಖಾ ಆಯೋಗ ರಚಿಸಿತು. ಆಯೋಗವು 18 ತಿಂಗಳ ಒಳಗೆ ತನ್ನ ವರದಿ ಸಲ್ಲಿಸಬೇಕಾಗಿದೆ.2009ರಲ್ಲಿ ಗಣಿಗಾರಿಕೆ ನಡೆಯುತ್ತಿರುವ ದೇಶದ 11 ರಾಜ್ಯಗಳಲ್ಲಿ ದಾಖಲೆಯ 42 ಸಾವಿರ ಅಕ್ರಮ ಗಣಿಗಾರಿಕೆ ಪ್ರಕರಣಗಳು ಬೆಳಕಿಗೆ ಬಂದಿದ್ದವು. ಈ ಪೈಕಿ ಸರ್ಕಾರ 483 ಗಣಿಗಳಲ್ಲಿನ ಗಣಿ ಚಟುವಟಿಕೆಗಳನ್ನು ಸ್ಥಗಿತಗೊಳಿಸಿದೆ, 38 ಗಣಿ ಲೀಸ್‌ಗಳನ್ನು ರದ್ದುಪಡಿಸಿದೆ ಮತ್ತು 943 ಗಣಿಗಳನ್ನು ಮುಚ್ಚಿದೆ.ಅಕ್ರಮ ಗಣಿಗಾರಿಕೆ  ನಿಯಂತ್ರಿಸಲು ಸೂಕ್ತ ಕಾನೂನು ವ್ಯವಸ್ಥೆ ಇಲ್ಲ ಎಂದು ಭಾವಿಸಿದ ಕೇಂದ್ರ ಗಣಿ ಸಚಿವಾಲಯ, ನೂತನ ಗಣಿ ನೀತಿಯಲ್ಲಿ ಕೆಲವು ಹೊಸ ಅಂಶಗಳನ್ನು ಸೇರಿಸಿದೆ. ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿ ತಪ್ಪಿತಸ್ಥರು ಎಂದು ಸಾಬೀತಾದವರು ದೇಶದ ಯಾವುದೇ ಭಾಗದಲ್ಲಿ ಗಣಿಗಾರಿಕೆ ನಡೆಸುವುದಕ್ಕೆ ನಿಷೇಧ ಹೇರುವುದು ಹಾಗೂ ಅಕ್ರಮ ಗಣಿಗಾರಿಕೆ ಬಗ್ಗೆ ಮಾಹಿತಿ ನೀಡುವವರನ್ನು ಪುರಸ್ಕರಿಸುವ ಪ್ರಸ್ತಾವಗಳು ಇದರಲ್ಲಿ ಸೇರಿವೆ.ಗಣಿಗಾರಿಕೆಗಾಗಿ ಸ್ಥಳಾಂತರಗೊಳ್ಳುವ ಜನರಿಗೆ ಶೇ 26ರಷ್ಟು ಲಾಭಾಂಶ ಹಂಚುವ ಪ್ರಸ್ತಾಪ ಹೊಸದಾಗಿ ಜಾರಿಗೆ ತರಲಿರುವ ಗಣಿ ಮತ್ತು ಖನಿಜ ಅಭಿವೃದ್ಧಿ  ಹಾಗೂ ನಿಯಂತ್ರಣ ಮಸೂದೆಯಲ್ಲಿ ಇದೆ. ಇದೀಗ ಉದ್ಯಮ ವಲಯದಲ್ಲಿ ಇದರ ಬಗ್ಗೆ ತೀವ್ರ ಚರ್ಚೆ ನಡೆಯುತ್ತಿದೆ.  ಈ ಪ್ರಸ್ತಾವದಂತೆ ಗಣಿ ಕಂಪೆನಿ ಕಳೆದ ವರ್ಷದ ತನ್ನ ಲಾಭದಲ್ಲಿ ಶೇ 26ರಷ್ಟು ಭಾಗವನ್ನು ಜಿಲ್ಲಾ ಗಣಿ ಪ್ರತಿಷ್ಠಾನದಲ್ಲಿ ಇರಿಸಬೇಕು. ಗಣಿಗಾರಿಕೆಗಾಗಿ ಸ್ಥಳಾಂತರಗೊಂಡವರಿಗೆ ಇದನ್ನು ಹಂಚಬೇಕು. ಒಂದು ವೇಳೆ ಕಂಪೆನಿ ನಷ್ಟಕ್ಕೆ ಒಳಗಾದರೆ ಅಥವಾ ಕಾರ್ಯ ಸ್ಥಗಿತಗೊಂಡರೆ ರಾಜ್ಯ ಸರ್ಕಾರಗಳಿಗೆ ನೀಡುವ ರಾಯಧನಕ್ಕೆ ಸಮನಾಗಿ ಅವುಗಳು ನಿರ್ವಸಿತ ಜನರಿಗೆ ರಾಯಧನ ನೀಡಬೇಕು ಎಂದೂ ಈ ಹೊಸ ನಿಯಮದಲ್ಲಿ ಸೂಚಿಸಲಾಗಿದೆ. ಹಲವು ಉಕ್ಕು ಉದ್ಯಮಿಗಳು ಈ ಪ್ರಸ್ತಾವ  ಸ್ವಾಗತಿಸಿದ್ದರೂ, ಇದರ ಜಾರಿ ಸವಾಲಿನ ಸಂಗತಿ ಎಂದು ಹೇಳಿದ್ದಾರೆ.ಅನಿವಾಸಿ ಭಾರತೀಯ ಉದ್ಯಮಿ ಅನಿಲ್ ಅಗರ್‌ವಾಲ್ ನೇತೃತ್ವದ ವೇದಾಂತ ರಿಸೋರ್ಸಸ್ ಕಂಪೆನಿಯ 1.7 ಶತಕೋಟಿ ಡಾಲರ್ ನಿಯಮ್‌ಗಿರಿ ಬಾಕ್ಸೈಟ್ ಗಣಿಗಾರಿಕೆ ಯೋಜನೆಗೆ  ಕೇಂದ್ರ ಸರ್ಕಾರ ಒಪ್ಪಿಗೆ ನೀಡದೆ ಇದ್ದುದು 2010ರ ಬಹುದೊಡ್ಡ ಬೆಳವಣಿಗೆಗಳಲ್ಲಿ ಒಂದು.  ಅರಣ್ಯ ಮತ್ತು ಪರಿಸರ ಕಾನೂನುಗಳನ್ನು ಕಂಪೆನಿ ಉಲ್ಲಂಘಿಸಿದೆ ಎಂಬ ನೆಲೆಯಲ್ಲಿ ಅದಕ್ಕೆ ಅನುಮತಿ ನಿರಾಕರಿಸಲಾಯಿತು. ಈ ಕಾರಣಕ್ಕೆ ಅರಣ್ಯ ಮತ್ತು ಪರಿಸರ ಸಚಿವ ಜೈರಾಂ ರಮೇಶ್ ಅವರು ವಿಶೇಷವಾಗಿ ಮಿಂಚಿಬಿಟ್ಟರು.ಕಬ್ಬಿಣದ ಅದಿರಿನ ರಫ್ತಿಗೆ ನಿಷೇಧ ಹೇರಬೇಕೆಂಬ ಒತ್ತಾಯ ದೇಶದ ಉದ್ದಗಲಕ್ಕೆ ಕೇಳಿಸಿದ್ದು ಸಹ ಒಂದು ವಿಶೇಷ. ಕೇಂದ್ರ ಉಕ್ಕು ಸಚಿವ ವೀರಭದ್ರ ಸಿಂಗ್, ಕರ್ನಾಟಕದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ, ಜೆಎಸ್‌ಡಬ್ಲ್ಯು ಸ್ಟೀಲ್ ಎಂಡಿ ಸಜ್ಜನ್ ಜಿಂದಾಲ್, ಸಿಒಪಿಯುನಂತಹ ಸಂಸದೀಯ ಸಮಿತಿಗಳ ಸದಸ್ಯರು ಈ ಒತ್ತಾಯ ಮಾಡಿದ್ದರು. ಕಳೆದ ಜೂನ್‌ನಲ್ಲಿ ಕಬ್ಬಿಣದ ಅದಿರಿನ ದಾಸ್ತಾನಿನ ಮೇಲಿನ ಸುಂಕವನ್ನು ಶೇ 15ರಷ್ಟು ಮತ್ತು ದಂಡವನ್ನು ಶೇ 5ರಷ್ಟು ಹೆಚ್ಚಿಸಿದ್ದು ಬಿಟ್ಟರೆ ಅದಿರು ರಫ್ತಿಗೆ ನಿಷೇಧ ಹೇರಬೇಕೆಂಬ ಪ್ರಸ್ತಾವವನ್ನು ಗಣಿ ಸಚಿವಾಲಯ ತಿರಸ್ಕರಿಸಿದೆ.ದೇಶದಲ್ಲಿ 25,249 ಶತಕೋಟಿ ಟನ್‌ಗಳಷ್ಟು ಕಬ್ಬಿಣದ ಅದಿರಿನ ದಾಸ್ತಾನು ಇರುವ ಬಗ್ಗೆ ಅಂದಾಜಿಸಲಾಗಿದ್ದು, 2009-10ರಲ್ಲಿ 128 ದಶಲಕ್ಷ ಟನ್ ಅದಿರನ್ನು ರಫ್ತು ಮಾಡಲಾಗಿತ್ತು. ಅಕ್ರಮ ಗಣಿಗಾರಿಕೆಯ ಗದ್ದಲದ ನಡುವೆ ಗಣಿ ಉದ್ಯಮ 2010ರಲ್ಲಿ ದೇಶವನ್ನು ಜಗತ್ತಿನಲ್ಲಿ ಮುಂಚೂಣಿಯಲ್ಲಿ ನಿಲ್ಲಿಸಿದ್ದು ಸುಳ್ಳಲ್ಲ. ಇದೊಂದು ದೇಶದ ಭಾರಿ ದೊಡ್ಡ ಸಂಪತ್ತು, ಇದರ ಸೂಕ್ತ ನಿರ್ವಹಣೆ ರಾಜ್ಯಗಳು ಮಾತ್ರವಲ್ಲ, ಕೇಂದ್ರ ಸರ್ಕಾರದ ಬಹುದೊಡ್ಡ ಸವಾಲೇ ಸರಿ.       

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.