ಗಾಂಧಿ ಮಾರ್ಗ ಬದುಕಿಗೆ ದಾರಿದೀಪ

ಚಾಮರಾಜನಗರ: ‘ಪ್ರತಿಯೊಬ್ಬರು ಮಹಾತ್ಮಗಾಂಧಿ ಹಾಕಿಕೊಟ್ಟಿರುವ ಅಹಿಂಸಾ ಮಾರ್ಗದಲ್ಲಿ ಸಾಗಿ ಸಹಿಷ್ಣುತೆಯನ್ನು ರಕ್ತಗತ ಮಾಡಿಕೊಳ್ಳಬೇಕಿದೆ’
–ಇದು ಜಿಲ್ಲೆಯ ಜನರಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಎಸ್. ಮಹದೇವಪ್ರಸಾದ್ ನೀಡಿದ 70ನೇ ಸ್ವಾತಂತ್ರ್ಯೋತ್ಸವದ ಸಂದೇಶ.
ನಗರದ ಡಾ.ಬಿ.ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಸೋಮವಾರ ಜಿಲ್ಲಾಡಳಿತದಿಂದ ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದ ಬಳಿಕ ಗೌರವ ವಂದನೆ ಸ್ವೀಕರಿಸಿ ಅವರು ಮಾತನಾಡಿದರು.
‘ದೇಶ ಪ್ರೇಮ ಸ್ವಾತಂತ್ರ್ಯ ದಿನಾಚರಣೆಗೆ ಸೀಮಿತವಾಗಬಾರದು. ಭಾಷೆ, ಧರ್ಮ, ಸಂಸ್ಕೃತಿ ಮೀರಿ ಮನುಷ್ಯರೆಲ್ಲರೂ ಒಂದೇ ಎಂಬ ಭಾವ ಬೆಸೆಯಬೇಕಿದೆ’ ಎಂದು ಪ್ರತಿಪಾದಿಸಿದರು.
ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನದಿಂದ ನಾವು ಸ್ವಾತಂತ್ರ್ಯ ಅನುಭವಿಸುತ್ತಿದ್ದೇವೆ. ಸ್ವಾತಂತ್ರ್ಯ ಹೋರಾಟದಲ್ಲಿ ಮಹಾತ್ಮ ಗಾಂಧಿ ಮುಂಚೂಣಿಯಲ್ಲಿದ್ದರು. ಗ್ರಾಮ ಸ್ವರಾಜ್ಯ ಸ್ಥಾಪಿಸುವುದು ಅವರ ಕನಸಾಗಿತ್ತು ಎಂದರು.
ಜವಹಾರಲಾಲ್ ನೆಹರೂ ಅವರು ಜಾತ್ಯತೀತ ನೆಲೆಗಟ್ಟಿನಲ್ಲಿ ಸ್ವತಂತ್ರ ಭಾರತವನ್ನು ಬಲಪಡಿಸಲು ಆಶಿಸಿದ್ದರು. ಡಾ.ಬಿ.ಆರ್.ಅಂಬೇಡ್ಕರ್ ಅವರು ಸುಭದ್ರವಾದ ಸಂವಿಧಾನ ರಚಿಸಿಕೊಟ್ಟಿದ್ದಾರೆ. ರಾಜಕೀಯ ಸ್ವಾತಂತ್ರ್ಯದ ಜತೆಗೆ ಆರ್ಥಿಕ ಸ್ವಾತಂತ್ರ್ಯವನ್ನು ನೀಡಿದ್ದಾರೆ. ಸಂವಿಧಾನದಡಿ ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ ಎಂದು ಹೇಳಿದರು.
ಬ್ರಿಟಿಷರ ವಿರುದ್ಧದ ಹೋರಾಟದಿಂದ ಭಾರತೀಯ ಸಂಸ್ಕೃತಿ, ಪರಂಪರೆ, ವೈವಿಧ್ಯ ಮತ್ತು ಆದರ್ಶಗಳು ಅನಾವರಣಗೊಳ್ಳಲು ಸಾಧ್ಯವಾಯಿತು. ವೈವಿಧ್ಯಮಯ ಭಾರತದಲ್ಲಿ ಏಕತೆ ಮೂಡಿಸಲು ಈ ಹೋರಾಟ ಸಾಧನವಾಯಿತು. ಸ್ವಾತಂತ್ರ್ಯ ವೀರರ ಬದುಕು ಇಂದಿಗೂ ನಮಗೆ ದಾರಿದೀಪವಾಗಿದೆ ಎಂದು ಹೇಳಿದರು.
ರಾಜ್ಯ ಸರ್ಕಾರ ಜನಪರ ಆಡಳಿತ ನೀಡುತ್ತಿದೆ. ಎಲ್ಲ ವರ್ಗದ ಜನರಿಗೆ ಸಾಮಾಜಿಕ ಮತ್ತು ಆರ್ಥಿಕ ನ್ಯಾಯ ಕಲ್ಪಿಸಲು ಶ್ರಮಿಸುತ್ತಿದೆ. ಎಲ್ಲರೂ ನಿರ್ಭಯವಾಗಿ ಘನತೆ ಮತ್ತು ಗೌರವದಿಂದ ಬದುಕುವ ವಾತಾವರಣ ಒದಗಿಸಲು ಒತ್ತು ನೀಡಿದೆ. ಕೃಷಿ, ಕೈಗಾರಿಕೆಗಳ ಅಭಿವೃದ್ಧಿಗೂ ಆದ್ಯತೆ ನೀಡಿದೆ ಎಂದು ತಿಳಿಸಿದರು.
ಅನ್ನದಾತರ ಪ್ರಯತ್ನದಿಂದಾಗಿ 3 ವರ್ಷದಲ್ಲಿ ರಾಜ್ಯದ ಕೃಷಿ ಕ್ಷೇತ್ರದಲ್ಲಿ 370 ಲಕ್ಷ ಟನ್ ಆಹಾರದ ಉತ್ಪಾದನೆಯಾಗಿದೆ. ತೋಟಗಾರಿಕೆ ಉತ್ಪನ್ನಗಳ ವಾರ್ಷಿಕ ಮೌಲ್ಯವು ₹ 37 ಸಾವಿರ ಕೋಟಿಯಷ್ಟಿದೆ ಎಂದರು.
5 ವರ್ಷದಲ್ಲಿ ₹ 50 ಸಾವಿರ ಕೋಟಿ ವೆಚ್ಚದಡಿ ರಾಜ್ಯದ 9.25 ಲಕ್ಷ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವ ಗುರಿ ಹೊಂದಲಾಗಿದೆ. ಈಗಾಗಲೇ, ಸರ್ಕಾರದ ಅಧಿಕಾರಾವಧಿಯ 3 ವರ್ಷದಲ್ಲಿ ₹ 30 ಸಾವಿರ ಕೋಟಿ ವೆಚ್ಚದಡಿ 4.82 ಲಕ್ಷ ಎಕರೆಗೆ ನೀರಾವರಿ ಸೌಲಭ್ಯ ಒದಗಿಸಲಾಗಿದೆ ಎಂದು ವಿವರಿಸಿದರು.
2015–16ನೇ ಸಾಲಿನಡಿ 22.5 ಲಕ್ಷ ರೈತರಿಗೆ ₹ 10,184 ಕೋಟಿ ಸಾಲ ವಿತರಿಸಲಾಗಿದೆ. 3 ವರ್ಷದಲ್ಲಿ ರಿಯಾಯಿತಿ ಬಡ್ಡಿದರದಲ್ಲಿ ರೈತರಿಗೆ ವಿತರಿಸಿದ ಕೃಷಿ ಸಾಲಗಳಿಗೆ ಸಂಬಂಧಿಸಿದಂತೆ ಸಹಕಾರ ಸಂಘಗಳಿಗೆ ₹ 2,007 ಕೋಟಿ ಸಹಾಯಧನ ವಿತರಿಸಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆಯ ಸಂಸದೀಯ ಕಾರ್ಯದರ್ಶಿ ಸಿ. ಪುಟ್ಟರಂಗಶೆಟ್ಟಿ ಅಧ್ಯಕ್ಷತೆವಹಿಸಿದ್ದರು.
ಸಂಸದ ಆರ್. ಧ್ರುವನಾರಾಯಣ, ಜಿ. ಪಂ. ಅಧ್ಯಕ್ಷ ಎಂ. ರಾಮಚಂದ್ರ, ಉಪಾಧ್ಯಕ್ಷ ಎಸ್. ಬಸವರಾಜು, ತಾ. ಪಂ. ಅಧ್ಯಕ್ಷ ಎಚ್.ವಿ. ಚಂದ್ರು, ನಗರಸಭೆ ಅಧ್ಯಕ್ಷೆ ಎಸ್.ಎನ್. ರೇಣುಕಾ, ಉಪಾಧ್ಯಕ್ಷ ಆರ್.ಎಂ. ರಾಜಪ್ಪ, ಚೂಡಾ ಅಧ್ಯಕ್ಷ ಸೈಯದ್ ರಫೀ, ಜಿಲ್ಲಾಧಿಕಾರಿ ಬಿ. ರಾಮು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಲದೀಪ್ಕುಮಾರ್ ಆರ್. ಜೈನ್, ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹೆಫ್ಸಿಬಾ ರಾಣಿ ಕೊರ್ಲಪಾಟಿ, ಹೆಚ್ಚುವರಿ ಜಿಲ್ಲಾಧಿಕಾರಿ ಡಿ. ಭಾರತಿ ಹಾಜರಿದ್ದರು.
ಇದೇ ವೇಳೆ ಸ್ವಾತಂತ್ರ್ಯ ಹೋರಾಟಗಾರರಾದ ಕಾಗಲವಾಡಿಯ ಸಿ. ಬಸವಯ್ಯ ಮತ್ತು ಕರಿನಂಜನಪುರದ ತೋಟದಪ್ಪ ಅವರನ್ನು ಸನ್ಮಾನಿಸಲಾಯಿತು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.