ಭಾನುವಾರ, ಮೇ 16, 2021
28 °C

ಗಾಲ್ಫ್: ಮುನ್ನಡೆ ಸಾಧಿಸಿದ ಗೌರಿ ಮೋಂಗಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ದೆಹಲಿಯ ಗೌರಿ ಮೋಂಗಾ ಇಲ್ಲಿ ನಡೆಯುತ್ತಿರುವ ಉಷಾ ಐಜಿಯು ಸದರ್ನ್ ಇಂಡಿಯಾ ಮಹಿಳೆಯರ ಮತ್ತು ಬಾಲಕಿಯರ ಗಾಲ್ಫ್ ಚಾಂಪಿಯನ್‌ಷಿಪ್‌ನ ಎರಡನೇ ಸುತ್ತಿನ ಬಳಿಕ ಮುನ್ನಡೆ ಸಾಧಿಸಿದ್ದಾರೆ.ಕರ್ನಾಟಕ ಗಾಲ್ಫ್ ಸಂಸ್ಥೆ ಕೋರ್ಸ್‌ನಲ್ಲಿ ಮಂಗಳವಾರ ನಡೆದ ಎರಡನೇ ಸುತ್ತಿನ ಸ್ಪರ್ಧೆ ಕೊನೆಗೊಳಿಸಲು ಗೌರಿ 73 ಅವಕಾಶಗಳನ್ನು ಬಳಸಿಕೊಂಡರು. ಮೊದಲ ಸುತ್ತಿನಲ್ಲಿ ಇಷ್ಟೇ ಅವಕಾಶ ಬಳಸಿಕೊಂಡಿದ್ದ ಅವರು ಒಟ್ಟು 146 ಸ್ಕೋರ್‌ಗಳೊಂದಿಗೆ ಅಗ್ರಸ್ಥಾನಕ್ಕೇರಿದರು.ಗುರ್‌ಸಿಮರ್ ಬದ್ವಾಲ್ (74, 73) ಮತ್ತು ತ್ವೇಸಾ ಮಲಿಕ್ (74, 73) ಜಂಟಿ ಎರಡನೇ ಸ್ಥಾನದಲ್ಲಿದ್ದಾರೆ. ಮೋಡ ಕವಿದ ವಾತಾವರಣ ಹಾಗೂ ಗಾಳಿ ಬೀಸುತ್ತಿದ್ದ ಕಾರಣ ಎಲ್ಲ ಸ್ಪರ್ಧಿಗಳು ಸತತ ಎರಡನೇ ದಿನವೂ ನಿಖರ ಪ್ರದರ್ಶನ ನೀಡಲು ಸಾಕಷ್ಟು ಪರಿಶ್ರಮಪಟ್ಟರು.ಮೊದಲ ಸುತ್ತಿನ ಬಳಿಕ ಮುನ್ನಡೆ ಸಾಧಿಸಿದ್ದ ಗುಡಗಾಂವ್‌ನ ಅಸ್ತಾ ಮದನ್ ಮಂಗಳವಾರ ನಿಖರ ಪ್ರದರ್ಶನ ನೀಡುವಲ್ಲಿ ವಿಫಲರಾದರು. ಮೊದಲ ದಿನ 72 ಅವಕಾಶಗಳನ್ನು ಬಳಸಿಕೊಂಡಿದ್ದ ಅಸ್ತಾ, ಎರಡನೇ ಸುತ್ತಿನಲ್ಲಿ 76 ಅವಕಾಶಗಳನ್ನು ತೆಗೆದುಕೊಂಡರು. ಇದೀಗ ಒಟ್ಟು 148 ಸ್ಕೋರ್‌ಗಳೊಂದಿಗೆ ರಕ್ಷಾ ಫಡ್ಕೆ (74, 74) ಜೊತೆ ಜಂಟಿ ನಾಲ್ಕನೇ ಸ್ಥಾನದಲ್ಲಿದ್ದಾರೆ.ಹೋದ ಋತುವಿನ ಅಗ್ರ ರ‍್ಯಾಂಕ್‌ನ ಆಟಗಾರ್ತಿ ಗುರ್ಬಾನಿ ಸಿಂಗ್ (149) ಆರನೇ ಸ್ಥಾನ ಹೊಂದಿದ್ದಾರೆ. ಪ್ರಶಸ್ತಿ ಗೆಲ್ಲಬೇಕಾದರೆ ಅವರಿಗೆ ಕೊನೆಯ ಸುತ್ತುಗಳಲ್ಲಿ ಅಸಾಮಾನ್ಯ ಪ್ರದರ್ಶನ ನೀಡುವುದು ಅನಿವಾರ್ಯ.ಅಸ್ತಾ ಮದನ್ ಅವರು `ಎ' ವಿಭಾಗದಲ್ಲೂ ಅಗ್ರಸ್ಥಾನ ಕಳೆದುಕೊಂಡರು. ಈ ವಿಭಾಗದಲ್ಲಿ ತ್ವೇಸಾ (74, 73) ಅಗ್ರಸ್ಥಾನಕ್ಕೇರಿದರು. `ಬಿ' ವಿಭಾಗದಲ್ಲಿ ಅಮೃತಾ ಆನಂದ್ (73, 77) ಮುನ್ನಡೆಯಲ್ಲಿ ಕಾಣಿಸಿಕೊಂಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.