ಸೋಮವಾರ, ಜನವರಿ 27, 2020
24 °C
ರಿಕವರಿ ಹೆಸರಿನಲ್ಲಿ ಕಿರುಕುಳ ಆರೋಪದಲ್ಲಿ ಹುರುಳಿಲ್ಲ

ಗಿರವಿ ಅಂಗಡಿ ಆಭರಣ ದಾಖಲೆ ಅತ್ಯಗತ್ಯ: ಕಟೋಚ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆಜಿಎಫ್: ಅಕ್ರಮವಾಗಿ ಕಳ್ಳ ಮಾಲು ಪಡೆಯುವುದು ಅಪರಾಧ. ಗಿರವಿ ಅಂಗಡಿ ಮಾಲೀಕರಿಗೆ ಪೊಲೀಸರು ‘ರಿಕವರಿ’ ಹೆಸರಿನಲ್ಲಿ ಕಿರುಕುಳ ನೀಡು­ತ್ತಿದ್ದಾರೆ ಎಂಬುದು ಸುಳ್ಳು. ಪೊಲೀಸರು ಪ್ರಥಮ ವರದಿ ಮಾಹಿತಿಯನ್ನು ಹಿಡಿದು ತನಿಖೆಯನ್ನು ನಡೆಸುತ್ತಾರೆ...–ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರೋಹಿಣಿ ಕಟೋಚ್ ಸೆಪಟ್ ಅವರ ಸ್ಪಷ್ಟ ನುಡಿಗಳಿವು.

ದಾಖಲೆ ಇಲ್ಲದೆ ಯಾರೇ ಚಿನ್ನ, ಬೆಳ್ಳಿ ತಂದು ಕೊಟ್ಟರೂ ಪಡೆದು ಹಣವನ್ನು ನೀಡುವುದಾದರೆ ವ್ಯವಸ್ಥೆ ಹೇಗೆ ನಡೆ­ಯುತ್ತದೆ? ಕಳವು ಪ್ರಕರಣಗಳನ್ನು ಪತ್ತೆ ಹಚ್ಚುವುದಾದರೂ ಹೇಗೆ? ಎಂಬುದು ಅವರ ಪ್ರಶ್ನೆ.‘ಪ್ರಜಾವಾಣಿ’ಯ ಪ್ರಶ್ನೆ ಎದುರಿಸಿದ ಅವರು, ನಗರದ ಕೆಲವು ವರ್ತಕರು ಪೊಲೀಸರು ಅಂಗಡಿ ಪ್ರವೇಶ ಮಾಡ­ಬಾರದು ಮತ್ತು ವರ್ತಕರಿಂದ ನೇರ­ವಾಗಿ ಮಾಲುಗಳನ್ನು ವಶಪಡಿಸಿ­ಕೊಳ್ಳಬಾರದು. ಇದಕ್ಕೆ ನ್ಯಾಯಾ­ಲಯದ ತಡೆ­ಯಾಜ್ಞೆ ಇದೆ ಎಂದು ಪ್ರಚಾರ ಮಾಡುತ್ತಿದ್ದಾರೆ. ಅವರ ಮಾತು­ಗಳಿಗೆ ಆಧಾರವಿಲ್ಲ ಎಂದು ಸ್ಪಷ್ಟ­ಪಡಿಸಿ­ದರು.ಚಿನ್ನಾಭರಣ ಕಳವು ಪ್ರಕರಣಗಳಲ್ಲಿ  ಮಾಲನ್ನು ವಶಪಡಿಸಿಕೊಳ್ಳುವುದು ಅತ್ಯಂತ ಕಠಿಣ ಕೆಲಸವಾಗಿದೆ. ಚಿನ್ನದ ಮತ್ತು ಗಿರವಿ ಅಂಗಡಿಗಳಲ್ಲಿ ಯಾರು ಬೇಕಾದರೂ ಚಿನ್ನವನ್ನು ಅಡವಿಡ­ಬಹುದು. ಅದರ ಮೂಲದ ಬಗ್ಗೆ ತಿಳಿವಳಿಕೆ ಹೊಂದುವ ಅವಶ್ಯಕತೆ ಇರುವುದಿಲ್ಲ ಎಂಬುದೇ ಸರಿಯಲ್ಲ. ಚಿನ್ನ–ಬೆಳ್ಳಿ ಖರೀದಿಯಲ್ಲಿ ನಿಖರತೆ ಮತ್ತು ನಿರ್ದಿಷ್ಟ ದಾಖಲೆ­ಯನ್ನು ಕಾನೂನು ಬದ್ಧವಾಗಿ ಹೊಂದ­ಬೇಕಾದ ಅವಶ್ಯಕತೆ ಕಡ್ಡಾಯವಾಗ­ಬೇಕು. ಆಗ ಮಾತ್ರ ಕಳವುಮಾಲುಗಳ ಪತ್ತೆ ಸುಲಭ­ವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.ಪರಿವರ್ತನೆ ಅಗತ್ಯ: ಬಾಲಕ– ಬಾಲಕಿಯರಿಗೆ ಶಾಲಾ ವಿದ್ಯಾಭ್ಯಾಸದ ಹಂತದಲ್ಲೇ ಕಾನೂನು ಸುವ್ಯವಸ್ಥೆ, ಸಂಚಾರ ನಿಯಮದ ಅರಿವು ನೀಡುವ ಅವಶ್ಯಕತೆ ಇದೆ ಎಂದು ಹೇಳಿದರು.ನಮ್ಮ ಕಚೇರಿಯ ಎದುರಿಗೆ ಇರುವ ಸರ್ಕಾರಿ ಪದವಿಪೂರ್ವ ಕಾಲೇಜಿನ ಮಕ್ಕಳು ನಮ್ಮ ಮುಂದೆಯೇ ಸಂಚಾರ ನಿಯಮಗಳನ್ನು ಉಲ್ಲಂಘನೆ ಮಾಡಿ ಹೋಗುತ್ತಾರೆ.  ಡ್ರೈವಿಂಗ್‌ ಲೈಸನ್ಸ್‌ ಇಲ್ಲದೆ ಮೂರು ಮಂದಿ ಬೈಕ್‌ನಲ್ಲಿ ಕುಳಿತು ಸಂಚರಿಸುವ ಯುವಕರ ಸಂಖ್ಯೆ ಹೆಚ್ಚಾಗುತ್ತಿದೆ. ಅಂಥ ಯುವಕರು ಪೊಲೀಸರ ಅಂಕೆಗೂ ಸಿಗುವುದಿಲ್ಲ. ಅವರಿಗೆ ಸಂಚಾರ ನಿಯಮಗಳ ಬಗ್ಗೆ ತಿಳಿವಳಿಕೆಯನ್ನು ನೀಡಬೇಕಾಗಿದೆ. ಅದ­ಕ್ಕಾಗಿ ಮೊದಲಿಗೆ ಪ್ರಕರಣವನ್ನು ದಾಖ­ಲಿಸುವ ಬದಲು, ಅವರ ಪೋಷಕರನ್ನು ಕರೆಸಿ ಬುದ್ಧಿ ಮಾತು ಹೇಳಲು ನಿರ್ಧರಿಸಲಾಗಿದೆ ಎಂದು ಹೇಳಿದರು.ಯುವ ಕ್ಲಬ್ ಹೆಚ್ಚಳ: ನಗರದಲ್ಲಿ ನಿರುದ್ಯೋಗಿ ಯುವಕರ ಸಂಖ್ಯೆಯೂ ಹೆಚ್ಚಿದೆ. ಯುವಕರ ಕ್ಲಬ್‌ಗಳು  ಹೆಚ್ಚಾ­ಗಿವೆ. ಜೀವನದಲ್ಲಿ ಉನ್ನತ ಗುರಿಗಳನ್ನು ಹೊಂದಿ ಅವುಗಳನ್ನು ಸಾಧಿಸಲು ಯುವಜನ ಸಾಕಷ್ಟು ಶ್ರಮಿಸ­ಬೇಕು. ಅದನ್ನು ಬಿಟ್ಟು ಸೋಮಾರಿ­ಗಳಾಗಿದ್ದರೆ ಯಾರಿಗೂ ಪ್ರಯೋಜನವಾಗುವುದಿಲ್ಲ ಎಂದು ಹೇಳಿದರು.ಸಂಶೋಧನೆ ಪ್ರಗತಿ: ಪೊಲೀಸರ ಮಾನಸಿಕ ಮತ್ತು ದೈಹಿಕ ಆರೋಗ್ಯದ ಕುರಿತು ಸಂಶೋಧನಾ ಪ್ರಸ್ತಾವವನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಉತ್ತಮ ಪ್ರತಿಕ್ರಿಯೆಯೂ ವ್ಯಕ್ತವಾಗಿದೆ.ಕೆಜಿಎಫ್‌ ಪೊಲೀಸ್‌ ಜಿಲ್ಲೆಯ 700 ಪೊಲೀಸ್‌ ಸಿಬ್ಬಂದಿಯನ್ನು ಸಂಪೂರ್ಣ ಆರೋಗ್ಯ ತಪಾಸಣೆಗೆ ಒಳಪಡಿಸಲಾಗು­ವುದು. ಅದರಲ್ಲಿ 59 ಮಹಿಳಾ ಸಿಬ್ಬಂದಿಯೂ ಇದ್ದಾರೆ. ಆರಂಭಿಕವಾಗಿ ರಾಬರ್ಟ್ ಸನ್ ಪೇಟೆ ಪೊಲೀಸ್ ಠಾಣೆ ಸಿಬ್ಬಂದಿ ಕಡೆಗೆ ಗಮನ ಹರಿಸಲಾಗಿದೆ ಎಂದರು.ಪೊಲೀಸರು ದೈನಂದಿನ ಕೆಲಸದಲ್ಲಿ ಒತ್ತಡಕ್ಕೆ ಒಳಗಾಗದೆ ಕರ್ತವ್ಯ ನಿರ್ವಹಿ­ಸಲು ಸೂಕ್ತ ವ್ಯವಸ್ಥೆ ಹೇಗಿರಬೇಕು ಎಂಬ ಸಂಶೋಧನೆ ನಡೆಸಲಾಗುವುದು. ಪೊಲೀಸರ ಮಾನಸಿಕ ಸ್ಥೈರ್ಯ ಕಾಪಾ­ಡಲು ಅವರಿಗೆ ಪ್ರಶ್ನಾವಳಿಗಳನ್ನು ನೀಡಿ ಉತ್ತರ ಪಡೆಯಲಾಗಿದೆ. ಆ ಮೂಲಕ ಪೊಲೀಸರನ್ನು ಮತ್ತಷ್ಟು ಚುರುಕು­ಗೊಳಿಸುವ ಪ್ರಯತ್ನ ನಡೆಸಲಾಗುತ್ತಿದೆ ಎಂದು ಕಟೋಚ್‌ ಹೇಳಿದರು.

ಪ್ರತಿಕ್ರಿಯಿಸಿ (+)