ಬುಧವಾರ, ಜೂನ್ 23, 2021
30 °C

ಗಿರಿಜನರ ಕೈವಾಡವಿಲ್ಲ

ಶ್ರೀಕಾಂತ ಕಲ್ಲಮ್ಮನವರ Updated:

ಅಕ್ಷರ ಗಾತ್ರ : | |

ಗಿರಿಜನರ ಕೈವಾಡವಿಲ್ಲ

ನಾಗರಹೊಳೆ ಅರಣ್ಯದಲ್ಲಿ ನಾಲ್ಕು ದಿನಗಳವರೆಗೆ ಹೊತ್ತಿ ಉರಿದ ಬೆಂಕಿಗೆ ಏನು ಕಾರಣ ಎನ್ನುವುದರ ಬಗ್ಗೆ ಈಗ ಚರ್ಚೆ ಶುರುವಾಗಿದೆ. ಇದು ನೈಸರ್ಗಿಕವಲ್ಲ, ಮಾನವ ನಿರ್ಮಿತ ಎನ್ನುವುದನ್ನು ಬಹುಮಟ್ಟಿಗೆ ಎಲ್ಲರೂ ಒಪ್ಪಿಕೊಳ್ಳುತ್ತಿದ್ದಾರೆ. ಅರಣ್ಯಾಧಿಕಾರಿಗಳು, ಗಿರಿಜನರು ಅಥವಾ ಕಾಡಿಗೆ ಆಗಾಗ ಭೇಟಿ ನೀಡುವ ಪರಿಸರವಾದಿಗಳೇ ಎನ್ನುವ ನಿಜಾಂಶ ಇನ್ನಷ್ಟೇ ಬೆಳಕಿಗೆ ಬರಬೇಕು.ಗಿರಿಜನರ ಮೇಲೆಯೂ ಗುಮಾನಿ ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಗಿರಿಜನರ ಮುಖಂಡ ಜೆ.ಕೆ. ರಾಮು ಹಾಗೂ ನಾಗರಹೊಳೆ ಹಾಡಿಯ ಗಿರಿಜನ ಮುಖಂಡ ತಿಮ್ಮ ಅವರು ವ್ಯಕ್ತಪಡಿಸಿದ ಅಭಿಪ್ರಾಯ ಇಲ್ಲಿದೆ;`ಅರಣ್ಯವೇ ನಮ್ಮ ಸರ್ವಸ್ವ. ಇದನ್ನು ಬಿಟ್ಟರೆ ನಮಗೆ ಬೇರೆ ಸ್ಥಳವಿಲ್ಲ. ಇಲ್ಲಿಯೇ ಹುಟ್ಟಿ ಬೆಳೆಯುವ ನಾವು ಅದು ಹೇಗೆ ನಮ್ಮ ಮನೆಗೆ ನಾವೇ ಬೆಂಕಿ ಇಡುತ್ತೇವೆ? ಇಲ್ಲಿ ಬೆಂಕಿ ಹಾಕಿ ಬೇರೆ ಕಡೆ ಹೋಗೋಕೆ ನಮಗೇನೂ ಹತ್ತೆಂಟು ಮನೆಗಳು ಇವೆಯೇ?~`ಈ ಘಟನೆಗೆ ಮನುಷ್ಯರೇ ಕಾರಣ ಎನ್ನುವುದು ನಿರ್ವಿವಾದ. ಆದರೆ, ಇಲಾಖೆಯವರು ಹೇಳುವಂತೆ ಕಾಡಿನ ಜನರ ಕೈವಾಡ ಇದರಲ್ಲಿ ಇಲ್ಲ. ಹೊರಗಿನವರೇ ಇದಕ್ಕೆ ಕಾರಣ. ಕಾಳ್ಗಿಚ್ಚನ್ನು ತಡೆಯುವಲ್ಲಿ ವಿಫಲವಾದ ಅರಣ್ಯ ಇಲಾಖೆಯ ಅಧಿಕಾರಿಗಳ ವೈಫಲ್ಯ ಇದರಲ್ಲಿ ಸೇರಿದೆ.~`ಕೇಂದ್ರ ಸರ್ಕಾರ 2005ರಲ್ಲಿ ಅರಣ್ಯ ಹಕ್ಕು ಕಾಯಿದೆಯನ್ನು ಜಾರಿಗೊಳಿಸಿದ ನಂತರ ಕಾಳ್ಗಿಚ್ಚಿನಂತಹ ಹಲವಾರು ಪ್ರಕರಣಗಳು ಘಟಿಸಿವೆ. ಗಿರಿಜನರನ್ನು ಕಾಡಿನಿಂದ ಓಡಿಸಬೇಕು. ಇವರಿಗೆ ಅರಣ್ಯ ಹಕ್ಕು ಕಾಯಿದೆ ನೀಡಬಾರದೆಂಬ ದುರುದ್ದೇಶ ಇದರ ಹಿಂದೆ ಕೆಲಸ ಮಾಡುತ್ತಿದೆ. ಗಿರಿಜನರು ವಾಸಿಸುವ ಕಾಡಿನಲ್ಲಿಯೇ ಕಾಳ್ಗಿಚ್ಚಿನ ಪ್ರಕರಣಗಳು ನಡೆದಿರುವುದು ಗುಮಾನಿಗೆ ಕಾರಣವಾಗಿದೆ. ನಮ್ಮ ಹಕ್ಕುಗಳನ್ನು ಕೇಳುವುದು ತಪ್ಪೇ?~`ಹವಾನಿಯಂತ್ರಿತ ಕೊಠಡಿಯಲ್ಲಿ ಕುಳಿತು ಹೇಳಿಕೆ ನೀಡುವ ಇಲಾಖೆಯ ಅಧಿಕಾರಿಗಳು, ಸಚಿವರು ಹಾಗೂ ಪರಿಸರವಾದಿಗಳಿಗಿಂತ ಕಾಡಿನಲ್ಲಿ ವಾಸಿಸುವ ನಾವುಗಳೇ ನಿಜವಾದ ಅರಣ್ಯ ರಕ್ಷಕರು. ಎಲ್ಲೆಲ್ಲಿ ಹಾಡಿಯ ಜನರು ವಾಸವಾಗಿದ್ದಾರೋ ಅಲ್ಲಲ್ಲಿ ಇಂದಿಗೂ ಕೂಡ ಅರಣ್ಯ ಉಳಿದಿದೆ.~`ಕಾಡು ಉಳಿಯದಿದ್ದರೆ ನಮಗೆ ಉಳಿಗಾಲವಿಲ್ಲ. ನಮ್ಮ ಉಳಿವು-ಅಳಿವು ಈ ಅರಣ್ಯದ ಮೇಲೆ ಅವಲಂಬನೆಯಾಗಿದೆ. ಇಂತಹ ಕಾಡಿಗೆ ನಾವೇ ಬೆಂಕಿ ಹಾಕುತ್ತೇವೆ ಎಂದು ಅಪಪ್ರಚಾರ ನಡೆಸಲಾಗುತ್ತಿದೆ.~ `ಪುನರ್ವಸತಿ ಹೆಸರಿನಲ್ಲಿ ನಮ್ಮ ಮೇಲೆ ದೌರ್ಜನ್ಯ ಎಸಗಲಾಗುತ್ತಿದೆ. ಹತ್ತು ಲಕ್ಷ ರೂಪಾಯಿ ಕೊಡುತ್ತೇವೆ, ಕಾಡು ಬಿಟ್ಟು ಹೊರಗೆ ಹೋಗಿ~ ಎಂದೆಲ್ಲ ಆಮಿಷ ಒಡ್ಡಲಾಗುತ್ತಿದೆ. ಇದಕ್ಕೆ ಒಪ್ಪದವರ ವಿರುದ್ಧ ಅಕ್ರಮ ಅರಣ್ಯ ಪ್ರವೇಶವೆಂದು ಕೇಸ್ ಹಾಕಲಾಗುತ್ತಿದೆ.~`ಅರಣ್ಯ ಹಕ್ಕು ನೀಡಿ, ಸಮುದಾಯ ಹಕ್ಕು ನೀಡಿ. ಅರಣ್ಯದಲ್ಲಿಯೇ ವಾಸಿಸಲು ನಮಗೆ ಅನುವು ಮಾಡಿಕೊಡಿ. ನಮ್ಮ ವ್ಯವಸಾಯದ ಭೂಮಿಗಳ ಸರ್ವೇ ಮಾಡಿಕೊಡಿ~ ಎಂದು ಹಲವು ಬಾರಿ ಇಲಾಖೆಗೆ ಮನವಿ ಸಲ್ಲಿಸಿದ್ದರೂ ಇದುವರೆಗೆ ಸಾಕಾರಗೊಂಡಿಲ್ಲ. ಇದಕ್ಕೆ ನಮ್ಮ ವೈರಿಗಳು ಅವಕಾಶವೇ ಕೊಡುತ್ತಿಲ್ಲ.~`ಬೆಂಕಿ ಬಿದ್ದಿರುವುದನ್ನು ಗುರುತಿಸುವುದಗೋಸ್ಕರ ದಿನಗೂಲಿ ಆಧಾರದ ಮೇಲೆ ಕೇವಲ 3-4 ತಿಂಗಳಿಗೆ ಮಾತ್ರ ಹಾಡಿಯ ಜನರನ್ನು ವಾಚರ್ ಹುದ್ದೆಗಳಿಗೆ ನೇಮಿಸಲಾಗುತ್ತಿದೆ.

ಇವರ ಜೀವನೋಪಾಯಕ್ಕೆ ನಿರ್ದಿಷ್ಟ ಯೋಜನೆಗಳನ್ನು ಇಲಾಖೆಯವರು ಕೈಗೊಂಡಿಲ್ಲ~ `ಅರಣ್ಯದಲ್ಲಿ ಗಾಂಜಾ ಕೃಷಿ, ಮರಗಳ್ಳತನ, ಪ್ರಾಣಿಗಳ ಬೇಟೆ ಮುಂತಾದ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಇಲಾಖೆಯವರು ಹಾಗೂ ಹೊರಗಿನವರೇ ಭಾಗಿಯಾಗಿದ್ದಾರೆ ಹೊರತು ಹಾಡಿಯ ಜನರಲ್ಲ. ಕಾಡು ನಮಗೆ ದೇವರಿದ್ದಂತೆ. ಯಾರಾದರೂ ತಮ್ಮ ದೇವರಿಗೆ ಅಪಚಾರ ಎಸಗುವರೇ?~

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.