ಬುಧವಾರ, ಜನವರಿ 22, 2020
16 °C

ಗುಂಡಿಬಿದ್ದ ರಸ್ತೆ: ಹಕ್ಕುಪತ್ರ ವಿತರಿಸದ ಗ್ರಾ.ಪಂ

ಪ್ರಜಾವಾಣಿ ವಾರ್ತೆ ಎನ್. ನಾಗರಾಜು Updated:

ಅಕ್ಷರ ಗಾತ್ರ : | |

ಗುಂಡ್ಲುಪೇಟೆ: ನಿವೇಶನ ಹಂಚಿಕೆಯಲ್ಲಿ ತಾರತಮ್ಯ, ಇಲ್ಲದ ಬೀದಿ ದೀಪ, ಬೆಳ್ಳಿಬೆಳಕು ಯೋಜನೆಯಡಿ ನೀಡಿರುವ ನಿವೇಶನಕ್ಕೆ ಹಕ್ಕು ಪತ್ರ ವಿತರಿಸಿಲ್ಲ, ಹೊಸ ಬಡಾವಣೆಗೆ ಚರಂಡಿಯಾಗಿಲ್ಲ, ಸಮುದಾಯ ಭವನವಿಲ್ಲ... ಇವು ಬೇಗೂರು ಹೋಬಳಿ ಕೋಟೆಕೆರೆ ಗ್ರಾಮದಲ್ಲಿನ ಪ್ರಮುಖ ಸಮಸ್ಯೆಗಳು.ಈ ಗ್ರಾಮದಲ್ಲಿಯೇ ಗ್ರಾಮ ಪಂಚಾಯಿತಿ ಕಾರ್ಯಾಲಯವಿದ್ದರೂ ಗ್ರಾಮಸ್ಥರಿಗೆ ಅನುಕೂಲ ಕಲ್ಪಿಸಲು ವಿಫಲವಾಗಿದೆ. ಅನೇಕ ತೊಂಬೆಗಳಿದ್ದರೂ ಸಮರ್ಪಕವಾಗಿ ನೀರು ಬಿಡದ ಕಾರಣ ಮಹಿಳೆಯರು ಸರತಿ ಸಾಲಿನಲ್ಲಿ ಗಂಟೆಗಟ್ಟಲೆ ಕಾದು ನೀರು ಹಿಡಿಯುವ ಪರಿಸ್ಥಿತಿ ಇದೆ.ಅನೇಕ ಬಾರಿ ಗ್ರಾಮ ಪಂಚಾಯಿತಿಗೆ ದೂರು ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನುವುದು ಗ್ರಾಮದ ಮಹೇಶ್ ಎಂಬುವವರ ಆರೋಪ.ರಸ್ತೆಗಳ ಸಮರ್ಪಕ ನಿರ್ವಹಣೆ ಇಲ್ಲದ ಕಾರಣ ಹಲವು ಬಡಾವಣೆಗಳಲ್ಲಿ ರಸ್ತೆ ಗುಂಡಿ ಬಿದ್ದಿದೆ. ಚರಂಡಿಯಲ್ಲಿ ಹೂಳು ತೆಗೆಯದ ಕಾರಣ ನೀರು ಹೋಗದೆ ಮಳೆಯಾದರೆ ರಸ್ತೆಯ ಮಧ್ಯ ಭಾಗದಲ್ಲಿಯೇ ಹರಿಯುತ್ತದೆ. ಇದರಿಂದ ಗ್ರಾಮಸ್ಥರಿಗೆ ಓಡಾಡಲು ತೊಂದರೆ. ಅಲ್ಲಲ್ಲಿ ಮಳೆ ನೀರು ನಿಲ್ಲುವುದರಿಂದ ಸೊಳ್ಳೆಗಳ ವಾಸ ಸ್ಥಾನವಾಗಿದೆ.ಗ್ರಾಮದಲ್ಲಿ ಶುಚಿತ್ವ ಇಲ್ಲದೇ ಅಲ್ಲಲ್ಲಿ ಕಸದ ರಾಶಿ ಬಿದ್ದಿದ್ದು ತಿಂಗಳುಗಳಾದರೂ ಅದನ್ನು ತೆಗೆದು ಸ್ವಚ್ಛ ಗೊಳಿಸುವುದಿಲ್ಲ ಎನ್ನುವುದು ಗ್ರಾಮಸ್ಥರ ಆರೋಪ.ಅನೇಕ ವರ್ಷ ಕಳೆದರೂ ಗ್ರಾಮದ ಒಳಭಾಗದಲ್ಲಿ ಡಾಂಬರೀಕರಣದ ರಸ್ತೆ ಇಲ್ಲ. ಗ್ರಾಮದಲ್ಲಿ ಸಾರ್ವಜನಿಕ ಶೌಚಾಲಯ ವ್ಯವಸ್ಥೆ ಇಲ್ಲ. ಬಹುತೇಕ ಜನರು ಬಯಲು ಶೌಚಾಲಯದ ಮೊರೆ ಹೋಗ ಬೇಕಾದ ಅನಿವಾರ್ಯತೆ ಇದೆ. ಗ್ರಾಮ ಪಂಚಾಯಿತಿ ವತಿಯಿಂದ ಪ್ರತಿಯೊಂದು ಮನೆಗೂ ಶೌಚಾಲಯ ನಿರ್ಮಿಸಲು ಸಹಾಯ ಧನ ನೀಡ ಬೇಕು ಹಾಗೂ ಗ್ರಾಮದಲ್ಲಿ ಒಂದು ಸಾರ್ವಜನಿಕ ಶೌಚಾಲಯ ನಿರ್ಮಿಸಬೇಕಾಗಿದೆ.ಈ ಗ್ರಾಮವು ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನ ದಲ್ಲಿದ್ದರೂ ಜನಪ್ರತಿನಿಧಿಗಳು ಗಮನಹರಿಸುವುದಿಲ್ಲ ಮತ್ತು ಕುಡಿಯುವ ನೀರಿನ ಸಮಸ್ಯೆ ಬಗೆ ಹರಿಸಿಲ್ಲ ಎಂದು ಗ್ರಾಮದ ಹಿರಿಯರ ಅನಿಸಿಕೆ. ಈ ಗ್ರಾಮ ಪಂಚಾಯಿತಿಯಲ್ಲಿ ನಡೆದ ಗ್ರಾಮಸಭೆಯಲ್ಲಿ ಆಯ್ಕೆಯಾದ ಫಲಾನುಭವಿಗಳಿಗೆ ಸೌಲಭ್ಯ ದೊರಕು ತ್ತಿಲ್ಲ ಎನ್ನುವುದು ಗ್ರಾಮದ ಚಿನ್ನಸ್ವಾಮಿನಾಯಕ ಅವರ ಅನಿಸಿಕೆಯಾಗಿದೆ.ಗ್ರಾಮದ ಬಹುತೇಕ ಜನರು ವ್ಯವಸಾಯ ಮಾಡುತ್ತಿರುವುದರಿಂದ ಕೆಲವು ವೇಳೆ ನಿರಂತರ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಿ ತೊಂದರೆಯಾಗಿದೆ ಮತ್ತು ಓಲ್ಟೆಜ್ ಕೊರತೆ ಇದೆ ಎಂದು ಗ್ರಾಮಸ್ಥರು ಆರೋಪಿಸುತ್ತಾರೆ.ಗ್ರಾಮದಲ್ಲಿ ನಾಯಕ ಸಮುದಾಯಕ್ಕೆ ಸೇರಿದ ಜನಾಂಗ ಹೆಚ್ಚಾಗಿದ್ದು, ವಿವಾಹ ಮುಂತಾದ ಶುಭ ಕಾರ್ಯಗಳನ್ನು ಕೈಗೊಳ್ಳಲು ಸಮುದಾಯ ಭವನದ ಅವಶ್ಯಕತೆ ಇದೆ. ಇದು ಕಾಡಂಚಿನ ಗ್ರಾಮವಾಗಿ ರುವುದರಿಂದ ಪ್ರತಿನಿತ್ಯ ಕಾಡಾನೆಗಳ ಹಾವಳಿ ವಿಪರೀತವಾಗಿದ್ದರೂ ಅರಣ್ಯ ಇಲಾಖೆ ಸಿಬ್ಬಂದಿಗಳು ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಶಿವಲಿಂಗನಾಯಕರ ಆರೋಪ. ಈ ಗ್ರಾಮದಿಂದ ಬೇಗೂರಿಗೆ 45ಕ್ಕೂ ಅಧಿಕ ವಿದ್ಯಾರ್ಥಿಗಳು ಪ್ರೌಢಶಾಲೆಗೆ ಹೋಗುತ್ತಿ ರುವುದರಿಂದ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಇಲ್ಲಿ ಪ್ರೌಢಶಾಲೆ ತೆರೆದರೆ ಬಹಳ ಅನುಕೂಲವಾಗುತ್ತದೆ ಎನ್ನುವುದು ಪೋಷಕರ ಅಭಿಪ್ರಾಯ.ರಾತ್ರಿ ವೇಳೆ ಕುಡುಕರ ಹಾವಳಿ ವಿಪರೀತವಾಗಿದೆ ಮತ್ತು ಗ್ರಾಮದಲ್ಲಿರುವ ಕಿರಾಣಿ ಅಂಗಡಿಗಳಲ್ಲಿಯೇ ಅಕ್ರಮವಾಗಿ ಮದ್ಯ ಮಾರಾಟ ನಡೆಯುತ್ತಿದೆ ಇದರ ಬಗ್ಗೆ ಅಬಕಾರಿ ಇಲಾಖೆಯವರು ಕ್ರಮ ಕೈಗೊಳ್ಳ ಬೇಕು ಎನ್ನುವುದು ಗ್ರಾಮಸ್ಥರ ಒಕ್ಕೊರಲಿನ ಅಭಿಪ್ರಾಯವಾಗಿದೆ.ಇನ್ನಾದರೂ ಸಂಬಂಧಿಸಿದ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಅಧಿಕಾರಿ ವರ್ಗದವರು ಇತ್ತ ಗಮನಹರಿಸಿ ಗ್ರಾಮದ ಮೂಲಭೂತ ಸಮಸ್ಯೆ ಗಳನ್ನು ಬಗೆಹರಿಸಲು ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

 

ಪ್ರತಿಕ್ರಿಯಿಸಿ (+)