ಗುರುವಾರ , ಮೇ 13, 2021
17 °C

ಗುಟ್ಕಾ ಮಾರಿದರೆ ಜೈಲು

ಪ್ರಜಾವಾಣಿ ವಾರ್ತೆ/ಪ್ರಕಾಶ ಕುಗ್ವೆ Updated:

ಅಕ್ಷರ ಗಾತ್ರ : | |

ಗುಟ್ಕಾ ಮಾರಿದರೆ ಜೈಲು

ಶಿವಮೊಗ್ಗ:  ಗುಟ್ಕಾ ನಿಷೇಧಿಸಿದ ರಾಜ್ಯ ಸರ್ಕಾರ ಅದರ ಜಾರಿ ಹೊಣೆಯನ್ನು ಆರೋಗ್ಯ ಇಲಾಖೆ ಮೇಲೆ ಹೊರಿಸಿದೆ. ಈ ಸಂಬಂಧ ಮಾರ್ಗದರ್ಶಿ ನಿಯಮಗಳನ್ನು ಮೇ 31ರಂದು ಪ್ರಕಟಿಸಿದೆ. ಅದರಂತೆ  ಗುಟ್ಕಾ ಮಾರಾಟ, ಶೇಖರಣೆ ಹಾಗೂ ವಿತರಣೆ ಮೇಲೆ ಆರೋಗ್ಯ ಇಲಾಖೆಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಅಧಿಕಾರಿಗಳು ಹದ್ದಿನ ಕಣ್ಣು ಇಡಬೇಕಾಗಿದೆ.ಆಹಾರ ಸುರಕ್ಷತೆ ಕಾಯ್ದೆಯಂತೆ ರಚನೆಗೊಂಡ ಆಹಾರ ಸುರಕ್ಷತೆ ಮತ್ತು ಮಾನಕಗಳ ನಿಯಮ 2011ರ ಕಲಂ 2,3,4ರ ಅಡಿ ಗುಟ್ಕಾ ಮತ್ತು ಪಾನ್‌ಮಸಾಲಗಳ ಉತ್ಪಾದನೆ ಮತ್ತು ಮಾರಾಟವನ್ನು ಪ್ರತಿಬಂಧಿಸಬಹುದು. ಹಾಗೆಯೇ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006ರ ಕಲಂ 57, 58 ಮತ್ತು 59ರ ಉಪಕಲಂ ಪ್ರಕಾರ ಆರೋಗ್ಯಕ್ಕೆ ಹಾನಿಕರವಾದ ಮತ್ತು ಕಲಬೆರಕೆ ಮಾಡಿದ ವಸ್ತುಗಳನ್ನು ಮಾರಿದವರಿಗೆ ಹಾಗೂ ತಯಾರಿಸುವವರಿಗೆ ರೂ.10 ಲಕ್ಷದವರೆಗೆ ದಂಡ ಹಾಕಬಹುದು. ಅಲ್ಲದೆ, ಅಂತಹವರಿಗೆ 7 ವರ್ಷಗಳ ಕಾರಾಗೃಹ ಶಿಕ್ಷೆಯೂ ಇದೆ. ಇದನ್ನು ಸೇವಿಸಿ ಮೃತಪಟ್ಟರೆ ತಯಾರಕರು ಮತ್ತು ಮಾರಾಟ ಮಾಡಿದವರಿಗೆ ಜೀವಾವಧಿ ಜೈಲುಶಿಕ್ಷೆಯನ್ನೂ ವಿಧಿಸಬಹುದು.ಆಹಾರ ಸುರಕ್ಷತೆ ಕಾಯ್ದೆಯಂತೆ ಪ್ರತಿ ತಾಲ್ಲೂಕಿಗೆ ಒಬ್ಬ ಆಹಾರ ಸುರಕ್ಷತಾ ಅಧಿಕಾರಿ ಇರಬೇಕು. ಜಿಲ್ಲಾ ಮಟ್ಟದಲ್ಲಿ ಆಹಾರ ಸುರಕ್ಷತ ಅಧಿಕಾರಿಗಳ ಮುಖ್ಯಸ್ಥರಾಗಿ ಆಹಾರ ವಿಚಕ್ಷಣಾ ಅಧಿಕಾರಿಗಳು ಇರುತ್ತಾರೆ. ಇವರಿಗೆ ಜಿಲ್ಲಾ ನಿಯೋಜಿತ ಅಧಿಕಾರಿಗಳ ಹೊಣೆ ನೀಡಲಾಗಿದ್ದು, ಇವರ ಮಾರ್ಗದರ್ಶನದಲ್ಲೇ ಗುಟ್ಕಾ ಮಾರಾಟ, ಶೇಖರಣೆ ಹಾಗೂ ವಿತರಣೆ ಕೇಂದ್ರಗಳ ಮೇಲೆ ದಾಳಿ ನಡೆಸುವ, ಪ್ರಕರಣಗಳನ್ನು ದಾಖಲಿಸಿಕೊಳ್ಳುವ ಅಧಿಕಾರವನ್ನು ಕಾಯ್ದೆ ನೀಡಿದೆ. ಅಲ್ಲದೆ, ಅವರ ವ್ಯಾಪಾರ ಪರವಾನಗಿಯನ್ನೂ ರದ್ದುಗೊಳಿಸುವ ಅಧಿಕಾರವನ್ನೂ ನೀಡಲಾಗಿದೆ.ಜಿಲ್ಲಾ ಮಟ್ಟದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿಗಳನ್ನು ನ್ಯಾಯ ನಿರ್ಣಯ ಅಧಿಕಾರಿಯನ್ನಾಗಿ ನೇಮಿಸಲಾಗಿದೆ. ಆಹಾರ ಸುರಕ್ಷತೆ ಅಧಿಕಾರಿಗಳು ದಾಖಲಿಸಿಕೊಂಡ ಪ್ರಕರಣಗಳನ್ನು ತಮ್ಮ ನ್ಯಾಯಾಲಯದಲ್ಲಿ ಇತ್ಯರ್ಥಪಡಿಸುವ ಅಧಿಕಾರವನ್ನು ಹೆಚ್ಚುವರಿ ಜಿಲ್ಲಾಧಿಕಾರಿಗಳಿಗೆ ನೀಡಲಾಗಿದೆ. ಕಾಯ್ದೆ ಪ್ರಕಾರ ಶಿಕ್ಷೆ ಮತ್ತು ದಂಡ ವಿಧಿಸುವ ಅಧಿಕಾರ ಅವರಿಗಿದೆ. ಇವರ ತೀರ್ಪು ಪ್ರಶ್ನಿಸಿ, ಬೆಂಗಳೂರಿನ ಆಹಾರ ಸುರಕ್ಷತೆ ಆಯುಕ್ತರ ಬಳಿ ಮೇಲ್ಮನವಿ ಸಲ್ಲಿಸುವುದಕ್ಕೂ ಅವಕಾಶ ಕಲ್ಪಿಸಲಾಗಿದೆ.ಅಗತ್ಯ ಕಾಣಿಸಿದರೆ ಗುಟ್ಕಾವನ್ನು ಪರೀಕ್ಷೆಗಾಗಿ ಬೆಂಗಳೂರು, ಮೈಸೂರು, ಬೆಳಗಾವಿ, ಗುಲ್ಬರ್ಗಗಳಲ್ಲಿರುವ ಆಹಾರ ಸುರಕ್ಷತೆ ಪ್ರಯೋಗಾಲಯಗಳಿಗೆ ಕಳುಹಿಸಬಹುದು.ದಾಳಿಗೆ ಹೊರಡುವ ಮೊದಲು ಪೊಲೀಸರ ಸಹಾಯ ಪಡೆಯಲಾಗುತ್ತದೆ. ಗುಟ್ಕಾ ಅಂಗಡಿ ಬಂದ್ ಮಾಡಿಸುವಾಗ ಅಂಗಡಿಯವನಿಂದ ಅರ್ಜಿ ನಮೂನೆಯನ್ನು ಭರ್ತಿ ಮಾಡಿಸಿ, ಸಹಿ ತೆಗೆದುಕೊಳ್ಳಬೇಕು. ಅಲ್ಲದೆ, ರೂ 20 ಮೌಲ್ಯದ ಬಾಂಡ್‌ಪೇಪರ್ ಮೇಲೆ ದಾಳಿ ಪ್ರಕ್ರಿಯೆಗಳನ್ನು ದಾಖಲಿಸಿಕೊಳ್ಳಬೇಕು.`ಕಾಯ್ದೆ ಜೂನ್ 1ರಿಂದ ಜಾರಿಗೆ ಬಂದಿದೆ. ಪ್ರಥಮ ಹಂತದಲ್ಲಿ ಗುಟ್ಕಾ ಮಾರಾಟ, ಶೇಖರಣೆ ಹಾಗೂ ವಿತರಣೆ ಮಾಡುವವರಿಗೆ ತಿಳಿವಳಿಕೆ ನೋಟಿಸ್ ನೀಡಲಾಗುವುದು. ಕರಪತ್ರ, ಬ್ಯಾನರ್‌ಗಳ ಮೂಲಕ ಜಾಗೃತಿ ಮೂಡಿಸಲಾಗುವುದು. ತದನಂತರ ದಾಳಿ ನಡೆಸಲಾಗುವುದು. ಸಾಕಷ್ಟು ಜಿಲ್ಲೆಗಳಲ್ಲಿ ಆಹಾರ ಸುರಕ್ಷತೆ ಅಧಿಕಾರಿಗಳ ಕೊರತೆ ಇದೆ. ಹಾಗಾಗಿ, ನಗರಸಭೆ, ಪಟ್ಟಣ ಪಂಚಾಯ್ತಿಗಳ ಆರೋಗ್ಯ ನಿರೀಕ್ಷಕರ ಸಹಾಯ ಪಡೆಯಲು ಸರ್ಕಾರ ತೀರ್ಮಾನಿಸಿದೆ' ಎನ್ನುತ್ತಾರೆ ಜಿಲ್ಲಾ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಜಿಲ್ಲಾ ಅಂಕಿತ ಅಧಿಕಾರಿಯಾಗಿ ನಿಯೋಜನೆಗೊಂಡ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ರಘುನಂದನ್. ಗುಟ್ಕಾ ಸೇವನೆ ಮಾಡುವವರಿಗೆ ಯಾವುದೇ ಶಿಕ್ಷೆ ಈ ಕಾಯ್ದೆಯಲ್ಲಿ ಇಲ್ಲದಿರುವುದರಿಂದ ಅವರಲ್ಲಿ ಜಾಗೃತಿ ಮೂಡಿಸಬೇಕಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಕೇಂದ್ರ ಸರ್ಕಾರದ ನೆರವಿನಿಂದ ಈಗಾಗಲೇ 11 ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಅಸಾಂಕ್ರಾಮಿಕ ರೋಗಗಳ ನಿಯಂತ್ರಣ ಘಟಕ ತೆರೆದಿದ್ದು, ಗುಟ್ಕಾ ಚಟಕ್ಕೆ ಒಳಗಾದವರಿಗೆ  ಅಲ್ಲಿ  ಕೌನ್ಸೆಲಿಂಗ್ ನೀಡಲು ವ್ಯವಸ್ಥೆ ಮಾಡಲಾಗಿದೆ ಎನ್ನುತ್ತಾರೆ ಅವರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.