ಬುಧವಾರ, ಮೇ 18, 2022
25 °C

ಗುಡೇಕೊಟೆ ಶಿವಪಾರ್ವತಿ

ಸ್ವರೂಪಾನಂದ.ಎಂ.ಕೊಟ್ಟೂರು Updated:

ಅಕ್ಷರ ಗಾತ್ರ : | |

ಈಶ್ವರನ ದೇವಾಲಯಗಳಲ್ಲಿ ಸಹಜವಾಗಿ ಶಿವಲಿಂಗ ಹಾಗೂ ನಂದಿಗಳು ಇರುವುದನ್ನು ನೀವು ನೋಡಿರುತ್ತೀರಿ. ಆದರೆ ಬಳ್ಳಾರಿ ಜಿಲ್ಲೆಯ ಗುಡೇಕೊಟೆಯ ಶಿವ ದೇವಾಲಯದಲ್ಲಿ ಶಿವ ಹಾಗೂ ಪಾರ್ವತಿಯನ್ನು ಒಂದೇ ಶಿಲೆಯಲ್ಲಿ ಕೆತ್ತನೆ ಮಾಡಲಾಗಿದೆ. ಹೀಗೆ ಶಿವ ಹಾಗೂ ಪಾರ್ವತಿಯರ ವಿಗ್ರಹದ ದೇಗುಲ ವಿರಳಾತಿವಿರಳ. ಇದು ದಕ್ಷಿಣ ಭಾರತದಲ್ಲಂತೂ ಅಪರೂಪದ್ದು ಎನ್ನುವ ಮಾತು ಪ್ರಚಲಿತದಲ್ಲಿದೆ.ಈ ದೇವಾಲಯವು ಉತ್ತರಾಭಿಮುಖವಾಗಿದ್ದು, ವಿಜಯನಗರೋತ್ತರ ಕಾಲದಲ್ಲಿಯೇ ನಿರ್ಮಾಣಗೊಂಡಿದೆ. ಗರ್ಭಗೃಹ, ಅಂತರಾಳ, ಸಭಾಮಂಟಪ ಹಾಗೂ ಮುಖಮಂಟಪಗಳನ್ನು ಹೊಂದಿದೆ. ಗರ್ಭಗುಡಿಯಲ್ಲಿ ಸುಮಾರು ನಾಲ್ಕು ಅಡಿ ಎತ್ತರದ ಶಿವ- ಪಾರ್ವತಿಯರ ವಿಗ್ರಹವಿದೆ.ಮೇಲಿನ ಎರಡು ಕೈಗಳಲ್ಲಿ ಡಮರು, ತ್ರಿಶೂಲಧಾರಿಯಾದ ಶಿವ, ಕೆಳಗಿನ ಒಂದು ಕೈಯಲ್ಲಿ ಪಾರ್ವತಿಯನ್ನು ಬಳಸಿ ಹಿಡಿದಿದ್ದಾನೆ. ಇನ್ನೊಂದು ಕೈ ತೊಡೆಯ ಮೇಲಿದೆ. ಶಿವನ ಎಡತೊಡೆಯ ಮೇಲೆ ಪಾರ್ವತಿ ಸುಖಾಸೀನಳಾಗಿ ಕುಳಿತಿದ್ದಾಳೆ. ಆಕೆಯ ಎಡಗಾಲಡಿಯಲ್ಲಿ ಕೋಣವಿದೆ.ಎತ್ತರದ ಪೀಠ ಹೊಂದಿರುವ ಈ ಶಿಲ್ಪದ ಸುತ್ತಲೂ ಅರೆಗಂಬ, ಹೂಬಳ್ಳಿ, ಕೀರ್ತಿಮುಖಗಳ ಅಲಂಕರಣೆಯಿಂದ ಕೂಡಿದ ಪ್ರಭಾವಳಿ ಇದೆ. ಸಭಾಮಂಟಪದಲ್ಲಿರುವ ಕಂಬಗಳು ಸರಳವಾಗಿದ್ದು, ಚಚ್ಚೌಕವಾಗಿವೆ. ಮೆಲ್ಭಾಗದ ಶಿಖರ ಎರಡು ತಲಗಳಲ್ಲಿದೆ. ದೇಗುಲದ ವಾಸ್ತು ಅಲಂಕಾರ, ಶಿಖರದ ಅಲಂಕಾರ, ಕೀರ್ತಿ ಮುಖ ಮುಂತಾದ ಶಿಲ್ಪಗಳನ್ನು ಗಾರೆಯಲ್ಲಿ ತಯಾರಿಸಲಾಗಿದೆ.ಶಿವಪಾರ್ವತಿ ವಿಗ್ರಹದ ಎದುರು ನಂದಿ, ಬಲಗಡೆ ಗಣೇಶ, ಎಡಗಡೆ ಏಳುಕೈ ದುರುಗಮ್ಮನ ವಿಗ್ರಹಗಳಿವೆ. ದೇವಸ್ಥಾನದ ಹೊರಗಡೆ ಗರುಡ ಕಂಬವಿದೆ. ಸೋಮವಾರ, ಅಮಾವಾಸ್ಯೆ ದಿನಗಳಲ್ಲಿ ಭಕ್ತರ ಸಂಖ್ಯೆ ಹೆಚ್ಚು.ಪ್ರತೀ ಅಮಾವಾಸ್ಯೆಯಂದು ಭಕ್ತರೇ ಅನ್ನ ದಾಸೋಹ ನಡೆಸುತ್ತಾರೆ. ದಿನಂಪತ್ರಿ ಸಾಮಾನ್ಯ ಪೂಜೆಗಳಲ್ಲದೆ, ಅಮಾವಾಸ್ಯೆ, ಯುಗಾದಿ, ಶಿವರಾತ್ರಿ, ಪಂಚಮಿ, ದಸರಾ ಹಬ್ಬದ ದಿನಗಳಲ್ಲಿ ವಿಶೇಷ ಪೂಜೆ ಮತ್ತು ಅಲಂಕಾರ ಮಾಡಲಾಗುತ್ತದೆ. ಅಂದು ಶಿವಪಾರ್ವತಿ ವಿಗ್ರಹಕ್ಕೆ ಬೆಳ್ಳಿ ಕಿರೀಟ, ಉಡುಪು, ಪುಷ್ಪಗಳಿಂದ ಅಲಂಕರಿಸಲಾಗುತ್ತದೆ.ವಿಶೇಷ ದಿನಗಳಲ್ಲಿ ಮಹಾಭಿಷೇಕ, ರುದ್ರಾಭಿಷೇಕ ಮಾಡಲಾಗುತ್ತದೆ. ಭಕ್ತರು ಅಪೇಕ್ಷೆಸಿದರೆ ಯಾವುದೇ ದಿನದಲ್ಲಾದರೂ ಎಲೆ ಪೂಜೆ, ಮಹಾಭಿಷೇಕ, ರುದ್ರಾಭಿಷೇಕ ಮಾಡಿಸಲು ಅವಕಾಶವಿದೆ. ಆದರೆ ಅದಕ್ಕೆ ನಿರ್ದಿಷ್ಟ ಶುಲ್ಕ ನಿಗದಿಪಡಿಸಿಲ್ಲ.ಮದುವೆ, ಜವಳ ಸೇರಿದಂತೆ ಮಂಗಳ ಕಾರ್ಯಗಳಿಗೂ ಇಲ್ಲಿ ಅವಕಾಶವಿದೆ. ಈ ಭಾಗದಲ್ಲಿನ ಅಯ್ಯಪ್ಪ ಸ್ವಾಮಿಯ ಭಕ್ತರು ಇರುಮುಡಿಯನ್ನು ಕಟ್ಟುವುದು ಈ ಶಿವಪಾರ್ವತಿಯರ ಸನ್ನಿಧಿಯಲ್ಲಿ.ಭಕ್ತಾದಿಗಳು ಉಳಿದುಕೊಳ್ಳಲು ದೇವಸ್ಥಾನದ ಆವರಣದಲ್ಲಿ ಸಮುದಾಯ ಭವನವಿದೆ. ವಿವರಗಳಿಗೆ ಪಂಚಾಕ್ಷರಿ 81977 32657 ಅವರನ್ನು ಸಂಪರ್ಕಿಸಬಹುದು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.