ಗುತ್ತಿಗೆದಾರನ ಮೇಲೆ ಹಲ್ಲೆ: ದೂರು ದಾಖಲು
ಹೊಳೆನರಸೀಪುರ: ತಾಲ್ಲೂಕಿನ ಬೂವನಹಳ್ಳಿಯ ಪ್ರಥಮ ದರ್ಜೆ ಗುತ್ತಿಗೆದಾರರೊಬ್ಬರ ಮೇಲೆ ಹಲ್ಲೆ ನಡೆಸಿರುವುದಲ್ಲದೇ ಅವರ ಮನೆ ಮೇಲೆ ಕಲ್ಲುತೂರಿ ಹಾನಿಗೊಳಿಸಿರುವ ಘಟನೆ ಶುಕ್ರವಾರ ರಾತ್ರಿ ನಡೆದಿದೆ.ಬೂವನಹಳ್ಳಿಯ ಪ್ರಥಮ ದರ್ಜೆ ಗುತ್ತಿಗೆದಾರ ಗಂಗಾಧರಾಚಾರಿ ಹಲ್ಲೆಗೊಳಗಾದವರು. ಇವರು ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಜೋಡಿಗುಬ್ಬಿಯ ಮಂಜೇಗೌಡ ಹಾಗೂ ಆತನ ಜೊತೆಯಲ್ಲಿದ್ದ ಇತರ 7 ಮಂದಿ ಕಲ್ಲು ತೂರಾಟ ನಡೆಸಿ ಗಾಯಗೊಳಿಸಿದ್ದಲ್ಲದೆ ಮನೆಯಮೇಲೂ ಕಲ್ಲು ತೂರಾಟ ನಡೆಸಿ ಹಾನಿಗೊಳಿಸಿದ್ದಾರೆ ಎಂದು ಗಂಗಾಧರಾಚಾರ್ ಪೊಲೀಸರಿಗೆ ದೂರು ನೀಡಿದ್ದಾರೆ.‘ಶುಕ್ರವಾರ ಉದ್ದೂರಿನಲ್ಲಿ ನಾಟಕ ನಡೆದಿತ್ತು. ಗ್ರಾಮಸ್ಥರು ನನ್ನನ್ನೂ ಅತಿಥಿಯಾಗಿ ಆಹ್ವಾನಿಸಿದ್ದರು. ಕಾರ್ಯಕ್ರಮದಲ್ಲಿ ಭಾಗವಹಿಸುವಾಗ ಕೆಲವರು ವೇದಿಕೆಮೇಲೆ ಯಾರೂ ಹೋಗದಂತೆ ಕೂಗಾಡುತ್ತಿದ್ದಾಗ ಗ್ರಾಮಸ್ಥರು ಮತ್ತು ಯುವಕರ ನಡುವೆ ಕೂಗಾಟ ನಡೆದಿತ್ತು. ನಂತರ ನಾನು ಯುವಕರನ್ನು ಸಮಾಧಾನ ಪಡಿಸಿ ನಾಟಕ ಪ್ರಾರಂಭಿಸಿ ಮನೆಗೆ ಬಂದಿದ್ದೆ. ರಾತ್ರಿ 10.30 ಸಮಯದಲ್ಲಿ ಜೋಡಿಗುಬ್ಬಿ ಮಂಜೇಗೌಡ ಇತರ ಕೆಲವರೊಂದಿಗೆ ಬೈಕ್ಗಳಲ್ಲಿ ಆಗಮಿಸಿ ಬಾಗಿಲು ಬಡಿದರು.
ನಾನು ಹೋಗಿ ಬಾಗಿಲು ತೆಗೆಯುತ್ತಿದ್ದಂತೆ ನನ್ನ ಮೇಲೆ ಕಲ್ಲುಗಳನ್ನು ತೂರಿ ಮನೆಯನ್ನು ಜಖಂಗೊಳಿಸಿ ಪರಾರಿಯಾದರು’ ಎಂದು ಗಂಗಾಧರಾಚಾರ್ ದೂರಿದ್ದಾರೆ.ಈ ಘಟನೆಗೆ ಕೆರಗೂಡು ಗ್ರಾಪಂ ಕಾರ್ಯದರ್ಶಿ ಪ್ರಭು ಅವರ ಪ್ರಚೋದನೆ ಕಾರಣ ಎಂದು ಅವರು ಆರೋಪಿಸಿದ್ದಾರೆ. ನಾನು ಅಧ್ಯಕ್ಷನಾಗಿದ್ದಾಗ ಈ ಕಾರ್ಯದರ್ಶಿ ನನ್ನಿಂದ ಹಲವು ಅಕ್ರಮಗಳನ್ನು ಮಾಡಿಸಲು ಯತ್ನಿಸಿದ್ದರು.
ನಾನು ಅದಕ್ಕೆ ಅವಕಾಶ ನೀಡಿರಲಿಲ್ಲ. ಆಗ ಕೆಲಸ ಮಾಡಿದ್ದ ಕೆಲವರಿಗೆ ಬಿಲ್ ಬರೆದು, ಎಂಬಿ ಬುಕ್ನಲ್ಲಿ ದಾಖಲಾಗಿ ಚೆಕ್ ನೀಡಿ 2 ವರ್ಷ ಕಳೆದಿದ್ದರೂ ಅವರಿಗೆ ಹಣ ನೀಡದೆ ತೊಂದರೆ ಕೊಡುತ್ತಿದ್ದಾರೆ. ಇದನ್ನು ಪ್ರಶ್ನಿಸಿದ್ದಕ್ಕೆ ಈ ರೀತಿ ಬೇರೆಯವರಿಗೆ ಪ್ರಚೋದನೆ ನೀಡಿ ಹಲ್ಲೆ ಮಾಡಿಸಿದ್ದಾರೆ ಎಂದು ದೂರಿದ್ದಾರೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.