ಗುರುವಾರ , ಮೇ 19, 2022
21 °C

ಗುರುನಿವಾಸ ಉದ್ಘಾಟನೆ: ರಂಭಾಪುರಿ ಶ್ರೀ ಆಶಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ಶಾಸಕ ಶಾಮನೂರು ಶಿವಶಂಕರಪ್ಪ ಅವರು ವೀರಶೈವ ಸಮಾಜದ ಕಣ್ಮಣಿ. ಅವರಿಗೆ ರಾಜಕೀಯ ಬದುಕಿನಲ್ಲಿ ರಾಜ್ಯ ಹಾಗೂ ರಾಷ್ಟ್ರಮಟ್ಟದ ಸ್ಥಾನಮಾನ ಸಿಗಬೇಕಿತ್ತು ಎಂದು ರಂಭಾಪುರಿ ಪೀಠದ ವೀರಸೋಮೇಶ್ವರ ಸ್ವಾಮೀಜಿ ಅಭಿಪ್ರಾಯಪಟ್ಟರು.ನಗರದ ಅಭಿನವ ರೇಣುಕ ಮಂದಿರದ ಆವರಣದಲ್ಲಿ ಭಾನುವಾರ ಗುರುನಿವಾಸ ಉದ್ಘಾಟನಾ ಸಮಾರಂಭದ ನೇತೃತ್ವ ವಹಿಸಿ ಅವರು ಮಾತನಾಡಿದರು.ರಂಭಾಪುರಿ ಪೀಠಕ್ಕೂ ನಗರಕ್ಕೂ ಅವಿನಾಭಾವ ಸಂಬಂಧವಿದೆ. ವೀರಗಂಗಾಧರ ಜಗದ್ಗುರುಗಳ ಕಾಲದಿಂದಲೂ ಆ ಪರಂಪರೆ ಬೆಳೆದುಬಂದಿದೆ. ಹಿಂದೆ ಆಷಾಢ ಮಾಸದ ಇಷ್ಟಲಿಂಗ ಪೂಜೆಗಾಗಿ ಸ್ವಾಮೀಜಿಯವರು ಭಕ್ತರ ಮನೆಯಲ್ಲಿ ಉಳಿದುಕೊಳ್ಳಬೇಕಿತ್ತು. ಆದರೆ, ದಿವಂಗತ ಅಥಣಿ ಕೊಟ್ರೇಶ್ ಅವರು ಗುರುನಿವಾಸ ಕಟ್ಟಿಕೊಡಲು ಮುಂದಾದರು. ಶೀಘ್ರವೇ  ಕಟ್ಟಡ ಕಾಮಗಾರಿ ಮುಗಿದು ಉದ್ಘಾಟನೆಗೊಂಡಿರುವುದು ಸಂತಸ ತಂದಿದೆ ಎಂದರು.ಶಾಮನೂರು ಶಿವಶಂಕರಪ್ಪ ಅವರು ಮಠದ ಪ್ರಮುಖ ಭಕ್ತರಲ್ಲಿ ಒಬ್ಬರು. ಅವರು ಶೀಘ್ರವೇ ವೀರಶೈವ ಮಹಾಸಭಾದ ಅಧ್ಯಕ್ಷರಾಗಲಿದ್ದಾರೆ. ಅದೇ ವೇಳೆಗೆ ಅವರು ರಾಜಕೀಯವಾಗಿಯೂ ಸೂಕ್ತ ಸ್ಥಾನಮಾನ ಪಡೆಯಬೇಕು. ಸಮಾಜದ ಮುಖಂಡರು ಅವರ ಪರ ಹೊಂದಿರುವ ನಿರ್ಧಾರದಿಂದ ಹಿಂದೆ ಸರಿಯಬಾರದು ಎಂದು ಹೇಳಿದರು.ಗುರುನಿವಾಸ ಉದ್ಘಾಟಿಸಿದ ಶಾಸಕ ಶಾಮನೂರು ಶಿವಶಂಕರಪ್ಪ ಅವರು, ನಗರದಲ್ಲಿ ಗುರುನಿವಾಸ ನಿರ್ಮಾಣಗೊಂಡಿರುವುದು ಒಳ್ಳೆಯ ವಿಚಾರ. ಭಕ್ತರು ಗುರುಪರಂಪರೆಗೆ ತಕ್ಕ ಗೌರವದಿಂದ ನಡೆದುಕೊಳ್ಳಬೇಕು ಎಂದು ಶುಭ ಹಾರೈಸಿದರು.ಯಡಿಯೂರು ಮಠದ ರೇಣುಕ ಶಿವಾಚಾರ್ಯ ಸ್ವಾಮೀಜಿ, ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, ಆವರಗೊಳ್ಳ ಪುರವರ್ಗ ಮಠದ ಓಂಕಾರ ಶಿವಾಚಾರ್ಯ ಸ್ವಾಮೀಜಿ, ವಿಶ್ವೇಶ್ವರ ಶಿವಾಚಾರ್ಯ ಸ್ವಾಮೀಜಿ, ಅಥಣಿ ವೀರಣ್ಣ, ಅಥಣಿ ಚನ್ನಬಸಪ್ಪ, ಎ.ಸಿ. ಜಯಣ್ಣ. ಟಿ. ಜಯದೇವಪ್ಪ, ದೇವರಮನೆ ಶಿವಕುಮಾರ್ ಉಪಸ್ಥಿತರಿದ್ದರು. 3ಕ್ಕೆ ಗುರುಪೂರ್ಣಿಮೆ

ನಗರದ ಎಂಸಿಸಿ `ಎ~ ಬ್ಲಾಕ್‌ನ ಸಾಯಿಬಾಬಾ ಮಂದಿರದಲ್ಲಿ ಜುಲೈ 3ರಂದು ಗುರುಪೂರ್ಣಿಮೆ ಕಾರ್ಯಕ್ರಮ ಹಾಗೂ 14ನೇ ವರ್ಷದ ಪ್ರತಿಷ್ಠಾಪನಾ ವಾರ್ಷಿಕೋತ್ಸವ ನಡೆಯಲಿದೆ. ಅಂದು ಬೆಳಿಗ್ಗೆ 6ಕ್ಕೆ ಕಾಕಡಾರತಿ, 9ಕ್ಕೆ ದೀಪಾರಾಧನೆ, ಕಲಶ ಸ್ಥಾಪನೆ, ಗೋಪುರ ಧ್ವಜಾರೋಹಣ ನಡೆಯಲಿದೆ. ಜಡೆಸಿದ್ದ ಶಿವಯೋಗೀಶ್ವರ ಶಾಂತಾಶ್ರಮದ ಗುರು ಶಿವಾನಂದ ಸ್ವಾಮೀಜಿ ಹಾಗೂ ಶಾಸಕ ಶಾಮನೂರು ಶಿವಶಂಕರಪ್ಪ ಕಾರ್ಯಕ್ರಮ ಉದ್ಘಾಟಿಸುವರು. ಸಂಜೆ 5ಕ್ಕೆ ಭಜನೆ, 8.30ಕ್ಕೆ ಪಲ್ಲಕ್ಕಿ ಉತ್ಸವ, ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ಪ್ರತಿದಿನ ಸಂಜೆ 5ಕ್ಕೆ ಕೆ. ವಿಠ್ಠಲದಾಸ್ ಶೆಣೈ ಅವರಿಂದ ಪ್ರವಚನ ನಡೆಯಲಿದೆ ಎಂದು ಸಾಯಿಟ್ರಸ್ಟ್ ಪ್ರಕಟಣೆ ತಿಳಿಸಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.