ಮಂಗಳವಾರ, ಮೇ 11, 2021
25 °C

ಗುರುವಂದನೆ: ಬಿಜೆಪಿ ಲಿಂಗಾಯತ ಮುಖಂಡರ ಮುನಿಸು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ತುಮಕೂರಿನ ಸಿದ್ದಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿ ಅವರ 105ನೇ ಗುರುವಂದನೆ ಕಾರ್ಯಕ್ರಮದಿಂದ ಬಿಜೆಪಿಗೆ ಸೇರಿದ ಲಿಂಗಾಯತ ಮುಖಂಡರು ದೂರ ಉಳಿಯುವ ಸಾಧ್ಯತೆ ಇದೆ.

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ವಸತಿ ಸಚಿವ ವಿ.ಸೋಮಣ್ಣ ಸೇರಿದಂತೆ ಲಿಂಗಾಯತ ಸಮುದಾಯಕ್ಕೆ ಸೇರಿದ ಬಹುತೇಕ ಸಚಿವರು ಮತ್ತು ಶಾಸಕರು ಸಮಾರಂಭಕ್ಕೆ ಹೋಗದಿರಲು ತೀರ್ಮಾನಿಸಿದ್ದಾರೆ.ಯಡಿಯೂರಪ್ಪ ಅವರು ಶಿಕಾರಿಪುರದಲ್ಲಿ ಹಾಗೂ ಅವರ ಆಪ್ತ ಲಿಂಗಾಯತ ಸಚಿವರು ವಿವಿಧ ಜಿಲ್ಲೆಗಳಲ್ಲಿ ಪ್ರವಾಸದಲ್ಲಿದ್ದಾರೆ. ಸಚಿವ ಸೋಮಣ್ಣ ಹಾಸನ ಜಿಲ್ಲೆಯ ಪ್ರವಾಸದಲ್ಲಿದ್ದಾರೆ. `ಕಾರ್ಯಕ್ರಮಕ್ಕೆ ನಮಗೆ ಆಹ್ವಾನ ಬಂದಿಲ್ಲ. ಹೀಗಾಗಿ ಹೋಗುತ್ತಿಲ್ಲ~ ಎಂದು ಅವರು `ಪ್ರಜಾವಾಣಿ~ಗೆ ಪ್ರತಿಕ್ರಿಯೆ ನೀಡಿದರು.`ಶಿವಕುಮಾರ ಸ್ವಾಮಿಗಳ ಗುರುವಂದನೆ ಅಂದರೆ ಅದೊಂದು ಜಾತ್ಯತೀತ ಮತ್ತು ಪಕ್ಷಾತೀತ ಕಾರ್ಯಕ್ರಮ. ಯಾರೇ ಮುಖ್ಯಮಂತ್ರಿಯಾಗಿದ್ದರೂ ಗುರುವಂದನೆ ಕಾರ್ಯಕ್ರಮಕ್ಕೆ ಅವರನ್ನು ಆಹ್ವಾನಿಸುವುದು ರೂಢಿ. ಆದರೆ, ಈ ಸಲ ಮುಖ್ಯಮಂತ್ರಿ ಸೇರಿದಂತೆ ರಾಜ್ಯದ ಎಲ್ಲ ಪ್ರಮುಖರನ್ನೂ ಕಡೆಗಣಿಸಿ ಕಾರ್ಯಕ್ರಮ ಮಾಡಲಾಗುತ್ತಿದೆ. ಇದು ನೋವಿನ ಸಂಗತಿ~ ಎಂದು ಗುರುವಂದನೆ ಕಾರ್ಯಕ್ರಮದ ರೂವಾರಿಗಳಲ್ಲಿ ಒಬ್ಬರಾದ ಸೋಮಣ್ಣ ಅಸಮಾಧಾನ ವ್ಯಕ್ತಪಡಿಸಿದರು.`ಈಗ ನಡೆಯುತ್ತಿರುವ ಗುರುವಂದನೆ ಒಂದು ರೀತಿ ಪಕ್ಷವೊಂದರ ಕಾರ್ಯಕ್ರಮದಂತೆ ಇದೆ ಎಂದು ಸ್ಥಳೀಯರು ದೂರವಾಣಿ ಕರೆ ಮಾಡಿ ಹೇಳುತ್ತಿದ್ದಾರೆ. ಪಕ್ಷಾತೀತವಾದ ಮಠದಲ್ಲಿ ಈ ರೀತಿ ಮಾಡುವುದು ಸರಿಯೇ ಎಂದೂ ಜನ ಕೇಳುತ್ತಿದ್ದಾರೆ~ ಎಂದರು.`ನಾನು ಮಠದ ಪರಮಭಕ್ತ. ಶಿವಕುಮಾರ ಸ್ವಾಮೀಜಿ ನನ್ನ ಪಾಲಿಗೆ ನಡೆದಾಡುವ ದೇವರು. ಅವರ ಬಗ್ಗೆ ಅಪಾರ ಗೌರವ ಇದೆ. ಆದರೆ, ಭದ್ರತೆ, ಅದೂ ಇದೂ ಎಂದು ನೆಪ ಹೇಳಿ ಸಮಾಜದ ಪ್ರಮುಖರನ್ನು ಕಾರ್ಯಕ್ರಮದಿಂದ ಹೊರಗೆ ಇಡಲಾಗಿದೆ.  ಎಚ್. ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ರಾಷ್ಟ್ರಪತಿಗಳು  ಗುರುವಂದನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಆಗಲೂ ವೇದಿಕೆಯಲ್ಲಿ 12 ಮಂದಿ ಗಣ್ಯರಿಗೆ ಕೂರಲು ವ್ಯವಸ್ಥೆ ಮಾಡಿಸಿದ್ದೆ. ಈಗಲೂ ಅದೇ ರೀತಿ ಮಾಡಬಹುದಿತ್ತು. ಒಂದು ಪಕ್ಷದ ಅಧ್ಯಕ್ಷರನ್ನು ಮಾತ್ರ ಕೂರಿಸಿಕೊಂಡು ಗುರುವಂದನೆ ಮಾಡುವುದು ಸರಿಯೇ ಎಂದು ಜನ ಕೇಳುತ್ತಿದ್ದಾರೆ~ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.