ಬುಧವಾರ, ಜೂನ್ 23, 2021
30 °C

ಗುರುವೇ, ಗುಗ್ಗುರುವೇ...

–ಡಿ.ಎಂ.ಕುರ್ಕೆ ಪ್ರಶಾಂತ Updated:

ಅಕ್ಷರ ಗಾತ್ರ : | |

ಮಠದೊಳಗಣ ಬೆಕ್ಕು ಇಲಿಯ ಕಂಡು ಪುಟನೆಗೆದಂತಾಯಿತ್ತು ಕಾಣಾ ರಾಮನಾಥ...

ಜೇಡರ ದಾಸಿಮಯ್ಯ ಈ ವಚನವನ್ನು ಯಾವ ಕಾರಣದಿಂದ, ಯಾರನ್ನು ಉದ್ದೇಶಿಸಿ ಹೇಳಿದ್ದರೋ ತಿಳಿಯದು. ಡಾಂಭಿಕ ಭಕ್ತನೊಬ್ಬನ ಕುರಿತ ವಿಡಂಬನೆಯಾಗಿ ವ್ಯಾಖ್ಯಾನಗೊಂಡಿರುವ ಈ ವಚನ ಈ ಕಾಲಕ್ಕೂ ಹೊಂದುವಂಥದ್ದು. ವಿಪರ್ಯಾಸ ನೋಡಿ; ವರ್ತಮಾನದ ಹಿನ್ನೆಲೆಯಲ್ಲಿ ಈ ವಚನದ ಅರ್ಥ ಸಾಧ್ಯತೆಗಳು ಹೆಚ್ಚಾದಂತಿವೆ. ಮಠದ ಮತ್ತು ಬೆಕ್ಕಿನ ಓನರ್‌ನ (ಸ್ವಾಮಿಗಳು) ನಿಗ್ರಹ-– ಪರಿಗ್ರಹದ ನಿದರ್ಶನಗಳನ್ನು ನೆನಪಿಸಿಕೊಂಡರೆ ಈ ವಚನದ ವಿಸ್ತಾರ ಹೊಳೆಯುತ್ತದೆ.ಮನಸ್ಸನ್ನು ಖಿನ್ನಗೊಳಿಸುವ ಪರಿಸ್ಥಿತಿ ನಮ್ಮ ಬಹುತೇಕ ಮಠಗಳಲ್ಲಿದೆ. ಆದರೆ ಭಯಕ್ಕೋ, ಅನಿವಾರ್ಯಕ್ಕೋ, ಅನುಕೂಲಕ್ಕೋ ನಾವು (ಭಕ್ತರು+ಯುವಕರು) ಇದನ್ನೆಲ್ಲ ಸಹಿಸಿಕೊಳ್ಳಬೇಕು. ಮಠಾಧಿಪತಿಗಳು ಯಾವುದನ್ನು ನಿಗ್ರಹಿಸಿದ್ದಾರೆ, ಏನನ್ನು ಗ್ರಹಿಸುತ್ತಿದ್ದಾರೆ ಎನ್ನುವುದೇ ಸೋಜಿಗವಾಗುತ್ತದೆ. ಕಾಲ ‘ಧರ್ಮ’ ಎಷ್ಟೇ ಬದಲಾದರೂ ಇವರನ್ನು ನಿರ್ಭಿಡೆಯಿಂದ ವಿಮರ್ಶಿಸುವುದಂತೂ ದೂರದ ಮಾತು.ಒಂದು ವೇಳೆ ವಿಮರ್ಶಿಸಿದರೂ ನಾವು ಇವರ ಆಶೀರ್ವಚನವನ್ನು ತಲೆಬಗ್ಗಿಸಿ ಒಪ್ಪಿಕೊಂಡಂತೆ, ಕನಿಷ್ಠ ಇವರಿಗೆ ಕೇಳಿಸಿಕೊಳ್ಳುವ ವ್ಯವಧಾನ ಇಲ್ಲ. ಕೊನೆಯ ಪಕ್ಷ ನಮ್ಮ ಮನೆಗಳಲ್ಲಾದರೂ ಗುರುವಿನ ವಿಮರ್ಶೆ–ಪರಾಮರ್ಶೆ ನಡೆಯುತ್ತದೆಯೇ? ಖಂಡಿತಾ ಇಲ್ಲ. ‘ಈ ಹುಡುಗ ನಮ್ಮ ಕುಲಕ್ಕೇ ಕಳಂಕ. ಅದೇನಂಥ ಹುಟ್ಟಿಬಿಟ್ಟನೋ... ಹುಡುಗು ಮುಂಡೇವುಕ್ಕೆ ಧರ್ಮ–ಗುರುಗಳ ಬಗ್ಗೆ ಭಯವೇ ಇಲ್ಲ’ ಎಂದು ಯುವಕುಲವನ್ನೇ ಜಾಲಾಡಲಾಗುತ್ತದೆ.ಗುರು ಎಂದರೆ ‘ಭಾರ’ ಎನ್ನುವ ಮಾತೂ ಇದೆಯಂತೆ. ಇಂದಿನ ಕೆಲ ಸ್ವಾಮಿಗಳೂ (ಮುಕ್ಕಾಲುಪಾಲು ಸ್ವಾಮಿಗಳ ದೇಹಾಕಾರ ಗಮನಿಸಿ) ಸಮಾಜಕ್ಕೆ (ಭಕ್ತರಿಗೆ) ಮತ್ತು ಸರ್ಕಾರಗಳಿಗೆ ‘ಭಾರ’ವಾಗಿಯೇ ಕಾಣುತ್ತಿದ್ದಾರೆ. ಅಲ್ಲೊಂದಿಷ್ಟು ಇಲ್ಲೊಂದಿಷ್ಟು ನಾಲ್ಕಾರು ಮಂದಿ ‘ಭಾರ’ವಿಲ್ಲದ ಗುರುಗಳೂ ಇದ್ದಾರೆ ಅನ್ನಿ. ನಿಗ್ರಹ–ಪರಿಗ್ರಹ ಎನ್ನುವುದಕ್ಕಿಂತ ಕಾಯಕ ತತ್ವದೊಳಗೆ ಇವರು ಒಂದಾಗಿದ್ದಾರೆ. ಆದರೆ ಅವರದ್ದು ನಾಲ್ಕು ಅಂಕಣದ ಮಠ.ಪ್ರಭುತ್ವಕ್ಕೆ ಮುಟ್ಟದ ಮತ್ತು ತಟ್ಟದ ಆಶೀರ್ವಚನ. ಯಥಾಸ್ಥಿತಿವಾದ ಎನ್ನುವುದರ ಅರ್ಥವೇ ಹಾಗೆಯೇ ಉಳಿಯುವುದು, ಉಳಿಸಿಕೊಳ್ಳುವುದು. ಈ ಆದಿ–ಅನಾದಿ ಶ್ರೀಗಳು ಎಲ್ಲವನ್ನೂ ಹಳೆಯ ಎರಕದಲ್ಲಿಟ್ಟು ನೋಡುತ್ತಲೇ, ತಾವು ಮಾತ್ರ ಸನಾತನ–ಸಂಪ್ರದಾಯದ ರೀತಿ ರಿವಾಜುಗಳನ್ನು ಒಂದೊಂದಾಗಿ ಕಳಚಿಕೊಳ್ಳುತ್ತಾರೆ. ಯೋಗ, ವೈರಾಗ್ಯಗಳು ದೂರವಾಗಿ ಭೋಗಭಾಗ್ಯಗಳು ಸನಿಹವಾಗುತ್ತವೆ. ವೈರಾಗ್ಯ–ವೈಭೋಗಕ್ಕೂ ತಮ್ಮದೇ ಆದ ಸಮರ್ಥನೆಗಳೂ ಮಠಪತಿಗಳಲ್ಲಿದೆ. ಇದು ವರ್ತಮಾನ.‘ಪ್ರಾಪಂಚಿಕ ಭೋಗ–ಲಾಲಸೆಗಳಿಗೆ ತುತ್ತಾಗಿ ನಮ್ಮತನ ಮರೆಯುತ್ತಿದ್ದೇವೆ. ಆಧುನಿಕತೆ ಮೌಲ್ಯಗಳನ್ನು ಕಳೆಯುತ್ತಿದೆ. ಯುವಕರಲ್ಲಿ ಧಾರ್ಮಿಕ ಮೌಲ್ಯಗಳು ಕಾಣೆಯಾಗುತ್ತಿವೆ...’ ಮತ್ತಿತರ ಮಾತುಗಳ ಮೂಲಕ ಭೂತ–ವರ್ತಮಾನದ ತ್ರಿಶಂಕುವಿನಲ್ಲಿ ನಮ್ಮನ್ನು ನಿಲ್ಲಿಸಲಾಗುತ್ತದೆ.ಅಡಿಯಿಂದ ಮುಡಿವರೆಗೆ ಗುರುವನ್ನು ಪರೀಕ್ಷಿಸಿದರೆ ಅವರ ದೇಹವನ್ನು ಹೊದ್ದ ಬೆಳ್ಳಿ ಬಂಗಾರದ ಉಂಗುರ–ಕಿರೀಟ, ಆಗಮಿಸಿದ ಕಾರು (ಕೆಲವು ಸ್ವಾಮಿಗಳು ಕಾರಿನ ಆಯ್ಕೆಯಲ್ಲೂ ಚೂಸಿಗಳು)... ಎಲ್ಲವೂ ‘ಗುರುದರ್ಶನ’ಕ್ಕೆ ನಿಂತ ನಮಗೆ ಸೋಜಿಗವಾಗಿ ಕಾಣುವುದೇ ಇಲ್ಲ. ನಾವು ಭಕ್ತರಷ್ಟೇ! ಕ್ಯಾಪಿಟೇಶನ್‌ಗೆ ಇಲ್ಲಿಯ ಅರ್ಥವೇ ಬೇರೆ. ‌ಇತ್ತೀಚಿನ ಮಠ‘ಪತಿ’ಗಳಂತೂ ಒಂದು ಹೆಜ್ಜೆ ಇನ್ನೂ ಮುಂದುವರೆದಿದ್ದಾರೆ. ಯಾವುದೇ ಕಾರಣಕ್ಕೂ ಮಠದ ಮೇಲಿನ ತಮ್ಮ ಪತಿತ್ವವನ್ನು ಕಳೆದುಕೊಳ್ಳದ ಗಟ್ಟಿ ನಿರ್ಧಾರ ಮಾಡಿದ್ದಾರೆ. ತಮ್ಮ ನಂತರ ಉತ್ತರಾಧಿಕಾರಿಯನ್ನಾಗಿ (ಗ್ರಾಮೀಣ ಪ್ರದೇಶಗಳ ಸಣ್ಣ ಮಠಗಳಲ್ಲಿ ಈ ಬೆಳವಣಿಗೆ ಹೆಚ್ಚು. ‘ಪುತ್ರವರ್ಗ’ ಎನ್ನುವ ಪರಂಪರೆಯ ಮಠಗಳೂ ಇವೆ) ಅಣ್ಣನ, ತಮ್ಮನ ಮಕ್ಕಳಿಗೆ ಪಟ್ಟಾಭಿಷೇಕ ಮಾಡಿಸಿ ಪಾರುಪತ್ಯವನ್ನು ‘ಪುತ್ರ’ವರ್ಗಕ್ಕೆ ವರ್ಗಾಯಿಸುತ್ತಾರೆ. ಪರಿಸ್ಥಿತಿ ಹೀಗಿರುವಾಗ ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂದು ಹೇಗೆ ಹಾಡಿಕೊಳ್ಳುವುದು ಮತ್ತು ಒಪ್ಪಿಕೊಳ್ಳುವುದು...

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.