ಭಾನುವಾರ, ಏಪ್ರಿಲ್ 11, 2021
33 °C

ಗುರು-ಶಿಷ್ಯ

ಅಮ್ಮಿ Updated:

ಅಕ್ಷರ ಗಾತ್ರ : | |

`ಟೌತ್ವ~ ಪ್ರಾಪ್ತಿಯ ನಂತರವೂ ಆಗೀಗ ತನ್ನ ಗುರುಗಳಾದ ಆಲ್-ಹಾಲ್‌ರ ಆಶ್ರಮಕ್ಕೆ ಬರುತ್ತಿದ್ದ ಟಾ-ರಸ ಮಹರ್ಷಿಗಳು ಬಂದಾಗಲೆಲ್ಲಾ ಅಲ್ಲಿರುವ ವಿದ್ಯಾರ್ಥಿಗಳನ್ನು ಒಂದಲ್ಲಾ ಒಂದು ಚಟುವಟಿಕೆಯಲ್ಲಿ ತೊಡಗಿಸುತ್ತಿದ್ದರು.ಈ ಚಟುವಟಿಕೆಗಳೆಲ್ಲವೂ ಬಹಳ ಸಾಮಾನ್ಯವಾದುವೇ ಆಗಿದ್ದರೂ ಅದಕ್ಕಿರುವ ಆಧ್ಯಾತ್ಮಿಕ ಆಯಾಮ ವನ್ನು ಟಾ-ರಸರು ವಿವರಿಸುತ್ತಿದ್ದರು. ಇದರಿಂದಾಗಿ ಅವರು ಏನೇ ಹೇಳಿದರೂ ಅದರಲ್ಲೇನೋ ಕಲಿಯುವುದಿದೆ ಎಂಬ ಆಸೆಯಿಂದ ಎಲ್ಲರೂ ಅದರಲ್ಲಿ ತೊಡಗಿಸಿಕೊಳ್ಳುತ್ತಿದ್ದರು.ಒಮ್ಮೆ ಕಲ್ಯಾಣಪ್ಪನೂ ಸೇರಿದಂತೆ ಕೆಲವರನ್ನು ಮಧ್ಯಾಹ್ನದ ಅಡುಗೆಗೆ ಅನುಕೂಲ ವಾಗುವಂತೆ ತರಕಾರಿ ಹೆಚ್ಚಲು ಹೇಳಿದರು. ಈ ಕೆಲಸದಲ್ಲಿ ತೊಡಗಿಸಿಕೊಂಡಿದ್ದವರ ಬಳಿ ಟಾ-ರಸ ಮಹರ್ಷಿಗಳು ಒಂದು ಪ್ರಶ್ನೆ ಕೇಳಿದರು. `ನೀವೇಕೆ ತರಕಾರಿ ಹೆಚ್ಚುತ್ತಿದ್ದೀರಿ ಎಂಬುದನ್ನು ನೀವು ಈ ತನಕ ಕಲಿತ ವಿದ್ಯೆಯ ಬೆಳಕಿನಲ್ಲಿ ವಿವರಿಸಿ~.ಮೊದಲನೆಯವ ಉತ್ತರಿಸಿದ- `ತರಕಾರಿಯನ್ನು ಕತ್ತರಿಸುವ ಮೂಲಕ ಅದರ ಬಳಕೆಯನ್ನು ವಿಶ್ಲೇಷಿಸುವ ಪ್ರಯತ್ನದಲ್ಲಿದ್ದೇನೆ~.ಟಾ-ರಸರಿಗೆ ಸಂತೋಷವಾಯಿತು. `ನಿನಗೆ ಪ್ರಪಂಚದ ಎಲ್ಲ ವಿದ್ಯಮಾನಗಳೂ ಬಿಡಿಬಿಡಿಯಾಗಿ ಸ್ಪಷ್ಟವಾಗಿ ಗೋಚರಿಸುತ್ತವೆ~ ಎಂದು ಮುಂದಿನವನ ಉತ್ತರಕ್ಕಾಗಿ ಕಾದರು.ಎರಡನೆಯ ಹೇಳಿದ- `ಸಾರು, ಪಲ್ಯ, ಗೊಜ್ಜು ಮುಂತಾದುವುಗಳ ನಡುವಣ ವ್ಯತ್ಯಾಸಗಳೆಲ್ಲವೂ ನಾವು ತುಂಡರಿಸುವ ತರಕಾರಿಯ ತುಂಡಿನ ಗಾತ್ರವನ್ನು ಅವಲಂಬಿಸಿರುತ್ತದೆ~.ಟಾ-ರಸರು ಅರೆಕ್ಷಣ ಚಿಂತಿಸಿ `ನಿನ್ನ ತರ್ಕಕ್ಕೆ ನಿಲುಕದ ಯಾವುದೂ ಸೃಷ್ಟಿಯಲ್ಲಿ ಇರಲಾರದು~ ಎಂದು ಮುಂದಿನವನ ಉತ್ತರ ನಿರೀಕ್ಷಿಸಿದರು.ಮೂರನೆಯವ ಹೇಳಿದ `ಪೂರ್ಣರೂಪದಲ್ಲಿದ್ದಾಗ ಕಾಣುವ ಹೊರಗಣ ಸೌಂದರ್ಯ ದೃಷ್ಟಿಗ್ರಾಹ್ಯವಾಗಿರುತ್ತದೆ. ಆದರೆ ತುಂಡರಿಸಿ ಸಾರು ಮಾಡಿದ ಮೇಲೆ ತರಕಾರಿ ಸೌಂದರ್ಯ ಜಿಹ್ವಾಗ್ರಾಹ್ಯವಾಗಿರುತ್ತದೆ~ಟಾ-ರಸರಿಗೆ ಬಹಳ ಸಂತೋಷವಾಗಿ `ನಿನಗೆ ಅರಿಯದ ಗ್ರಹಿಕೆಯ ಸೂಕ್ಷ್ಮಗಳಿಲ್ಲ~ ಎಂದು ಮುಂದಿನ ಉತ್ತರಕ್ಕಾಗಿ ಕಲ್ಯಾಣಪ್ಪನತ್ತ ನೋಡಿದರು.ತರಕಾರಿ ಕತ್ತರಿಸುವುದರಲ್ಲಿ ಮಗ್ನನಾಗಿದ್ದ ಅವನು ಕೆಲಸ ನಿಲ್ಲಿಸದೆಯೇ ಉತ್ತರಿಸಿದ `ನಾನು ತರಕಾರಿ ಹೆಚ್ಚುವುದಕ್ಕಾಗಿ ತರಕಾರಿ ಹೆಚ್ಚುತ್ತಿದ್ದೇನೆ!~ಟಾ-ರಸ ಮಹರ್ಷಿಗಳು ತಕ್ಷಣವೇ ಕಲ್ಯಾಣಪ್ಪನ ಕಾಲಬುಡದಲ್ಲಿ ಕುಳಿತು `ನನ್ನನ್ನು ಶಿಷ್ಯನನ್ನಾಗಿ ಸ್ವೀಕರಿಸುವೆಯಾ?~ ಎಂದು ಕೇಳಿದರು.ಅರಿವಿನ ಆಳ

ಬಹಳಷ್ಟು ಅಧ್ಯಾತ್ಮದ ಪುಸ್ತಕಗಳನ್ನು ಓದಿಕೊಂಡು ತನ್ನನ್ನು ತಾನು ಅರಿಯಲು ಹೊರಟವನೊಬ್ಬ ಕಲ್ಯಾಣಪ್ಪನಿಗೆ ಗಾಂಧಿ ಬಜಾರ್‌ನ ಪುಸ್ತಕದ ಅಂಗಡಿಯಲ್ಲಿ ಭೇಟಿಯಾದ. ಸುಮ್ಮನೆ ಪುಸ್ತಕಗಳನ್ನು ನೋಡುತ್ತಾ ಅವುಗಳನ್ನು ಓದದೆಯೇ ತಾನೆಷ್ಟು ಸಂತೋಷವಾಗಿದ್ದೇನೆಂದು ಹೆಮ್ಮೆ ಪಡುತ್ತಿದ್ದ ಕಲ್ಯಾಣಪ್ಪನನ್ನು ಆ `ಅರಿವಿನ ಹುಡುಕಾಟದ~ ಆಸಾಮಿ ಮಾತಿಗೆಳೆದ.`ನಾನು ಎಲ್ಲಾ ಆಚಾರ್ಯರ ಕೃತಿಗಳನ್ನು ಓದಿದೆ. ಎಲ್ಲಾ ತತ್ವಜ್ಞರ ಕೃತಿಗಳೂ ಈಗ ಮುಗಿಯುತ್ತಾ ಬಂದವು. ವ್ಯಕ್ತಿತ್ವ ವಿಕಸನದ ಪುಸ್ತಕಗಳನ್ನೂ ಓದಿ ಮುಗಿಸಿದೆ. ಅವುಗಳೆಲ್ಲಾ ಒಂದೇ ರೀತಿ ಇವೆ. ಇಷ್ಟಾಗಿಯೂ ನಾನು ಮಾತ್ರ ಮೊದಲಿನ ಹಾಗೆಯೇ ಇದ್ದೇನೆ.~ಕಲ್ಯಾಣಪ್ಪನಿಗೆ ಆತನ ಸಮಸ್ಯೆ ಅರ್ಥವಾಗದೆ `ನಾನು ನಿಮ್ಮಷ್ಟು ಓದಿದವನಲ್ಲ. ಮೊದಲಿನ ಹಾಗೆಯೇ ಇದ್ದೀನಿ ಎಂದರಲ್ಲ. ಮೊದಲು ಹೇಗೆ ಇದ್ದಿರಿ~ ಎಂದು ಕೇಳಿದ.

ಇದಕ್ಕೆ ಉತ್ತರಿಸಿದ ಓದಾಳಿ ವ್ಯಕ್ತಿ `ಈಗ ಇರುವಂತೆಯೇ ದಡ್ಡನೂ ಮೂರ್ಖನೂ ಜಗತ್ತನ್ನು ಅಷ್ಟೇನೂ ಅರಿಯದವನೂ ಆಗಿದ್ದೆ~.ಕಲ್ಯಾಣಪ್ಪ ಮರು ಪ್ರಶ್ನೆ ಎಸೆದ `ಮೊದಲು ಹಾಗಿದ್ದಿರಿ ಎಂದು ನಿಮಗೆ ಆಗಲೇ ಅನ್ನಿಸಿತ್ತೇ ಅಥವಾ ಇಷ್ಟೆಲ್ಲಾ ಓದಿ ತಿಳಿದುಕೊಂಡ ಮೇಲೆ ಅರಿವಾಯಿತೇ?~ ಆ ಓದಾಳಿಗೆ ಅರಿವು ಎಂದರೇನೆಂದು ಅರ್ಥವಾಯಿತು. -

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.