ಶನಿವಾರ, ಮೇ 15, 2021
25 °C

ಗೆಜೆಟಿಯರ್ ಪ್ರಕಟಣೆಗೆ ಆರ್ಥಿಕ ನೆರವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮೈಸೂರು ಜಿಲ್ಲೆಯ ಏಳು ತಾಲ್ಲೂಕುಗಳ ಗೆಜೆಟಿಯರ್ ಸೇರಿದಂತೆ 13 ನೂತನ ಸಂಪುಟಗಳ ಗೆಜೆಟಿಯರ್‌ಗಳನ್ನು ಕರ್ನಾಟಕ ಗೆಜೆಟಿಯರ್ ಇಲಾಖೆಯು ಪ್ರಕಟಿಸಿದ್ದು, ಮಂಗಳವಾರ ಇವುಗಳನ್ನು ಲೋಕಾರ್ಪಣೆ ಮಾಡಲಾಯಿತು.ಇಲಾಖೆಯು ಇದೇ ಮೊದಲ ಬಾರಿಗೆ ತಾಲ್ಲೂಕು ಗೆಜೆಟಿಯರ್‌ಗಳನ್ನು ಪ್ರಕಟಿಸಿದೆ. ಪ್ರಯೋಗಾರ್ಥವಾಗಿ ಮೈಸೂರು ಜಿಲ್ಲೆಯ ತಿ. ನರಸೀಪುರ, ಮೈಸೂರು, ಪಿರಿಯಾಪಟ್ಟಣ, ಕೃಷ್ಣರಾಜನಗರ, ಹೆಗ್ಗಡದೇವನಕೋಟೆ, ಹುಣಸೂರು ಹಾಗೂ ನಂಜನಗೂಡು ತಾಲ್ಲೂಕುಗಳ ಗೆಜೆಟಿಯರ್‌ಗಳನ್ನು ಹೊರತಂದಿದೆ.ಹಾಗೆಯೇ ಉಡುಪಿ ಜಿಲ್ಲಾ ಗೆಜೆಟಿಯರ್‌ನ ಕನ್ನಡ ಆವೃತ್ತಿ (ರೂ. 422), 1807ರಲ್ಲಿ ಪ್ರಕಟವಾಗಿದ್ದ ಸರ್ ಫ್ರಾನ್ಸಿಸ್ ಬುಚನನ್ ಅವರ `ಎ ಜರ್ನಿ ಫ್ರಮ್ ಮದ್ರಾಸ್ ಥ್ರೂ ದಿ ಕಂಟ್ರೀಸ್ ಆಫ್ ಮೈಸೂರ್, ಕೆನರಾ ಅಂಡ್ ಮಲಬಾರ್~ ಕೃತಿಯ ಮೂರು ಸಂಪುಟಗಳ ಮರುಮುದ್ರಣ (ರೂ 1,230/ಪ್ರತಿ ಸಂಪುಟದ ಬೆಲೆ- ರೂ 450) ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಗೆಜೆಟಿಯರ್‌ನ ಇಂಗ್ಲಿಷ್ ಆವೃತ್ತಿಯನ್ನು (ರೂ 880) ಪ್ರಕಟಿಸಿದೆ. ಜತೆಗೆ ಕರ್ನಾಟಕ ಕೈಪಿಡಿ- 2011 (ರೂ 450) ಪರಿಷ್ಕೃತ ಆವೃತ್ತಿಯನ್ನು ಹೊರತಂದಿದೆ.ಇಲಾಖೆಯು ನಗರದ ನಯನ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ 13 ಗೆಜೆಟಿಯರ್ ಸಂಪುಟಗಳನ್ನು ಲೋಕಾರ್ಪಣೆ ಮಾಡಿದ ಸಚಿವ ಗೋವಿಂದ ಕಾರಜೋಳ, `ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾಗುವ ಅಭ್ಯರ್ಥಿಗಳು ಹಾಗೂ ಸಾರ್ವಜನಿಕರಿಗೆ ಉಪಯುಕ್ತವೆನಿಸಿರುವ ಗೆಜೆಟಿಯರ್‌ಗಳ ಪ್ರಕಟಣೆಗೆ ಪ್ರೋತ್ಸಾಹ ನೀಡುವ ಜತೆಗೆ ಅಗತ್ಯ ಆರ್ಥಿಕ ನೆರವು ನೀಡಲು ಸರ್ಕಾರ ಬದ್ಧವಾಗಿದೆ~ ಎಂದರು.`ದೇಶ ಮತ್ತು ರಾಜ್ಯದಲ್ಲಿ ಗೆಜೆಟಿಯರ್‌ಗೆ ಶ್ರೀಮಂತ ಪರಂಪರೆ ಇದೆ. 1996ರಲ್ಲಿ ಇಲಾಖೆ ಹೊರತಂದ `ಕರ್ನಾಟಕ ಕೈಪಿಡಿ~ ವಿಶೇಷ ಪ್ರಕಟಣೆಯು ಕರ್ನಾಟಕ ಲೋಕಸೇವಾ ಆಯೋಗ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತ ಗ್ರಂಥವೆಂದು ಪರಿಗಣಿಸಲ್ಪಿಟ್ಟಿದೆ. ಈ ಕೈಪಿಡಿಯ ಪರಿಷ್ಕೃತ ಆವೃತ್ತಿಯನ್ನು ಇಲಾಖೆ ಇದೀಗ ಪ್ರಕಟಿಸಿದೆ. ಇದು ಗೆಜೆಟಿಯರ್‌ನ ಮಹತ್ವವನ್ನು ತೋರುತ್ತದೆ. ಹಾಗಾಗಿ ಇನ್ನಷ್ಟು ಗೆಜೆಟಿಯರ್‌ಗಳು ಪ್ರಕಟಣೆಯಾಗಬೇಕಿದ್ದು, ಇದಕ್ಕೆ ಅಗತ್ಯ ಸಹಕಾರವನ್ನು ಸರ್ಕಾರ ನೀಡಲಿದೆ~ ಎಂದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿ ಬಸವರಾಜು, `ರಾಜ್ಯದ ಬೆಳವಣಿಗೆ, ಇತ್ತೀಚಿನ ಬದಲಾವಣೆ ಇತರೆ ಅಂಶಗಳ ಬಗ್ಗೆ ಸಮಗ್ರ ಮಾಹಿತಿಯನ್ನು ಗೆಜೆಟಿಯರ್ ಮೂಲಕ ನೀಡಲಾಗುತ್ತಿದೆ. ಹಾಗಾಗಿ ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ಇದು ಉಪಯುಕ್ತವೆನಿಸಿದೆ. ಅಲ್ಲದೇ ಜಿಲ್ಲೆಗಳ ಸಮಗ್ರ ದರ್ಶನ ಪಡೆಯಲು ಇದು ಸಹಕಾರಿಯಾಗಿದೆ~ ಎಂದು ಹೇಳಿದರು.`ಜಿಲ್ಲಾ ಗೆಜೆಟಿಯರ್ ಪ್ರಕಟಣೆಗಳ ಜತೆಗೆ ಇದೇ ಮೊದಲ ಬಾರಿಗೆ ತಾಲ್ಲೂಕು ಗೆಜೆಟಿಯರ್‌ಗಳನ್ನು ಹೊರತರಲಾಗಿದೆ. ಮೈಸೂರು ಜಿಲ್ಲೆಯ ಏಳು ತಾಲ್ಲೂಕುಗಳ ಗೆಜೆಟಿಯರ್‌ಗಳನ್ನು ಪ್ರಕಟಿಸಲಾಗಿದೆ. ಸಾರ್ವಜನಿಕರ ಅಭಿಪ್ರಾಯ ಪಡೆದು ಇತರೆ ತಾಲ್ಲೂಕುಗಳ ಗೆಜೆಟಿಯರ್ ಪ್ರಕಟಿಸುವತ್ತ ಚಿಂತಿಸಲಾಗುವುದು. ಹಾಗೆಯೇ ಹೆಚ್ಚಿನ ಪ್ರಮಾಣದಲ್ಲಿ ಗೆಜೆಟಿಯರ್ ಪ್ರಕಟಣೆಗೆ ಪ್ರಯತ್ನಿಸಲಾಗುವುದು~ ಎಂದರು.ಕರ್ನಾಟಕ ಗೆಜೆಟಿಯರ್ ಇಲಾಖೆಯ ಮುಖ್ಯ ಸಂಪಾದಕ ಎಸ್. ಅನೀಸ್ ಸಿರಾಜ್, ಇತಿಹಾಸ ಸಂಶೋಧಕ ಸೂರ್ಯನಾಥ ಕಾಮತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯುಕ್ತ ಮನು ಬಳಿಗಾರ್ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.