ಬುಧವಾರ, ಮೇ 18, 2022
23 °C

ಗೆಲುವಿನ ಸವಿಯುಂಡ ತಮಿಳುನಾಡು

ಗಿರೀಶ ದೊಡ್ಡಮನಿ Updated:

ಅಕ್ಷರ ಗಾತ್ರ : | |

ವಿಜಾಪುರ: ದ್ರಾಕ್ಷಿಹಣ್ಣಿನ ಸುಗ್ಗಿಯಲ್ಲಿರುವ ವಿಜಾಪುರದಲ್ಲಿ ಶುಕ್ರವಾರ ತಮಿಳುನಾಡಿನ ಬಾಲಕರು 37ನೇ ರಾಷ್ಟ್ರೀಯ ಜೂನಿಯರ್ ವಾಲಿಬಾಲ್ ಚಾಂಪಿಯನ್‌ಷಿಪ್‌ನ ಲೀಗ್ ಹಂತದ ಎರಡೂ ಪಂದ್ಯಗಳಲ್ಲಿ ಗೆಲುವಿನ ಸಿಹಿ ಉಂಡರು. ಡಾ. ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಕರ್ನಾಟಕ ರಾಜ್ಯ ವಾಲಿಬಾಲ್ ಸಂಸ್ಥೆ ಮತ್ತು ವಿಜಾಪುರ ಜಿಲ್ಲಾ ಸಂಸ್ಥೆಯ ಆಶ್ರಯದಲ್ಲಿ ನಡೆಯುತ್ತಿರುವ ಈ ಟೂರ್ನಿಯ ಬಾಲಕರ ಸಿ ಗುಂಪಿನಲ್ಲಿ ಆರ್. ವಿಘ್ನೇಶ್ ನೇತೃತ್ವದ ತಮಿಳುನಾಡು ಜಯಭೇರಿ ಬಾರಿಸಿತು.ಶುಕ್ರವಾರ ಬೆಳಿಗ್ಗೆ ನಡೆದ ಮೊದಲ ಪಂದ್ಯದಲ್ಲಿ ತಮಿಳುನಾಡು 25-11, 25-14, 25-5ರಿಂದ ತ್ರಿಪುರಾ ವಿರುದ್ಧ ಗೆಲುವು ಸಾಧಿಸಿತು. ಸಂಜೆ ನಡೆದ ಇನ್ನೊಂದು ಪಂದ್ಯದಲ್ಲಿ ವಿಘ್ನೇಶ್ ಬಳಗ 25-17, 25-13, 25-11ರಿಂದ ಅಸ್ಸಾಂ ತಂಡವನ್ನು ಮಣಿಸಿತು. ಬೆಳಿಗ್ಗೆ ಪಂದ್ಯದಲ್ಲಿ ಮನೋಜ್‌ಕುಮಾರ ಮತ್ತು ಅರುಲ್‌ಕುಮಾರ ಉತ್ತಮ ಪ್ರದರ್ಶನದ ಮುಂದೆ ತ್ರಿಪುರಾದ ಅರ್ಜಿತ್ ದೇಬರಾಮ್ ಬಳಗ ಶರಣಾಯಿತು. ನೀಳಕಾಯದ ತಮಿಳು ಹುಡುಗರ ಬ್ಲಾಕ್ ಮತ್ತು ಆಕ್ರಮಣಕಾರಿ ಹೊಡೆತಗಳಿಗೆ ತ್ರಿಪುರಾದ ಆಟಗಾರರು ಸೋತು ಸುಣ್ಣವಾದರು.ಸಂಜೆಯ ಪಂದ್ಯದಲ್ಲಿಯೂ ಶಕ್ತಿಯುತ ಪ್ರದರ್ಶನ ನೀಡಿದ ತಮಿಳುನಾಡಿನ ಆಟಗಾರರು 3-0ಯಿಂದ ಅಸ್ಸಾಂ ರಾಜ್ಯದ ಟಿಂಕು ಬರುವಾ ಬಳಗಕ್ಕೆ ಆಘಾತ ನೀಡಿದರು. ಮಣಿಪುರಕ್ಕೆ ಜಯ:  ಸಂಜೆ ನಡೆದ ಬಾಲಕಿಯರ ಡಿ ಗುಂಪಿನ ರೋಚಕ ಪಂದ್ಯದಲ್ಲಿ ಮಣಿಪುರದ ಬಾಲಕಿಯರು ಜಮ್ಮು-ಕಾಶ್ಮೀರದ ಹುಡುಗಿಯರಿಗೆ ಸೋಲಿನ ರುಚಿ ತೋರಿಸಿದರು. ಮಣಿಪುರ ತಂಡವು 25-16, 25-27, 25-21, 25-23ರಿಂದ ಜಮ್ಮು ತಂಡವನ್ನು ಮಣಿಸಿತು.ರೋಮಿಲಾದೇವಿ ನಾಯಕತ್ವದ ಮಣಿಪುರದ ಪುಟ್ಟಕಂಗಳ ಹುಡುಗಿಯರಿಗೆ ಜಮ್ಮು-ಕಾಶ್ಮೀರದ ಬಾಲೆಯರೂ ದಿಟ್ಟ ಉತ್ತರವನ್ನೇ ನೀಡಿದರು. ಸಮಬಲದ ಹೋರಾಟ ನಡೆದರೂ ಜಮ್ಮು ಹುಡುಗಿಯರು ಮಾಡಿದ ತಪ್ಪುಗಳು ಮಣಿಪುರದವರಿಗೆ ವರದಾನವಾದವು. ಬೆಳಿಗ್ಗೆ ಜಮ್ಮು-ಕಾಶ್ಮೀರ ತಂಡಕ್ಕೆ ಒಡಿಶಾ ಎದುರು ವಾಕ್‌ಓವರ್ ಸಿಕ್ಕಿತ್ತು. ಕರ್ನಾಟಕದ ಪಂದ್ಯ ಇಂದು: ಟೂರ್ನಿಯ ಎರಡನೇ ದಿನವಾದ ಶುಕ್ರವಾರ ಕರ್ನಾಟಕದ ಪಂದ್ಯಗಳು ಇರಲಿಲ್ಲ. ಗುರುವಾರ ಆತಿಥೇಯ ಬಾಲಕ ಮತ್ತು ಬಾಲಕಿಯರ ತಂಡಗಳು ತಲಾ ಒಂದೊಂದು ಪಂದ್ಯ ಗೆದ್ದುಕೊಂಡಿದ್ದವು.ಶನಿವಾರ ಬೆಳಿಗ್ಗೆ 8ಕ್ಕೆ ಬಾಲಕರ ವಿಭಾಗದಲ್ಲಿ ಕರ್ನಾಟಕ ತಂಡವು ಜಮ್ಮು-ಕಾಶ್ಮೀರ ತಂಡವನ್ನು ಎದುರಿಸಲಿದೆ. ಬಾಲಕಿಯರ ವಿಭಾಗದಲ್ಲಿ ಕರ್ನಾಟಕವು ರಾಜಸ್ತಾನದ ವಿರುದ್ಧ ಆಡಲಿದೆ. ಶುಕ್ರವಾರದ ಇನ್ನುಳಿದ ಬಾಲಕರ ವಿಭಾಗದ ಪಂದ್ಯಗಳಲ್ಲಿ ಉತ್ತರಖಂಡ 25-19, 25-15, 25-12ರಿಂದ ಗೋವಾ ವಿರುದ್ಧ, ಚಂಡೀಗಡ ತಂಡವು 30-28, 25-12, 25-16ರಿಂದ ಗೋವಾ ವಿರುದ್ಧ, ರಾಜಸ್ತಾನವು 25-22, 25-13, 21-25, 25-17ರಿಂದ ದೆಹಲಿ ವಿರುದ್ಧ, ಉತ್ತರಖಂಡವು 25-19, 25-18, 25-21ರಿಂದ ಒಡಿಶಾ ವಿರುದ್ಧ ಜಯ ಪಡೆದವು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.