ಗುರುವಾರ , ಮೇ 19, 2022
21 °C

ಗೆಲ್ಲುವ ಕುದುರೆಗೆ ಭ್ರಷ್ಟಾಚಾರದ ಕಡಿವಾಣ!

ಸುರೇಶ್ ಎಡನಾಡು Updated:

ಅಕ್ಷರ ಗಾತ್ರ : | |

ಕಾಸರಗೋಡು: ಕೇರಳದಲ್ಲಿ ವಿಧಾನಸಭೆ ಚುನಾವಣೆ ಏಪ್ರಿಲ್13ರಂದು ನಡೆಯಲಿದ್ದು, ರಾಜಕೀಯ ಪಕ್ಷಗಳಲ್ಲಿ ಪ್ರಚಾರದ ಭರಾಟೆಯೂ ಆರಂಭವಾಗಿದೆ.ಇದೇ 26ರಂದು ನಾಮಪತ್ರ ಸಲ್ಲಿಕೆ, 28ರಂದು ನಾಮ ಪತ್ರಗಳ ಸೂಕ್ಷ್ಮ ಪರಿಶೀಲನೆ, 30ರಂದು ನಾಮಪತ್ರ ಹಿಂತೆಗೆಯುವ ಅಂತಿಮ ದಿನವಾಗಿದೆ. ಏ.13ರಂದು ಚುನಾವಣೆ ನಡೆದು ಮೇ.13ರಂದು ಮತ ಎಣಿಕೆ ನಡೆಯಲಿದೆ.ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎಡರಂಗ ಮೂರರಲ್ಲಿ ಎರಡರಷ್ಟು ಬಹುಮತ ಗಳಿಸಿ ಅಧಿಕಾರದ ಚುಕ್ಕಾಣಿ ಹಿಡಿದಿತ್ತು. ಕೇರಳದ ರಾಜಕೀಯ ‘ಸಂಪ್ರದಾಯ’ದ ಪ್ರಕಾರ ಈ ಬಾರಿ ಐಕ್ಯರಂಗ ಗೆಲುವು ಸಾಧಿಸಬೇಕಿದೆ. ಇದುವರೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಎರಡೂ ರಂಗಗಳೂ (ಐಕ್ಯರಂಗ ಮತ್ತು ಎಡರಂಗ) ಎರಡು ಅವಧಿಗೆ ಅಧಿಕಾರ ಉಳಿಸಿಕೊಂಡಿಲ್ಲ.  ಈ ಬಾರಿ ರಾಜಕೀಯ ಚಟುವಟಿಕೆ ಬಿರುಸುಗೊಂಡಿದ್ದು, ಭ್ರಷ್ಟಾಚಾರದ ಹೊಗೆ ಕಾಂಗ್ರೆಸ್ ನೇತೃತ್ವದ ಐಕ್ಯರಂಗವನ್ನು ಮಸುಕಾಗುವಂತೆ ಮಾಡಿದೆ. ಐಕ್ಯರಂಗದಲ್ಲಿ ಒಡಕಿನ ಅಪಸ್ವರಗಳೂ ಕೇಳಿಬಂದಿದೆ. ಕಾಂಗ್ರೆಸ್‌ನ ಯುವಕರು (ಯೂತ್ ಕಾಂಗ್ರೆಸ್) ಹಿರಿಯ ನಾಯಕರ ವಿರುದ್ಧ ತಮ್ಮ ಸಿಟ್ಟನ್ನು ಬಹಿರಂಗಪಡಿಸಿದ್ದಾರೆ. ಯುವಕರಿಗೆ ಟಿಕೆಟ್ ನೀಡುವಂತೆ ಒತ್ತಾಯಿಸಿದ್ದಾರೆ. ಇದು ಹಳೆ ಹುಲಿಗಳನ್ನು ಕೆರಳಿಸುವಂತೆ ಮಾಡಿದೆ.ಐಕ್ಯರಂಗದೊಳಗೆ ಮಿತ್ರ ಪಕ್ಷಗಳ ಮನವೊಲಿಸುವುದೇ ಕಾಂಗ್ರೆಸ್ ನಾಯಕರಿಗೆ ತಲೆನೋವಾಗಿ ಪರಿಣಮಿಸಿದೆ. ಇತ್ತೀಚೆಗೆ ಕಾಂಗ್ರೆಸ್ ಹೈಕಮಾಂಡ್ ಹೊರಡಿಸಿದ ಆದೇಶದ ಪ್ರಕಾರ 3 ಬಾರಿ ಚುನಾವಣೆಗೆ ಸ್ಪರ್ಧಿಸಿದ ಹುರಿಯಾಳುಗಳಿಗೆ ಟಿಕೆಟ್ ನೀಡುವಂತಿಲ್ಲ. ಹೊಸಮುಖ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಪ್ರಾಧಾನ್ಯ ನೀಡಿದೆ. ಇದು ಯುವ ಕಾಂಗ್ರೆಸ್‌ಗೆ ವರವಾಗಿ ಪರಿಣಮಿಸಿದೆ.ಮುಸ್ಲಿಂಲೀಗ್‌ನೊಳಗೆ ಎಲ್ಲವೂ ಸರಿಯಿಲ್ಲ ಎಂಬುದು ಸಾಬೀತಾಗಿದೆ. ಲೀಗ್‌ನ ನೇತಾರ ಕುಞ್ಞಿಲಿಕುಟ್ಟಿ ಅವರ ಐಸ್‌ಕ್ರೀಮ್ ಪಾರ್ಲರ್ ಲೈಂಗಿಕ ಹಗರಣ ಮರುಜೀವ ಪಡೆದುಕೊಂಡಿದೆ. ಇದು ಚುನಾವಣೆಯಲ್ಲಿ ಅಡ್ಡಪರಿಣಾಮ ಬೀರುವ ಸಾಧ್ಯತೆ ಇದೆ. ಭ್ರಷ್ಟಾಚಾರ ಆರೋಪ ಹೊತ್ತು ಐಕ್ಯರಂಗದ ಹಿರಿಯ ನಾಯಕ, ಮಾಜಿ ಸಚಿವ ಬಾಲಕೃಷ್ಣ ಪಿಳ್ಳೆ ಜೈಲಿಗೆ ಹೋಗಿದ್ದಾರೆ. ಇನ್ನೂ ಐಕ್ಯರಂಗದ ಅನೇಕ ಭ್ರಷ್ಟ ಮಾಜಿ ಸಚಿವರು ಜೈಲಿಗೆ ಹೋಗಲಿದ್ದಾರೆ ಎಂದು ಆಡಳಿತ ಪಕ್ಷ ಎಡರಂಗ ಆರ್ಭಟಿಸುತ್ತಲೇ ಇದೆ.ಈ ಸಂದರ್ಭದಲ್ಲೇ ಮುಖ್ಯಮಂತ್ರಿ ಅವರ ಪುತ್ರನೂ ಹಗರಣದಲ್ಲಿ ಭಾಗಿಯಾಗಿರುವ ಆರೋಪ- ಪ್ರತ್ಯಾರೋಪಗಳು ಕೇರಳದ ವಿಧಾನಸಭಾ ಚುನಾವಣೆಯನ್ನು ಮತ್ತಷ್ಟು ರಂಗೇರಿಸುವಂತೆ ಮಾಡಿದೆ. ಇಷ್ಟಾದರೂ ಸಿಪಿಎಂ ನೇತೃತ್ವದ ಎಡರಂಗ ಗೆಲ್ಲಬಹುದೇ ಎನ್ನುವುದು ಯಕ್ಷಪ್ರಶ್ನೆಯಾಗಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.