ಸೋಮವಾರ, ಜೂನ್ 21, 2021
29 °C

ಗೋವಾದ 40 ಕ್ಷೇತ್ರಗಳಿಗೆ ಇಂದು ಮತದಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಖನೌ/ಪಣಜಿ (ಪಿಟಿಐ/ಐಎಎನ್‌ಎಸ್): ಗೋವಾ ಹಾಗೂ ಉತ್ತರ ಪ್ರದೇಶದ ಕೊನೆಯ ಹಂತದ ಚುನಾವಣೆಗಾಗಿ ಶನಿವಾರ ಮತದಾನ ನಡೆಯಲಿದ್ದು, ಮಿನಿ ಸಾರ್ವತ್ರಿಕ ಚುನಾವಣೆ ಎಂದು ಕರೆಯಲಾಗಿದ್ದ 5 ರಾಜ್ಯಗಳ ವಿಧಾನಸಭಾ ಚುನಾವಣೆಗೆ ತೆರೆ ಬೀಳಲಿದೆ. ಉತ್ತರ ಪ್ರದೇಶ, ಗೋವಾ, ಉತ್ತರಾಖಂಡ, ಮಣಿಪುರ ಹಾಗೂ ಪಂಜಾಬ್  ರಾಜ್ಯಗಳಲ್ಲಿ ಮಾರ್ಚ್ 6ರಂದು ಮತ ಎಣಿಕೆ ಕಾರ್ಯ ನಡೆಯಲಿದೆ.ಗೋವಾ:
ಈ ರಾಜ್ಯದ 40 ವಿಧಾನಸಭಾ ಕ್ಷೇತ್ರಗಳಿಗೆ ಶನಿವಾರ ಮತದಾನ ನಡೆಯಲಿದ್ದು, 9 ಮಹಿಳೆಯರು 74 ಜನ ಪಕ್ಷೇತರರು ಸೇರಿ 215 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 10.25 ಲಕ್ಷ ಮತದಾರರು ಈ ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸಲಿದ್ದಾರೆ.ಚುನಾವಣಾ ಆಯೋಗ ದೇಶದಲ್ಲಿ ಇದೇ ಮೊದಲ ಬಾರಿ ಗೋವಾದಲ್ಲಿ ಮತದಾನ ನಿಗಾ ವ್ಯವಸ್ಥೆ ಅಳವಡಿಸಲಿದೆ. ನಕಲಿ ಮತದಾನವಾಗದಂತೆ ತಡೆಯಲು ಮತಗಟ್ಟೆಗೆ ಬಂದ ಮತದಾರರ ಛಾಯಾಚಿತ್ರ ಹಾಗೂ ಬೆರಳಚ್ಚು ತೆಗೆದುಕೊಳ್ಳಲಾಗುತ್ತದೆ.ಕಾಂಗ್ರೆಸ್- ಎನ್‌ಸಿಪಿ ಮೈತ್ರಿಕೂಟ ಹಾಗೂ ಬಿಜೆಪಿ-ಎಂಜಿಪಿ (ಮಹಾರಾಷ್ಟ್ರ ಗೋಮಾಂತಕ ಪಾರ್ಟಿ) ನಡುವೆ ಪ್ರಬಲ ಸ್ಪರ್ಧೆ ಇದ್ದರೂ ಕೆಲ ಕ್ಷೇತ್ರಗಳಲ್ಲಿ ತೃಣಮೂಲ ಸ್ಪರ್ಧಿಸಿರುವುದರಿಂದ ಅನಿರೀಕ್ಷಿತ ಫಲಿತಾಂಶಗಳು ಬರಬಹುದು.ಕಾಂಗ್ರೆಸ್ ಪಕ್ಷ ಸೀಟು ಹಂಚಿಕೆಯಲ್ಲಿನ ಅವ್ಯವಸ್ಥೆಯಿಂದ ಹಲವು ಕ್ಷೇತ್ರಗಳಲ್ಲಿ ಬಂಡಾಯ ಎದುರಿಸುತ್ತಿದೆ.ಮುಖ್ಯಮಂತ್ರಿ ದಿಗಂಬರ ಕಾಮತ್ ಮಾರ್ಗೋವಾದಿಂದ ಹಾಗೂ ವಿರೋಧ ಪಕ್ಷದ ನಾಯಕ ಮನೋಹರ್ ಪರಿಕ್ಕರ್ ಪಣಜಿ ಕ್ಷೇತ್ರದಿಂದ ಪುನರಾಯ್ಕೆ ಬಯಸಿದ್ದಾರೆ.ಉತ್ತರ ಪ್ರದೇಶ: ಉತ್ತರ ಪ್ರದೇಶದ ಲಖೀಂಪುರ ಖೇರಿ, ಬರೇಲಿ, ಶಹಜಹಾನಪುರ, ರಾಂಪುರ, ಬಡ್ಯಾನ್, ಮೊರಾದಾಬಾದ್, ಬಿಜ್ನೋರ್, ಅಮ್ರೊಹಾ, ಭೀಮ್‌ನಗರ ಮತ್ತು ಪಿಲಿಭಿತ್ ಜಿಲ್ಲೆಗಳ 60 ವಿಧಾನಸಭಾ ಕ್ಷೇತ್ರಗಳಲ್ಲಿ ಶನಿವಾರ ಮತದಾನ ನಡೆಯಲಿದೆ. 7ನೇ ಹಂತದ ಈ ಚುನಾವಣೆಯಲ್ಲಿ 962 ಅಭ್ಯರ್ಥಿಗಳು ಕಣದಲ್ಲಿದ್ದು 1.81 ಕೋಟಿ ಜನ ಮತದಾರರ ಪಟ್ಟಿಯಲ್ಲಿದ್ದಾರೆ.ಚುನಾವಣೆ ನಡೆಯುತ್ತಿರುವ ಕ್ಷೇತ್ರಗಳಲ್ಲಿ ಮುಸ್ಲಿಮರ ಜನಸಂಖ್ಯೆ ಹೆಚ್ಚಿರುವುದರಿಂದ ಈ ಸಮುದಾಯದ ಮತ ನೆಚ್ಚಿಸ್ಪರ್ಧಿಸಿರುವ ಸಮಾಜವಾದಿ ಪಕ್ಷ, ಕಾಂಗ್ರೆಸ್ ಹಾಗೂ ಬಿಎಸ್‌ಪಿ ಅಭ್ಯರ್ಥಿಗಳಿಗೆ ಇದು ಮಹತ್ವದ ಚುನಾವಣೆ. ಸುಧಾರಣೆಯ ಮಂತ್ರ ಜಪಿಸುತ್ತಿರುವ ಬಿಜೆಪಿ, ಬಿಎಸ್‌ಪಿ ಹಾಗೂ ಕಾಂಗ್ರೆಸ್ ಮೇಲೆ ಭ್ರಷ್ಟಾಚಾರದ ಆರೋಪ ಹೊರಿಸಿದೆ.ಕಾಂಗ್ರೆಸ್ ನಾಯಕ ಹಾಗೂ ಕೇಂದ್ರ ಸಚಿವ ಜಿತಿನ್ ಪ್ರಸಾದ (ಶಹಜಹಾನಪುರ), ಬಿಜೆಪಿ ನಾಯಕಿ ಮೇನಕಾ ಗಾಂಧಿ (ಅನೋಲಾ), ಆಕೆಯ ಪುತ್ರ ವರುಣ್ ಗಾಂಧಿ (ಪಿಲಿಭಿತ್), ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್ (ಮೊರಾದಾಬಾದ್), ಸಮಾಜವಾದಿ ಪಕ್ಷದ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಅಜಂ ಖಾನ್ (ರಾಂಪುರ) ಹಾಗೂ ಚಿತ್ರನಟಿ ಜಯಪ್ರದಾ (ರಾಂಪುರ) ಅವರ ಬಲಾಬಲ ಈ ಚುನಾವಣೆಯಲ್ಲಿ ಪರೀಕ್ಷೆಗೆ ಒಳಗಾಗಲಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.