ಗುರುವಾರ , ಜೂನ್ 17, 2021
29 °C

ಗೋಶಾಲೆಗಳಲ್ಲಿ ಅಕ್ರಮಚಟುವಟಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಗೋವುಗಳ ಸಂರಕ್ಷಣೆ ಹೆಸರಿನಲ್ಲಿ ಸ್ಥಾಪನೆಯಾಗಿರುವ ಹಲವು ಗೋಶಾಲೆಗಳಲ್ಲಿ ದನಗಳನ್ನು ಸಾಯಿಸಿ, ಅವುಗಳ ಮಾಂಸ ಮತ್ತು ಮೂಳೆಗಳ ಪುಡಿಯನ್ನು ರಫ್ತು ಮಾಡಲಾಗುತ್ತಿದೆ. ಈ ಬಗ್ಗೆ ಸರ್ಕಾರ ನಿಷ್ಪಕ್ಷಪಾತ ತನಿಖೆ ನಡೆಸಿ, ಕ್ರಮ ಜರುಗಿಸಬೇಕು~ ಎಂದು ವಿವಿಧ ಸಂಘಟನೆಗಳ ಒಕ್ಕೂಟವಾದ `ಜಾನುವಾರು ಹತ್ಯೆ ನಿಷೇಧ ಕಾಯ್ದೆ ವಿರೋಧಿ ಜನಾಂದೋಲನ~ದ ಮುಖಂಡರು ಆಗ್ರಹಿಸಿದರು.ಕರ್ನಾಟಕ ಜಾನುವಾರು ಹತ್ಯಾ ನಿಷೇಧ ಮಸೂದೆ ವಿರುದ್ಧ ಮಂಗಳವಾರ ಶಾಸಕರ ಭವನದ ಸಭಾಂಗಣದಲ್ಲಿ ಏರ್ಪಡಿಸಿದ್ದ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ವಿಧಾನ ಪರಿಷತ್ತಿನ ಮಾಜಿ ಸದಸ್ಯ ಎ.ಕೆ.ಸುಬ್ಬಯ್ಯ, `ಗೋಶಾಲೆಗಳಿಗೆ ಪುಕ್ಕಟೆಯಾಗಿ ದನಗಳನ್ನು ಪಡೆದು, ಅವುಗಳಿಂದ ಭಾರಿ ಪ್ರಮಾಣದ ಲಾಭ ಮಾಡಿಕೊಳ್ಳಲಾಗುತ್ತಿದೆ~ ಎಂದು ಆರೋಪಿಸಿದರು.`ಹಾಲು ಕೊಡುವ ಹಸುಗಳನ್ನು, ಹೊಲ ಉಳುವ ಎತ್ತುಗಳನ್ನು ರೈತರು ಮಾರಾಟ ಮಾಡುವುದಿಲ್ಲ. ವಯಸ್ಸಾದ ಹಸು ಮತ್ತು ಎತ್ತುಗಳನ್ನು ಮಾತ್ರ ರೈತರು ಮಾರಾಟ ಮಾಡುತ್ತಾರೆ. ಆ ಮೂಲಕ ಅವರು ಹಾಕಿದ ಬಂಡವಾಳ ಮತ್ತು ಶ್ರಮಕ್ಕೆ ಅಲ್ಪಸ್ವಲ್ಪ ಪ್ರತಿಫಲ ಪಡೆಯುತ್ತಾರೆ~ ಎಂದು ಅವರು ಹೇಳಿದರು.`ಗೋವು ಪವಿತ್ರ, ದೇವರು ಎನ್ನುವ ವೈದಿಕರಾಗಲಿ, ಉದ್ಯಮಿಗಳಾಗಲಿ ಅವುಗಳನ್ನು ಸಾಕುವುದಿಲ್ಲ. ಶೂದ್ರರಿಂದ ಗೋಪೂಜೆ ಮಾಡಿಸಿ ದಕ್ಷಿಣೆ ಪಡೆದುಕೊಳ್ಳುತ್ತಾರೆ. ವಯಸ್ಸಾದ ಮೇಲೆ ದನಗಳನ್ನು ಕಸಾಯಿಖಾನೆಗೆ ಮಾರಾಟ ಮಾಡಬೇಡಿ ಎಂದು ವೈದಿಕರು, ಉದ್ಯಮಿಗಳು ಬಿಟ್ಟಿ (ಉಚಿತ) ಉಪದೇಶ ಮಾಡುತ್ತಾರೆ. ಬಿಟ್ಟಿಯಾಗಿಯೇ ದನಗಳನ್ನು ಪಡೆದು ಲಾಭ ಮಾಡುವ ಹುನ್ನಾರ ಅವರದ್ದು~ ಎಂದು ದೂರಿದ ಅವರು `ಉದ್ದೇಶಿತ ಮಸೂದೆ ಕಾನೂನಾಗಿ ಜಾರಿಗೆ ಬಂದರೆ ರೈತರು ಹಸು, ದನ ಸಾಕುವುದನ್ನು ನಿಲ್ಲಿಸುತ್ತಾರೆ. ಅದರಿಂದ ಕೃಷಿ ಮತ್ತು ಹೈನುಗಾರಿಕೆಗೆ ದೊಡ್ಡ ಪೆಟ್ಟು ಬೀಳಲಿದೆ~ ಎಂದರು.`ಗೋ ಮೂತ್ರವನ್ನೂ ಮಾರಾಟ ಮಾಡಲಾಗುತ್ತಿದೆ. ಗೋ ಮೂತ್ರ ಮತ್ತಿತರ ಉತ್ಪನ್ನಗಳಿಂದ ಬರುವ ಹಣವನ್ನು ಗೋವುಗಳನ್ನು ಸಾಕಿ ಸಲಹಿದ ರೈತರಿಗೆ ಕೊಡುವುದೇ ಇಲ್ಲ~ ಎಂದು ವಿಷಾದಿಸಿದರು.

`ರಾಷ್ಟ್ರಪತಿಯವರಿಂದ ಬಂದಿರುವ ಸೂಚನೆಯಂತೆ ನಿಷೇಧದ ಪಟ್ಟಿಯಿಂದ ಎಮ್ಮೆ, ಕೋಣಗಳ ಹೆಸರನ್ನು ಬಿಟ್ಟು ಪರಿಷ್ಕೃತ ಮಸೂದೆಯನ್ನು ಕಳುಹಿಸಿಕೊಡಲಾಗುವುದು ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಹೇಳಿದ್ದಾರೆ.

 

ಈಗಾಗಲೇ ಜಾರಿಯಲ್ಲಿರುವ 1964ರ ಗೋಹತ್ಯೆ ನಿಷೇಧ ಕಾಯ್ದೆಯಲ್ಲಿ ಗೋಹತ್ಯೆಯನ್ನು ಭಾಗಶಃ ನಿರ್ಬಂಧಿಸಲಾಗಿದೆ. ಆ ಕಾನೂನು ಸಾಕು. ಹೊಸ ಕಾನೂನು ಅಗತ್ಯವಿಲ್ಲ~ ಎಂದು ಪ್ರತಿಪಾದಿಸಿದರು.

ನಾಟಕಕಾರ ಗಿರೀಶ್ ಕಾರ್ನಾಡ್ ಮಾತನಾಡಿ, `ಯಾವ ಆಹಾರ ತಿನ್ನಬೇಕು, ತಿನ್ನಬಾರದು ಎಂಬುದನ್ನು ನಾಗರಿಕರು ನಿರ್ಧರಿಸಬೇಕೆ ಹೊರತು ಸರ್ಕಾರವಲ್ಲ. ಮಸೂದೆ ವಿರುದ್ಧದ ಹೋರಾಟಕ್ಕೆ ನನ್ನ ಬೆಂಬಲ ಇದೆ~ ಎಂದರು.ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಸಂಚಾಲಕ ಕೆ.ಎಲ್.ಅಶೋಕ್ ಮಾತನಾಡಿ, `ಈ ತಿಂಗಳ 19ರಂದು ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಮಸೂದೆ ವಿರೋಧಿಸಿ ಪ್ರತಿಭಟನೆ ನಡೆಸಲಾಗುವುದು. ಏಪ್ರಿಲ್‌ನಲ್ಲಿ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಬೃಹತ್ ರ‌್ಯಾಲಿ ನಡೆಸಿ, ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಲಾಗುವುದು.ಆಧುನಿಕ ಕಸಾಯಿಖಾನೆಗಳನ್ನು ತೆರೆಯಲು ಹಾಗೂ ದನದ ಮಾಂಸ ಮಾರಾಟ ಮಳಿಗೆ ತೆರೆಯಲು ಅನುಮತಿ ನೀಡುವಂತೆ ಒತ್ತಾಯಿಸಲಾಗುವುದು~ ಎಂದರು.ಟಿಪ್ಪು ಸುಲ್ತಾನ್ ಸಂಯುಕ್ತ ರಂಗದ ಅಧ್ಯಕ್ಷ ಸರ್ದಾರ್ ಅಹ್ಮದ್ ಖುರೇಷಿ, `ಗೋಶಾಲೆಗಳ ಹೆಸರಿನಲ್ಲಿ ಸರ್ಕಾರಿ ಜಮೀನನ್ನು ಲಪಾಟಿಯಿಸುವ ಹುನ್ನಾರವೂ ನಡೆದಿದೆ~ ಎಂದು ಆರೋಪಿಸಿದರು.`ಬೀಫ್ ಮರ್ಚೆಂಟ್ ಅಸೋಸಿಯೇಷನ್~ನ ಅಧ್ಯಕ್ಷ ಕಾಸಿಂ ಏಜಾಜ್, ಮಾಜಿ ಸಚಿವೆ ಡಾ.ಬಿ.ಟಿ.ಲಲಿತಾ ನಾಯಕ್, ಸಮತಾ ಸೈನಿಕ ದಳದ ಅಧ್ಯಕ್ಷ ಎಂ.ವೆಂಕಟಸ್ವಾಮಿ, ದಲಿತ ಸಂಘರ್ಷ ಸಮಿತಿಯ (ಅಂಬೇಡ್ಕರ್‌ವಾದ) ಸಂಚಾಲಕ ಮಾವಳ್ಳಿಶಂಕರ್, ದಲಿತ ಕ್ರಿಶ್ಚಿಯನ್ ಯೂನಿಯನ್‌ನ ರೆವರೆಂಡ್ ಮನೋಹರ್ ಚಂದ್ರಪ್ರಸಾದ್, ಪ್ರಜಾತಾಂತ್ರಿಕ ಜನರ ವೇದಿಕೆಯ ಪ್ರೊ.ನಗರಿಬಾಬಯ್ಯ, ಲೇಖಕರಾದ ಪ್ರೊ.ಶಿವರಾಮಯ್ಯ, ನಗರಗೆರೆ ರಮೇಶ್, ಕರ್ನಾಟಕ ಜನಶಕ್ತಿ ಸಂಘಟನೆಯ ಕುಮಾರ್ ಸಮತಳ, ಒಕ್ಕೂಟದ ಸಂಚಾಲಕ ಗಂಗಣ್ಣ ಇತರರು ಭಾಗವಹಿಸಿದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.