ಭಾನುವಾರ, ಜೂನ್ 20, 2021
23 °C

ಗೌರವಧನ ಹೆಚ್ಚಳಕ್ಕೆ ಆಗ್ರಹಿಸಿ ಅಂಗವಿಕಲರ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗಲಕೋಟೆ:  ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಅಂಗವಿಕಲರ ಹಾಗೂ ವಿವಿಧೋದ್ದೇಶ ಮತ್ತು ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಜಿಲ್ಲಾ ಒಕ್ಕೂಟದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.ನಗರದ ಜಿಲ್ಲಾಡಳಿತ ಭವನದ ಮುಂಭಾಗ ಶುಕ್ರವಾರ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ತಾಲ್ಲೂಕು ಪಂಚಾಯಿತಿ ಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಂಆರ್‌ಡಬ್ಲೂ ಹಾಗೂ ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಆರ್‌ಡಬ್ಲ್ಯೂಗಳಿಗೆ ನೀಡುತ್ತಿರುವ ಗೌರವಧನವನ್ನು ಹೆಚ್ಚಿಸಬೇಕೆಂದು ಆಗ್ರಹಿಸಿದರು.ಕಳೆದ ನಾಲ್ಕು ವರ್ಷದಿಂದ ಎಂಆರ್‌ಡಬ್ಲೂಗಳಿಗೆ ಕೇವಲ ರೂ. 1800 ಹಾಗೂ ವಿಆರ್‌ಡಬ್ಲ್ಯೂಗಳಿಗೆ  ರೂ. 700 ಮಾತ್ರ ನೀಡಲಾಗುತ್ತಿದೆ. ಇದುವರೆಗೂ ಕನಿಷ್ಠ ವೇತನ, ಸೇವಾ ಭದ್ರತೆ, ಆರೋಗ್ಯ ವಿಮೆ ಯಾವೊಂದನ್ನು ನೀಡುತ್ತಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.ಈ ಭಾರಿಯ ಬಜೆಟ್‌ನಲ್ಲಿ ರಾಜ್ಯ ಸರ್ಕಾರವು ರಾಜ್ಯದ ಅಂಗವಿಕಲರ ಸೇವೆಯನ್ನು ಮಾನವೀಯತೆಯಿಂದ ನೋಡುವ ಮೂಲಕ ಬೇಡಿಕೆಗೆ ಸ್ಪಂದಿಸಬೇಕು ಎಂದು ಒತ್ತಾಯಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಒಕ್ಕೂಟದ ಜಿಲ್ಲಾ ಘಟಕದ ಧ್ಯಕ್ಷ ಸುರೇಶ ತಳಗೇರಿ, ಸ್ಥಳೀಯಾಡಳಿತದಲ್ಲಿ ಅಂಗವಿಕಲರಿಗಾಗಿ ಮೀಸಲಿರುವ ಶೇ. 3ರ ಅನುದಾನವನ್ನು ಸಮರ್ಪಕವಾಗಿ ಜಾರಿಗೊಳಿಸುತ್ತಿಲ್ಲ ಎಂದು ಆರೋಪಿಸಿದರು.ಗ್ರಾ.ಪಂ.ಗಳಲ್ಲಿ ವಿಆರ್‌ಡಬ್ಲ್ಯೂಗಳಿಗೆ ಕೂರಲು ಸರಿಯಾದ ವ್ಯವಸ್ಥೆಯಿಲ್ಲದ ಕಾರಣ ಪರಿತಪಿಸುವಂತಾಗಿದೆ, ತಕ್ಷಣ ಎಲ್ಲ ಪಂಚಾಯಿತಿಗಳಲ್ಲಿ ವಿಆರ್‌ಡಬ್ಲ್ಯೂಗಳಿಗೆ ಕೂರಲು ಆಸನದ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು.ಪ್ರತಿ ಗ್ರಾ.ಪಂ.ಗಳಲ್ಲಿ ಅಂಗವಿಕಲರಿಗೆ ಸಾಧನ-ಸಲಕರಣೆ ವಿತರಣೆ ಮಾಡಲು ಮೀಸಲಿರುವ ರೂ.30 ಸಾವಿರ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡುತ್ತಿಲ್ಲ, ತಾಲ್ಲೂಕು ಮಟ್ಟದಲ್ಲಿ ನಡೆಯಬೇಕಾದ ಅಂಗವಿಕಲರ ಕುಂದುಕೊರತೆ ಸಭೆ ಮತ್ತು ಅನುಷ್ಠಾನ ಸಮಿತಿ ಸಭೆ ಸರಿಯಾಗಿ ನಡೆಯುತ್ತಿಲ್ಲ ಎಂದು ಆರೋಪಿಸಿದರು.ಎನ್‌ಆರ್‌ಇಜಿ ಅನುಷ್ಠಾನದಲ್ಲಿ ಅಂಗವಿಕಲರನ್ನು ದಿನಗೂಲಿ ನೌಕರರನ್ನಾಗಿ ನೇಮಿಸಿಕೊಳ್ಳಬೇಕೆಂದು ಸರ್ಕಾರದ ಆದೇಶವಿದ್ದರೂ ಜಿಲ್ಲೆಯಲ್ಲಿ ಯಾವೊಬ್ಬ ಅಂಗವಿಕಲರನ್ನು ನೇಮಿಸಿಕೊಳ್ಳದೇ ನಿರ್ಲಕ್ಷ್ಯಿಸಲಾಗಿದೆ ಎಂದು ದೂರಿದರು.ಬಾಗಲಕೋಟೆ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಹುದ್ದೆ ಖಾಲಿಯಾಗಿ ನಾಲ್ಕು ವರ್ಷ ಕಳೆದರೂ ಇದುವರೆಗೂ ಅಧಿಕಾರಿಯನ್ನು ನೇಮಕ ಮಾಡದ ಕಾರಣ ಜಿಲ್ಲೆಯಲ್ಲಿ ಅಂಗವಿಕಲರಿಗೆ ಸಿಗಬೇಕಾದ ಸೌಲಭ್ಯ ಸರಿಯಾಗಿ ದೊರೆಯುತ್ತಿಲ್ಲ, ತಕ್ಷಣ ಜಿಲ್ಲಾಡಳಿತ ಮತ್ತು ಸರ್ಕಾರ ಇತ್ತ ಗಮನ ಹರಿಸಬೇಕು ಎಂದು ಆಗ್ರಹಿಸಿದರು.ಅಂಗವಿಕಲರ ವಿವಿಧ ಬೇಡಿಕೆ ಒಳಗೊಂಡ ಮನವಿಯನ್ನು ಅಪರ ಜಿಲ್ಲಾಧಿಕಾರಿ ಸಿರಸಗಿ ನಾಗಪ್ಪ ಅವರಿಗೆ ನೀಡಿದರು.ಒಕ್ಕೂಟದ ಜಿಲ್ಲಾ ಪ್ರಮುಖರಾದ ದ್ಯಾಮಣ್ಣ ಬೆಲ್ಲದಡಿ, ಮಾಂತೇಶ ಪಾಟೀಲ, ಮಾಗುಂಡಪ್ಪ ಮುದನೂರ, ಸಂಗಮೇಶ ಬರಗೊಂಡರ, ನಿಂಗಪ್ಪ ಹನಗಂಡಿ, ಪ್ರಭಾವತಿ ಬಳಿಗಾರ, ಬಾಬು ಹೂನ್ನುರ, ಹೊಳೆಯಪ್ಪ ಮಜ್ಜಗಿ, ಪಾಂಡು ಲಮಾಣಿ, ಚನ್ನಗಿರಿ ಪರಸಪ್ಪಗೋಳ, ಕಾಶಿಬಾಯಿ ಬೆಳಗಲಿ, ಹಾಸಿಂಬಿ ಪಕಾಲಿ, ಬಸವರಾಜ ಹರಿಜನ, ಆಸ್ಪಾಕ ಪೋಲಿಸ, ಸಿದ್ದಪ್ಪ ಕಡ್ಲಿಮಟ್ಟಿ, ರಮೇಶ ಹೊಟ್ಟಿ, ಈಶ್ವರಪ್ಪ ಹರಲಾರ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.