ಬುಧವಾರ, ಏಪ್ರಿಲ್ 14, 2021
23 °C

ಗ್ರಂಥಾಲಯ ಉಪಕರ: 2.5 ಕೋಟಿ ಬಾಕಿ

ಪ್ರಜಾವಾಣಿ ವಾರ್ತೆ/ ಕೆ.ನರಸಿಂಹಮೂರ್ತಿ Updated:

ಅಕ್ಷರ ಗಾತ್ರ : | |

ಕೋಲಾರ: ಜಿಲ್ಲೆಯ 156 ಗ್ರಾಮ ಪಂಚಾಯಿತಿಗಳು ಮತ್ತು ನಗರಸಭೆ-ಪುರಸಭೆಗಳು ನಗರದ ಡಾ.ಡಿ.ವಿ.ಗುಂಡಪ್ಪ ಜಿಲ್ಲಾ ಕೇಂದ್ರ ಗ್ರಂಥಾಲಯಕ್ಕೆ ಕಳೆದ 6 ವರ್ಷದಿಂದ ಪಾವತಿಸಬೇಕಾದ ಗ್ರಂಥಾಲಯ ಉಪಕರ 2.5 ಕೋಟಿ ಮುಟ್ಟಿದೆ. ಆದರೆ ಯಾವೊಂದು ಸ್ಥಳೀಯ ಸಂಸ್ಥೆಯೂ ಅದನ್ನು ಪಾವತಿಸುವ ಆಸಕ್ತಿ ತೋರಿಲ್ಲ !ಗ್ರಾಮ ಪಂಚಾಯಿತಿಗಳು ರೂ 1.5 ಕೋಟಿಯಷ್ಟು ಉಪಕರವನ್ನು ಬಾಕಿ ಉಳಿಸಿಕೊಂಡಿದ್ದರೆ, ನಗರಸಭೆ-ಪುರಸಭೆಗಳು ಒಟ್ಟು ರೂ.1 ಕೋಟಿಯಷ್ಟು ಬಾಕಿ ಉಳಿಸಿಕೊಂಡಿವೆ. ಅದನ್ನು ಸಂಗ್ರಹಿಸಲು ಹಲವು ಪ್ರಯತ್ನ ನಡೆಸಿರುವ ಗ್ರಂಥಾಲಯ ಇಲಾಖೆಯು ಈಗ ಎಲ್ಲ ಸಂಸ್ಥೆಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಲು ಚಿಂತನೆ ನಡೆಸಿದೆ. ಅದಕ್ಕಾಗಿ ಎಲ್ಲ ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್ ನೀಡಲಾಗಿದೆ. 2012-13ನೇ ಸಾಲಿನಲ್ಲಿ ಗ್ರಂಥಾಲಯಕ್ಕೆ ಸಂದಾಯದ ಉಪಕರದ ಮೊತ್ತ ಕೇವಲ ರೂ.5 ಲಕ್ಷಕ್ಕಿಂತಲೂ ಕಡಿಮೆ.ಸ್ಥಳೀಯ ಆಡಳಿತ ಸಂಸ್ಥೆಗಳು ಸಾರ್ವಜನಿಕರಿಂದ ಸಂಗ್ರಹಿಸುವ ಒಟ್ಟು ಕರದಲ್ಲಿ ಶೇ 6ಷ್ಟು ಪ್ರಮಾಣದ ಉಪಕರದಿಂದಲೇ ಪುಸ್ತಕಗಳನ್ನು-ದಿನಪತ್ರಿಕೆಗಳನ್ನು ಖರೀದಿಸಬೇಕಾದ, ಗ್ರಂಥಾಲಯವನ್ನು ನಿರ್ವಹಣೆ ಮಾಡಬೇಕಾದ ಅನಿವಾರ್ಯ ಸನ್ನಿವೇಶದ ನಡುವೆ ಜಿಲ್ಲಾ ಕೇಂದ್ರ ಗ್ರಂಥಾಲಯ ಅಸಹಾಯಕ ಸ್ಥಿತಿಯಲ್ಲಿದೆ.

 

ಸ್ವಚ್ಛತಾ ಸಿಬ್ಬಂದಿಗೆ ವೇತನ ನೀಡಲು ಆಗುತ್ತಿಲ್ಲ ಎನ್ನುತ್ತಾರೆ ಮುಖ್ಯ ಗ್ರಂಥಪಾಲಕ ಎಚ್.ಆರ್.ಚೆನ್ನಕೇಶವ.

ಗುರುವಾರ ~ಪ್ರಜಾವಾಣಿ~ ಜತೆ ಮಾತನಾಡಿದ ಅವರು, ಗ್ರಂಥಾಲಯ ಇಲಾಖೆ ನಿರ್ದೇಶಕರ ಸೂಚನೆ ಪ್ರಕಾರ, ಬಾಕಿ ಇರುವ ಗ್ರಂಥಾಲಯ ಉಪಕರದ ಕುರಿತು ನಗರದ ಸ್ಥಳೀಯ ಲೆಕ್ಕ ಪರಿಶೋಧನ ವರ್ತುಲದಿಂದ ಮಾಹಿತಿ ಪಡೆದು ಹಲವು ಬಾರಿ ಗ್ರಾಮ ಪಂಚಾಯಿತಿಗಳಿಗೆ, ನಗರಸಭೆ, ಪುರಸಭೆಗಳಿಗೆ ಪತ್ರ ಬರೆಯಲಾಗಿದೆ. ಗ್ರಂಥಾಲಯ ಪ್ರಾಧಿಕಾರದ ಅಧ್ಯಕ್ಷರಾದ ಜಿಲ್ಲಾಧಿಕಾರಿ ಗಮನಕ್ಕೂ ತರಲಾಗಿದೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ ಎಂದು ಅವರು ವಿಷಾದಿಸುತ್ತಾರೆ.ಮೊಕದ್ದಮೆ: ಉಪಕರ ಪಾವತಿಸದ ಹಿನ್ನೆಲೆಯಲ್ಲಿ ಸಂಸ್ಥೆಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲು ಚಿಂತನೆ ನಡೆದಿದೆ.  ಈ ಬಗ್ಗೆ ಜಿಲ್ಲಾ ಮತ್ತು ಪ್ರಧಾನ ಸತ್ರ ನ್ಯಾಯಾಧೀಶರೊಡನೆಯೂ ಚರ್ಚಿಸಲಾಗಿದೆ. ಏಕಾಏಕಿ ಕ್ರಿಮಿನಲ್ ಮೊಕದ್ದಮೆ ಹೂಡುವ ಬದಲು ಸಂಸ್ಥೆಗಳಿಗೆ ಮತ್ತೊಂದು ಅವಕಾಶ ನೀಡೋಣ ಎಂಬ ಜಿಲ್ಲಾಧಿಕಾರಿ ಡಾ.ಡಿ.ಎಸ್.ವಿಶ್ವನಾಥ ಅವರ ಸಲಹೆ ಮೇರೆಗೆ, ಕಾರಣ ಕೇಳಿ ಎಲ್ಲ ಸಂಸ್ಥೆಗಳಿಗೂ ನೋಟಿಸ್ ನೀಡಲಾಗಿದೆ ಎಂದು ತಿಳಿಸಿದ್ದಾರೆ.ನಕಾರ: ಉಪಕರ ಪಾವತಿಸುವುದು ತಮ್ಮ ಪ್ರಮುಖ ಜವಾಬ್ದಾರಿಗಳಲ್ಲೊಂದು ಎಂದು ಬಹಳಷ್ಟು ಸಂಸ್ಥೆಗಳ ಅಧಿಕಾರಸ್ಥರಿಗೆ ಗೊತ್ತಿಲ್ಲ. ಅಲ್ಲದೆ, ಯಾರೂ ಇದುವರೆಗೆ ಉಪಕರ ಪಾವತಿಸಿ ಎಂದು ಕೇಳಿಲ್ಲ. ನೀವು ಏಕೆ ಕೇಳುತ್ತೀರಿ ಎಂಬ ಬೇಜವಾಬ್ದಾರಿ ಪ್ರತಿಕ್ರಿಯೆಗಳನ್ನೂ ಕೆಲವರು ನೀಡುತ್ತಿದ್ದಾರೆ. ಈ ಸಂಗತಿಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಕೋರಿ ಜಿಲ್ಲಾಧಿಕಾರಿ ಗಮನಕ್ಕೆ ತರಲಾಗಿದೆ ಎಂದು ಅವರು ವಿವರಿಸಿದರು.ಗ್ರಂಥಾಲಯ ಪ್ರಾಧಿಕಾರ ಅಧ್ಯಕ್ಷರಾದ ಜಿಲ್ಲಾಧಿಕಾರಿಯವರ ನೇತೃತ್ವದಲ್ಲಿ ನಡೆಯುವ ಸಭೆಗಳಲ್ಲೂ ಉಪಕರ ಬಾಕಿಯ ಕುರಿತು ಗಮನ ಸೆಳೆಯುವ ಪ್ರಯತ್ನ ನಡೆಯುತ್ತಲೇ ಇದೆ. ತಮ್ಮ ಸಂಸ್ಥೆಗಳೇ ನಷ್ಟದಲ್ಲಿವೆ ಎಂಬ ಕಾರಣವನ್ನು ಮುಂದೊಡ್ಡಿ ಸಂಸ್ಥೆಗಳ ಅಧಿಕಾರಿಗಳು ಉಪಕರ ಪಾವತಿಸುವುದು ಸಾಧ್ಯವಿಲ್ಲ ಎಂಬ ಸಬೂಬು ಹೇಳುತ್ತಾರೆ. ಪ್ರತಿ ಬಾರಿಯೂ ಇದೇ ಕಾರಣವನ್ನು ಮುಂದೊಡ್ಡುವುದು ಸಾಮಾನ್ಯವಾಗಿದೆ ಎನ್ನುತ್ತಾರೆ ಅವರು.ಉಪಕರವನ್ನು ಪಡೆಯುವ ನಿಟ್ಟಿನಲ್ಲಿ ಕಳೆದ ವರ್ಷ ಪೌರಾಡಳಿತ ಇಲಾಖೆ ನಿರ್ದೇಶಕರನ್ನೂ ಕೂಡ ಭೇಟಿ ಮಾಡಲಾಗಿತ್ತು. ಉಪಕರವನ್ನು ಗ್ರಂಥಾಲಯಕ್ಕೆ ಪಾವತಿಸುವಂತೆ ನಗರ-ಪುರಸಭೆ ಅಧಿಕಾರಿಗಳಿಗೆ ಸೂಚನೆ ನೀಡುವಂತೆ ಅವರಿಗೆ ಮನವಿಯನ್ನೂ ಸಲ್ಲಿಸಲಾಗಿತ್ತು.ಅದರಿಂದ ಯಾವ ಪ್ರಯೋಜನವೂ ಆಗಲಿಲ್ಲ ಎಂದು ತಿಳಿಸಿದರು.ಗ್ರಂಥಾಲಯದ ಎಲ್ಲ ವ್ಯವಹಾರಗಳನ್ನು ಉಪಕರದಿಂದ ಬರುವ ಹಣದಿಂದಲೇ ನಡೆಸಬೇಕು. ಆದರೆ ಉಪಕರ ಬಾಕಿ ಇರುವ ಕಾರಣ ಕಚೇರಿ ನಡೆಸಲು, ದಿನಪತ್ರಿಕೆಗಳಿಗೆ ಹಣ ನೀಡಲು ಹಣವಿಲ್ಲದ ಸನ್ನಿವೇಶ ನಿರ್ಮಾಣವಾಗಿದೆ ಎಂದು ಅವರು ಅಸಹಾಯಕತೆ ವ್ಯಕ್ತಪಡಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.