ಶನಿವಾರ, ಮೇ 8, 2021
26 °C

ಗ್ರಾಮದೇವತೆ ರಥೋತ್ಸವಅದ್ದೂರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅರಸೀಕೆರೆ: ಗ್ರಾಮ ದೇವತೆಗಳಾದ ಕರಿಯಮ್ಮ ಮತ್ತು ಮಲಿಗೆಮ್ಮ ದೇವಿ ಯವರ ರಥೋತ್ಸವ ಅಸಂಖ್ಯಾತ ಭಕ್ತರ ಸಮ್ಮುಖದಲ್ಲಿ ಗುರುವಾರ ಮಧ್ಯಾಹ್ನ ವಿಜೃಂಭಣೆಯಿಂದ ಜರುಗಿತು. ಸುತ್ತಮುತ್ತಲ ಗ್ರಾಮ ಗಳಿಂದ ಬಂದಿದ್ದ ಭಕ್ತರು ಈ ಉತ್ಸವಕ್ಕೆ ಸಾಕ್ಷಿಯಾದರು.ಮುಂಜಾನೆ ದೇವಿಯ ಮೂಲ ಸನ್ನಿಧಿಯಲ್ಲಿ ಕರಿಯಮ್ಮ ಹಾಗೂ ಮಲಿಗೆಮ್ಮದೇವಿ ಅವರಿಗೆ ವಿಶೇಷ ಪೂಜಾ ಕೈಂಕರ್ಯಗಳನ್ನು ಶಾಸ್ತ್ರೋಕ್ತ ವಾಗಿ ನೆರವೇರಿಸಲಾಯಿತು. ದೇವಿಯ ದರ್ಶನಕ್ಕೆ ಸುತ್ತಮುತ್ತಲ ಗ್ರಾಮ ಗಳಿಂದ ಭಕ್ತರು ಆಗಮಿಸಿ ಸರತಿ ಸಾಲಿನಲ್ಲಿ ನಿಂತು ಪೂಜೆ ಸಲ್ಲಿಸಿದರು.

ಕರಿಯಮ್ಮ ಹಾಗೂ ಮಲಿಗೆಮ್ಮ ದೇವಿ ಅವರ ಉತ್ಸವ ಮೂರ್ತಿಗಳನ್ನು ಚಿನ್ನಾಭರಣಗಳಿಂದ ಅಲಂಕರಿಸಲಾಗಿತ್ತು. ಬಳಿಕ ಪುಷ್ಪಾಲಂಕೃತ ಮಂಟಪ ದಲ್ಲಿ ಕೂರಿಸಿ ದೇವಾಲಯದ ಆವರಣದಿಂದ ಮಂಗಳ ವಾದ್ಯ ದೊಂದಿಗೆ ರಥದ ಮಂಟಪಕ್ಕೆ ತರಲಾಯಿತು.

ನಂತರ ಕೆಂಚರಾಯ ಭೂತರಾಯ ಸಮ್ಮುಖದಲ್ಲಿ ರಥಕ್ಕೆ ಬಲಿ ಅನ್ನ ಅರ್ಪಿಲಾಯಿತು. ಕರಿಯಮ್ಮ ಮತ್ತು ಮಲಿಗೆಮ್ಮ ದೇವಿ ಅವರ ಉತ್ಸವ ಮೂರ್ತಿ ರಥದ ಸುತ್ತ ಮೂರು ಪ್ರದಕ್ಷಿಣೆ ಹಾಕಿದ ಬಳಿಕ ಬೃಹತ್ ಪುಷ್ಪಾಹಾರಗಳಿಂದ ಮತ್ತು ಬಣ್ಣ ಬಣ್ಣದ ಬಟ್ಟೆಗಳಿಂದ ಅಲಂಕರಿಸಲಾದ ರಥದಲ್ಲಿ ದೇವಿಯ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಯಿತು.

ಮಧ್ಯಾಹ್ನ 1.30ರ ವೇಳೆಗೆ ಪುರಸಭಾ ಅಧ್ಯಕ್ಷ ಎಂ. ಶಮೀವುಲ್ಲಾ, ಮಾಜಿ ಅಧ್ಯಕ್ಷ ಸಿದ್ದರಾಮಶೆಟ್ಟಿ, ಪುರಸಭಾ ಸದಸ್ಯರಾದ ಬುದ್ದಿವಂತ ರಮೇಶ, ರೇವಣ್ಣ ಕೆ.ಎಸ್. ಸಿದ್ದಮ್ಮ, ಪರುಶುರಾಂ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಗೀಜೀಹಳ್ಳಿ ಗುರುಸಿದ್ದಪ್ಪ ದೇವಾಲಯ ಸಮಿತಿ ಕಾರ್ಯದರ್ಶಿ ಪುರಿ ಜಯಣ್ಣ ಮುಂತಾದವರು ರಥಕ್ಕೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು.

ನೆರೆದಿದ್ದ ಭಕ್ತರು ರಥದ ಹಗ್ಗ ಹಿಡಿದು ಜಯಘೋಷ ಹಾಕುತ್ತಾ ತೇರು ಎಳೆದರು. ರಥದ ಕಳಶಕ್ಕೆ ಬಾಳೆಹಣ್ಣು, ಉತ್ತತ್ತಿ, ದವನ ಎಸೆದು ಭಕ್ತಿ ಸಮರ್ಪಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.