ಮಂಗಳವಾರ, ಏಪ್ರಿಲ್ 20, 2021
32 °C

ಗ್ರಾಮೀಣರಿಗೆ ಶುದ್ಧ ನೀರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಉತ್ತರ ಕರ್ನಾಟಕದಲ್ಲಿ ಶುದ್ಧ ನೀರು ಘಟಕಗಳ ಸ್ಥಾಪನೆಗೆ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದ್ದು, ಕೆರೆ ನೀರು ಆಧಾರಿತ ಗ್ರಾಮಗಳಲ್ಲಿ ಘಟಕ ಸ್ಥಾಪನೆಗೆ ಶ್ರಮಿಸಲಾಗುತ್ತಿದೆ ಎಂದು ಮಾಜಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.ಕೆ.ಎಚ್. ಪಾಟೀಲ ಪ್ರತಿಷ್ಠಾನ ಹಾಗೂ ರೂರಲ್ ಮೆಡಿಕಲ್ ಸರ್ವಿಸ್ ಸೊಸೈಟಿ ವತಿಯಿಂದ ವಿದ್ಯಾನಗರದ ವೇಮನ ವಿದ್ಯಾವರ್ಧಕ ಸಂಘದ ಕೆ.ಎಚ್. ಪಾಟೀಲ ಕಾಲೇಜು ಆವರಣದಲ್ಲಿ ಭಾನುವಾರ ನಗರದ ಮೊದಲ ಶುದ್ಧನೀರು ವಿತರಣಾ ಘಟಕದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಪ್ರತಿಷ್ಠಾನದ ವತಿಯಿಂದ ಸ್ಥಾಪಿಸಲಾಗುತ್ತಿರುವ 37ನೇ ಘಟಕ ಇದಾಗಲಿದೆ. ಉತ್ತರ ಕರ್ನಾಟಕದ 150 ಗ್ರಾಮಗಳಲ್ಲಿ ಹಂತಹಂತವಾಗಿ ನೀರಿನ ಘಟಕಗಳು ಆರಂಭಗೊಳ್ಳಲಿವೆ ಎಂದು ಅವರು ಹೇಳಿದರು.ದೇಶದಲ್ಲೇ ಮೊದಲ ಬಾರಿಗೆ ಕೆರೆಯೊಂದರ ನೀರು ಬಳಸಿಕೊಂಡು ಶುದ್ಧನೀರು ಒದಗಿಸುವ ಯೋಜನೆಯು ನವಲಗುಂದ ತಾಲ್ಲೂಕಿನ ಯಮನೂರು ಗ್ರಾಮದಲ್ಲಿ ಆರಂಭಗೊಂಡಿದೆ. ಜನರ ಬದುಕಿನ ಗುಣಮಟ್ಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಶುದ್ಧನೀರು ಯೋಜನೆಯು ಕ್ರಾಂತಿಕಾರಕ ಬದಲಾವಣೆ ತರಲಿದೆ ಎಂದರು.ಹಿರಿಯ ವೈದ್ಯ ಡಾ. ಆರ್.ಬಿ. ಪಾಟೀಲ ಮಾತನಾಡಿ, ಪ್ರತಿ ಮನುಷ್ಯನಿಗೂ ಶುದ್ಧ ಗಾಳಿ, ನೀರು ಮತ್ತು ಆಹಾರ ಅವಶ್ಯ. ಕಲುಷಿತ ನೀರು ಸೇವನೆಯಿಂದ ಕಾಲರಾ, ವಾಂತಿ-ಭೇದಿ ಮೊದಲಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಜನರಿಗೆ ಶುದ್ಧ ನೀರು ಒದಗಿಸುವಲ್ಲಿ ಈ ಪ್ರಯತ್ನ ಶ್ಲಾಘನೀಯ ಎಂದರು.ನೇತ್ರ ತಜ್ಞ ಡಾ. ಎಂ.ಎಂ. ಜೋಶಿ ಮಾತನಾಡಿ, ಗ್ರಾಮಾಂತರ ಪ್ರದೇಶಗಳಲ್ಲಿ ಹೆಚ್ಚು ಘಟಕಗಳನ್ನು ತೆರೆಯುವಂತೆ ಸಲಹೆ ನೀಡಿದರು.ಮೇಯರ್ ಪಾಂಡುರಂಗ ಪಾಟೀಲ ಅವರು ಸಾರ್ವಜನಿಕರಿಗೆ ಶುದ್ಧನೀರಿನ ಕ್ಯಾನ್‌ಗಳನ್ನು ವಿತರಿಸಿದರು. ಮಾಜಿ ಸಚಿವ ಎ.ಎಂ. ಹಿಂಡಸಗೇರಿ, ಡಾ. ಕೆ.ಎಚ್. ಜಿತೂರಿ, ವಿ.ಬಿ. ನಾಗನೂರ, ಡಾ. ಬಿ.ಎಲ್. ಪಾಟೀಲ, ಮಹೇಂದ್ರ ಸಿಂಘಿ ಇತರರು ಹಾಜರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.