ಭಾನುವಾರ, ಜೂನ್ 20, 2021
25 °C

ಗ್ರಾಹಕರಿಗೆ ಇನ್ನಷ್ಟು ಸಂಕಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಒಂದೂವರೆ ತಿಂಗಳ ಅಂತರದಲ್ಲಿ ಮತ್ತೆ ಅಡಿಗೆ ಅನಿಲ ಸಾಗಣೆ ಟ್ಯಾಂಕರುಗಳ ಮಾಲೀಕರು ಅನಿರ್ದಿಷ್ಟ ಅವಧಿಯ ಮುಷ್ಕರ ಆರಂಭಿಸಿದ್ದಾರೆ. ಜನವರಿ ಎರಡನೇ ವಾರದಲ್ಲಿ ಅವರು ಐದು ದಿನಗಳ ಮುಷ್ಕರ ನಡೆಸಿದ್ದರು. ಆಗ ತೈಲ ಕಂಪೆನಿಗಳು ಅನಿಲ ಸಾಗಣೆ ದರವನ್ನು ಪರಿಷ್ಕರಿಸುವ ಭರವಸೆ ನೀಡಿದ್ದರಿಂದ ಮುಷ್ಕರ ಹಿಂಪಡೆದಿದ್ದರು.ಅನಿಲ ಸಾಗಣೆ ದರ ನಿಗದಿಗೆ ಟೆಂಡರ್ ಕರೆಯುವ ವಿಷಯದಲ್ಲಿ ಮೂರು ಪ್ರಮುಖ ತೈಲ ಕಂಪೆನಿಗಳು ಆಸಕ್ತಿಯನ್ನೇ ತೋರಿಸುತ್ತಿಲ್ಲ. ನಷ್ಟ ಮಾಡಿಕೊಂಡು ಸಾಗಣೆ ಮಾಡಲು ಸಾಧ್ಯವಿಲ್ಲ ಎಂದು ಟ್ಯಾಂಕರುಗಳ ಮಾಲೀಕರು ಬಿಗಿಪಟ್ಟು ಹಿಡಿದಿದ್ದಾರೆ. ಮುಷ್ಕರದಿಂದಾಗಿ  ಕರ್ನಾಟಕ, ತಮಿಳುನಾಡು ಹಾಗೂ ಕೇರಳ ರಾಜ್ಯಗಳಲ್ಲಿ ಅಡಿಗೆ ಅನಿಲ ಸಾಗಣೆ ಸ್ಥಗಿತಗೊಂಡಿದೆ. ಅನಿಲ ಸಾಗಣೆ ವ್ಯವಸ್ಥಿತವಾಗಿದ್ದಾಗಲೇ ಸಿಲಿಂಡರುಗಳ ಪೂರೈಕೆ ವಿಳಂಬವಾಗುತ್ತಿತ್ತು.

ಗ್ರಾಹಕರು ಸಿಲಿಂಡರ್‌ಗೆ ಬೇಡಿಕೆ ಸಲ್ಲಿಸಿ ಒಂದು ವಾರಕ್ಕೂ ಹೆಚ್ಚು ಕಾಲ ಕಾಯುವ ಪರಿಸ್ಥಿತಿ ಇತ್ತು. ಕೆಲ ಅನಿಲ ಕಂಪೆನಿಗಳು 10-15 ದಿನಗಳ ಹಿಂದೆ ಬೇಡಿಕೆ ಸಲ್ಲಿಸಿದವರಿಗೆ ಸಿಲಿಂಡರ್‌ಗಳನ್ನು ಪೂರೈಸಿಲ್ಲ.ಇಂದೇ ಮುಷ್ಕರ ಸ್ಥಗಿತಗೊಂಡರೂ ಸಿಲಿಂಡರು ಪೂರೈಕೆ ಯಥಾಸ್ಥಿತಿಗೆ ಮರಳಲು ಕನಿಷ್ಠ ಇಪ್ಪತ್ತು ದಿನಗಳಾದರೂ ಬೇಕಾದೀತು. ಬೆಂಗಳೂರು ಸೇರಿದಂತೆ  ಕರ್ನಾಟಕದ ಎಲ್ಲ ಊರುಗಳ ಗ್ರಾಹಕರಿಗೆ ಮುಷ್ಕರದ ಬಿಸಿ ತಟ್ಟಿದೆ. ಒಂದೇ ಸಿಲಿಂಡರ್ ಇರುವ ಗ್ರಾಹಕರಿಗೆ ಹೆಚ್ಚಿನ ತೊಂದರೆ ಆಗಿದೆ.ಪದೇ ಪದೇ ಡೀಸೆಲ್, ಪೆಟ್ರೋಲ್‌ಗಳ ಬೆಲೆ ಏರಿಸುವುದರಿಂದ ಅಗತ್ಯ ವಸ್ತುಗಳ ಸಾಗಣೆ ದರ ಹೆಚ್ಚುತ್ತದೆ. ಸರಕು ಸಾಗಣೆ ವಾಹನಗಳ ಮಾಲೀಕರು ತೈಲ ಬೆಲೆ ಏರಿಕೆಯನ್ನು ನೆಪವಾಗಿಟ್ಟುಕೊಂಡು ಸಾಗಣೆ ದರ ಹೆಚ್ಚಿಸುತ್ತಲೇ ಇದ್ದಾರೆ.ಅಡಿಗೆ ಅನಿಲ ಟ್ಯಾಂಕರುಗಳ ಮಾಲೀಕರ ಒಕ್ಕೂಟ ಈಗ ಒಂದು ಕಿಲೋಮೀಟರ್‌ಗೆ 3.50 ರೂಪಾಯಿ ಹೆಚ್ಚಿಸುವಂತೆ ಬೇಡಿಕೆ ಇಟ್ಟಿದೆ. ಈ ಬೇಡಿಕೆಯನ್ನು ತೈಲ ಕಂಪೆನಿಗಳು ಸಹಾನುಭೂತಿಯಿಂದ ಪರಿಶೀಲಿಸಬೇಕು.

 

ಸಾಗಣೆ ದರ ಹೆಚ್ಚಿಸುವ ನಿರ್ಧಾರ ತೆಗೆದುಕೊಳ್ಳುವುದು ವಿಳಂಬವಾದರೆ ಕೋಟ್ಯಂತರ ಗ್ರಾಹಕರಿಗೆ ತೊಂದರೆಯಾಗುತ್ತದೆ. ಅನಿಲ ಸಾಗಣೆ ದರ ಹೆಚ್ಚಳವಾದರೆ ಅದರಿಂದ ತೈಲ ಕಂಪೆನಿಗಳ ಮೇಲೆ ಹೆಚ್ಚಿನ ಆರ್ಥಿಕ ಹೊರೆ ಬೀಳುತ್ತದೆ.ಅದನ್ನು ಸರಿದೂಗಿಸಲು ತೈಲ ಕಂಪೆನಿಗಳು ಮತ್ತೆ ಅಡಿಗೆ ಅನಿಲ ಸಿಲಿಂಡರ್ ಬೆಲೆ ಹೆಚ್ಚಿಸುವ ಸಾಧ್ಯತೆ ಇದೆ. ಟ್ಯಾಂಕರ್ ಮಾಲೀಕರು, ತೈಲ ಕಂಪೆನಿಗಳು ಏನೇ ಕ್ರಮ ತೆಗೆದುಕೊಂಡರೂ ಅಂತಿಮವಾಗಿ ಅದನ್ನು ಗ್ರಾಹಕರೇ ಭರಿಸಬೇಕಾಗುತ್ತದೆ.ಪೆಟ್ರೋಲ್, ಡೀಸೆಲ್ ಮತ್ತು ಅಡಿಗೆ ಅನಿಲ ಬೆಲೆ ನಿಗದಿ ಮಾಡುವ ಅಧಿಕಾರವನ್ನು ಕೇಂದ್ರ ಸರ್ಕಾರ ತೈಲ ಕಂಪೆನಿಗಳಿಗೆ ನೀಡಿದ ನಂತರ ಗ್ರಾಹಕರಿಗೆ ಆಗಿರುವ ತೊಂದರೆಗಳು ಅಷ್ಟಿಷ್ಟಲ್ಲ.ಕೇಂದ್ರ ಸರ್ಕಾರ ಗ್ರಾಹಕರ ಹಿತವನ್ನೇ ಮರೆತಿದೆ. ಬೆಲೆ ಏರಿಕೆಯಿಂದ ತತ್ತರಿಸಿರುವ ಜನ ಸಾಮಾನ್ಯರಿಗೆ ಇನ್ನಷ್ಟು ಆರ್ಥಿಕ ಹೊರೆ ಬೀಳದಂತೆ ಕೇಂದ್ರ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು. ಮುಷ್ಕರ ನಿಲ್ಲಿಸಲು ತುರ್ತು ಕ್ರಮ ತೆಗೆದುಕೊಳ್ಳಬೇಕು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.