ಸೋಮವಾರ, ಮಾರ್ಚ್ 8, 2021
19 °C
ಆರೋಗ್ಯ ಕೇಂದ್ರದಲ್ಲಿ ವೈದ್ಯರಿಲ್ಲದೆ ಸಂಕಷ್ಟ; ತಾಲ್ಲೂಕು ಕೇಂದ್ರಕ್ಕೆ ಹೋಗುವ ಸ್ಥಿತಿ

ಘೋಟಾಳ ಗಡಿ ಗ್ರಾಮದಲ್ಲಿ ಸೌಕರ್ಯ ಕೊರತೆ

ಮಾಣಿಕ ಆರ್.ಭುರೆ Updated:

ಅಕ್ಷರ ಗಾತ್ರ : | |

ಘೋಟಾಳ ಗಡಿ ಗ್ರಾಮದಲ್ಲಿ ಸೌಕರ್ಯ ಕೊರತೆ

ಬಸವಕಲ್ಯಾಣ: ತಾಲ್ಲೂಕಿನ ಗಡಿಗ್ರಾಮವಾದ ಘೋಟಾಳ ಗ್ರಾಮದಲ್ಲಿ ಮೂಲಸೌಕರ್ಯದ ಕೊರತೆ ಇದೆ. ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಮತ್ತು ಸಿಬ್ಬಂದಿ ಇಲ್ಲ. ಅಲ್ಲದೆ, ಹೆರಿಗೆ ವ್ಯವಸ್ಥೆ ಇಲ್ಲದ್ದರಿಂದ ಗ್ರಾಮಸ್ಥರು ತೊಂದರೆ ಅನುಭವಿಸುತ್ತಿದ್ದಾರೆ.



ಕೇಂದ್ರದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಕೊಳವೆ ಬಾವಿ ಕೊರೆದರೂ ಪ್ರಯೋಜನವಾಗಿಲ್ಲ. ಈ ಕಾರಣ ಇಲ್ಲಿ ಹೆರಿಗೆಗಳನ್ನು ಮಾಡಲಾಗುತ್ತಿಲ್ಲ. ಈ ಭಾಗದಲ್ಲಿ ಸಣ್ಣ ಸಣ್ಣ ಅನೇಕ ವಾಡಿಗಳಿವೆ. ಇವುಗಳಲ್ಲಿ ಬಡವರು ಹೆಚ್ಚಾಗಿದ್ದು, ಅವರಿಗೆ ಈ ಆರೋಗ್ಯ ಕೇಂದ್ರವೇ ಆಸರೆಯಾಗಿದೆ. ಆದರೆ, ಹೆರಿಗೆ ಮಾಡದ ಕಾರಣ ದೂರದ ಬಸವಕಲ್ಯಾಣ, ಇಲ್ಲವೆ ಮಹಾರಾಷ್ಟ್ರದ ಉಮರ್ಗಾ ಆಸ್ಪತ್ರೆಗೆ ಹೋಗಬೇಕಾದ ಪರಿಸ್ಥಿತಿ ಇದೆ ಎಂಬುದು ಗ್ರಾಮಸ್ಥ ಹಣಮಂತರಾವ ಅವರ ಗೋಳು.



ಇಲ್ಲಿ ಒಬ್ಬರೂ ವೈದ್ಯರಿಲ್ಲ. ಆರೋಗ್ಯ ಸಹಾಯಕಿಯೊಬ್ಬರು ಬಂದವರಿಗೆ ಮಾತ್ರೆ ಕೊಟ್ಟು ಕಳುಹಿಸುತ್ತಿದ್ದಾರೆ. ಇದರಿಂದ ಆರೋಗ್ಯ ಸುಧಾರಿಸುತ್ತಿಲ್ಲ. ದೂರದ ಆಸ್ಪತ್ರೆಗೆ ಹೋಗಲು ಆರ್ಥಿಕ ಸ್ಥಿತಿ ಸರಿಯಿಲ್ಲದ್ದರಿಂದ ಸಾಧ್ಯವಾಗುತ್ತಿಲ್ಲ. ಹೀಗಾಗಿ ಅನೇಕ ದಿನಗಳವರೆಗೆ ರೋಗದಿಂದ ಬಳಲಬೇಕಾಗುತ್ತಿದೆ ಎಂದು ಪಾರ್ವತಿಬಾಯಿ ತಿಳಿಸಿದರು.



ಘೋಟಾಳ ಗ್ರಾಮ ಪಂಚಾಯಿತಿ ಕೇಂದ್ರವಾಗಿದ್ದು, ಮಹಾರಾಷ್ಟ್ರದ ಗಡಿಯಲ್ಲಿದೆ. ಪ್ರತಾಪುರ ಜಿಲ್ಲಾ ಪಂಚಾಯಿತಿ ಕ್ಷೇತ್ರದಲ್ಲಿ ಇದೊಂದೇ ಆರೋಗ್ಯ ಕೇಂದ್ರವಾಗಿದೆ. ಸುತ್ತಲಿನ 22 ಗ್ರಾಮಗಳ ಜನರಿಗೆ ಚಿಕ್ಕಪುಟ್ಟ ಸಮಸ್ಯೆಗಳಿಗಾಗಿ ಇಲ್ಲಿಗೆ ಬರುವುದು ಅನಿವಾರ್ಯವಾಗಿದೆ. ಆದರೂ, ಇಲ್ಲಿನ ಸಮಸ್ಯೆ ಬಗೆಹರಿಸುವಲ್ಲಿ ಸಂಬಂಧಿತರು ಗಮನ ಹರಿಸಿಲ್ಲ ಎಂದು ಗ್ರಾಮಸ್ಥರು ದೂರುತ್ತಾರೆ.



ಕೇಂದ್ರದಲ್ಲಿ ಶೌಚಾಲಯದ ವ್ಯವಸ್ಥೆ ಕಲ್ಪಿಸಬೇಕು. ಅರ್ಧಕ್ಕೆ ನಿಂತಿರುವ ಆವರಣಗೋಡೆಯ ಕೆಲಸ ಪೂರ್ಣಗೊಳಿಸಬೇಕು ಎಂದೂ ಒತ್ತಾಯಿಸಿದ್ದಾರೆ.ಇಲ್ಲಿದ್ದ ವೈದ್ಯರು ಉನ್ನತ ಶಿಕ್ಷಣಕ್ಕಾಗಿ ಬೇರೆಡೆ ಹೋಗಿದ್ದರಿಂದ ಸ್ಥಾನ ಖಾಲಿಯಾಗಿದೆ. ಕಾಯಂ ವೈದ್ಯರ ನೇಮಕಕ್ಕೆ ಮನವಿ ಮಾಡಲಾಗಿದೆ. ಅದುವರೆಗೆ ಬೇರೆಡೆಯಿಂದ ವೈದ್ಯರನ್ನು ನಿಯೋಜನೆ ಮೇಲೆ ಕಳುಹಿಸಲಾಗುವುದು ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ.ಶರಣಪ್ಪ ಮುಡಬಿಕರ್ ಹೇಳಿದ್ದಾರೆ.



ಇಲ್ಲಿನ ಸರ್ಕಾರಿ ಪ್ರೌಢಶಾಲೆಗೆ ಸ್ವಂತ ಕಟ್ಟಡವಿಲ್ಲದೆ ಪ್ರಾಥಮಿಕ ಶಾಲೆಯ ಹಳೆಯ ಕಟ್ಟಡದಲ್ಲಿಯೇ ತರಗತಿಗಳನ್ನು ನಡೆಸಲಾಗುತ್ತಿದೆ. ಹೊಸ ಕಟ್ಟಡ ನಿರ್ಮಾಣವಾದರೂ ಅಲ್ಪಸ್ವಲ್ಪ ಕೆಲಸ ಬಾಕಿಯಿದೆ. ಆದ್ದರಿಂದ ಅದನ್ನು ಹಸ್ತಾಂತರಿಸಲಾಗಿಲ್ಲ. ಆವರಣಗೋಡೆಗೆ ಗೇಟ್ ಅಳವಡಿಸಬೇಕಾಗಿದೆ. ಆವರಣ ಸಮತಟ್ಟು ಮಾಡಬೇಕಾಗಿದೆ. ಈ ಕೆಲಸ ಶೀಘ್ರದಲ್ಲಿ ಪೂರ್ಣಗೊಳಿಸಬೇಕು ಎಂದು ಶಂಕರರಾವ ಆಗ್ರಹಿಸಿದ್ದಾರೆ.



ಗ್ರಾಮದ ಕೆಲ ಓಣಿಗಳಲ್ಲಿ ಸಿಮೆಂಟ್ ರಸ್ತೆಗಳಿಲ್ಲ. ಕಾರಣ ರಸ್ತೆಗಳು ಕೆಸರು ಗದ್ದೆ ಆಗುತ್ತಿವೆ. ಚರಂಡಿ ವ್ಯವಸ್ಥೆ ಇಲ್ಲದೆ ನೀರು ಎಲ್ಲೆಂದರಲ್ಲಿ ಹರಡಿ ಅಸ್ವಚ್ಛತೆ ತಾಂಡವವಾಡುತ್ತಿದೆ. ಆದ್ದರಿಂದ ಚರಂಡಿ ನಿರ್ಮಿಸಬೇಕು. 9ನೇ ರಾಷ್ಟ್ರೀಯ ಹೆದ್ದಾರಿಯಿಂದ ಗ್ರಾಮದ ವರೆಗಿನ ಮತ್ತು ಇಲ್ಲಿಂದ ಜಾಜನಮುಗಳಿಗೆ ಹೋಗುವ ರಸ್ತೆ ತೀರ ಹದಗೆಟ್ಟಿದೆ. ಡಾಂಬರು ಕಿತ್ತುಹೋಗಿದ್ದರಿಂದ ಜಲ್ಲಿಕಲ್ಲುಗಳು ಕಾಣುತ್ತಿವೆ. ಎಲ್ಲೆಡೆ ತಗ್ಗುಗುಂಡಿಗಳು ಬಿದ್ದಿವೆ.



ಕಾರಣ ವಾಹನ ಸಂಚಾರ ಅಷ್ಟೇ ಅಲ್ಲದೆ ನಡೆದುಕೊಂಡು ಹೋಗುವುದಕ್ಕೂ ಸಂಕಟಪಡಬೇಕಾಗಿದೆ. ಆದ್ದರಿಂದ ರಸ್ತೆ ದುರುಸ್ತಿಗೊಳಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.ರಸ್ತೆ ಸುಧಾರಣೆಗೆ ಅನುದಾನ ಕಲ್ಪಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್ ವಿಭಾಗದ ಎಇಇ ಬಾಬು ರಾಠೋಡ ತಿಳಿಸಿದ್ದಾರೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.