ಚಂದಪದ್ಯ:ಮಳೆಹನಿ ರಪರಪ ಸುರಿದಾಗ
ರಪ ರಪ ರಪ ರಪ
ಮಳೆ ಹನಿ ಸುರಿದಾಗ
ಮಣ್ಣದು ಮೆಲ್ಲಗೆ ಅರಳುವುದು
ನೆಲವು ಘಮ ಘಮ ಅನ್ನುವುದು
ನೆಲದಲಿ ಹುದುಗಿದ ಬೀಜಗಳೆಲ್ಲ
ಪ್ರಶ್ನಾರ್ಥಕದಂತಾಗುವುವು
ರೈತನ ಮುಂದೆ ಪ್ರಶ್ನೆಯ ಕೇಳುತ
ಉತ್ತರ ಹುಡುಕಲು ಹಚ್ಚುವುವು
ರಪ ರಪ ರಪ ರಪ
ಮಳೆಹನಿ ಸುರಿದಾಗ
ಕುವೆಂಪು ರಚಿಸಿದ ರೈತನ ಹಾಡು
ಹೊಲದಲಿ ಅಲೆಯಾಗೇಳುವುದು
ರೈತನ ಮೊಗದಲಿ ನಗೆಯುಕ್ಕುವುದು
ಮಾತಲಿ ಹೂವೇ ಸುರಿಯುವುದು
ಕನಸುಗಳೆಷ್ಟೋ ಗರಿಗಳ ಬಿಚ್ಚಿ
ನವಿಲಿನ ನರ್ತನ ನಡೆಯುವುದು
ರಪ ರಪ ರಪ ರಪ
ಮಳೆಹನಿ ಸುರಿದಾಗ
ಕಾಡಿಗೆ ಕಾಡೇ ಹಾಡುವುದು
ನಾಡೇ ಸಂತಸದಿ ಕುಣಿಯುವುದು
ನದಿ ನದ ಸೊಕ್ಕಿ ಹರಿಯುವುವು
ಝರಿಗಳು ವೀಣೆಯ ನುಡಿಸುವುವು
ಕೆರೆಕಟ್ಟೆಗಳು ತುಂಬುವುವು
ತರುಕರು ಖುಷಿಯಲಿ ಕುಣಿಯುವುವು
ರಪ ರಪ ರಪ ರಪ
ಮಳೆಹನಿ ಸುರಿದಾಗ
ಆಗಸದಲಿ ಕಾಮನಬಿಲ್ಲು ಮೂಡುವುದು
ಭೂದೇವಿ ನಾಚುತ ನಿಲ್ಲುವಳು
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.