ಸೋಮವಾರ, ಜನವರಿ 20, 2020
18 °C

ಚಪ್ಪಲ್ ಧರಿಸದ ಬರಿಗಾಲ ಭೀಮಸಿ!

ಪ್ರಜಾವಾಣಿ ವಾರ್ತೆ ರಾಹುಲ ಬೆಳಗಲಿ Updated:

ಅಕ್ಷರ ಗಾತ್ರ : | |

ಚಿಕ್ಕಬಳ್ಳಾಪುರ: ಕಳೆದ 70 ವರ್ಷ ಗಳಿಂದ ಅವರು ಚಪ್ಪಲಿ ತೊಟ್ಟಿಲ್ಲ. ಚಹಾ, ಕಾಫಿ ಮತ್ತು ಹಾಲು ಸೇವಿಸಿಲ್ಲ. ಉತ್ತಮ ಗುಣಮಟ್ಟದ ಉಡುಪು ಗಳನ್ನು ತೊಟ್ಟಿಲ್ಲ. ಅಷ್ಟೇ ಅಲ್ಲ, ಇಳಿವಯಸ್ಸಿನಲ್ಲೂ ಹೋರಾಟದ ದಾರಿಯಿಂದ ಅವರು ವಿಮುಖಗೊಂಡಿಲ್ಲ. ಹೋರಾಟದ ವಿಷಯ ಪ್ರಸ್ತಾಪಿಸಿದರೆ ಸಾಕು, `ನಮ್ಮ ದಿನಗಳು ಬಂದೇ ಬರ‌್ತಾವರ‌್ರೀ~ ಎಂದು ಆಶಾಭಾವನೆಯಿಂದ ನುಡಿಯುತ್ತಾರೆ.`ಹೋರಾಟವೇ ನನ್ನ ಬದುಕು~ ಎಂದು ನಿರ್ಭಯವಾಗಿ ಹೇಳುವ ಈ ವಿಶಿಷ್ಟ ವ್ಯಕ್ತಿ ಭೀಮಸಿ ಕಲಾದಗಿ. ಕಿರಿಯ ವಯಸ್ಸಿನಿಂದಲೇ ಎಡಪರ ಚಿಂತನೆ ಮತ್ತು ಹೋರಾಟದೊಂದಿಗೆ ಗುರುತಿಸಿಕೊಂಡು ಬಂದಿರುವ ಅವರು, `ಜನಪರ ಮತ್ತು ರೈತಪರ ವಿಷಯಗಳಲ್ಲಿ ಈಗಿನವರೆಗೆ ರಾಜಿ ಮಾಡಿಕೊಂಡಿಲ್ಲ. ಮಾಡಿಕೊಳ್ಳಂಗೂ ಇಲ್ರಿ~ ಎನ್ನುತ್ತಾರೆ.ನಗರದಲ್ಲಿ ನಡೆಯುತ್ತಿರುವ ಸಿಪಿಎಂ 20ನೇ ರಾಜ್ಯ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ತಲೆಗೆ ಗಾಂಧಿ ಟೋಪಿ ತೊಟ್ಟು ಬರಿಗಾಲಲ್ಲೇ ಬಂದಿರುವ ಅವರು, `ನಾ ಇರೋದ ಹಿಂಗ್‌ರ‌್ರೀ. ಎಷ್ಟೋ ಮಂದಿ ಚಪ್ಪಲಿ ಹಾಕ್ಕೊಳಿಕ್ಕ ಹೇಳಿದ್ರೂ. ಆದ್ರ ನಾನ್ ಮಾತ್ರ ಒಪ್ಪಲಿಲ್ರಿ~ ಎಂದರು. ಇದಕ್ಕೆ ಕಾರಣವೇನು ಎಂದು ಪ್ರಶ್ನಿಸಿದರೆ, ತಮ್ಮದೇ ಆದ ಶೈಲಿಯಲ್ಲಿ ಉತ್ತರಿಸುತ್ತಾರೆ. `ನೋಡ್ರಿ ಬಹಳಷ್ಟು ಮಂದಿ ಕಡೆ ಹಾಕ್ಕೊಳಿಕೆ ಚಪ್ಪಲ್ ಇಲ್ಲ, ಉಡಲಾಕ್ ಬಟ್ಟಿ ಇಲ್ಲ. ಹಿಂಗಿರುವಾಗ ನಾವು ಒಬ್ಬರೇ ಅವೆಲ್ಲ ಹಾಕ್ಕೊಂಡು ಮೆರದಾಡಿದ್ರ ಏನ್ ಸುಖ ಐತಿ. ಅದಕ್ಕ ನಾನ್ ಚಪ್ಪಲಿ ಹಾಕ್ಕೊಳಂಗಿಲ್ಲ~ ಎಂದು ಸಮರ್ಥಿಸಿಕೊಳ್ಳುತ್ತಾರೆ.ಉತ್ತರ ಕರ್ನಾಟಕದ ಭಾಷಾ ಸೊಗಡಿನಲ್ಲಿ ಮಾತನಾಡುವ ಭೀಮಸಿ ಕಲಾದಗಿ ಅವರು ವಿಜಾಪುರ ಜಿಲ್ಲೆಯ ಸಿಪಿಎಂ ನಾಯಕ. ಅವರು ಓದಿದ್ದು ಕೇವಲ ಆರನೇ ತರಗತಿ. ಆದರೆ ಕಿರಿಯ ವಯಸ್ಸಿನಲ್ಲೇ `ಸಮಾಜವಾದ~ ಎಂಬ ಪುಸ್ತಕವನ್ನು ಬರೆದು ಹೊರತಂದವರು. ಇವರು ಇತರರಂತೆ ಸಾಮಾನ್ಯರೇನಲ್ಲ. ತಾವು ಚಪ್ಪಲಿ ತೊಡದಿದ್ದರೂ ಅತಿ ಯಾದ ಭ್ರಷ್ಟಾಚಾರದ ಆರೋಪ ಎದುರಿಸುತ್ತಿದ್ದ ತಮ್ಮ ಜಿಲ್ಲೆಯ ಪೌರಾ ಯುಕ್ತರಿಗೆ ಚಪ್ಪಲಿಹಾರ ತೊಡಿಸಿ ಪ್ರತಿಭಟನೆ ನಡೆಸಿದ್ದರು.ಮುಳವಾಡ ಯಾತ ನೀರಾವರಿ ಯೋಜನೆ ಅನುಷ್ಠಾನ ಜಾರಿಗೊಳಿಸುವಂತೆ ಸುಮಾರು ಒಂದು ತಿಂಗಳ ಕಾಲ ಉಪವಾಸ ಸತ್ಯಾಗ್ರಹ ಮಾಡಿದರು. ನೀರಾವರಿ ಯೋಜನೆಗೆ ಸರ್ಕಾರ ಒಪ್ಪಿ ಅನುಷ್ಠಾನಗೊಳಿಸಲು ಮುಂದಾದಾಗ, ಮುಖ್ಯಮಂತ್ರಿ, ಸಚಿವರು, ಶಾಸಕರ ಬದಲು ಅಲ್ಲಿನ ಜನರು ಭೀಮಸಿ ಕಲಾದಗಿ ಅವರಿಂದಲೇ ಚಾಲನೆ ಸಿಗುವಂತೆ ಮಾಡಿದರು.ಬೇರೆ ಪಕ್ಷಗಳಿಗೆ ಸೇರುವ ಬದಲು ಸಿಪಿಎಂನಲ್ಲೇ ಯಾಕೆ ಉಳಿದುಕೊಂಡಿದ್ದೀರಿ ಎಂದು ಪ್ರಶ್ನಿಸಿದರೆ, `ಬಡವರು, ದಲಿತರು, ಶೋಷಣೆಗೆ ಒಳಗಾದವರ ಪರವಾಗಿ ಸಿಪಿಎಂ ಬಹಳ ವರ್ಷಗಳಿಂದ ಹೋರಾಟ ಮಾಡಕತೈತ್ರಿ. ಅದಕ್ಕ ಪಕ್ಷದ ಮ್ಯಾಲ ನಂಬಿಕಿ ಇಟ್ಟು ಇಲ್ಲೇ ಉಳ್ಕೊಂಡೀನಿ~ ಎನ್ನುತ್ತಾರೆ.

 

`ಸಾಹೇಬ್ರ, ನಾನ್ ಇರೋದ್ ಹಿಂಗ್~

ಚಿಕ್ಕಬಳ್ಳಾಪುರ: ನಗರದಲ್ಲಿ ನಡೆಯುತ್ತಿರುವ ಸಿಪಿಎಂ 20ನೇ ರಾಜ್ಯ ಸಮ್ಮೇಳನಕ್ಕೆ ವಿವಿಧ ಜಿಲ್ಲೆಗಳಿಂದ ಒಟ್ಟು ಪಕ್ಷದ 420 ಪ್ರತಿನಿಧಿಗಳು ಮತ್ತು 50 ಮಂದಿ ವೀಕ್ಷಕರು ಆಗಮಿಸಿದ್ದಾರೆ. ಅವರಲ್ಲಿ ಬಹುತೇಕ ಮಂದಿ ಇಂಗ್ಲಿಷ್ ಬಲ್ಲವರು ಮತ್ತು ಬಗೆಬಗೆಯ ಪುಸ್ತಕಗಳನ್ನು ಓದಿದವರು. ಆದರೆ ಅವರೆಲ್ಲರಗಿಂತ ಭಿನ್ನ ವಾದ ಪ್ರತಿನಿಧಿಯೊಬ್ಬರು ಗುಲ್ಬರ್ಗಾ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ದೇಗಲ ಮಡಿ ಎಂಬ ಗ್ರಾಮದಿಂದ ಬಂದಿದ್ದಾರೆ. ಅವರ ಹೆಸರು ತುಕಾರಾಮ ತಳವಾರ ದೇಗಲಮಡಿ.ಅಪ್ಪಟ ಕೃಷಿಕರಾಗಿರುವ ಅವರು ತಲೆಗೊಂದು ಬಿಳಿ ಪೇಟ ಮತ್ತು ಉದ್ದನೆಯ ಪಂಚೆ ಉಟ್ಟುಕೊಂಡು ಸಿಪಿಎಂ ಸಮ್ಮೇಳನಕ್ಕೆ ಬಂದಿದ್ದಾರೆ. ನೀವು ಇರೋದೆ ಹೀಗೇನಾ? ಕೃಷಿ ಚಟುವಟಿಕೆಯಲ್ಲೇ ತೊಡಗಿಕೊಂಡಿದ್ದೀರಾ ಎಂದು ಕೇಳಿದರೆ, `ಸಾಹೇಬ್ರ, ನಾನ್ ಹಿಂಗ ಇದೀನಿ. ನಾನ್ ಪ್ರಾಂತ ರೈತ ಸಂಘ ಅಧ್ಯಕ್ಷ ಆಗಿದ್ದೇರಿ. 20 ವರ್ಷದಿಂದ ಸಿಪಿಎಂನ್ಯಾಗ ಅದೀನ್ರಿ. ಬ್ಯಾರೆ ಪಕ್ಷಕ್ಕ ಹೋಗಾಕ್ ಮನಸ್ಸಿಲ್ರಿ~ ಎಂದರು.ಚಿಕ್ಕಬಳ್ಳಾಪುರಕ್ಕೆ ಪ್ರಥಮ ಬಾರಿಗೆ ಬಂದಿರುವ ಅವರು, `ಹದಿನೈದು ವರ್ಷ ಒಂದು ಪಕ್ಷದಾಗ, ಇನ್ನೈದು ವರ್ಷ ಬ್ಯಾರೆ ಪಕ್ಷದಾಗ ಇದ್ದೆ. ಕೊನೀಗ ಸಿಪಿಎಂ ಸೇರಿಕೊಂಡೆ. ಸಮ್ಮೇಳನಕ್ಕೆ ನೀನ ಹೋಗಬೇಕ್ ಎಂದು ನಮ್ಮ ಜಿಲ್ಲಾ ಮಂದಿ ನನ್ ಆಯ್ಕೆ ಮಾಡಿ ಕಳಿಸ್ಯಾರ‌್ರಿ~ ಎಂದರು.

 

ಪ್ರತಿಕ್ರಿಯಿಸಿ (+)