ಗುರುವಾರ , ಮೇ 28, 2020
27 °C

ಚರ್ಚೆಗೆ ನಕಾರ ಸದನದಲ್ಲಿ ಅಬ್ಬರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಅಕ್ರಮ ಗಣಿಗಾರಿಕೆ, ಭ್ರಷ್ಟಾಚಾರ, ಭೂ ಹಗರಣಗಳ ಬಗ್ಗೆ ನಿಲುವಳಿ ಸೂಚನೆಯಡಿ ಚರ್ಚೆಗೆ ಅವಕಾಶ ಕೊಡಬೇಕು ಮತ್ತು ಹಗರಣದ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಪ್ರತಿಪಕ್ಷಗಳ ಸದಸ್ಯರು ಧರಣಿ ನಡೆಸಿದ ಪರಿಣಾಮ ವಿಧಾನ ಮಂಡಲದ ಉಭಯ ಸದನಗಳಲ್ಲಿ ಸೋಮವಾರ ಯಾವುದೇ ಕಲಾಪ ನಡೆಯಲಿಲ್ಲ.ಉಭಯ ಸದನಗಳಲ್ಲಿ ಕಲಾಪ ಆರಂಭವಾಗುತ್ತಿದ್ದಂತೆಯೇ ನಿರೀಕ್ಷೆಯಂತೆ ಪ್ರತಿಪಕ್ಷಗಳ ಸದಸ್ಯರು ಭ್ರಷ್ಟಾಚಾರ, ಭೂ ಹಗರಣ, ಅಕ್ರಮ ಗಣಿಗಾರಿಕೆ ಬಗ್ಗೆ ನಿಲುವಳಿ ಸೂಚನೆ ಮಂಡಿಸಲು ಅನುಮತಿ ನೀಡುವಂತೆ ಕೋರಿದರು. ಈ ಪ್ರಕರಣಗಳನ್ನು ಸಿಬಿಐ ತನಿಖೆಗೆ ವಹಿಸಬೇಕು ಹಾಗೂ ಯಡಿಯೂರಪ್ಪ ರಾಜೀನಾಮೆ ನೀಡಬೇಕು ಎಂದು ಪಟ್ಟುಹಿಡಿದರು.ವಿಧಾನ ಪರಿಷತ್ತಿನಲ್ಲೂ ಪ್ರಶ್ನೋತ್ತರ ಮೊದಲೋ, ನಿಲುವಳಿ ಸೂಚನೆ ಮೇಲಿನ ಚರ್ಚೆ ಮೊದಲೋ ಎಂಬ ಪ್ರಶ್ನೆಯೇ ದಿನದ ಕಲಾಪವನ್ನು ನುಂಗಿಹಾಕಿತು. ಪ್ರಶ್ನೋತ್ತರಕ್ಕೇ ಮೊದಲ ಅವಕಾಶ ಎಂಬ ಸಭಾಪತಿಯವರ ರೂಲಿಂಗ್ ಬಳಿಕವೂ ಗೊಂದಲಕ್ಕೆ ತೆರೆ ಬೀಳಲಿಲ್ಲ. ನಿಲುವಳಿ ಸೂಚನೆ ಮಂಡನೆಗೆ ಅವಕಾಶ ಕೋರಿ ಪ್ರತಿಪಕ್ಷಗಳ ಸದಸ್ಯರು ಧರಣಿ ನಡೆಸಿದ ಹಿನ್ನೆಲೆಯಲ್ಲಿ ಸದನದ ಕಲಾಪವನ್ನು ಮಂಗಳವಾರಕ್ಕೆ ಮುಂದೂಡಲಾಯಿತು.ಬೆಳಿಗ್ಗೆ ಸದನ ಸೇರುತ್ತಿದ್ದಂತೆ ವಿಧಾನ ಸಭಾಧ್ಯಕ್ಷ ಕೆ.ಜಿ.ಬೋಪಯ್ಯ ಪ್ರಶ್ನೋತ್ತರ ಕಲಾಪ ಕೈಗೆತ್ತಿಕೊಂಡರು. ಇದಕ್ಕೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರೋಧ ವ್ಯಕ್ತಪಡಿಸಿ, ಯಡಿಯೂರಪ್ಪ ನೇತೃತ್ವದ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದ್ದು, ಅದರ ವಿರುದ್ಧ ನಿಯಮ ನಿಲುವಳಿ ಸೂಚನೆ ಮಂಡನೆಗೆ ಅವಕಾಶ ಬೇಕೆಂದು ಒತ್ತಾಯಿಸಿದರು.‘ಯಡಿಯೂರಪ್ಪ ಸರ್ಕಾರ ಅಧಿಕಾರ ವಹಿಸಿಕೊಂಡ ದಿನದಿಂದಲೂ ಸ್ವಜನ ಪಕ್ಷಪಾತ, ಭೂಹಗರಣದಂತಹ ಭ್ರಷ್ಟಾಚಾರದಲ್ಲಿ ತೊಡಗಿದ್ದು, ಇದರಿಂದಾಗಿ ರಾಜ್ಯದ ಬೊಕ್ಕಸಕ್ಕೆ ಸಾವಿರಾರು ಕೋಟಿ ರೂಪಾಯಿ ನಷ್ಟವಾಗಿದೆ. ಹೀಗಾಗಿ ಮುಖ್ಯಮಂತ್ರಿ ಮತ್ತು ಅವರ ಮಂತ್ರಿಮಂಡಲ ಕೂಡಲೇ ರಾಜೀನಾಮೆ ನೀಡಬೇಕು. ಈ ವಿಷಯವನ್ನು ನಿಲುವಳಿ ಸೂಚನೆ ರೂಪದಲ್ಲಿ ಚರ್ಚಿಸಲು ಇಂದೇ ಅವಕಾಶ ನೀಡಬೇಕು’ ಎಂದು ಸಿದ್ದರಾಮಯ್ಯ ಆಗ್ರಹಪಡಿಸಿದರು.ಇದಕ್ಕೆ ಆಡಳಿತ ಪಕ್ಷಗಳ ಸದಸ್ಯರಿಂದ ವ್ಯಾಪಕ ವಿರೋಧ ವ್ಯಕ್ತವಾಯಿತು. ಸಚಿವರಾದ ಸುರೇಶಕುಮಾರ್, ಬಿ.ಎನ್.ಬಚ್ಚೇಗೌಡ, ಬಸವರಾಜ ಬೊಮ್ಮಾಯಿ ಸೇರಿದಂತೆ ಇತರರು ಪ್ರಶ್ನೋತ್ತರ ಕಲಾಪ ಕೈಗೆತ್ತಿಕೊಳ್ಳುವಂತೆ ಮನವಿ ಮಾಡಿದರು.ಗದ್ದಲದ ನಡುವೆಯೇ ಸಿದ್ದರಾಮಯ್ಯ ಅವರು ನಿಲುವಳಿ ಸೂಚನೆ ಮಂಡನೆಗೆ ಏಕೆ ಅವಕಾಶ ನೀಡಬೇಕು ಎನ್ನುವುದರ ಮೇಲೆ ತಮ್ಮ ವಿಚಾರ ಮಂಡಿಸಲು ಆರಂಭಿಸಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಚಿವ ಸುರೇಶಕುಮಾರ್ ಅವರು ತುರ್ತಾದ ಮತ್ತು ನಿರ್ದಿಷ್ಟ ವಿಷಯಗಳನ್ನು ಮಾತ್ರ ನಿಯಮ 60ರಡಿ ಕೈಗೆತ್ತಿಕೊಳ್ಳಬಹುದು. ಆದರೆ, ಪ್ರತಿಪಕ್ಷಗಳು ಮಂಡಿಸಿರುವ ನಿಲುವಳಿ ಸೂಚನೆ ನಿರ್ದಿಷ್ಟ ವಿಷಯವನ್ನು ಹೊಂದಿಲ್ಲ. ಭ್ರಷ್ಟಾಚಾರ ಎಂದು ಸಾಮಾನ್ಯವಾಗಿ ಹೇಳಲಾಗಿದೆ. ಹೀಗಾಗಿ ಇದು ನಿಯಮ 60ರ ಅಡಿ ಚರ್ಚಿಸಲು ಸಾಧ್ಯ ಇಲ್ಲ. ಅವಕಾಶ ನೀಡಬೇಡಿ ಎಂದು ಕ್ರಿಯಾಲೋಪ ಎತ್ತಿದರು.ಇದಕ್ಕೆ ಸಿದ್ದರಾಮಯ್ಯ, ಟಿ.ಬಿ.ಜಯಚಂದ್ರ, ಜೆಡಿಎಸ್‌ನ ಎಚ್.ಡಿ.ರೇವಣ್ಣ ಸೇರಿದಂತೆ ಇತರರು ಆಕ್ಷೇಪಿಸಿದರು. ಇದು ಯಾವುದೇ ಕಾರಣಕ್ಕೂ ಕ್ರಿಯಾಲೋಪ ಆಗುವುದಿಲ್ಲ. ಚರ್ಚೆಗೆ ಅವಕಾಶ ನೀಡಬೇಕೆಂದು ಪಟ್ಟುಹಿಡಿದರು.‘ಭ್ರಷ್ಟಾಚಾರಕ್ಕಿಂತ ದೊಡ್ಡ ವಿಷಯ ಯಾವುದು? ಇದಕ್ಕಿಂತ ತುರ್ತು ಇನ್ನೇನು? ಎಂದು ಪ್ರತಿಪಕ್ಷಗಳ ಸದಸ್ಯರು ಪಟ್ಟುಹಿಡಿದರು. ಪ್ರತಿಪಕ್ಷಗಳನ್ನೂ ಮೀರಿಸುವ ಧಾಟಿಯಲ್ಲಿ ಆಡಳಿತ ಪಕ್ಷದ ಅನೇಕ ಸದಸ್ಯರು ಎದ್ದುನಿಂತುಕೊಂಡು ಪದೇ ಪದೇ ಪ್ರತಿಪಕ್ಷಗಳ ವಿರುದ್ಧ ದಾಳಿ ಮುಂದುವರಿಸಿದರು. ಈ ಹಿಂದಿನ ಸರ್ಕಾರಗಳ ಅವಧಿಯಲ್ಲಿ ನಡೆದ ಭೂಮಿ ಡಿನೋಟಿಫಿಕೇಷನ್‌ಗೆ ಸಂಬಂಧಪಟ್ಟ ದಾಖಲೆಗಳ ಪ್ರತಿಗಳನ್ನು ತೋರಿಸಿ ಸವಾಲೊಡ್ಡಿದರು. ಇದನ್ನು ಆಕ್ಷೇಪಿಸಿ ವಿರೋಧ ಪಕ್ಷಗಳ ಸದಸ್ಯರು ಧರಣಿಗೆ ಮುಂದಾದರು. ಸ್ಪೀಕರ್ ಸೂಚನೆ ಮೇರೆಗೆ ಆಡಳಿತ ಪಕ್ಷದ ಸದಸ್ಯರು ಸುಮ್ಮನೆ ಕುಳಿತರು.‘ಭ್ರಷ್ಟಾಚಾರ ಬಯಲಾಗ್ತದೆ. ಇವರ ಬಣ್ಣ ಬಯಲಾಗುತ್ತದೆ ಎಂದು ಆಡಳಿತ ಪಕ್ಷದ ಸದಸ್ಯರು ಈ ರೀತಿ ಅಡ್ಡಿ ಪಡಿಸುತ್ತಿದ್ದಾರೆ’ ಎಂದು ಸಿದ್ದರಾಮಯ್ಯ ಟೀಕಿಸಿದರು. ‘ಹಗರಣಗಳ ಬಗ್ಗೆ ಬೀದಿಯಲ್ಲಿ ಮಾತಾಡುವುದಲ್ಲ, ಬನ್ನಿ ವಿಧಾನಸೌಧಕ್ಕೆ. ಚರ್ಚೆ ಮಾಡೋಣ ಎಂದು ಮುಖ್ಯಮಂತ್ರಿಗಳೇ ಕರೆ ನೀಡಿದ್ದಾರಲ್ಲಾ. ಚರ್ಚೆಗೆ ಸಿದ್ಧರಾಗಿ ಬಂದಿದ್ದೇವೆ. ಚರ್ಚೆ ಮಾಡೋಣ. ಅದು ಬಿಟ್ಟು ಕಾನೂನಿನ ರಕ್ಷಣೆಗೆ ಏಕೆ ಮೊರೆ ಹೋಗುತ್ತೀರಿ?’ ಎಂದು ಜೆಡಿಎಸ್ ನಾಯಕ ಎಚ್.ಡಿ.ರೇವಣ್ಣ ಸವಾಲು ಹಾಕಿದರು.ಆಡಳಿತ ಪಕ್ಷದ ಸದಸ್ಯರು ಮತ್ತೆ ಎದ್ದುನಿಂತು ಆಕ್ಷೇಪಿಸಿದರು. ಗಡ್ಕರಿ, ಸೋನಿಯಾ ಹೆಸರುಗಳೆಲ್ಲ ಅತ್ತಿತ್ತ ಪ್ರಯೋಗ ಆದವು. ‘ಸಂಪುಟದಲ್ಲಿ 6 ಸ್ಥಾನಗಳು ಖಾಲಿ ಇವೆ. ಅದರ ಮೇಲೆ ಕಣ್ಣಿಟ್ಟು ಇಷ್ಟೆಲ್ಲ ಪೈಪೋಟಿ ನಡೆಸ್ತಾ ಇದ್ದೀರಾ’ ಎಂದು ಬಿಜೆಪಿ ಸದಸ್ಯರನ್ನು ಕಾಂಗ್ರೆಸ್ಸಿನ ಡಿ.ಕೆ.ಶಿವಕುಮಾರ್ ಛೇಡಿಸಿದರು.ಇಷ್ಟಾದರೂ ನಿಲುವಳಿ ಸೂಚನೆ ಮೇಲೆ ಚರ್ಚೆಗೆ ಅವಕಾಶ ಕೊಡಬೇಕೇ ಬೇಡವೇ ಎಂಬ ಪ್ರಾಥಮಿಕ ಚರ್ಚೆಗಳಿಂದ ಹೊರಬರಲಾಗಲೇ ಇಲ್ಲ. ಸಚಿವ ಸುರೇಶ್‌ಕುಮಾರ್, ಸಿದ್ದರಾಮಯ್ಯ, ಟಿ.ಬಿ.ಜಯಚಂದ್ರ ಇವರೆಲ್ಲರೂ ವಿಧಾನಮಂಡಲ ಕಲಾಪದ ಪುಸ್ತಕ ಮತ್ತು ಸಂಸತ್ತಿನ ಕಾರ್ಯಕಲಾಪಕ್ಕೆ ಸಂಬಂಧಪಟ್ಟ ಕೌಲ್ ಅಂಡ್ ಶಕ್ದರ್ ಪುಸ್ತಕದ ನಿಯಮಾವಳಿಗಳನ್ನು ಪ್ರಸ್ತಾಪಿಸುತ್ತ ಹೋದರು. ವಾದ-ಪ್ರತಿವಾದಗಳಲ್ಲೇ ಕಾಲ ಕಳೆಯಿತು.‘ಈಚೆಗೆ ಸಂಭವಿಸಿದ ತುರ್ತು ಘಟನೆಗಳ ಬಗ್ಗೆ ನಿಲುವಳಿಯಲ್ಲಿ ಸೂಚಿಸಬೇಕು. ನೀವು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ನಡೆದಿರುವ ಭ್ರಷ್ಟಾಚಾರಗಳ ಬಗ್ಗೆ ಚರ್ಚೆಗೆ ಒತ್ತಾಯಿಸಿದರೆ ಹೇಗೆ?’ ಎಂದು ಸ್ಪೀಕರ್ ಪ್ರಶ್ನಿಸಿದರು. ‘ಕಳೆದ ಅಧಿವೇಶನ ನಡೆದ ಬಳಿಕದ ವಿದ್ಯಮಾನಗಳ ಬಗ್ಗೆ ಉಲ್ಲೇಖಿಸಿದ್ದೇವೆ’ ಎಂದು ಸಿದ್ದರಾಮಯ್ಯ ಸಮಜಾಯಿಷಿ ನೀಡಿದರು. ‘ನ್ಯಾಯದ ತಕ್ಕಡಿ ಕೆಳಗೆ ಕುಳಿತುಕೊಂಡು ಸ್ವಲ್ಪ ವಿವೇಚನೆಯಿಂದ ವರ್ತಿಸಿ’ ಎಂದು ಜಯಚಂದ್ರ ಸ್ಪೀಕರ್‌ಗೆ ಮನವಿ ಮಾಡಿದರು. ‘ಹೌದು. ನ್ಯಾಯದ ತಕ್ಕಡಿ ಕೆಳಗೇ ಕೂತಿದ್ದೇನೆ. ಎರಡೂ ಕಡೆ ವಾದಗಳನ್ನು ಆಲಿಸಿ ನ್ಯಾಯಾಂಗದ ದೃಷ್ಟಿಯಿಂದ ನೋಡಿ ತೀರ್ಪು ನೀಡುತ್ತೇನೆ’ ಎಂದು ಸ್ಪೀಕರ್ ಉತ್ತರಿಸಿದರು.ಈ ಮಧ್ಯೆ ಗಣಿ ವಿವಾದ ಕುರಿತ ಸಿಇಸಿ ವರದಿ, ಲೋಕಾಯುಕ್ತ ವರದಿ, ರಾಜ್ಯಪಾಲರ ಪತ್ರದ ಬಗ್ಗೆಯೂ ಕಾವೇರಿದ ಚರ್ಚೆ ಆಯಿತು. ಭ್ರಷ್ಟಾಚಾರವೇ ತುರ್ತು ವಿಷಯ. ಈ ಬಗ್ಗೆ ಚರ್ಚೆ ಆಗಬೇಕು ಎಂದು ವಿರೋಧ ಪಕ್ಷಗಳ ಸದಸ್ಯರು ಒತ್ತಾಯಿಸಿದರೆ, ರಾಜಕೀಯ ಭಾಷಣಗಳಿಗೆ ಸದನದಲ್ಲಿ ಅವಕಾಶ ಇಲ್ಲ ಎಂದು ಸಚಿವ ಸುರೇಶ್‌ಕುಮಾರ್ ಪ್ರತಿವಾದ ಮಂಡಿಸಿದರು. ಕಾನೂನು ಪ್ರಕಾರವೇ ಚರ್ಚೆ ಆಗಬೇಕು ಎಂದು ಸಿದ್ದರಾಮಯ್ಯ ಪಟ್ಟು ಹಿಡಿದರೆ, ಕಾನೂನು ಬಿಟ್ಟು ಏನೂ ಮಾಡಲ್ಲ ಎಂದು ಸ್ಪೀಕರ್ ಉತ್ತರಿಸಿದರು. ‘ಕಾಂಗ್ರೆಸ್ ಕಾನೂನು’ ಇಲ್ಲಿ ನಡೆಯಲ್ಲ ಎಂದು ಸಚಿವರು ಚುಚ್ಚಿದರೆ, ‘ಬಿಜೆಪಿ ಕಾನೂನು’ ಆಗ್ತದೋ ಎಂದು ಕಾಂಗ್ರೆಸ್ಸಿನ ಸಚೇತಕ ಅಭಯಚಂದ್ರ ಜೈನ್ ಸವಾಲು ಹಾಕಿದರು.ಸದನದಲ್ಲಿ ಮತ್ತೆ ಮತ್ತೆ ಗದ್ದಲ, ಕೋಲಾಹಲವೇ ಮೇಳೈಸಿತು. ವಿರೋಧ ಪಕ್ಷಗಳ ಸದಸ್ಯರು ಮತ್ತೆ ಧರಣಿಗೆ ಇಳಿದರು. ನಿಲುವಳಿ ಸೂಚನೆಯಡಿ ಈ ವಿಷಯದ ಚರ್ಚೆ ಸಾಧ್ಯವಿಲ್ಲ, ಬೇರೆ ರೂಪದಲ್ಲಿ ತನ್ನಿ ಎಂದು ಸ್ಪೀಕರ್ ರೂಲಿಂಗ್ ಕೊಟ್ಟರು. ಏಕಪಕ್ಷೀಯ ತೀರ್ಮಾನ ಕೊಡಬೇಡಿ ಎಂದು ಧರಣಿ ನಿರತ ಸದಸ್ಯರು ಘೋಷಣೆ ಕೂಗಿದರು.

ಸಿಎಂ ಗರಂ: ವಿರೋಧ ಪಕ್ಷಗಳ ಧರಣಿ ನಡುವೆಯೇ ಎದ್ದುನಿಂತ ಮುಖ್ಯಮಂತ್ರಿಯವರು ಅವರನ್ನು ಚುಚ್ಚಿದರು. ‘ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ಜನರು ಉತ್ತರ ಕೊಟ್ಟಿಲ್ವಾ? ನಿಮಗೆ ಛೀಮಾರಿ ಹಾಕಿಲ್ವಾ? ನಾಚಿಕೆ ಆಗಬೇಕು ನಿಮಗೆ. ರಾಜ್ಯಪಾಲರು ಭಾಷಣ ಮಾಡೋದಕ್ಕೂ ಬಿಟ್ಟಿಲ್ಲ. ರಾಜಕೀಯ ಷಡ್ಯಂತ್ರದಿಂದ ಈ ರೀತಿಯಾಗಿ ವರ್ತಿಸುತ್ತಿದ್ದೀರಿ’ ಎಂದು ಕಟುವಾಗಿ ಹೇಳಿದರು.ಗದ್ದಲದ ನಡುವೆಯೇ ಸದನವನ್ನು ಮಧ್ಯಾಹ್ನ 3ಕ್ಕೆ ಮುಂದೂಡಲಾಯಿತು. ಭೋಜನ ವಿರಾಮದ ನಂತರ ಸದನ ಆರಂಭವಾದಾಗ ಪ್ರತಿಪಕ್ಷಗಳ ಸದಸ್ಯರು ಧರಣಿ ಮುಂದುವರಿಸಿದರು. ಧರಣಿ ಕೈಬಿಟ್ಟು ತಮ್ಮ ಸ್ಥಾನಗಳಿಗೆ ಹಿಂತಿರುಗುವ ಮೂಲಕ ಪ್ರಶ್ನೋತ್ತರ ಕೈಗೆತ್ತಿಕೊಳ್ಳಲು ಅವಕಾಶ ನೀಡಿ ಎಂದು ಸ್ಪೀಕರ್ ಬೋಪಯ್ಯ ಮನವಿ ಮಾಡಿದರು. ಆದರೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಇದಕ್ಕೆ ಒಪ್ಪಲಿಲ್ಲ.ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ಆರೋಪ- ಪ್ರತ್ಯಾರೋಪ, ಗದ್ದಲ ಮುಂದುವರಿದ ಪರಿಣಾಮ ಸಭಾಧ್ಯಕ್ಷರು ಸದನವನ್ನು ಮಂಗಳವಾರ ಬೆಳಿಗ್ಗೆ 11ಕ್ಕೆ ಮುಂದೂಡಿದರು.ಪರಿಷತ್‌ನಲ್ಲೂ ಗದ್ದಲ, ಗೊಂದಲ: ವಿಧಾನ ಪರಿಷತ್‌ನಲ್ಲಿ ಕಲಾಪ ಆರಂಭವಾಗುತ್ತಿದ್ದಂತೆ ವಿರೋಧ ಪಕ್ಷದ ನಾಯಕಿ ಮೋಟಮ್ಮ ಅವರು ಇತ್ತೀಚಿನ ದಿನಗಳಲ್ಲಿ ಸರ್ಕಾರದಲ್ಲಿ ನಡೆದಿರುವ ಭ್ರಷ್ಟಾಚಾರ ಮತ್ತು ಭೂಹಗರಣದ ಕುರಿತು ಚರ್ಚೆಗೆ ಅವಕಾಶ ಕೋರಿ ನಿಲುವಳಿ ಸೂಚನೆ ಮಂಡಿಸಿದರು. ಪ್ರಶ್ನೋತ್ತರ ಕಲಾಪಕ್ಕೂ ಮುನ್ನವೇ ನಿಲುವಳಿ ಸೂಚನೆ ಮೇಲೆ ಚರ್ಚೆಗೆ ಅವಕಾಶ ನೀಡುವಂತೆ ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರು ಪಟ್ಟು ಹಿಡಿದರು.ಆದರೆ ಪ್ರತಿಪಕ್ಷಗಳ ಬೇಡಿಕೆಯನ್ನು ಒಪ್ಪಬಾರದು ಎಂದು ಸಭಾಪತಿ ಡಿ.ಎಚ್.ಶಂಕರಮೂರ್ತಿ ಅವರಿಗೆ ಮನವಿ ಮಾಡಿದ ಸಚಿವ ಡಾ.ವಿ.ಎಸ್.ಆಚಾರ್ಯ, ‘ಮೂರು ತಿಂಗಳಿನಿಂದ ವಿರೋಧ ಪಕ್ಷಗಳು ಪದೇ ಪದೇ ಸರ್ಕಾರದ ವಿರುದ್ಧ ಆರೋಪ ಮಾಡುತ್ತಿವೆ. ‘ಹಾಡಿದ್ದನ್ನೇ ಹಾಡೋ ಕಿಸುಬಾಯಿ ದಾಸ....’ ಎಂಬಂತೆ ಸದನದಲ್ಲೂ ಅದನ್ನೇ ಮಾಡುತ್ತಿದ್ದಾರೆ’ ಎಂದರು.ಸಚಿವರು ಬಳಸಿದ ‘ಕಿಸುಬಾಯಿ ದಾಸ’ ಎಂಬ ಪದ ಪ್ರತಿಪಕ್ಷಗಳ ಸದಸ್ಯರನ್ನು ಕೆರಳಿಸಿತು. ವಿರೋಧ ಪಕ್ಷದ ಉಪನಾಯಕ ಎಸ್.ಆರ್.ಪಾಟೀಲ್, ಹಿರಿಯ ಸದಸ್ಯರಾದ ವೀರಣ್ಣ ಮತ್ತಿಕಟ್ಟಿ, ವಿ.ಆರ್.ಸುದರ್ಶನ್, ವಿರೋಧಪಕ್ಷದ ಸಚೇತಕ ಆರ್.ವಿ.ವೆಂಕಟೇಶ್, ಜೆಡಿಎಸ್‌ನ ವೈ.ಎಸ್.ವಿ.ದತ್ತ ಮತ್ತಿತರರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಇದು ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ಮಾತಿನ ಸಮರಕ್ಕೆ ವೇದಿಕೆಯಾಯಿತು.

ಅಣೆಕಟ್ಟೆಯೇ ಮುಖ್ಯ:ವೈ.ಎಸ್.ವಿ. ದತ್ತ, ‘ಸರ್ಕಾರದ ಬೊಕ್ಕಸ ಒಂದು ಅಣೆಕಟ್ಟೆ. ಈಗ ಅಣೆಕಟ್ಟೆಯೇ ಅಪಾಯದಲ್ಲಿದೆ. ಅದರ ಬಗ್ಗೆ ನಮ್ಮ ನಿಲುವಳಿ ಸೂಚನೆ ಇದೆ. ಕಾಲುವೆಗಳ ಕುರಿತು (ಇತರೆ ಹಣಕಾಸು ವ್ಯವಹಾರ) ಪ್ರಶ್ನೆಗಳಿವೆ. ಆದ್ದರಿಂದ ಕಾಲುವೆಗಳಿಗಿಂತ ಅಣೆಕಟ್ಟೆಗೇ ಆದ್ಯತೆ ದೊರೆಯಬೇಕು’ ಎಂದು ಆಗ್ರಹಿಸಿದರು.ಸದನವನ್ನು ಮಧ್ಯಾಹ್ನ 3.30ಕ್ಕೆ ಮುಂದೂಡಿದ ಸಭಾಪತಿ, ಮತ್ತೆ ಸೇರಿದಾಗ ರೂಲಿಂಗ್ ನೀಡುವುದಾಗಿ ಪ್ರಕಟಿಸಿದರು. ಮತ್ತೆ ಕಲಾಪ ಆರಂಭವಾದಾಗಲೂ ಪ್ರತಿಪಕ್ಷ ಮತ್ತು ಆಡಳಿತ ಪಕ್ಷದ ಸದಸ್ಯರ ನಡುವೆ ವಾಕ್ಸಮರ ನಡೆಯಿತು. ಬಳಿಕ ರೂಲಿಂಗ್ ನೀಡಿದ ಸಭಾಪತಿ, ಪ್ರಶ್ನೋತ್ತರದ ಬಳಿಕವೇ ನಿಲುವಳಿ ಸೂಚನೆ ಮಂಡಿಸಲು ಅವಕಾಶ ನೀಡುವುದಾಗಿ ಪ್ರಕಟಿಸಿದರು. ಅಷ್ಟರಲ್ಲೇ ಸಭಾಪತಿ ಪೀಠದ ಎದುರಿಗೆ ಧಾವಿಸಿದ ಕಾಂಗ್ರೆಸ್, ಜೆಡಿಎಸ್ ಸದಸ್ಯರು ಧರಣಿ ಆರಂಭಿಸಿದರು. ಹೀಗಾಗಿ ಸದನವನ್ನು ಮಂಗಳವಾರ 11 ಗಂಟೆಗೆ ಮುಂದೂಡಿದರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.