ಮಂಗಳವಾರ, ಜೂನ್ 15, 2021
23 °C
ಮಹಿಳಾ ಅಧ್ಯಯನ

ಚರ್ಚೆಗೆ ಬೇಕಿದೆ ಹೊಸ ಮುಖ

ಆರ್. ಇಂದಿರಾ Updated:

ಅಕ್ಷರ ಗಾತ್ರ : | |

ಮಹಿಳಾ ಅಧ್ಯಯನಗಳಿಗೆ ರಾಜ್ಯದ ವಿಶ್ವವಿದ್ಯಾನಿಲಯಗಳಲ್ಲಿ ಇದೊಂದು ಪರ್ವಕಾಲ. ಒಂದೆಡೆ, ಮಹಿಳಾ ಅಧ್ಯಯನ ವಿಭಾಗಗಳು, ಕೇಂದ್ರಗಳು, ಕೋರ್ಸುಗಳು ಸಂಖ್ಯಾತ್ಮಕ ಹೆಚ್ಚಳವನ್ನು ಕಾಣುತ್ತಿದ್ದು ಮಹಿಳಾ ಅಧ್ಯಯನ ಒಂದು ಸ್ವತಂತ್ರ ಅಧ್ಯಯನ ವಿಷಯವಾಗಿ ತನ್ನ ಅಂಕಿತವನ್ನು ಕಂಡುಕೊಳ್ಳುತ್ತಿದೆ. ಮತ್ತೊಂದೆಡೆ ಆ ವಿಷಯದ ಭವಿಷ್ಯದ ಬಗ್ಗೆ ಗಂಭೀರವಾದ ಪ್ರಶ್ನೆಗಳು ಏಳುತ್ತಿವೆ.ಪ್ರಜಾವಾಣಿಯ ಶಿಕ್ಷಣ ವಿಭಾಗದಲ್ಲಿ ಮಹಿಳಾ ಅಧ್ಯಯನ ಕೇಂದ್ರಗಳ / ವಿಭಾಗಗಳ ಚಟವಟಿಕೆಗಳನ್ನು ಕುರಿತಂತೆ ಇತ್ತೀಚೆಗೆ ಪ್ರಕಟವಾದ ಲೇಖನಗಳು ಪರಿಸ್ಥಿತಿ ಅಧ್ಯಯನಗಳಂತೆ ಮೂಡಿ ಬಂದದ್ದೇ ಅಲ್ಲದೆ, ಪ್ರಾಯಶಃ ಪ್ರಥಮ ಬಾರಿಗೆ ಮಹಿಳಾ ಅಧ್ಯಯನಗಳ ಆಗುಹೋಗುಗಳು ಮತ್ತು ಸವಾಲುಗಳನ್ನು ಸಾರ್ವಜನಿಕ ಚರ್ಚೆಗೆ ತೆರೆದಿಟ್ಟದ್ದು ನಿಜಕ್ಕೂ ಸ್ವಾಗತಾರ್ಹ. ಆದರೆ ಈ ಚರ್ಚೆ ಎಲ್ಲೋ ಒಂದೆಡೆ ಈ ಸಂಸ್ಥೆಗಳ ಗುರಿಗಳನ್ನು ಕೇವಲ ಸ್ನಾತಕೋತ್ತರ ಕೋರ್ಸುಗಳ ಮೌಲ್ಯಮಾಪನಕ್ಕೆ ಸೀಮಿತಗೊಳಿಸಿದೆಯೇನೋ ಎನಿಸದಿರಲಿಲ್ಲ.ಮಹಿಳಾ ಅಧ್ಯಯನದ ಸ್ನಾತಕೋತ್ತರ ಕೋರ್ಸುಗಳು ‘ಅಗತ್ಯ’ ಅಥವಾ ‘ಅಮುಖ್ಯ’ ಎಂದು ನಾನು ಹೇಳುತ್ತಿಲ್ಲ. ಆದರೆ ಯಾವುದೇ ಒಂದು ಅಧ್ಯಯನ ವಿಷಯದಲ್ಲಿ ವಿಶ್ವವಿದ್ಯಾನಿಲಯಗಳು ನೀಡುತ್ತಿರುವ ಶಿಕ್ಷಣದ ಪರಿಯನ್ನು ಚರ್ಚಿಸುವಾಗ ಬಹುಮುಖಿಯಾದ ದೃಷ್ಟಿಕೋನದಿಂದ ನಾವು ವಿಷಯವನ್ನು ಗ್ರಹಿಸಬೇಕು. ಮಹಿಳಾ ಅಧ್ಯಯನವೇ ಆಗಲಿ, ಮತ್ತ್ಯಾವುದೇ ಕೋರ್ಸಾಗಲಿ ಅದು ಕೇವಲ ಪದವಿ, ಉದ್ಯೋಗ, ಅಥವಾ ಅದು ತಂದು ಕೊಡುವ ಸಾಮಾಜಿಕ ಸ್ಥಾನ- ಮುಂತಾದ ವಿಷಯಗಳ ಚೌಕಟ್ಟಿನಲ್ಲಿ ಅದರ ಉಪಯುಕ್ತತೆಯನ್ನು ವಿಮರ್ಶಿಸುವುದು ಸರಿಯಲ್ಲ. ಅದರ ಸಾಮಾಜಿಕ ಪ್ರಸ್ತುತತೆಯನ್ನೂ ಗಣನೆಗೆ ತೆಗೆದುಕೊಳ್ಳಬೇಕು.ಇದು ವಿಶೇಷವಾಗಿ ಮಹಿಳಾ ಅಧ್ಯಯನದಂಥ ಕೋರ್ಸಿಗೆ ಅನ್ವಯಿಸುತ್ತದೆ. ಏಕೆಂದರೆ, ಈ ಅಧ್ಯಯನ ವಿಷಯ ಶೈಕ್ಷಣಿಕ ವಲಯವನ್ನು ಪ್ರವೇಶಿಸಿದ ಹಿನ್ನೆಲೆಯೇ ಅಂತಹುದು.ಐತಿಹಾಸಿಕ ಹಿನ್ನೋಟ

ವಿಶ್ವವಿದ್ಯಾನಿಲಯಗಳಲ್ಲಿ ಮಹಿಳಾ ಅಧ್ಯಯನ ಕುರಿತ ಚರ್ಚೆಯಲ್ಲಿ ತೊಡಗಬೇಕಾದರೆ ನಾವು ೧೯೮೦ರ ದಶಕಕ್ಕೆ ಹೋಗುವುದು ಮೊದಲ ಅಗತ್ಯ. ಮಹಿಳಾ ಚಳವಳಿ ಲಿಂಗ ಸಮಾನತೆಯ ಧ್ವನಿಯಾಗಿ  ಹೊರಹೊಮ್ಮುತ್ತಿದ್ದ ಕಾಲವದು. ಜ್ಞಾನ ವ್ಯವಸ್ಥೆಯೂ ಸೇರಿದಂತೆ ವಿವಿಧ ಸಾಮಾಜಿಕ ಸಂಸ್ಥೆಗಳಲ್ಲಿ ನೆಲೆಯೂರಿದ್ದ ಸ್ತ್ರೀ-ಪುರುಷ ಅಸಮಾನತೆಯ ಬೇರುಗಳನ್ನು ಗುರುತಿಸಿ, ಈ ಸಮಾಜದ ಸೃಷ್ಟಿ, ಉಳಿವು ಮತ್ತು ಸುಸ್ಧಿರ ಅಭಿವೃದ್ಧಿಗೆ ಮಹಿಳೆಯರ ಕೊಡುಗೆಯನ್ನು ಅಲಕ್ಷ ಮಾಡಿದ್ದ ಸಾಮಾಜಿಕ ವ್ಯವಸ್ಥೆಯನ್ನು ಪ್ರಶ್ನಿಸಿ-ಪ್ರತಿಭಟಿಸಿದ್ದೇ ಮಹಿಳಾ ಚಳವಳಿ.ಇದೇ ಕಾಲಘಟ್ಟದಲ್ಲಿ ವಿಶ್ವವಿದ್ಯಾನಿಲಯ ಅನುದಾನ ಆಯೋಗ (ಯು.ಜಿ.ಸಿ) ವಿಶ್ವವಿದ್ಯಾನಿಲಯಗಳಲ್ಲಿ ಮಹಿಳಾ ಅಧ್ಯಯನ ಕೇಂದ್ರಗಳ ಸ್ಥಾಪನೆಗೆ ಬೆಂಬಲ ನೀಡಲು ಮುಂದೆ ಬಂದದ್ದು ಕೂಡ ಮಹಿಳಾ ಚಳವಳಿಯ ಪ್ರಭಾವದಿಂದಲೇ.

ಮಹಿಳಾ ಅಧ್ಯಯನದ ಉಗಮದ ಇತಿಹಾಸವನ್ನು ಬಲ್ಲವರೆಲ್ಲರಿಗೂ ಈ ಅಧ್ಯಯನ ಶಿಸ್ತಿಗೆ ತನ್ನದೇ ಆದಂಥ ಸ್ವರೂಪ ಹಾಗೂ ಅಸ್ತಿತ್ವ ನೀಡುವುದರಲ್ಲಿ ಮಹಿಳಾ ಚಳವಳಿಯ ಪಾತ್ರ ಎಷ್ಟು ಪ್ರಮುಖವಾದುದು ಎಂಬುದು ತಿಳಿದೇ ಇರುತ್ತದೆ.

ಮಹಿಳಾ ಅಧ್ಯಯನಗಳ ಪ್ರಾರಂಭಿಕ ಹಂತದಲ್ಲಿ ಅವುಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಅಧ್ಯಾಪಕರಾಗಲಿ, ಸಂಶೋಧಕರಾಗಲಿ ಯಾವುದೇ ಒಂದು ಅಧ್ಯಯನ ಶಿಸ್ತಿನ ಹಿನ್ನೆಲೆಯಿಂದ ಬಂದವರಲ್ಲ.ಲಿಂಗ ಸಮಾನತೆಯ ಹೋರಾಟದ ಕಾವು ಅವರನ್ನು ತಟ್ಟಿ ಹೊಸ ಜಾಗೃತಿಯೊಂದನ್ನು ಮೂಡಿಸಿದ್ದರಿಂದಲೇ ತಮ್ಮ ಬರಹ, ಭಾಷಣ ಮತ್ತು ಸಮಾಜಮುಖಿ ಚಟವಟಿಕೆಗಳ ಮೂಲಕ ಮಹಿಳಾ ಅಧ್ಯಯನಗಳ ಬೆಳವಣಿಗೆಗೆ ವೇದಿಕೆಯನ್ನು ಸೃಷ್ಟಿಸಿತು. ಅಲ್ಲದೆ, ಆಗಷ್ಟೇ ದೇಶದ ಬೇರೆ ಬೇರೆ ವಿಶ್ವವಿದ್ಯಾನಿಲಯಗಳಲ್ಲಿ ತೆಗೆಯುತ್ತಿದ್ದ ಮಹಿಳಾ ಅಧ್ಯಯನ ವಿಭಾಗಗಳಲ್ಲಿ ಆರಂಭವಾಗುತ್ತಿದ್ದಂಥ ಕೋರ್ಸುಗಳ ಬೋಧನೆಗೂ ಮುಂದಾದರು. ಈ ಹಂತದಲ್ಲಿ ಮಹಿಳಾ ಅಧ್ಯಯನದ ವಲಯದಲ್ಲಿ ಸಾಹಿತ್ಯ, ಸಮಾಜಶಾಸ್ತ್ರ, ಅರ್ಥಶಾಸ್ತ್ರ, ಅಭಿವೃದ್ಧಿ ಅಧ್ಯಯನ, ತತ್ವಶಾಸ್ತ್ರ, ಮಾನವಶಾಸ್ತ್ರ ಮುಂತಾದ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಆಸಕ್ತರು ತಮ್ಮನ್ನು ತೊಡಗಿಸಿಕೊಂಡಿದ್ದು, ಮಹಿಳಾ ಪರ ಕಾಳಜಿಗಳಿಗೆ ಅಧ್ಯಯನ ಶಿಸ್ತಿನ ಎಲ್ಲೆಗಳು ಇರಲಿಲ್ಲ.ಮಹಿಳಾ ಅಧ್ಯಯನದ ಮೊದಲೆರಡು ದಶಕಗಳ (೧೯೮೦-–೨೦೦೦) ಅನುಭವಗಳಿಂದ ಕೆಲ ಸ್ಪಷ್ಟ ಸಂದೇಶಗಳು ಹೊರಬಿದ್ದಿದ್ದವು. ಅವುಗಳಲ್ಲಿ ಪ್ರಮುಖವಾದುವೆಂದರೆ:* ಲಿಂಗ ವ್ಯವಸ್ಥೆಗೆ ಸಂಬಂಧಿಸಿದ ಬೋಧನೆ-ಸಂಶೋಧನೆಗಳನ್ನು ಬಹುಶಿಸ್ತ್ರೀಯ ಚೌಕಟ್ಟಿನಲ್ಲಿಯೇ ಕೈಗೊಳ್ಳಬೇಕು.

* ಪದವಿಗಿಂತ ಲಿಂಗಸೂಕ್ಷ್ಮ ದೃಷ್ಟಿಕೋನ ಮುಖ್ಯ.

* ತರಗತಿಗಳ ನಾಲ್ಕು ಗೋಡೆಗಳೊಳಗೆ ಮಹಿಳಾ ಅಧ್ಯಯನ ಬಂಧಿಯಾಗಕೂಡದು.

* ಲಿಂಗ ಸಮಾನತೆಯ ಹೋರಾಟದಲ್ಲಿ ತೊಡಗಿರುವಂಥ ಸಕ್ರಿಯ ಕಾರ್ಯಕರ್ತರೊಡನೆ ಕೈಜೋಡಿಸಿಯೇ ಮಹಿಳೆಯರ ಬದುಕಿನ ವಾಸ್ತವಗಳ ಬಗ್ಗೆ ಅರಿವನ್ನು ಮಹಿಳಾ ಅಧ್ಯಯನಗಳಲ್ಲಿ ತೊಡಗಿರುವ ವಿದ್ಯಾರ್ಥಿಗಳ, ಸಂಶೋಧಕರು, ಬೋಧಕರು ಮೂಡಿಸಿಕೊಳ್ಳಬೇಕು.ಚಿಂತೆಗೀಡು ಮಾಡುವ ಧೋರಣೆ

ಮಹಿಳಾ ಅಧ್ಯಯನಗಳಲ್ಲಿ ತೊಡಗಿಸಿಕೊಂಡ ಮೊದಲ ತಲೆಮಾರಿನ ಧ್ಯೇಯೋದ್ದೇಶಗಳಿಗೂ ದೃಷ್ಟಿಕೋನಗಳಿಗೂ ಕಳೆದ ದಶಕದಿಂದೀಚೆಗೆ ಕ್ಷೇತ್ರವನ್ನು ಪ್ರವೇಶಿಸಿದ ಅನೇಕರ ಧೋರಣೆಗಳಿಗೂ ನಡುವೆ ಗಮನಾರ್ಹವಾದ ವ್ಯತ್ಯಾಸಗಳು ಕಂಡು ಬರಲಾರಂಭಿಸಿದವು. ಒಂದೆಡೆ ಕೆಂದ್ರಗಳ/ ವಿಭಾಗಗಳ ಸಂಖ್ಯಾತ್ಮಕ ಹೆಚ್ಚಳ, ಮತ್ತೊಂದೆಡೆ ಹೊಸ-ಹೊಸ ಹುದ್ದೆ ಹಾಗೂ ಆಕಾಂಕ್ಷಿಗಳ ಸಂಖ್ಯೆಯಲ್ಲಿ ಏರಿಕೆ-ಸಹಜವಾಗಿಯೇ ಸ್ಪರ್ಧೆಯ ಪ್ರವೇಶವಾಗಿ ಕೆಲ ಸಂಸ್ಥೆಗಳಲ್ಲಂತೂ ಈ ಕ್ಷೇತ್ರದ ಬಗ್ಗೆ ಯಾವುದೇ ಅರಿವು-ಅನುಭವಗಳಿಲ್ಲದ ವ್ಯಕ್ತಿಗಳು ನಾಯಕತ್ವದ ಸ್ಥಾನವನ್ನು ಪಡೆದುಕೊಂಡರು.ಈ ಬೆಳವಣಿಗೆಯಿಂದ ಅಧೀರರಾದ ಹಲವಾರು ಹಿರಿಯರು ಹಿಂದೆ ಸರಿದದ್ದು, ಮಹಿಳಾ ಅಧ್ಯಯನ ಸಂಸ್ಥೆಗಳ ಜೊತೆ ನಿಕಟ ಸಂಪರ್ಕ ಹೊಂದಿದ್ದ ಮಹಿಳಾ ಚಳವಳಿ ಕೂಡ ಆಸಕ್ತಿಯನ್ನು ಕಳೆದುಕೊಂಡಿದ್ದು, ಮಹಿಳಾ ವಿಚಾರಗಳಲ್ಲಿ ತೊಡಗಿಸಿಕೊಂಡವರಲ್ಲಿ ‘ಕಾರ್ಯಕರ್ತರು’ ಮತ್ತು ’ಬರೀ ಅಕೆಡೆಮಿಕ್ ಮಂದಿ’ ಎಂಬ ಎರಡು ವಿಭಿನ್ನ ವರ್ಗಗಳು ಸೃಷ್ಟಿಯಾದವು.ಈ ಬೆಳವಣಿಗೆಗಳು ಕರ್ನಾಟಕವೂ ಸೇರಿದಂತೆ, ದೇಶದ ಅನೇಕ ವಿಶ್ವವಿದ್ಯಾನಿಲಯಗಳಲ್ಲಿ ಮಹಿಳಾ ಅಧ್ಯಯನದ ಸಹಜ, ಸ್ವಾಸ್ಥ್ಯ ಅಭಿವೃದ್ಧಿಗೆ ಪೆಟ್ಟನ್ನು ನೀಡಿವೆ ಎಂಬುದರಲ್ಲಿ ಸಂದೇಹವೇ ಇಲ್ಲ.೧೯೭೫ನೇ ಇಸವಿಯಲ್ಲಿ ದೇಶದ ಮೊದಲ ಮಹಿಳಾ ಅಧ್ಯಯನ ಘಟಕ ಮುಂಬಯಿಯ ಎಸ್.ಎನ್.ಡಿ.ಟಿ. ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ಆರಂಭವಾದಾಗಿನಿಂದ, ಈಗಿನವರೆಗೆ ೧೨೫ಕ್ಕೂ ಹೆಚ್ಚು ಮಹಿಳಾ ಅಧ್ಯಯನ ಸಂಸ್ಥೆಗಳು ಯು.ಜಿ.ಸಿಯ ಸಹಾಯದಿಂದ ದೇಶದಾದ್ಯಂತ ಅಸ್ತಿತ್ವಕ್ಕೆ ಬಂದಿವೆ. ಆದರೆ ಈ ಕೇಂದ್ರಗಳ ಕಾರ್ಯವೈಖರಿ, ಶೈಕ್ಷಣಿಕ ಸಾಧನೆಗಳು ಮತ್ತು ಸಾಮಾಜಿಕ ಬದ್ಧತೆಗಳಲ್ಲಿ ಮಾತ್ರ ಏಕಪ್ರಕಾರ ಇಲ್ಲ.ಈ ಹೊತ್ತು ಮಹಿಳಾ ಅಧ್ಯಯನ ಸಂಸ್ಥೆಗಳಿಗೆ ಒಂದು ದೊಡ್ಡ ಆಯವ್ಯಯವೇ ಇದೆ. ಒಂದು ಪಂಚವಾರ್ಷಿಕ ಯೋಜನಾ ಅವಧಿಗೆ ವಿಶ್ವವಿದ್ಯಾನಿಲಯಗಳ ಕೇಂದ್ರಗಳಿಗೆ ೨೫ರಿಂದ ೬೦ ಮತ್ತು ಕಾಲೇಜುಗಳ ಕೇಂದ್ರಗಳಿಗೆ ೧೫ರಿಂದ ೪೦ ಲಕ್ಷ ರೂಪಾಯಿಗಳನ್ನು ಯು.ಜಿ.ಸಿ. ನೀಡುತ್ತದೆ. ಈ ಹಣದಲ್ಲಿ ಸಂಸ್ಥೆಗಳ ಯಾವ- ಯಾವ ಚಟವಟಿಕೆಗಳಿಗೆ ಎಷ್ಟೆಷ್ಟು ಪಾಲು ಸಲ್ಲುತ್ತಿದೆ ಎಂಬುದನ್ನು ಕುರಿತು ರಾಷ್ಟ್ರವ್ಯಾಪಿ ಮೌಲ್ಯಮಾಪನದ ಅಗತ್ಯವಿದೆ.ವಿಶ್ವವಿದ್ಯಾನಿಲಯ ಅನುದಾನ ಆಯೋಗ ಮಹಿಳಾ ಅಧ್ಯಯನದ ಕೇಂದ್ರಗಳಿಗೆ ಮೂರು ಪ್ರಧಾನ ಗುರಿಗಳನ್ನು ಗುರುತಿಸಿತ್ತು.  ಬೋಧನೆ, ಸಂಶೋಧನೆ ಮತ್ತು ವಿಸ್ತರಣಾ ಕಾರ್ಯ. ಮೊದಲೆರಡು ಶೈಕ್ಷಣಿಕ ಕಾರ್ಯಕ್ರಮಗಳಾದರೆ, ಮೂರನೆಯದು ಕೇಂದ್ರಗಳ ಸಮಾಜಮುಖಿ ಚಟವಟಿಕೆಗಳಿಗೆ ಸಂಬಂಧಿಸಿದ್ದು. ಆದರೆ ಈ ಹೊತ್ತು ಅನೇಕ ಸಂಸ್ಥೆಗಳಲ್ಲಿ ಇಂಥ ಯಾವುದೇ ಕಾರ್ಯಕ್ರಮಗಳು ನಡೆಯುತ್ತಿಲ್ಲ.ಇತ್ತೀಚೆಗಂತೂ ಅನೇಕ ವಿಶ್ವವಿದ್ಯಾನಿಲಯಗಳ ಆಡಳಿತಾರೂಢ ವ್ಯವಸ್ಥೆ ನೇರವಾಗಿಯೇ ’ನಮಗೆ ಆಕ್ಟಿವಿಸಮ್ ಅಗತ್ಯವಿಲ್ಲ, ಏಕೆಂದರೆ ಅದು ಅಪಾಯಕಾರಿ, ನಮ್ಮ ಕೆಲಸ ಬರೀ ಪಾಠಕ್ಕೆ ಸೀಮಿತವಾಗಿರಬೇಕು’ ಎಂದು ಹೇಳುತ್ತಾ ಮಹಿಳಾ ಅಧ್ಯಯನದ ಮೂಲ ಗುರಿಗಳನ್ನೇ ಪ್ರಶ್ನಿಸುವಂಥ ವ್ಯವಸ್ಥೆಯನ್ನು ಸೃಷ್ಟಿಸುತ್ತಿದೆ. ಸಹಜವಾಗಿಯೇ ಇಂಥ ಪ್ರವೃತ್ತಿಗಳು ಮಹಿಳಾ ಅಧ್ಯಯನದ ಬಗ್ಗೆ ನೈಜ ಕಾಳಜಿಯಿರುವವರನ್ನು ಚಿಂತೆಗೀಡು ಮಾಡುತ್ತಿದೆ.ಎಂ.ಎ ಉಳಿವಿನ ಪ್ರಶ್ನೆ

ಕೆಲ ಸಂಸ್ಥೆಗಳಲ್ಲೇನೋ ೨೦ರಿಂದ ೪೦ರವರೆಗೆ ವಿದ್ಯಾರ್ಥಿ ದಾಖಲಾತಿ ಇದೆ. ಇನ್ನುಳಿದ ಕಡೆಗಳಲ್ಲಿ ಅಥವಾ ಕೆಲ ಶೈಕ್ಷಣಿಕ ವರ್ಷಗಳಲ್ಲಿ ದಾಖಲಾತಿ ತೀರಾ ೫ ಅಥವಾ ಇಲ್ಲವೇ ಇಲ್ಲ ಎನ್ನುವಷ್ಟರ ಮಟ್ಟಕ್ಕೂ ತಲುಪುತ್ತಿದೆ. ಮುಖ್ಯವಾಗಿ ಉದ್ಯೋಗದ ಸಮಸ್ಯೆ ಈ ಅಧ್ಯಯನ ಕ್ಷೇತ್ರವನ್ನು ಕಾಡುತ್ತಿದೆ. ಒಂದು ಅಂದಾಜಿನ ಪ್ರಕಾರ ಇದುವರೆಗೂ ಎಂ.ಎ. ಪದವಿ ಪಡೆದಿರುವವರಲ್ಲಿ ಶೇಕಡ ೧೫ರಷ್ಟು ಮಂದಿಗೆ ಮಾತ್ರ ಉದ್ಯೋಗ ದೊರಕಿದೆ, ಅದರಲ್ಲೂ ಬಹುಸಂಖ್ಯಾತರಿಗೆ ಅವಕಾಶಗಳು ಲಭಿಸಿರುವುದು ಸ್ವಯಂ ಸೇವಾ ವಲಯದಲ್ಲಿ.ಸರ್ಕಾರಿ ಇಲಾಖೆಗಳಲ್ಲಾಗಲಿ, ಪದವಿ ಕಾಲೇಜುಗಳಲ್ಲಾಗಲಿ ಮಹಿಳಾ ಅಧ್ಯಯನದ ಪದವೀಧರರಿಗೆ ಉದ್ಯೋಗಾವಕಾಶಗಳು ಅತ್ಯಂತ ಕಡಿಮೆ ಪ್ರಮಾಣದಲ್ಲಿ ಲಭ್ಯವಿವೆ. ವಿಶೇಷವಾಗಿ ಸಮಾಜ ವಿಜ್ಞಾನ ಕ್ಷೇತ್ರದಲ್ಲಿ ಬಹುತೇಕ ಸ್ನಾತಕೋತ್ತರ ಪದವೀಧರರಿಗೆ ಅವಕಾಶವಿರುವುದು ಪದವಿ ಕಾಲೇಜುಗಳ ಉಪನ್ಯಾಸಕ ಹುದ್ದೆಗಳಲ್ಲಿ. ಆದರೆ ಇಡೀ ರಾಜ್ಯದಲ್ಲಿ ೩೦ಕ್ಕೂ ಕಡಿಮೆ ಸಂಖ್ಯೆಯ ಕಾಲೆಜುಗಳಲ್ಲಿ ಪದವಿ ಮಟ್ಟದಲ್ಲಿ ಮಹಿಳಾ ಅಧ್ಯಯನವನ್ನು ಒಂದು ಐಚ್ಛಿಕ ವಿಷಯವನ್ನಾಗಿ ಬೋಧಿಸಲಾಗುತ್ತಿದೆ. ಇಂಥ ಕೆಲವು ಕಾಲೇಜುಗಳಲ್ಲಿಯೂ ವಿದ್ಯಾರ್ಥಿಗಳ ದಾಖಲಾತಿ ಕಡಿಮೆಯಿದೆ ಎಂಬ ಕಾರಣವನ್ನೊಡ್ಡಿ ಈ ಕೋರ್ಸನ್ನು ಮುಚ್ಚುವ ಪ್ರಯತ್ನಗಳು ನಡೆಯುತ್ತಿವೆ ಎಂಬ ಸುದ್ದಿಯೂ ಇದೆ.ಯು.ಜಿ.ಸಿಯ ನಿಯಮಾವಳಿಗಳ ಪ್ರಕಾರ ಕಾಲೇಜುಗಳಲ್ಲಿ ಕಾಯಂ ಹುದ್ದೆಗಳನ್ನು ಪಡೆಯಲು ರಾಷ್ಟ್ರೀಯ ಅರ್ಹತಾ ಪರೀಕ್ಷೆ (ಎನ್‌ಇಟಿ) ಅಥವಾ ಕರ್ನಾಟಕ ರಾಜ್ಯ ಮಟ್ಟದ ಅರ್ಹತಾ ಪರೀಕ್ಷೆಯಲ್ಲಿ (ಕೆಎಸ್‌ಇಟಿ) ಅರ್ಹತೆಯನ್ನು ಪಡೆಯಬೇಕು. ಆದರೆ ನೆಟ್‌ನಲ್ಲಿ ಮಾತ್ರ ಮಹಿಳಾ ಅಧ್ಯಯನದಲ್ಲಿ ಪರೀಕ್ಷೆ ತೆಗೆದುಕೊಳ್ಳಲು ಅವಕಾಶವಿದೆಯೇ ಹೊರತು ಕೆಸೆಟ್‌ನಲ್ಲಿ ಈ ವಿಷಯದಲ್ಲಿ ಪರೀಕ್ಷೆಗಳೇ ನಡೆಯುತ್ತಿಲ್ಲ.ಕರ್ನಾಟಕದ ಮಹಿಳಾ ಅಧ್ಯಯನ ಪದವೀಧರರಿಗೆ ಇದೊಂದು ಭಾರಿ ಹಿನ್ನಡೆ. ಸ್ನಾತಕೋತ್ತರ ಮಹಿಳಾ ಅಧ್ಯಯನದ ಕೋರ್ಸುಗಳ ಬಗ್ಗೆ ತಮ್ಮ ಬದ್ಧತೆಯನ್ನು ಸಾರ ಹೊರಟಿರುವ ವಿಶ್ವವಿದ್ಯಾನಿಲಯಗಳು ಮೊದಲು ಸಂಬಂಧಪಟ್ಟ ಸಂಸ್ಥೆಗಳ ಮೇಲೆ ಒತ್ತಡ ತಂದು ಈ ವಿಷಯವನ್ನು ಕೆಸೆಟ್ ಪರೀಕ್ಷೆಗಳಲ್ಲಿ ಸೇರಿಸಲಿ.ಹೊಸ ಮಾರ್ಗದ ಹುಟ್ಟು

ರಾಜ್ಯದ ಎಲ್ಲ ವಿಶ್ವವಿದ್ಯಾನಿಲಯಗಳು, ಕಾಲೇಜುಗಳು ಮಾಡಬಹುದಾದ ಮತ್ತೊಂದು ಕೆಲಸವೆಂದರೆ ಪದವಿ ಕಾಲೇಜುಗಳ ಎಲ್ಲ ವಿದ್ಯಾರ್ಥಿಗಳಲ್ಲೂ (ಅವರ ಯಾವ ಕೋರ್ಸಿನಲ್ಲೇ ಅಧ್ಯಯನ ಮಾಡುತ್ತಿರಲಿ) ಲಿಂಗ ಸೂಕ್ಷ್ಮತೆಯನ್ನು ಬೆಳೆಸಲು ಕಡ್ಡಾಯವಾಗಿ ಪಠ್ಯಕ್ರಮದಲ್ಲೇ ಮಹಿಳಾ ಅಧ್ಯಯನದ ಸರ್ಟಿಫಿಕೇಟ್ ಅಥವಾ ಡಿಪ್ಲೊಮಾ ಕೋರ್ಸನ್ನು ಪರಿಚಯಿಸಬಹುದು. ಹೀಗೆ ಮಾಡುವುದರಿಂದ ಮಹಿಳಾ ಅಧ್ಯಯನ ಸ್ನಾತಕೋತ್ತರ ಪದವೀಧರರಿಗೆ ಒಂದು ಹೊಸ ಉದ್ಯೋಗದ ಮಾರ್ಗ ತೆರೆದಿಟ್ಟಂತಾಗುತ್ತದೆ.

ಸುಮಾರು ೬ ವರ್ಷಗಳಿಂದ ಸಕ್ರಿಯವಾಗಿ ಕೆಲಸ ಮಾಡುತ್ತಿರುವ ಕರ್ನಾಟಕ ರಾಜ್ಯ ಮಹಿಳಾ ಅಧ್ಯಯನ ವಿದ್ಯಾರ್ಥಿ ಸಂಘಟನೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಹಿಳಾ ಆಯೋಗ ಮಹಿಳಾ ಸಮಖ್ಯಾ ಮತ್ತಿತರ ಕೆಲವು ಹುದ್ದೆಗಳಲ್ಲಿ ಮಹಿಳಾ ಅಧ್ಯಯನ ಪದವೀಧರರನ್ನು ನೇಮಕಾತಿ ಮಾಡುವಂತೆ ಮೇಲೆ ಒತ್ತಡ ತರುವಲ್ಲಿ ಯಶಸ್ವಿಯಾಗಿದೆ. ಆದರೆ ಶೈಕ್ಷಣಿಕ ವಲಯದಲ್ಲೂ ಮಹಿಳಾ ಅಧ್ಯಯನ ನೆಲೆಯೂರಿ ತನ್ನ ಗುಣಾತ್ಮಕತೆಯನ್ನು ಕಾಪಾಡಿಕೊಳ್ಳುವಂತಾಗಲು ಈ ಸಂಘಟನೆ ಶ್ರಮಿಸಬೇಕು.ಮಹಿಳಾ ಅಧ್ಯಯನಗಳು ಇಂದು ಗಂಭೀರವಾದ ಸವಾಲುಗಳನ್ನು ಎದುರಿಸುತ್ತಿವೆ. ಈ ಪರಿಸ್ಥಿತಿ ಸರಿಯಾಗಬೇಕಾದರೆ ವಿಶ್ವವಿದ್ಯಾನಿಲಯಗಳು, ಮಹಿಳಾ ಚಳವಳಿ, ಮಾಧ್ಯಮ ಮತ್ತು ಎಲ್ಲ ಆಸಕ್ತರು ಕೈಜೋಡಿಸಿದರೆ ಮಾತ್ರ ಸಾಧ್ಯ.ಕರ್ನಾಟಕದಲ್ಲಿ ಮಹಿಳಾ ಅಧ್ಯಯನ

ಭಾರತದ ಮಹಿಳಾ ಅಧ್ಯಯನಗಳ ಭೂಪಟದಲ್ಲಿ ಕರ್ನಾಟಕಕ್ಕೆ ಒಂದು ವಿಶೇಷ ಸ್ಥಾನವಿದೆ. ಬೆಂಗಳೂರಿನ ಎನ್.ಎಮ್.ಕೆ.ಆರ್.ವಿ. ಮಹಿಳಾ ಕಾಲೆಜಿನ ಪ್ರಥಮ ಪ್ರಾಂಶುಪಾಲರಾದ ಪ್ರೊ. ಚಿ.ನ. ಮಂಗಳಾ ಅವರು ೧೯೮೯ನೇ ಇಸವಿಯಲ್ಲಿ ಭಾರತದಲ್ಲೇ ಪ್ರಥಮ ಮಹಿಳಾ ಅಧ್ಯಯನದ ಪದವಿ (ಬಿ.ಎ.) ಮಟ್ಟದ ಕೋರ್ಸನ್ನು ಆರಂಭಿಸಿದರು.೧೯೯೨ರಲ್ಲಿ ಕರ್ನಾಟಕದ ಪ್ರಥಮ ಸ್ನಾತಕೋತ್ತರ (ಎಂ.ಎ) ಮಹಿಳಾ ಅಧ್ಯಯನ ಕೋರ್ಸನ್ನು ಪ್ರಾರಂಭ ಮಾಡಿದ ಹೆಗ್ಗಳಿಕೆಯೂ ಇದೇ ಕಾಲೆಜಿಗೆ ಸೇರುತ್ತದೆ. ೧೯೮೯ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಮಹಿಳಾ ಅಧ್ಯಯನ ಕೇಂದ್ರವೂ ಕಾರ್ಯಾರಂಭ ಮಾಡಿದ್ದು, ಎರಡು ಸಂಸ್ಥೆಗಳೂ ಈ ವರ್ಷ ಬೆಳ್ಳಿ ಹಬ್ಬದ ಸಂಭ್ರಮವನ್ನು ಎದುರು ನೋಡುತ್ತಿವೆ.

ಮೈಸೂರು ವಿಶ್ವವಿದ್ಯಾನಿಲಯ ಮತ್ತು ಕರ್ನಾಟಕ ವಿಶ್ವವಿದ್ಯಾನಿಲಯಗಳಲ್ಲಿ ಮಹಿಳಾ ಅಧ್ಯಯನದ ಡಿಪ್ಲೊಮಾ ಕೋರ್ಸುಗಳನ್ನು ನಡೆಸಲಾಗುತ್ತಿದ್ದು, ಇವುಗಳು ಅರೆಕಾಲಿಕ ಸ್ವರೂಪದ್ದಾಗಿವೆ. ಬಹುಕಾಲ ಇವುಗಳ ಪ್ರಯೋಜನವನ್ನು ಇತರ ಕೋರ್ಸುಗಳಲ್ಲಿ ಅಧ್ಯಯನ ಮಾಡುತ್ತಿದ್ದ ವಿದ್ಯಾರ್ಥಿಗಳೇ ಅಲ್ಲದೆ ಉದ್ಯೋಗಸ್ಥರೂ (ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಪೊಲೀಸ್ ಇಲಾಖೆ, ಸ್ವಯಂ ಸೇವಾ ಸಂಸ್ಥೆಗಳು ಮತ್ತು ಅಭಿವೃದ್ಧಿ ಸಂಯೋಜನೆಗಳ ಸಿಬ್ಬಂದಿ) ಮತ್ತು ವಿಷಯಾಸಕ್ತರು ತೆಗೆದುಕೊಳ್ಳಲು ಅವಕಾಶವಿತ್ತು. ಆದರೆ ಕ್ರಮೇಣ ಈ ಕೋರ್ಸಿನಲ್ಲಿನ ಆಸಕ್ತಿ ಕಡಿಮೆಯಾಗಿ, ಕಳೆದ ಒಂದು ದಶಕದಿಂದೀಚೆಗೆ ಒಲವು ಎಂ.ಎ. ಮಹಿಳಾ ಅಧ್ಯಯನದತ್ತ ತಿರುಗಿ, ಈಗ ಗುಲ್ಬರ್ಗ, ಮೈಸೂರು, ಬೆಂಗಳೂರು, ಕರ್ನಾಟಕ ರಾಜ್ಯ ಮಹಿಳಾ ಮತ್ತು ಕನ್ನಡ ವಿಶ್ವವಿದ್ಯಾನಿಲಯಗಳಲ್ಲಿ ಎಂ.ಎ/ ಎಂ.ಫಿಲ್/ಪಿಎಚ್.ಡಿ ಕೋರ್ಸುಗಳು ಚಾಲ್ತಿಯಲ್ಲಿವೆ. ಎಂ.ಎ ಪದವೀಧರರೇ ಸುಮಾರು ೧೫೦೦ರಷ್ಟು ಇದ್ದಾರೆ. ಆದರೆ ಅವರೆ ಭವಿಷ್ಯದ ಆಯ್ಕೆಗಳು ಸೀಮಿತವಾಗಿದ್ದು, ಈ ಕೋರ್ಸಿನ ಭವಿಷ್ಯದ ಬಗ್ಗೆಯೇ ಮೂಲ ಪ್ರಶ್ನೆಗಳೇಳುತ್ತಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.