ಶನಿವಾರ, ಜನವರಿ 18, 2020
18 °C
ರಸಾಸ್ವಾದ

ಚರ್ಚ್ ಸ್ಟ್ರೀಟ್‌ನಲ್ಲಿ ಇಲಾಹಾಬಾದಿ ಚಾಟ್‌

–ರಶ್ಮಿ ಎಸ್‌. ಚಿತ್ರಗಳು: ರಂಜು ಪಿ. Updated:

ಅಕ್ಷರ ಗಾತ್ರ : | |

ಮೋಸ, ಕಚೌರಿ, ಪಾಪಡಿ, ಜೊತೆಗೊಂದಿಷ್ಟು ಪಾನಿಪುರಿ. ಕತ್ತರಿಸಿದ ಕೊತ್ತಂಬರಿ, ಕೊಚ್ಚಿಟ್ಟ ಕೆಂಪು ಟೊಮಾಟೊ, ಹೆಚ್ಚಿಟ್ಟ ಬಿಳಿ ಈರುಳ್ಳಿ, ಈ ವರ್ಣವೈವಿಧ್ಯದ ಸೌಂದರ್ಯ ಹೆಚ್ಚಿಸುವಂಥ ಸಣ್ಣ ಸೇವು... ಜೊತೆಗೆ ನಾಲಗೆ ಚುರುಗುಟ್ಟಿಸುವ ಪುದಿನ್‌ ಹರಾ, ಖಾರ ಕತ್ತರಿಸುವ ಕಡುಕೆಂಪು ಬಣ್ಣದ ಮೀಠಾ... ಇವಿಷ್ಟರ ನಡುವೆ ಚಕಚಕನೆ ಕೈ ಆಡಿಸುವ ಸಂತೋಷ್‌. ಮೀಠಾ..? ತೀಖಾ...? ಪ್ರಶ್ನೆಗಳೊಂದಿಗೆ ನಿಮಗೆ ಬೇಕಿರುವ ಚಾಟ್‌ ತಯಾರಿಸುತ್ತಾರೆ.ಕುದಿಸಿದ ಬಟಾಣಿಗಳ ಬಿಸಿ, ಮಸಾಲೆ ಖಾರ, ನಾಲಗೆಯ ಚಪಲವನ್ನು ತೀರಿಸುತ್ತಿದ್ದರೆ ಕರಿಮೆಣಸಿನ ಘಾಟು, ಉಪ್ಪು ಖಾರದ ರುಚಿ ಲಾಲಾರಸ ಉಕ್ಕಿ ಹರಿಯುವಂತೆ ಮಾಡುತ್ತದೆ. ಒಂದೇ ಒಂದು ಚಮಚ ಬಾಯಿಗಿಟ್ಟರೆ, ಸೇವು ಕುರುಂ, ಪುರಿ ಕುರುಂಕುರುಂ. ಉಳಿದಿದ್ದೆಲ್ಲವೂ ಬಿಸಿ ಬಿಸಿ ರಸಾಹಿತ. ಹಿತ. ಹುಳಿಯೊಗರು ಸಿಹಿಯ ಈ ಸವಿ ಖಾದ್ಯ ಸವಿಯಲು ಕಣ್ಮುಚ್ಚಲೇಬೇಕು. ಮಾತು ಮರೆಯಲೇಬೇಕು.ಮಸಾಲಾ ಪುರಿ, ಕಚೋರಿ, ಸಮೋಸಾ, ದಹಿ ಪುರಿ, ದಹಿ ಪಾಪಡಿ, ಪಾಪಡಿ ಚಾಟ್‌ ಮುಂತಾದ ಚಾಟ್‌ಗಳನ್ನು ಮಾರುವ ಈ ಪುಟ್ಟ ಕೇಂದ್ರ ಚರ್ಚ್‌ ಸ್ಟ್ರೀಟ್‌ನಲ್ಲಿದೆ. ಎರಡೂವರೆ ವರ್ಷದ ಹಿಂದೆ ಇಲಾಹಾಬಾದ್‌ನಿಂದ ಬಂದಿರುವ ಸಂತೋಷ್‌ಗೆ ರಾಹುಲ್‌ ಎಂಬ ಹುಡುಗ ಜೊತೆಗಾರ.ಚಾಟ್‌ನ ಒಂದೊಂದೇ ತುತ್ತಿಗೂ ಲೊಟ್ಟೆ ಹೊಡೆದು ತಿನ್ನುವಂತೆ ಮಾಡುವ ಸ್ವಾದ. ಇಷ್ಟಕ್ಕೂ ಚಾಟ್‌ ಅಂದ್ರೆ ಅದೇನೆ. ಅಂಗೈ ಮೇಲೆ ಉಪ್ಪಿನ ಕಾಯಿ ರಸ ಹಾಕಿಕೊಂಡು ತೋರು ಬೆರಳಿನಿಂದ ನೆಕ್ಕುತ್ತ ಲೊಟ್ಟೆ ಹೊಡೆಯುತ್ತೇವಲ್ಲ. ಅದು ‘ಚಖ್‌ನಾ’. ನಂತರ ಎಲ್ಲವೂ ಮುಗಿದ ಮೇಲೆ, ಅಂಗೈ ಸಂದೀಲಿ ಉಳಿದ ರಸವನ್ನು ನೆಕ್ಕಿ, ಕೊನೆಗೊಮ್ಮೆ ನಣ್ಣ ಎಂದು ಲೊಟ್ಟೆ ಹೊಡೀತೀವಲ್ಲ ಅದು ‘ಚಾಟ್‌ನಾ’ ಈ ಚಾಟ್‌ ಶಬ್ದ ಬಂದಿರುವುದೇ ಹಿಂದಿ ಮೂಲದಿಂದ.ಉತ್ತರ ಪ್ರದೇಶ ಮೂಲದ ಈ ಚಾಟುಗಳೀಗ ದಕ್ಷಿಣ ಏಷ್ಯಾದಲ್ಲೆಡೆಯೂ ಹರಡಿವೆ. ಜೊತೆಗೆ ತನ್ನದೇ ಆದ ಸ್ಥಳೀಯ ಸೊಗಡುಗಳೊಂದಿಗೆ. ಸಮೋಸಾ, ಕಚೌರಿಗಳೊಂದಿಗೆ ಸೇರಿರುವ ಭೇಲ್‌ಪುರಿ ಗುಜರಾತಿ ಮೂಲದ್ದು. ಆದರೆ ಇದೀಗ ಅದೂ ಸಹ ಚಾಟ್‌ಗಳ ಸಾಲಿನಲ್ಲಿ ಅಳಿಸಲಾಗದ ಹೆಸರು ಬರೆದಿದೆ.ಹಸಿ ತರಕಾರಿ, ಬೆಂದ ಕಾಳುಗಳ ಹದವಾದ ಮಿಶ್ರಣ ಅದೆಷ್ಟು ಪೌಷ್ಠಿಕಾಂಶಗಳನ್ನು ಹೊಂದಿದೆ ಎಂದು ಅಳತೆ ಮಾಡಲಾಗದು.

ಆದರೆ ಹಸಿ ಮೆಣಸಿನ ಖಾರಕ್ಕೂ ಗರಂ ಮಸಾಲೆಯ ಘಾಟಿಗೂ ಹೊಟ್ಟೆ ಉರಿಯದೇ? ಎಂಬ ಪ್ರಶ್ನೆ ಇರಿಸಿದರೆ, ಸಾಥ್‌ ಮೆ ಮೀಠಾ ಚಟ್ನಿ ಹೈ ನಾ... ಗುಡ್‌ ಸೆ ಬನಾ ಹುವಾ... ಕುಛ್‌ ನಹಿ ಹೋಗಾ! ಖಟ್ಟಾ ಹೋ ಯಾ ತೀಖಾ... ದಹಿ ಔರ್‌ ಮೀಠೆಕೆ ಸಾಥ್‌ ಖಾವೋಗೆ ತೊ ಕುಛ್‌ ನಹಿ ಹೋಗಾ (ಜೊತೆಗೆ ಸಿಹಿ ಚಟ್ನಿ ಇದೆಯಲ್ಲ, ಬೆಲ್ಲದಿಂದ ತಯಾರಿಸಿದ್ದು.

ಅದಕ್ಕೇನೂ ಆಗದು. ಹುಳಿ ಇರಲಿ, ಖಾರವಿರಲಿ ಈ ಸಿಹಿ ಚಟ್ನಿಯೊಂದಿಗೆ ಸವಿದರೆ ಯಾವುದೇ ಪರಿಣಾಮ ಆಗದು) ಎನ್ನುವ ಸಮಜಾಯಿಷಿ ಸಂತೋಷ್‌ ಅವರದ್ದು. ಇನ್ನಷ್ಟು ಜಾಗ ಸಿಕ್ಕರೆ ಬಿಸಿಬಿಸಿ ಸಮೋಸಾ ಮಾಡಿಕೊಡಬಲ್ಲೆ. ಸಂಜೆ ಹೊತ್ತಿಗೆ ಬಾಣಲೆಯಿಂದೆತ್ತಿದ ಸಮೋಸಾ ತಿನ್ನುವುದೇ ಒಂದು ಖುಷಿ.  ಒಬ್ಬೊಬ್ಬರು ಕನಿಷ್ಠ ಎರಡೆರಡಂತೂ ತಿಂದೇ ತಿನ್ನುತ್ತಾರೆ ಎನ್ನುವ ಭರವಸೆ ಸಂತೋಷ್‌ ಅವರದ್ದು.ಎರಡೂವರೆ ವರ್ಷಗಳ ಹಿಂದೆ ಇಲಹಾಬಾದ್‌ನಿಂದ ಬೆಂಗಳೂರಿಗೆ ಬಂದು ನೆಲೆಸಿರುವ ಸಂತೋಷ್‌ಗೆ ಬೆಂಗಳೂರಿಗರ ತಿಂಡಿಪ್ರೀತಿ ಕಂಡು ಸಂತೋಷವೆನಿಸುತ್ತದೆಯಂತೆ. ‘ಚಾಟ್‌ ಸವಿದ ಕೆಲವರು ಹೊಗಳಿಯೂ ಹೋಗುತ್ತಾರೆ. ನೈರ್ಮಲ್ಯ, ಸವಿ ಮತ್ತು ಮೌಲ್ಯ ಮೂರನ್ನು ಸಮತೂಗಿಸುವಾಗ, ಲಾಭದಾಸೆಯಂತೂ ಇರುವುದಿಲ್ಲ. ಬದುಕಿಗೇನೂ ಮೋಸವಿಲ್ಲ’ ಎನ್ನುತ್ತಾರೆ ಅವರು. ಮಾಹಿತಿಗೆ: 97387 71243

–ರಶ್ಮಿ ಎಸ್‌. ಚಿತ್ರಗಳು: ರಂಜು ಪಿ.

ಪ್ರತಿಕ್ರಿಯಿಸಿ (+)