ಭಾನುವಾರ, ಜೂನ್ 13, 2021
29 °C

ಚಲನಚಿತ್ರ ಸಬ್ಸಿಡಿ ಸಲಹಾ ಸಮಿತಿ ಲಂಚ ಪ್ರಕರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಲಂಚ ಆರೋಪ ಎದುರಿಸುತ್ತಿರುವ ಚಲನಚಿತ್ರ ಸಬ್ಸಿಡಿ ಸಲಹಾ ಸಮಿತಿಯನ್ನು ಕೂಡಲೇ ವಿಸರ್ಜಿಸಬೇಕು ಹಾಗೂ ಸಮಿತಿ ಆಯ್ಕೆ ಮಾಡಿರುವ ಚಿತ್ರಗಳಿಗೆ ಸರ್ಕಾರ ಸಹಾಯಧನ ನೀಡಬಾರದು~ ಎಂದು ಚಿತ್ರ ನಿರ್ಮಾಪಕರು ಆಗ್ರಹಿಸಿದರು.ನಗರದಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಿರ್ಮಾಪಕ ರಾಮು, `ಸಮಿತಿಯ ಅಧ್ಯಕ್ಷರಾದ ಹಿರಿಯ ನಟ ಎಸ್.ಶಿವರಾಂ ಅವರ ಬಗ್ಗೆ ಇದ್ದ ಗೌರವ ಕಡಿಮೆ ಆಗಿದೆ. ಸಮಿತಿಯಲ್ಲಿರುವ ಕೆಲವು ಕಳಂಕಿತ ಸದಸ್ಯರು ಅಧ್ಯಕ್ಷರಿಗೂ ಲಂಚದಲ್ಲಿ ಪಾಲಿದೆ ಎಂದು ಬಹಿರಂಗವಾಗಿ ಹೇಳಿದ್ದಾರೆ. ಇಂಥ ಸಂದರ್ಭದಲ್ಲಿಯೂ ಅವರು ಮೌನ ವಹಿಸಿರುವುದು ಸರಿಯಲ್ಲ.ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಹೆಸರಿನಲ್ಲಿ ಬೇರೊಬ್ಬ ನಿರ್ಮಾಪಕರು ಸಬ್ಸಿಡಿಗೆ ಯತ್ನಿಸಿದಾಗಲೂ ಅವರು ಇದೇ ರೀತಿ ಮೌನಕ್ಕೆ ಶರಣಾಗಿದ್ದಾರೆ. ರಾಜಕೀಯ ಒತ್ತಡಕ್ಕೆ ಮಣಿದು ಸಬ್ಸಿಡಿ ನೀಡುವ ಮಟ್ಟಕ್ಕೆ ಅವರು ಇಳಿಯಬಾರದಿತ್ತು~ ಎಂದು ಅಸಮಾಧಾನ ವ್ಯಕ್ತಪಡಿಸಿದರು.`ಲಂಚ ಪ್ರಕರಣದ ವಿರುದ್ಧ ಕಾನೂನು ಕ್ರಮಕ್ಕೆ ಚಿಂತನೆ ನಡೆದಿದೆ. ಮುಖ್ಯಮಂತ್ರಿಗಳೊಂದಿಗೂ ಮಾತುಕತೆ ನಡೆಸಲಾಗುವುದು. ಯಾವುದೇ ಕಾರಣಕ್ಕೂ ಸಮಿತಿ ಆಯ್ಕೆ ಮಾಡಿದ ಸಿನಿಮಾಗಳಿಗೆ ಸಹಾಯಧನ ನೀಡಲು ನಿರ್ಮಾಪಕರ ಸಮ್ಮತಿ ಇಲ್ಲ~ ಎಂದು ಅವರು ಹೇಳಿದರು.ನಿರ್ಮಾಪಕ ಸೂರಪ್ಪ ಬಾಬು, `ಈಗಾಗಲೇ ಸಮಿತಿಯ ಸದಸ್ಯರೊಬ್ಬರ ಬಗ್ಗೆ ದೂರುಗಳು ಕೇಳಿ ಬಂದಿದ್ದವು. ಆದರೆ ಕರ್ನಾಟಕ ಚಲನಚಿತ್ರ ಅಕಾಡೆಮಿಯ ಮಾಜಿ ಅಧ್ಯಕ್ಷ ಟಿ.ಎಸ್.ನಾಗಾಭರಣ ಅವರ ಹಿತಾಸಕ್ತಿಯ ಫಲವಾಗಿ ಅವರು ಸಮಿತಿಯಲ್ಲಿ ಮುಂದುವರಿಯುವಂತಾಯಿತು. ಲಂಚದ ಗುಮಾನಿ ಹೆಚ್ಚಾದಂತೆ ವಾರ್ತಾ ಇಲಾಖೆ ನಿರ್ದೇಶಕ ಕೆ.ಎಸ್.ಬೇವಿನಮರದ ಅವರನ್ನು ಸಂಪರ್ಕಿಸಲಾಯಿತು. ಪಟ್ಟಿಯನ್ನು ತಡೆ ಹಿಡಿಯುವುದಾಗಿ ಅವರು ಭರವಸೆ ನೀಡಿದ್ದಾರೆ~ ಎಂದರು.ನಿರ್ಮಾಪಕ ಮಹೇಶ್ ಸುಖಧರೆ, `ಲಂಚ ನೀಡಿದರೆ ಸಬ್ಸಿಡಿ ಕೊಡಿಸುವುದಾಗಿ ನನಗೂ ಮಧ್ಯವರ್ತಿಗಳಿಂದ ಕರೆ ಬಂದಿತ್ತು. ಅವರು ಹೆಸರು ಹೇಳುತ್ತಿರಲಿಲ್ಲ. ಲಂಚ ನೀಡಲು ಒಪ್ಪಿದರೆ ಮಾತ್ರ ಹೆಚ್ಚಿನ ಮಾಹಿತಿ ನೀಡಲಾಗುವುದು ಎಂದು ಅವರು ಹೇಳುತ್ತಿದ್ದರು. ಹಾಗೆ ಕರೆ ಮಾಡಿದವರ ದೂರವಾಣಿ ಸಂಖ್ಯೆಗಳು ನಮ್ಮ  ಬಳಿ ಇವೆ~ ಎಂದು ಅವರು ವಿವರಿಸಿದರು.ನಿರ್ಮಾಪಕ ಎನ್.ಎಂ.ಸುರೇಶ್, `ಸಮಿತಿ ಒಳ್ಳೆಯ ಚಿತ್ರಗಳನ್ನು ಆಯ್ಕೆ ಮಾಡಿಲ್ಲ ಎಂದು ಹೇಳಲಾಗದು. ಆದರೆ ಆಯ್ಕೆಯಾದ ಚಿತ್ರಗಳಲ್ಲಿ ಶೇ 70ರಷ್ಟು ಚಿತ್ರಗಳು ಕಳಪೆ ಮಟ್ಟದ್ದಾಗಿವೆ. ಅಶ್ಲೀಲ ಚಿತ್ರ, ಬಿಡುಗಡೆಯಾಗದ ಹಾಗೂ ಹೆಸರೇ ಕೇಳದ ಚಿತ್ರಗಳಿಗೂ ಸಹಾಯಧನ ನೀಡಲಾಗಿದೆ. ಲಂಚ ಪಡೆದಿರುವುದರಿಂದಾಗಿಯೇ ಕಳಪೆ ಗುಣಮಟ್ಟದ ಚಿತ್ರಗಳಿಗೂ ಸಹಾಯಧನ ಲಭಿಸಿದೆ~ ಎಂದು ಬೇಸರ ವ್ಯಕ್ತಪಡಿಸಿದರು.ಮತ್ತೊಬ್ಬ ನಿರ್ಮಾಪಕ ಉಮೇಶ್ ಬಣಕಾರ್, `ಇಡೀ ಲಂಚ ಪ್ರಕರಣದಿಂದ ಚಿತ್ರರಂಗಕ್ಕೆ ಅವಮಾನವಾಗಿದೆ. ದೇವರು ಕೊಟ್ಟರೂ ಪೂಜಾರಿ ಕೊಡನು ಎಂಬಂತಾಗಿದೆ ನಿರ್ಮಾಪಕರ ಸ್ಥಿತಿ. ಸರ್ಕಾರ ಕೂಡಲೇ ಎಚ್ಚೆತ್ತುಕೊಳ್ಳಬೇಕು. ಆಗಿರುವ ಲೋಪವನ್ನು ಸರಿಪಡಿಸಬೇಕು~ ಎಂದು ಒತ್ತಾಯಿಸಿದರು.`ಮುಖ್ಯಮಂತ್ರಿ ಕಚೇರಿಗೆ ಮನವಿ~`ಪ್ರಜಾವಾಣಿ~ಯೊಂದಿಗೆ ಮಾತನಾಡಿದ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷೆ ತಾರಾ, `ಲಂಚ ಪ್ರಕರಣದ ಹಿನ್ನೆಲೆಯಲ್ಲಿ ಸಹಾಯಧನ ಕುರಿತು ಆತುರದ ನಿರ್ಧಾರ ಕೈಗೊಳ್ಳದಂತೆ ಮುಖ್ಯಮಂತ್ರಿ ಕಚೇರಿಗೆ ಮನವಿ ಮಾಡಲಾಗಿದೆ. ಕಚೇರಿಯಿಂದಲೂ ಪೂರಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸೋಮವಾರದ ಬಳಿಕ ಪ್ರಕರಣದ ಸಂಬಂಧ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಲಾಗುವುದು~ ಎಂದು ಹೇಳಿದರು.`ಪ್ರಕರಣ ಬಯಲಿಗೆಳೆಯಲು ಲಂಚ ನೀಡಿದೆ~ಸಮಿತಿಯಲ್ಲಿದ್ದ ಕಳಂಕಿತರನ್ನು ಬಯಲಿಗೆ ಎಳೆಯುವ ಉದ್ದೇಶದಿಂದ ಲಂಚ ನೀಡಿರುವುದಾಗಿ ನಿರ್ಮಾಪಕ ಕೂಡ್ಲು ರಾಮಕೃಷ್ಣ ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದ ಅವರು, `ಸಮಿತಿ ಸದಸ್ಯ ಸುರೇಶ್ ಮಂಗಳೂರು ರೂ 6 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಮಾತುಕತೆ ನಂತರ ರೂ 3.5 ಲಕ್ಷ ನೀಡಲು ಒಪ್ಪಿಗೆಯಾಗಿತ್ತು. ಅದರಲ್ಲಿ 2.5 ಲಕ್ಷ ರೂಪಾಯಿಯನ್ನು ಬ್ಯಾಂಕ್ ಖಾತೆಗೆ ಹಾಕಿದ್ದೆ. ಇನ್ನು 1 ಲಕ್ಷ ರೂಪಾಯಿ ಬಾಕಿ ಇತ್ತು~ ಎಂದು ತಿಳಿಸಿದರು.`ನನ್ನ ಸಿನಿಮಾಕ್ಕೆ ಲಂಚ ನೀಡಿ ಸಬ್ಸಿಡಿ ಪಡೆಯುವ ದುರುದ್ದೇಶ ಇರಲಿಲ್ಲ. ಆದರೆ ಬಹುಕಾಲದಿಂದಲೂ ನಡೆಯುತ್ತಿದ್ದ ಈ ಅವ್ಯವಹಾರಕ್ಕೆ ಅಂತ್ಯ ಹಾಡಬೇಕಿತ್ತು. ನನ್ನ ಸಿನಿಮಾಕ್ಕೆ ಸಬ್ಸಿಡಿ ಬೇಕೇಬೇಕು ಎಂದು ಬಯಸಿದ್ದರೆ ಸಮಿತಿ ಸದಸ್ಯರಲ್ಲಿ ಒಬ್ಬರಾದ ಸುರೇಶ್ ಮಂಗಳೂರು ಅವರು ಕೇಳಿದ ಅಷ್ಟೂ ಮೊತ್ತವನ್ನು ನೀಡಲು ತಯಾರಿದ್ದೆ. ಅವರು ತಮ್ಮ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸಲು ಹೇಳಿದ್ದು ನನ್ನ ಪಾಲಿಗೆ ವರದಾನವಾಯಿತು~ ಎಂದರು.  `ಇದುವರೆಗೆ 22 ಚಿತ್ರಗಳನ್ನು ಮಾಡಿದ್ದೇನೆ. ನನ್ನ ಹಿಂದಿನ ಯಾವ ಚಿತ್ರಗಳಿಗೂ ಲಂಚ ನೀಡಿಲ್ಲ. 25 ಲಕ್ಷ ಸಹಾಯಧನ ನೀಡುತ್ತೇವೆ ಎಂದು ಸುರೇಶ್ ಆಸೆ ಹುಟ್ಟಿಸಿದರು. ಕಾದಂಬರಿ ಆಧಾರಿತ ಚಿತ್ರವಾದ್ದರಿಂದ 15 ಲಕ್ಷ ರೂ ಖಂಡಿತ ಸಿಗುತ್ತದೆ ಎಂಬುದು ತಿಳಿದಿತ್ತು. ಹೀಗಾಗಿ ಸಹಾಯಧನದ ಆಸೆಗೆ ಲಂಚ ನೀಡಿಲಿಲ್ಲ~ ಎಂದು ಹೇಳಿದರು. ನಿರ್ಮಾಪಕರ ಸಂಘ ಅಥವಾ ನಿರ್ದೇಶಕರ ಸಂಘಕ್ಕೆ ಯಾಕೆ ದೂರು ನೀಡಲಿಲ್ಲ ಎಂಬ ಪತ್ರಕರ್ತರ ಪ್ರಶ್ನೆಗೆ ಅವರು ಸೂಕ್ತ ಉತ್ತರ ನೀಡಲಿಲ್ಲ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.