ಮಂಗಳವಾರ, ಜನವರಿ 21, 2020
28 °C

ಚಳಿಯಲ್ಲಿ ಹುಲಿರಾಯನ ಹುಡುಕಾಟ

ಪ್ರಜಾವಾಣಿ ವಾರ್ತೆ/ ಕೆ.ಎಚ್‌. ಓಬಳೇಶ್‌ Updated:

ಅಕ್ಷರ ಗಾತ್ರ : | |

ಚಳಿಯಲ್ಲಿ ಹುಲಿರಾಯನ ಹುಡುಕಾಟ

ಚಾಮರಾಜನಗರ: ಸೂರ್ಯನ ಕಿರಣಗಳು ಮರಗಳ ರೆಂಬೆಕೊಂಬೆ ಸೀಳಿಕೊಂಡು ಭೂಮಿಗೆ ತಾಕಲು ತಡವರಿಸುತ್ತಿದ್ದವು. ಒಂದೆಡೆ ಚುಮುಚುಮು ಚಳಿ. ಮನದಲ್ಲಿ ಹುಲಿ ಕಾಣಸಿಗುತ್ತದೆಯೇ? ಎಂಬ ತವಕ. ಮುಂದೆ ಮೆಲ್ಲನೆ ಹೆಜ್ಜೆ ಇಟ್ಟುಕೊಂಡು ಸಾಗುತ್ತಿರುವ ಅರಣ್ಯ ವೀಕ್ಷಕರು. ಅವರ ಕೈಯಲ್ಲಿ ಮಾರುದ್ದದ ಮಚ್ಚು!ಗಣತಿದಾರರು ಅರಣ್ಯದ ಬಣ್ಣಕ್ಕೆ ಹೊಂದಿಕೊಂಡಿರುವ ಹಸಿರು ವಸ್ತ್ರತೊಟ್ಟಿದ್ದರು. ಅವರನ್ನು ನೋಡಿದ ಚುಕ್ಕಿ ಜಿಂಕೆಗಳು ಚಂಗನೆ ಜಿಗಿದು ಲಂಟಾನಾದ ಪೊದೆಯೊಳಗೆ ಮರೆಯಾಗುತ್ತಿದ್ದವು. ದೂರದಲ್ಲಿ ಬೊಗಳುವ ಜಿಂಕೆ (ಬಾರ್ಕಿಂಗ್‌ ಡೀರ್‌) ತಾನು ಇಲ್ಲಿದ್ದೇನೆ ಎಂದು ಗಟ್ಟಿಯಾಗಿ ಕೂಗುತ್ತಿತ್ತು. ಚಳಿಗೆ ಹಕ್ಕಿಗಳ ರಾಗಾಲಾಪನೆ ಕೊಂಚ ಕಡಿಮೆಯಾದಂತೆ ಭಾಸವಾಗಿತ್ತು.ಅರಣ್ಯ ಇಲಾಖೆಯ ಸಿಬ್ಬಂದಿ ಹಾಗೂ ಸ್ವಯಂ ಸೇವಕರು ತಮಗೆ ನಿಗದಿಪಡಿಸಿದ್ದ 5 ಕಿ.ಮೀ. ಉದ್ದದ ಸೀಳುದಾರಿಗಳಲ್ಲಿ ಬೆಳಿಗ್ಗೆ 6.30ಗಂಟೆಗೆ ನಡೆಯಲು ಆರಂಭಿಸಿದ್ದರು. ಹುಲಿಯ ಮಲ, ಅದರ ಹೆಜ್ಜೆಗುರುತು ಕಂಡು ಚಳಿಯಲ್ಲಿ ಖುಷಿಗೊಂಡಿದ್ದರು.ಕಾಡುನಾಯಿಗಳು ನಾಲಿಗೆ ಹೊರಚಾಚಿ ಎಳೆಬಿಸಿಲಿಗೆ ಮೈಯೊ­ಡಿ­ದ್ದವು. ಚಿರತೆಯ ದೃಷ್ಟಿಯುದ್ಧಕ್ಕೆ ಸಿಲುಕಿದ ಗಣತಿದಾರರಿಗೆ ಉತ್ಸಾಹ ಇಮ್ಮಡಿಗೊಂಡಿತ್ತು. ಕರಡಿಗಳ ಹೆಜ್ಜೆಗುರುತು, ಹಕ್ಕಿಗಳ ಕಲರವ ಮೊದಲ­ನೇ ದಿನವೇ ಗಣತಿ­ದಾರರಲ್ಲಿ ಹುಮ್ಮಸ್ಸು ಹೆಚ್ಚಿಸಿತ್ತು.ಬಿಳಿಗಿರಿರಂಗನಾಥ ಸ್ವಾಮಿ ಹುಲಿ ರಕ್ಷಿತಾರಣ್ಯದ ಸೀಳುದಾರಿಯೊಂದರಲ್ಲಿ ಪೊನ್ನಂಪೇಟೆಯ ಫಾರೆಸ್ಟಿ ಕಾಲೇಜಿನಿಂದ ಬಂದಿದ್ದ ವಿದ್ಯಾರ್ಥಿ ಚೇತನ್‌ ಹುಲಿ ಗಣತಿಯಲ್ಲಿ ತೊಡಗಿ ದ್ದರು. ಕಾಲೇಜಿನಲ್ಲಿ ಕೇವಲ ಥಿಯರಿ ಕೇಳಿದ್ದ ಅವರು ಕಾಡಿನ ಭಾಷೆ ಅರ್ಥೈಸಿಕೊಳ್ಳುವ ಸಂತಸದಲ್ಲಿದ್ದರು.‘ನಾನು ಮೊದಲ ಬಾರಿಗೆ ಹುಲಿ ಗಣತಿಗೆ ಬಂದಿದ್ದೇನೆ. ಕಾಲೇಜಿನಲ್ಲಿ ನಾವು ಕೇವಲ ಥಿಯರಿ ಓದುತ್ತೇವೆ. ಅರಣ್ಯ ಸುತ್ತಿದರೆ ನಮಗೆ ನೈಜ ಅನುಭವ ಸಿಗುತ್ತದೆ. ಗಣತಿಯಲ್ಲಿ ಭಾಗವಹಿಸಿ ರುವುದು ಖುಷಿ ತಂದಿದೆ’ ಎಂದು ಹೇಳುವಾದ ಅವರ ಮೊಗದಲ್ಲಿ ಮಂದಹಾಸ ಇಣುಕಿತ್ತು.ಅರಣ್ಯ ರಕ್ಷಕ ಪ್ರಮೋದ್‌ ಅವರಿಗೂ ಇದು ಮೊದಲ ಹುಲಿ ಗಣತಿ. ಅವರು ಸಹ ಖುಷಿಯಲ್ಲಿದ್ದರು. ಗಣತಿ ಬಗ್ಗೆ ಈ ಮೊದಲೇ ತರಬೇತಿ ಹೊಂದಿದ್ದ ಅವರು, ಐದು ಮಂದಿ ಗಣತಿದಾರರ ತಂಡದ ನೇತೃತ್ವ ವಹಿಸಿದ್ದರು.‘ಆನೆ ಗಣತಿ ವೇಳೆ ನಾನು ತರಬೇತಿ­ಯಲ್ಲಿ­ದ್ದೆ. ಹೀಗಾಗಿ, ಗಣತಿ­ಯಲ್ಲಿ ಭಾಗವಹಿಸಿ­ರಲಿಲ್ಲ. ಈಗ ಹುಲಿ ಗಣತಿಯಲ್ಲಿ ಪಾಲ್ಗೊಂಡಿದ್ದೇನೆ. ನಿಖರವಾಗಿ ಮಾಹಿತಿ ದಾಖಲಿಸುತ್ತಿದ್ದೇವೆ. ಜತೆಗೆ, ಸಂತೋಷವೂ ಆಗಿದೆ’ ಎಂದರು ಪ್ರಮೋದ್‌.ಗಣತಿ ವಿಧಾನ

ಮೊದಲ ಮೂರು ದಿನದ ಗಣತಿಯಲ್ಲಿ ಹುಲಿ ಹಾಗೂ ಇತರೇ ಮಾಂಸಾಹಾರಿ ಪ್ರಾಣಿಗಳನ್ನು ಗಣತಿದಾರರು ತಮಗೆ ನೀಡಿರುವ ನಮೂನೆ– 1ರಲ್ಲಿ ದಾಖಲಿಸಲಿದ್ದಾರೆ. ಡಿ. 21ರಿಂದ 23ರವರೆಗೆ ನಡೆಯುವ ಗಣತಿಯಲ್ಲಿ 2 ಕಿ.ಮೀ. ಉದ್ದದ ಸೀಳುದಾರಿ ಗುರುತಿಸಲಾಗುತ್ತದೆ.ಈ ಅವಧಿಯಲ್ಲಿ ಕಣ್ಣಿಗೆ ಕಾಣುವ ಸಸ್ಯಾಹಾರಿ ಪ್ರಾಣಿಗಳನ್ನು ನಮೂನೆ– 2ರಲ್ಲಿ ದಾಖಲಿಸಲಿದ್ದಾರೆ.  ಜತೆಗೆ, ಒಂದು ನಿರ್ದಿಷ್ಟ ಪ್ರದೇಶ ಗುರುತಿಸಿ ಅಲ್ಲಿರುವ ಸಸ್ಯಗಳು, ಮರಗಳು, ಹುಲ್ಲು ಇತ್ಯಾದಿ ಬಗ್ಗೆ ಮಾಹಿತಿ ಕ್ರೋಡೀಕರಿಸಲಾಗುತ್ತದೆ.ಬಿಆರ್‌ಟಿಯಲ್ಲಿ 50 ಹುಲಿ

ಚಾಮರಾಜನಗರ: ರಾಜ್ಯದ ಹುಲಿ ರಕ್ಷಿತಾರಣ್ಯಗಳಲ್ಲಿ ಈ ಮೊದಲು ವನ್ಯಜೀವಿ ಸ್ವಯಂಸೇವಾ ಸಂಸ್ಥೆಗಳು ಕ್ಯಾಮೆರಾ ಟ್ರ್ಯಾಪಿಂಗ್‌ ಅಳವಡಿಸುತ್ತಿದ್ದವು. ಆದರೆ, ಅರಣ್ಯ ಇಲಾಖೆಗೆ ಯಾವುದೇ ಛಾಯಾಚಿತ್ರ, ನಿಖರ ಮಾಹಿತಿ ನೀಡುತ್ತಿದ್ದುದು ಕಡಿಮೆ.

‘ಈಗ ಅರಣ್ಯ ಇಲಾಖೆಯಿಂದಲೇ ಹುಲಿ ಕಾಡುಗಳಲ್ಲಿ ಕ್ಯಾಮೆರಾ ಟ್ರ್ಯಾಪಿಂಗ್‌ ಅಳವಡಿಸಲಾಗುತ್ತದೆ. ಬಿಆರ್‌ಟಿ ಹುಲಿ ರಕ್ಷಿತಾರಣ್ಯದಲ್ಲಿ 100 ಕ್ಯಾಮೆರಾ ಅಳವಡಿಸಲಾಗಿದೆ. 40 ದಿನದವರೆಗೆ ಕ್ಯಾಮೆರಾ ಟ್ರ್ಯಾಪಿಂಗ್‌ ಅಳವಡಿಸಲಾಗುತ್ತದೆ. ಅಲ್ಲಿ ಲಭಿಸುವ ಛಾಯಾಚಿತ್ರಗಳನ್ನು ಬಳಸಿಕೊಂಡು ಹುಲಿ ಸಂರಕ್ಷಣೆಗೆ ವಿಶೇಷ ಒತ್ತು ನೀಡಲಾಗುತ್ತಿದೆ’ ಎಂದು ಬಿಆರ್‌ಟಿಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ನಿರ್ದೇಶಕ ಎಸ್‌.ಎಸ್‌. ಲಿಂಗರಾಜ ತಿಳಿಸಿದರು.‘ಹುಲಿ ಸಂಚರಿಸುವ ಎರಡು ಬದಿಯಲ್ಲಿ ಕ್ಯಾಮೆರಾ ಅಳವಡಿಸಲಾಗುತ್ತದೆ. ಹುಲಿಯ ಎರಡು ಬದಿಯ ಛಾಯಾಚಿತ್ರಗಳು ಲಭಿಸುತ್ತವೆ. ಕಂಪ್ಯೂಟರ್‌ನಲ್ಲಿ ಅಳವಡಿಸಿರುವ ವಿಶೇಷ ತಂತ್ರಾಂಶದ ಮೂಲಕ ನಿಖರ ಛಾಯಾಚಿತ್ರ ಗುರುತಿಸಬಹುದು. ಕ್ಯಾಮೆರಾ ಥರ್ಮಲ್‌ ಸೆನ್ಸಾರ್ ಹೊಂದಿರುತ್ತದೆ. 40 ದಿನದಲ್ಲಿ 3,500 ಛಾಯಾಚಿತ್ರ ತೆಗೆಯುವ ಸಾಮರ್ಥ್ಯ ಹೊಂದಿದೆ’ ಎಂದು ವಿವರಿಸಿದರು.ವನ್ಯಜೀವಿ ತಜ್ಞರ ಅಭಿಪ್ರಾಯದಂತೆ ಬಿಆರ್‌ಟಿಯಲ್ಲಿ 10 ಚ.ಕಿ.ಮೀ.ಗೆ ಒಂದು ಹುಲಿ ಇರುವ ಬಗ್ಗೆ ಅಂದಾಜಿಸಿದ್ದಾರೆ. ಹೀಗಾಗಿ, ಅರಣ್ಯದ ವಿಸ್ತೀರ್ಣ ಪರಿಗಣಿಸಿದರೆ ಸುಮಾರು 50 ಹುಲಿಗಳಿರುವ ಬಗ್ಗೆ ಅಂದಾಜಿಸಲಾಗಿದೆ ಎಂದರು.ಹೆಚ್ಚುವರಿ ಕಳ್ಳಬೇಟೆ ತಡೆ ಶಿಬಿರ

ಚಾಮರಾಜನಗರ: ‘ಜಿಲ್ಲೆಯಲ್ಲಿ ಹೊಸದಾಗಿ ಮಲೆಮಹದೇಶ್ವರ ವನ್ಯಜೀವಿಧಾಮ ಘೋಷಣೆಯಾಗಿದ್ದು, ಪ್ರಸಕ್ತ ವರ್ಷ ಹೆಚ್ಚುವರಿಯಾಗಿ 5 ಕಳ್ಳಬೇಟೆ ತಡೆ ಶಿಬಿರ ಸ್ಥಾಪಿಸಲು ನಿರ್ಧರಿಸಲಾಗಿದೆ’ ಎಂದು ಚಾಮರಾಜನಗರ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ದಿಲೀಪ್‌ಕುಮಾರ್ ದಾಸ್‌ ತಿಳಿಸಿದರು.ಮಲೆಮಹದೇಶ್ವರ ಮತ್ತು ಕಾವೇರಿ ವನ್ಯಜೀವಿಧಾಮದೊಳಗಿದ್ದ ಎಲ್ಲ ದನದ ದೊಡ್ಡಿಗಳನ್ನು ತೆರವುಗೊಳಿಸಲಾಗಿದೆ. ವನ್ಯಜೀವಿ ಸಂರಕ್ಷಣೆಗೆ ವಿಶೇಷ ಒತ್ತು ನೀಡಲಾಗಿದೆ. ಕಾವೇರಿ ವನ್ಯಜೀವಿಧಾಮದಲ್ಲೂ ಅಲ್ಲಿನ ಉಪ ಅರಣ್ಯ ಸಂರಕ್ಷಣಾಧಿಕಾರಿ ಅವರು ಕೆಲವು ಭಾಗದಲ್ಲಿ ಕ್ಯಾಮೆರಾ ಟ್ರ್ಯಾಪಿಂಗ್‌ ಅಳವಡಿಸಿದ್ದಾರೆ. ಹುಲಿಗಳು ಕ್ಯಾಮೆರಾದಲ್ಲಿ ಸೆರೆ ಸಿಕ್ಕಿವೆ ಎಂದರು. ಈ 2 ವನ್ಯಜೀವಿಧಾಮದಲ್ಲೂ ಹುಲಿಗಳಿವೆ. ಬಿಆರ್‌ಟಿಯಿಂದ ಹೊಸ ನೆಲೆ ಹುಡುಕುವ ಹುಲಿಗಳಿಗೆ ವನ್ಯಜೀವಿಧಾಮಗಳು ಆಶ್ರಯ ಕಲ್ಪಿಸಿವೆ ಎಂದು ವಿವರಿಸಿದರು.‘ಎಲ್ಲೆಡೆ ಹುಲಿ ತಂತ್ರಾಂಶ ಬಳಸಿ’

ಬಿಳಿಗಿರಿರಂಗನಾಥ ಸ್ವಾಮಿ ಹುಲಿ ರಕ್ಷಿತಾರಣ್ಯದಲ್ಲಿ ‘ಹುಲಿ’ ತಂತ್ರಾಂಶ ಬಳಸಿಕೊಂಡು ಗಣತಿ ನಡೆಯುತ್ತಿದೆ. ದೇಶದ ಇತರೇ ಹುಲಿ ಕಾಡುಗಳಲ್ಲಿ ನಡೆಯುತ್ತಿರುವ ಗಣತಿಗಿಂತಲೂ ಇದು ಭಿನ್ನವಾಗಿದೆ. ಇದರಿಂದ ನಿಖರ ಮಾಹಿತಿ ಲಭಿಸಲಿದೆ. ಆಗ ಹುಲಿ ಸಂರಕ್ಷಣಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಸಹಕಾರಿಯಾಗಲಿದೆ. ದೇಶದ ಎಲ್ಲ ಹುಲಿ ರಕ್ಷಿತಾರಣ್ಯದಲ್ಲಿಯೂ ಸಂರಕ್ಷಣೆಗಾಗಿ ಇಂತಹ ತಂತ್ರಾಂಶ ಬಳಸಲು ಕೇಂದ್ರ ಸರ್ಕಾರ ಕ್ರಮಕೈಗೊಳ್ಳಬೇಕು’

–ಮಲ್ಲೇಶಪ್ಪ, ವನ್ಯಜೀವಿ ಪರಿಪಾಲಕ

ಪ್ರತಿಕ್ರಿಯಿಸಿ (+)