ಬುಧವಾರ, ಮೇ 18, 2022
23 °C

ಚಾಮುಂಡಿ ಬೆಟ್ಟದಲ್ಲಿ ಜನಸಾಗರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಇಲ್ಲಿಗೆ ಸಮೀಪದ ಚಾಮುಂಡಿ ಬೆಟ್ಟದ ಚಾಮುಂಡೇಶ್ವರಿಗೆ ಆಷಾಢ ಮಾಸದ ಮೊದಲ ಶುಕ್ರವಾರ ಸಾವಿರಾರು ಭಕ್ತರು ವಿಶೇಷ ಪೂಜೆ ಸಲ್ಲಿಸಿದರು. ಸೂರ್ಯೋದಯಕ್ಕೂ ಮುನ್ನವೇ ಬೆಟ್ಟಕ್ಕೆ ಆಗಮಿಸಿದ ಭಕ್ತರು ದೇವಿಯ ದರ್ಶನ ಪಡೆದು ಪುನೀತರಾದರು.ಚಾಮುಂಡಿ ಬೆಟ್ಟದಲ್ಲಿ ಶುಕ್ರವಾರ ಬೆಳಗಿನ ಜಾವ 3.30ರಿಂದ ಆರಂಭವಾದ ಪೂಜಾ ಕೈಂಕರ್ಯಗಳು ಸತತ ಎರಡು ಗಂಟೆ ಜರುಗಿದವು. ಹೂ, ರೇಷ್ಮೆ ಬಟ್ಟೆಯಿಂದ ಶೃಂಗರಿಸಲಾಗಿದ್ದ ಚಾಮುಂಡೇಶ್ವರಿ ದೇವಿಗೆ ಪ್ರಧಾನ ಅರ್ಚಕ ಶಶಿಶೇಖರ್ ದೀಕ್ಷಿತ್ ನೇತೃತ್ವದಲ್ಲಿ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ ಮಾಡಲಾಯಿತು.

ಸಹಸ್ರನಾಮ ಅರ್ಚನೆ, ಮಂಗಳಾರತಿಯ ಬಳಿಕ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ರಾಜ್ಯದ ವಿವಿಧೆಡೆಗಳಿಂದ ಆಗಮಿಸಿದ ಭಕ್ತರು ನಸುಕಿನ 5.30ರಿಂದ ರಾತ್ರಿಯವರೆಗೆ ದೇವಿಯ ದರ್ಶನ ಪಡೆದರು.ದೇವಸ್ಥಾನವನ್ನು ಗರುಡ ಕಂಬದಿಂದ ಗರ್ಭಗುಡಿಯವರೆಗೆ ವಿವಿಧ ಬಗೆಯ ಹೂ, ದಾಳಿಂಬೆ ಹಣ್ಣುಗಳಿಂದ ಅಲಂಕರಿಸಲಾಗಿತ್ತು. ದೇವಿಯ ಪೂಜೆಗಾಗಿ ಭಕ್ತರು ಗುರುವಾರ ರಾತ್ರಿಯಿಂದಲೇ ಬೆಟ್ಟಕ್ಕೆ ಆಗಮಿಸಿದ್ದರು. ದೇವಿಗೆ ಹರಕೆ ಸಲ್ಲಿಸುವ ಭಕ್ತರು ಮೆಟ್ಟಿಲು ಹತ್ತಿ ಬೆಟ್ಟಕ್ಕೆ ಬಂದರು. ವಿಶೇಷ, ನೇರ ಹಾಗೂ ಸಾಮಾನ್ಯ ಪ್ರವೇಶ ದ್ವಾರದ ಮೂಲಕ ದೇವಾಲಯ ಪ್ರವೇಶಿಸಿ, ಪೂಜೆ ಸಲ್ಲಿಸಿದರು.ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಸೀರೆ, ಕುಪ್ಪಸ ಅರ್ಪಿಸಿ, ಹೂ, ಕುಂಕುಮ, ಲಾಡು ಪ್ರಸಾದ ಪಡೆದರು. ಬೆಟ್ಟಕ್ಕೆ ಆಗಮಿಸುವ ಭಕ್ತರಿಗಾಗಿ ನಗರ ಸಾರಿಗೆ ಸಂಸ್ಥೆ ಬೆಳಗಿನ ಜಾವ 3 ಗಂಟೆಯಿಂದಲೇ ಬಸ್ ಸೌಲಭ್ಯ ಕಲ್ಪಿಸಿತ್ತು. ಬೆಟ್ಟದಲ್ಲಿ ವಾಹನ ದಟ್ಟಣೆಯನ್ನು ನಿಯಂತ್ರಿಸುವ ಉದ್ದೇಶದಿಂದ ಈ ಬಾರಿಯೂ ಖಾಸಗಿ ವಾಹನಗಳ ಪ್ರವೇಶ ನಿಷೇಧಿಸಲಾಗಿತ್ತು.

ದ್ವಿಚಕ್ರ ವಾಹನ, ಕಾರುಗಳ ನಿಲುಗಡೆಗೆ ಬೆಟ್ಟದ ತಪ್ಪಲಿನಲ್ಲಿರುವ ಹೆಲಿಪ್ಯಾಡ್‌ನಲ್ಲಿ ವ್ಯವಸ್ಥೆ ಕಲ್ಪಿಸಲಾಗಿತ್ತು. ಅಲ್ಲಿಂದ ಬೆಟ್ಟಕ್ಕೆ ತೆರಳಲು ಉಚಿತ ಬಸ್ ಸೇವೆ ಒದಗಿಸಲಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.