ಮಂಗಳವಾರ, ಮೇ 17, 2022
27 °C

ಚಿಕ್ಕಂದಿನಲ್ಲೇ ಮಕ್ಕಳಲ್ಲಿ ಜಾಗೃತಿ ಮೂಡಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೇವನಹಳ್ಳಿ: ಗ್ರಾಮೀಣ ವಿದ್ಯಾರ್ಥಿಗಳು ನಗರ ಪ್ರದೇಶದ ವಿದ್ಯಾರ್ಥಿಗಳೊಂದಿಗೆ ಸ್ಪರ್ಧಾತ್ಮಕ ಪೈಪೋಟಿ ಎದುರಿಸಲು ಅವರನ್ನು ಪ್ರಾಥಮಿಕ ಹಂತದಿಂದಲೇ ಜಾಗೃತಗೊಳಿಸುವ ಅವಶ್ಯಕತೆಯಿದೆ ಎಂದು ಗ್ರಾಮದ ಮುಖಂಡ ಹಾಗೂ ದಾನಿ ಗಂಗಾಧರಪ್ಪ ತಿಳಿಸಿದರು.ತಾಲ್ಲೂಕಿನ ಬ್ಯಾಡರಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕೊಠಡಿಯಲ್ಲಿ ಬುಧುವಾರ ಶಾಲೆಗೆ ಉಚಿತ ಕಂಪ್ಯೂಟರ್ ಕೊಡುಗೆ ಮತ್ತು ಉಚಿತ ನೋಟ್ಸ್ ಪುಸ್ತಕ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ಹಿಂದಿನ ಗುರುಕುಲ ಪದ್ಧತಿಗೂ ಇಂದಿನ ಆಧುನಿಕ ಶಿಕ್ಷಣಕ್ಕೂ ಬಹಳಷ್ಟು ವ್ಯತ್ಯಾಸವಿದೆ.  ತಾಂತ್ರಿಕ ಕ್ಷೇತ್ರದಲ್ಲಿ ಕ್ಷಣ ಕ್ಷಣಕ್ಕೂ ಬದಲಾಗುತ್ತಿರುವ ಬೆಳವಣಿಗೆಗಳನ್ನು ವಿದ್ಯಾರ್ಥಿಗಳ ಗಮನಿಸುತ್ತಿರಬೇಕು. ಈ ದಿಸೆಯಲ್ಲಿ ಪೋಷಕರು ಮಕ್ಕಳ ಶಿಕ್ಷಣದ ಬಗ್ಗೆ ಹೆಚ್ಚು ಒತ್ತು ನೀಡಬೇಕು ಎಂದು ಸಲಹೆ ನೀಡಿದರು.ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮುನಿಶ್ಯಾಮೇಗೌಡ ಮಾತನಾಡಿ, ಗಂಗಾಧರಪ್ಪನವರು ಶಾಲೆಗೆ ಕಂಪ್ಯೂಟರ್, ಕಾಂಪೌಂಡ್ ನಿರ್ಮಾಣಕ್ಕೆ ಮತ್ತು ಮಕ್ಕಳಿಗೆ ಕ್ರೆಡಾ ಸಾಮಗ್ರಿ, ಡೆಸ್ಕ್ ವ್ಯವಸ್ಥೆ ಹಾಗೂ ಶಾಲೆ ಆವರಣದಲ್ಲಿ ಉದ್ಯಾನವನ ನಿರ್ಮಿಸಿಕೊಡುವಲ್ಲಿ ಉದಾರತೆ ಮೆರೆದಿರುವುದು ಶ್ಲಾಘನೀಯ ಎಂದರು.ಮುಖ್ಯಶಿಕ್ಷಕ ಮುನಿಆಂಜಿನಪ್ಪ ಮಾತನಾಡಿ, 1952ರಲ್ಲಿ ಪ್ರಾಥಮಿಕ ಶಾಲೆಯೊಂದಿಗೆ ಆರಂಭಗೊಂಡ ಈ ಶಾಲೆಯಲ್ಲಿ ಶಿಕ್ಷಣ ಪಡೆದಿರುವ ಅನೇಕ ವಿದ್ಯಾರ್ಥಿಗಳು ಇಂದು ಉನ್ನತ ಪದವಿಯಲ್ಲಿದ್ದಾರೆ. ಆದ್ದರಿಂದ ಯಾರಿಗೂ ಸರ್ಕಾರಿ ಶಾಲೆ ಎಂಬ ಕೀಳೆರಿಮೆ ಬೇಡ. ಬದಲಾದ ಪರಿಸ್ಥಿತಿಯಲ್ಲಿ ಮಕ್ಕಳಿಗೆ ಕಂಪ್ಯೂಟರ್ ಶಿಕ್ಷಣ ಮಹತ್ತರ ಸಾಧನವಾಗಲಿದೆ ಎಂದರು.ಶಾಲಾಭಿವೃದ್ಧಿ ಸಮಿತಿ ಸದಸ್ಯ ಮಂಜುನಾಥ್, ಬೈರೇಗೌಡ, ಶಿವಕುಮಾರ್, ಬಸಂತ ಕುಮಾರ್, ಶಿಕ್ಷಕಿ ಲಕ್ಷ್ಮೀ, ಅಂಬಿಕಾ ಇದ್ದರು. ಇದೇ ಸಂದರ್ಭದಲ್ಲಿ ದಾನಿಯಾದ ಗಂಗಾಧರಪ್ಪ ಹಾಗೂ ವರ್ಗಾವಣೆಗೊಂಡ ಶಿಕ್ಷಕ ನಾಗರಾಜ್ ಅವರನ್ನು ಶಾಲಾಭಿವೃದ್ಧಿ ಸಮಿತಿವತಿಯಿಂದ ಸನ್ಮಾನಿಸಲಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.