ಮಂಗಳವಾರ, ಮಾರ್ಚ್ 9, 2021
23 °C

ಚಿತ್ರಾಂಗದಾ ಸಲ್ಲಾಪ...

ಸಂದರ್ಶನ: ಈರಪ್ಪ ಹಳಕಟ್ಟಿ Updated:

ಅಕ್ಷರ ಗಾತ್ರ : | |

ಚಿತ್ರಾಂಗದಾ ಸಲ್ಲಾಪ...

ತಮ್ಮ ಕನಸಿನ ಕನ್ಯೆಯ ತೆರೆಯ ಮೇಲಿನ ಹಸಿಬಿಸಿ ದೃಶ್ಯಗಳನ್ನು ಮತ್ತೊಮ್ಮೆ ಸ್ಮರಿಸಿಕೊಂಡು  ಕುತೂಹಲದಿಂದ ಕಾಯುತ್ತ ಬಿಸಿಯಾಗಿ ಕುಳಿತಿದ್ದ ಆ ಯುವಕರ ಸಹನೆಯ ಕಟ್ಟೆ ಒಡೆಯುವಂತಿತ್ತು. ಇನ್ನೆಷ್ಟು ಹೊತ್ತು ಕಾಯುವುದು ಎಂಬ ಚಡಪಡಿಕೆ ಅವರಲ್ಲಿ.

ನಗರದ ಆನ್‌ಲೈನ್ ಫ್ಯಾಷನ್ ಸ್ಟೋರ್ ‘ಮಿಂಟ್ರಾ ಡಾಟ್‌ ಕಾಮ್’ನ ಪ್ರಧಾನ ಕಚೇರಿಗೆ ತಿಂಗಳ ಫ್ಯಾಷನ್ ಅತಿಥಿಯಾಗಿ ಆಗಮಿಸಿದ್ದ ಬಾಲಿವುಡ್ ನಟಿ ಚಿತ್ರಾಂಗದಾ ಸಿಂಗ್ ಅವರ ಪ್ರತೀಕ್ಷೆಯ ಕ್ಷಣಗಳು ಹೀಗಿದ್ದವು.ಕ್ಷಣಕ್ಕೊಮ್ಮೆ ಕೈಗಡಿಯಾರದಲ್ಲೂ, ಮೊಬೈಲ್‌ನಲ್ಲೂ ಸಮಯ ನೋಡುತ್ತಿದ್ದವರಿಗೆ ಕೊನೆಗೂ ಅದಕ್ಕೊಂದು ಇತಿಶ್ರೀ ಹಾಡುವ ಸಮಯವೂ ಬಂತು.

ಬಂದೇ ಬಿಟ್ಟರು ಚಿತ್ರಾಂಗದಾ. ಮೈತುಂಬ ಕೆಂಪುಡುಗೆ ಉಟ್ಟು, ಬಿಡುಬೀಸಾಗಿ ಹೆಜ್ಜೆ ಹಾಕುತ್ತಾ ಮುಗುಳು ನಗೆ ಹರಿಬಿಟ್ಟು, ಕೈಬೀಸುತ್ತಾ ವೇದಿಕೆ ಏರಿದರು ಆ ಸ್ನಿಗ್ಧ ಸುಂದರಿ.ವೇದಿಕೆ ಮೇಲೆ ಪ್ರಸ್ತುತಪಡಿಸಲಾದ ಮಿಂಟ್ರಾದ ಬೇಸಿಗೆ ಋತುವಿನ ಹೊಸ ಸಂಗ್ರಹಗಳ ಕುರಿತಂತೆ ತಮ್ಮ ಅನಿಸಿಕೆ ಹಂಚಿಕೊಂಡು, ಕೆಲ ಉದ್ಯೋಗಿಗಳಿಗೆ ಬಹುಮಾನ ಹಂಚಿ ವೇದಿಕೆ ಇಳಿದವರೇ ‘ಮೆಟ್ರೊ’ದೊಂದಿಗೆ ಮಾತಿಗೆ ಕುಳಿತರು.**ಫ್ಯಾಷನ್ ಅನ್ನು ಹೇಗೆ ವ್ಯಾಖ್ಯಾನಿಸುತ್ತೀರಿ?

ಫ್ಯಾಷನ್ ಕುರಿತಂತೆ ನಿರ್ದಿಷ್ಟವಾಗಿ ಹೇಳುವುದು ಸ್ವಲ್ಪ ಕಷ್ಟ. ಫ್ಯಾಷನ್ ಎನ್ನುವುದು ಪಟ್ಟಣದಲ್ಲಿರುವ ಹುಡುಗಿಯಂತೆ. ಕಾಲ ಕಾಲಕ್ಕೆ ಬದಲಾಗುವ ಸಂಗತಿಯದು. ಇಂದು ಪ್ರತಿಯೊಬ್ಬಯೂ ಬದಲಾವಣೆ ಬಯಸುತ್ತಾರೆ. ಅದಕ್ಕಾಗಿಯೇ, ಸೆಲೆಬ್ರಿಟಿಗಳು, ರೂಪದರ್ಶಿಯರು ಪರಿಚಯಿಸುವ ಹೊಸ ಶೈಲಿಗಳನ್ನು ಅನುಕರಿಸುತ್ತಾರೆ. ಶೈಲಿಗಿಂತಲೂ ಹೆಚ್ಚಾಗಿ ಇದೊಂದು ಪ್ರವೃತ್ತಿ ಎನ್ನಬಹುದಷ್ಟೇ. ಟ್ರೆಂಡ್ ಅಂದರೆ ಇದೇ.**ಆನ್‌ಲೈನ್ ಖರೀದಿಗೆ ನೀವು ಯಾಕೆ ಆದ್ಯತೆ ನೀಡುತ್ತೀರಿ?

ನಿಮಗೆ ಗೊತ್ತಿರಬಹುದು, ಜನರಿಗಿಂದು ಖರೀದಿಗಾಗಿ ಮಾರುಕಟ್ಟೆಗೆ ಹೋಗುವಷ್ಟೂ ಸಮಯ ಇಲ್ಲದಾಗಿದೆ. ಇದ್ದರೂ, ಕೆಲವರಿಗೆ ಟಿ-ಶರ್ಟ್, ಜೀನ್ಸ್ ಮತ್ತು ಶೂ ಎಲ್ಲಿ ದೊರೆಯುತ್ತವೆ ಎನ್ನುವ ಸರಿಯಾದ ಮಾಹಿತಿ ಇರುವುದಿಲ್ಲ. ಜತೆಗೆ ಸಣ್ಣ ಪ್ರಮಾಣದ ಪಟ್ಟಣಗಳಲ್ಲಿ ಎಲ್ಲ ವಸ್ತುಗಳ ಮಳಿಗೆಗಳಿರುವುದಿಲ್ಲ. ಇವೆಲ್ಲ ಅಂಶಗಳನ್ನು ಗಮನಿಸಿದಾಗ ಆನ್‌ಲೈನ್‌ನಲ್ಲಿ ಖರೀದಿ ಮಾಡುವುದರಿಂದ ಸಮಯ ಮತ್ತು ಹಣದ ಉಳಿತಾಯವಾಗುತ್ತದೆ. ಆದ್ದರಿಂದ ನಾನು ಆನ್‌ಲೈನ್ ಖರೀದಿಗೆ ಒತ್ತು ನೀಡುತ್ತೇನೆ.**ನಿಮ್ಮ ನೆಚ್ಚಿನ ಫ್ಯಾಷನ್ ಡಿಸೈನರ್ ಯಾರು?

ಭಾರತೀಯ ಫ್ಯಾಷನ್ ಡಿಸೈನರ್‌ಗಳು... ಅನೇಕರಿದ್ದಾರೆ. ನಿಖಿಲ್ ತಂಪಿ ತುಂಬಾ ಪ್ರತಿಭಾವಂತ ವಿನ್ಯಾಸಕ. ಇನ್ನುಳಿದಂತೆ ನಿಷ್ಕಾ ಲುಲ್ಲಾ, ಇನ್ನೂ ಅನೇಕರಿದ್ದಾರೆ ತಕ್ಷಣಕ್ಕೆ ಹೆಸರು ನೆನಪಿಗೆ ಬರುತ್ತಿಲ್ಲ. ಹ್ಹಾ, ಗೌರವ್ ಗುಪ್ತಾ ಅವರನ್ನು ತುಂಬಾ ಇಷ್ಟಪಡುತ್ತೇನೆ. ಅವರ ಹೊಸ ಸಂಗ್ರಹವಂತೂ ನನಗೆ ಬಹಳ ಮೆಚ್ಚುಗೆಯಾಯಿತು.**ಎಂದಾದರೂ ಸಿನಿಮಾರಂಗ ಸಾಕೆನಿಸಿದ್ದಿದೆಯಾ? ಇದ್ದರೆ ಯಾಕೆ?

ಬಹಳಷ್ಟು, ಬಹಳಷ್ಟು ಸಾರಿ ಅನ್ನಿಸಿದ್ದಿದೆ. ಅನೇಕ ಬಾರಿ ಒಳ್ಳೆಯ ಅವಕಾಶಗಳು ಕೈತಪ್ಪಿದಾಗ ಮತ್ತು ಅನಗತ್ಯವಾದ ಗಾಸಿಪ್‌ಗಳಿಂದ ಮನಸು ಘಾಸಿಗೊಂಡಾಗಲೆಲ್ಲಾ ಈ ಚಿತ್ರರಂಗ ಸಹವಾಸವೇ ಬೇಡ ಎಂದಿನಿಸಿದ್ದಿದೆ.**ಮುಂದಿನ ಯೋಜನೆ?

ಬಹಳ ದಿನಗಳ ನಂತರ ಭಿನ್ನವಾದ ಕಥಾಹಂದರವುಳ್ಳ ಚಿತ್ರವೊಂದರಲ್ಲಿ ನಟಿಸಲು ಒಪ್ಪಿಕೊಂಡಿದ್ದೇನೆ. ಈಗಾಗಲೇ ಚಿತ್ರಕಥೆ ಸಿದ್ಧವಿದೆ. ಚಿತ್ರೀಕರಣ ಶೀಘ್ರದಲ್ಲಿ ಪ್ರಾರಂಭವಾಗಲಿದೆ.**ನಿಮ್ಮ ವೃತ್ತಿಜೀವನದಲ್ಲಿ ಮರೆಯಲಾಗದ ಘಟನೆ ಯಾವುದು?

ಮರೆಯಲಾಗದ ಘಟನೆ... ಹಾಂ,  ನಟಿಯಾಗಿ ಮೊದಲ ಬಾರಿಗೆ ಕ್ಯಾಮೆರಾ ಎದುರಿಸಿದ ಕ್ಷಣ ನನ್ನ ಜೀವನದಲ್ಲಿ ಮರೆಯಲಾಗದಂತದ್ದು. ಕೈಕೊಡುವ ಸಂಭಾಷಣೆ, ಅಡಿಗಡಿಗೆ ಹದ ತಪ್ಪುತ್ತಿದ್ದ ಹಾವಭಾವ ಜತೆಗೆ ನಡುಕ ಬೇರೆ. ಆ ಕ್ಷಣವನ್ನು ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ.**ನಿಮ್ಮ ಫಿಟ್‌ನೆಸ್‌ ರಹಸ್ಯವೇನು?

ಡಯಟ್, ವ್ಯಾಯಾಮ ಜತೆಗೆ  ಅಪ್ಪನ ಜೀನ್ ನನ್ನ ಈ ಫಿಟ್‌ನೆಸ್‌ಗೆ ಕಾರಣ.**ಬೆಂಗಳೂರು ಕುರಿತು...

ತುಂಬಾ ಒಳ್ಳೆಯ ನಗರ. ದೆಹಲಿಯಂತೆ ಇಲ್ಲಿಯ ಹವಾಗುಣ ಕೂಡ ಬಹಳ ಚೆನ್ನಾಗಿದೆ. ನನ್ನ ಇಷ್ಟದ ನಗರಗಳಲ್ಲಿ ಇದು ಕೂಡ ಒಂದು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.