ಸೋಮವಾರ, ಜನವರಿ 27, 2020
15 °C

ಚಿತ್ರೋತ್ಸವದ ಬೆಳಕಿಂಡಿ

ಬಿ.ಎಂ. ಗಿರಿರಾಜ್‌ Updated:

ಅಕ್ಷರ ಗಾತ್ರ : | |

ಒಂದು ಜಾತಕ ಕಥೆ ಇದೆ. ನಾಲ್ವರು ಕುರುಡರು ಆನೆಯನ್ನು ಮುಟ್ಟಿ ತಮ್ಮ ತಮ್ಮ ತಿಳಿವಳಿಕೆಗೆ ತಕ್ಕಂತೆ ಆನೆಯನ್ನು ವ್ಯಾಖ್ಯಾನಿಸುತ್ತಾರೆ. ಒಬ್ಬ ಆನೆ ಅಂದರೆ ಅದಕ್ಕೆ ನಾಲ್ಕು ಕಂಭಗಳಂತಹ ಕಾಲುಗಳಿರುತ್ತವೆ ಅನ್ನುತ್ತಾನೆ. ಮತ್ತೊಬ್ಬ, ‘ಇಲ್ಲ ಕಣೋ, ಅದಕ್ಕೆ ಉದ್ದ ಮೂಗು ಮತ್ತು ಉದ್ದದ ಎರಡೇ ಹಲ್ಲಿದೆ’ ಅಂದರೆ, ಇನ್ನೊಬ್ಬ ಕಿವಿಯ ಬಗ್ಗೆ ಹೇಳುತ್ತಾನೆ, ಮತ್ತೊಬ್ಬ ಅದರ ಬೆನ್ನು ಮತ್ತು ಬಾಲದ ಬಗ್ಗೆ ಹೇಳುತ್ತಾನೆ.

ಸಿನಿಮಾ ಕೂಡ ಹಾಗೆಯೇ. ಪ್ರತಿಯೊಂದು ಸಿನಿಮಾ ಕೂಡ ಒಂದು ವಿಷಯದ ಬಗ್ಗೆ ಇರುವ ನಮ್ಮ ಕುರುಡು ಗ್ರಹಿಕೆಯೇ ಆಗಿದೆ. ಆದರೆ ಹಲವಾರು ಕುರುಡು ಗ್ರಹಿಕೆಗಳನ್ನು ಸಮೀಕರಿಸಿದಾಗ, ನಮಗೆ ಹೆಚ್ಚಿನ ಸತ್ಯದ ಕಾಣ್ಕೆ ಆಗಬಹುದು. ನಾನು ಕಾಲೇಜಲ್ಲಿದ್ದಾಗ, ‘ಆಶಿರ್ವಾದ್’ ಎನ್ನುವ ಒಂದು ಸಂಸ್ಥೆ, ‘ಹ್ಯೂಮನ್ ವ್ಯಾಲ್ಯೂಸ್ ಇನ್ ಸಿನಿಮಾ’ ಅನ್ನುವ ವಿಷಯದಲ್ಲಿ ಒಂದು ಸಂಕಿರಣ ಏರ್ಪಡಿಸಿ, ಮೂರು ದಿನಗಳಲ್ಲಿ ಐದು ಸಿನಿಮಾ ತೋರಿಸಿ ಅವುಗಳ ಬಗ್ಗೆ ಸಂವಾದ ಏರ್ಪಡಿಸಿತ್ತು. ಆಗ ಎರಡು ಸಿನಿಮಾ ನನಗೆ ತುಂಬ ತಲೆ ಕೆಡಿಸಿದ್ದವು.

ಒಂದು, ‘ಎಡಕಲ್ಲು ಗುಡ್ಡದ ಮೇಲೆ’. ಎರಡನೆಯದು– Women under the influence. ಎರಡೂ ಚಿತ್ರಗಳು ಹೆಣ್ಣಿನ ಒಳ ಮನಸ್ಸಿನ ತಳಮಳದ ಬಗ್ಗೆ ಮಾತನಾಡಿದರೂ, ಎರಡನ್ನೂ ತುಲನೆ ಮಾಡಿದಾಗ, ‘ವುಮೆನ್ ಅಂಡರ್‌ ದಿ ಇನ್‌ಫ್ಲುಯೆನ್ಸ್‌’ ಚಿತ್ರ ಹೆಣ್ಣಿನ ನೋವನ್ನು ಅರ್ಥ ಮಾಡಿಕೊಳ್ಳುವ ನಿಟ್ಟಿನಲ್ಲಿ ಹೆಚ್ಚು ಪ್ರಾಮಾಣಿಕ ಅನ್ನಿಸಿತು. ‘ಎಡಕಲ್ಲು ಗುಡ್ಡದ ಮೇಲೆ’ ಮೊದಲಿನಿಂದಲೇ ಆಪಾದನೆಯ (accusatory) ಭಾವವನ್ನು ಕ್ಷಣ ಕ್ಷಣಕ್ಕೂ ಧ್ವನಿಸುತ್ತಿತ್ತು.ನಾನು ಈ ಚಿತ್ರವನ್ನು ಆ ಮೊದಲೇ ನೋಡಿದ್ದೆ. ಆಗ ನನಗೆ ಪುಟ್ಟಣ್ಣ ಕಣಗಾಲರು ಹೆಣ್ಣಿನ ನೋವನ್ನು ಎಷ್ಟು ಚೆನ್ನಾಗಿ ಚಿತ್ರಿಸಿದ್ದಾರೆ ಅನ್ನಿಸಿತ್ತು. ಅದಕ್ಕೆ ನನ್ನ ಬೌದ್ಧಿಕ ವಿಕಸನದ ಮಿತಿ ಮತ್ತು ನಾನು ಓದಿದ ವಿಮರ್ಶೆಗಳ ಗಾಢ ಪ್ರಭಾವ ಕಾರಣವಾಗಿದ್ದವು. ಆದರೆ ಎರಡು ಚಿತ್ರ ಒಟ್ಟೊಟ್ಟಿಗೆ ನೋಡಿದಾಗ ನನಗನಿಸಿದ್ದು, ‘ವುಮೆನ್ ಅಂಡರ್‌ ದಿ ಇನ್‌ಫ್ಲುಯೆನ್ಸ್‌’ ಹೆಣ್ಣಿನ ನೋವಿನ ಬಗ್ಗೆ ಮಾತಾಡಿದರೆ, ಪುಟ್ಟಣ್ಣನವರ ಸಿನಿಮಾ ನೋವು ಕೊಡಲೇಬೇಕು ಎಂದು ಮಾಡಿರುವ ಸಿನಿಮಾ (ಕಥೆ ಕಟ್ಟುವಿಕೆಯಲ್ಲಿ ವುಮೆನ್ ಚಿತ್ರಕ್ಕಿಂತ ಪುಟ್ಟಣ್ಣನವರ ಸಿನಿಮಾ ಹೆಚ್ಚು ಗಟ್ಟಿಯಾಗಿದ್ದರೂ) ಎನ್ನಿಸಿತು.

ಅಷ್ಟು ಮಾತ್ರವಲ್ಲ, ವಿದೇಶಿ ಚಿತ್ರದ ಹಿನ್ನೆಲೆಯಲ್ಲಿ ನನಗೆ ನಮ್ಮ ಚಿತ್ರ ಹೆಚ್ಚು ಅರ್ಥವಾಯಿತು. ಒಂದು ಸಿನಿಮಾ ಉತ್ಸವ ಸಾಧ್ಯ ಮಾಡುವುದೂ ಹೀಗೆ ನಮ್ಮ ಗ್ರಹಿಕೆಗಳನ್ನು ವಿಸ್ತರಿಸುವ ಕೆಲಸವನ್ನೇ ಅಲ್ಲವೇ? ನಮ್ಮಲ್ಲಿನ ಪೂರ್ವಗ್ರಹಗಳನ್ನ ಭಂಜಿಸಿ ನಮಗೆ ಹೊಸ ಕಾಣ್ಕೆಯನ್ನು ನೀಡುವ ಅನುಭವವನ್ನು ಒಂದು ಅಂತರರಾಷ್ಟ್ರೀಯ ಚಿತ್ರೋತ್ಸವ ಮಾಡುತ್ತದೆ.

ಅದು ನಮ್ಮನ್ನ ಗ್ರಸ್ತರನ್ನಾಗಿ ಮಾಡಿದರೂ ಅಡ್ಡಿಯಿಲ್ಲ, ಅನ್ಯಮನಸ್ಕನನ್ನಾಗಿಸದೇ ಇರಬೇಕು. ಅದು, ಗೋಪಾಲಕೃಷ್ಣ ಅಡಿಗರ ಕಾವ್ಯದಲ್ಲಿನ ದ್ವಿರುಕ್ತಿಗಳು ಮತ್ತು ಏಕಕಾಲದಲ್ಲಿ ಸಂಬಂಧ ಇಲ್ಲದ ಅಥವಾ ವಿರುದ್ಧವಾಗಿರುವ ಸಂಕೇತಗಳನ್ನ ಮುಖಾಮುಖಿ ಮಾಡಿ ಹೊಸ ಸತ್ಯ ಮತ್ತು ಸೌಂದರ್ಯದ ಅರಿವು ಮೂಡಿಸುವಂತೆ ಮಾಡುವುದಾಗಬೇಕು. ಸಾಹಿತ್ಯ ಸಮ್ಮೇಳನಕ್ಕೂ ಚಿತ್ರ ಸಮ್ಮೇಳನಕ್ಕೂ ಇರುವ ವ್ಯತ್ಯಾಸ ಇದೇ ಅನಿಸುತ್ತೆ.

ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿದ ಯಾರೂ ‘ಇದರಿಂದ ನನ್ನ ದೃಷ್ಟಿಕೋನ ಬದಲಾಯಿತು’ ಎಂದು ಹೇಳಿರುವುದನ್ನು ನಾನು ನೋಡಿಲ್ಲ. ಸಿನಿಮೋತ್ಸವದ ವಿಷಯ ಹಾಗಲ್ಲ. ಗೋವಾ ಚಿತ್ರೋತ್ಸವಕ್ಕೆ ಹೋದವರನ್ನು, ಕೇರಳ ಚಿತ್ರೋತ್ಸವಕ್ಕೆ ಹೋದವರನ್ನು ‘ಫೆಸ್ಟಿವಲ್‌ ಹೇಗಿತ್ತು’ ಎಂದು ಕೇಳಿದರೆ, ‘ಅದೆಲ್ಲ ಹೇಳಕ್ಕಾಗಲ್ಲ’ ಎನ್ನುವ ಅವರ ಉತ್ತರದಲ್ಲಿ ಅನುಭವವನ್ನು ಹೇಳಲಾಗದ ಒಂದು ವಿಚಿತ್ರ ಸಂತಸದ ಸಂಕಟ ಇದ್ದಂತೆ ಕಾಣಿಸುತ್ತದೆ. ಸ್ಕಾರ್ಸೆಸೆ ಹೇಳುವ ಹಾಗೆ, It is a human desire to share a comman dream ಅನ್ನುವಂತಹ ಅನುಭವ ಅದಾಗಿರಬೇಕು.

ಸಾಮಾನ್ಯವಾಗಿ ‘ವ್ಯಾಪಾರಿ ಸಿನಿಮಾ’ ಅಂತೆಲ್ಲ ಭೋಂಗು ಬಿಟ್ಟು ನಾವು ಮಾಡುವ ಸಿನಿಮಾಗಳು ಸತ್ವಹೀನವಾಗಿರುತ್ತವೆ. ಕಲಾತ್ಮಕ ಅಂತ ಸುಳ್ಳು ಹೇಳಿ ಮಾಡುವ ಸಿನಿಮಾಗಳು ಭಾವಹೀನ ಆಗಿರುತ್ತವೆ. ನಮ್ಮ  ದುರಂತ ಇರುವುದು– ವ್ಯಾಪಾರಿ ಸಿನಿಮಾದಲ್ಲಿ ಸಂದೇಶ ಎಲ್ಲಿದೆ ಎಂದು ಹುಡುಕುವುದರಲ್ಲಿ ಹಾಗೂ ಕಲಾತ್ಮಕ ಸಿನಿಮಾಗಳಲ್ಲಿ ಕಮರ್ಷಿಯಲ್ ಎಲಿಮೆಂಟ್ ಹುಡುಕುವುದರಲ್ಲಿ. ಇಲ್ಲದ್ದನ್ನ ಹುಡುಕಿದರೆ ಏನು ಸಿಗುತ್ತದೆ? ಇವೆರಡೇ ಸಿನಿಮಾ ಪ್ರಕಾರಗಳು ಎಂದು ನಂಬಿದ್ದ ನನ್ನಂಥವರಿಗೆ ಮೊದಲ ಬಾರಿಗೆ ‘ಚಿಲ್ಡ್ರನ್ ಆಫ್ ಹೆವೆನ್’ ನೋಡಿದಾಗ ಏನನ್ನಿಸಿರಬೇಡ?  

ಸಿನಿಮಾ ಹೀಗೂ ಮಾಡಲು ಸಾಧ್ಯವಾ? ಇರಾನ್‌ನಂತಹ ದೇಶದಲ್ಲಿ ಇಂತಹ ಹೂವರಳಬೇಕೆಂದರೆ, ನಮ್ಮಲ್ಲಿ ಬೃಂದಾವನವೇ ಆಗಿರಬೇಕಿತ್ತಲ್ಲ? (ಇತ್ತೀಚಿಗೆ ಬಂದಂತಹ ಬ್ಲಾಕ್ ಬಸ್ಟರ್ ಸಿನಿಮಾವನ್ನು ಇಲ್ಲಿ ಉಲ್ಲೇಖಿಸುತ್ತಿಲ್ಲ). ಯಾಕೆ ಹೀಗಾಯಿತು ಎಂದು ಕೇಳಿಕೊಂಡರೆ, ನಮ್ಮಲ್ಲಿ ಮೊದಲಿಂದಲೂ ಸಿನಿಮಾ ಒಂದು ಸಂಸ್ಕೃತಿ ಅಥವಾ ಕಲೆ ಅನ್ನುವ ಭಾವ ಬೆಳೆಯಲೇ ಇಲ್ಲ ಎನ್ನಿಸುತ್ತದೆ. ‘ಸಿನಿಮಾ ನೋಡಿ ಹಾಳಾಗಬೇಡ’ ಎಂದೇ ನಮ್ಮೆಲ್ಲ ಹಿರಿಯರು ಬಯ್ಯುತ್ತಿದ್ದರು. ಅಲ್ಲಿಗೆ ಸಿನಿಮಾ ಜೂಜಿನಂತಹ ಒಂದು ಸಮಯ ಪೋಲು ಮಾಡುವ ದುರಭ್ಯಾಸ ಎನ್ನುವ ನಂಬಿಕೆಯನ್ನು ನಮ್ಮ ತಲೆಗೆ ಹಾಕಲಾಯಿತು.ಈಗಲೂ ಸಿನಿಮಾ ಅಂದರೆ ಅದು ಟೈಂಪಾಸ್ ಅನ್ನುವ ಮನೋಭಾವವೇ ನಮ್ಮಲ್ಲಿದೆ. ನೋಡಲಿಕ್ಕೆ ಬಂದವನು ಹೀಗಿರಬೇಕಾದರೆ, ಮಾಡಲಿಕ್ಕೆ ಬಂದವನೂ ಅದನ್ನೇ ಮಾಡುತ್ತಾನೆ. ಆದರೆ ಮಾಡುವವನು, ನೋಡುವವನಿಗೆ ಅವನು ಈ ಹಿಂದೆಂದೂ ನೋಡಿರದಿದ್ದನ್ನು ಕಾಣಿಸಿದರೆ? ಇಂಥ ಸಿನಿಮಾಗಳನ್ನು ನಮ್ಮವರು ಎಷ್ಟು ಮಾಡಿಲ್ಲ. ಆದರೂ, ‘ಏನೂ ಆಗಲ್ಲ’ ಅಂತ ಅನುಭವಸ್ಥರು ನುಡಿಯುತ್ತಾರೆ. ಮತ್ತು ಇತಿಹಾಸ ಅವರ ಮಾತನ್ನು ಒಪ್ಪಬಹುದೇನೋ.ನನ್ನ ಗಮನಕ್ಕೆ ಬಂದಂತೆ, ‘ಚಿತ್ರೋತ್ಸವ’ ಎಂದು ಜರುಗುವ ಜಾತ್ರೆಯಲ್ಲಿ ಮೊದಲಿನ ಹಾಗೆ ಈಗೆಲ್ಲ ಮುದುಕರು (ಈ ಪದ ಉಪಯೋಗಿಸಿದ್ದಕ್ಕೆ ಬೇಸರವಾದರೆ ‘ರಿಟೈರ್ಡ್‌’ ಎಂದು ಓದಿಕೊಳ್ಳಬಹುದು) ಮಾತ್ರ ಕಾಣಿಸುತ್ತಿಲ್ಲ. ಐ ಪ್ಯಾಡ್, ಸ್ಮಾರ್ಟ್‌ ಫೋನ್ ಹಿಡಿದುಕೊಂಡ ಯಂಗ್ ಜನರೇಷನ್ ಚಿತ್ರೋತ್ಸವದಲ್ಲಿ ಮಿಂಚುತ್ತಿದೆ. ಈ ಮೂಲಕ ಸಿನಿಮಾ ಉತ್ಸವಗಳಿಗೆ ಒಂದು ಬಗೆಯ ಯೌವನ ಪ್ರಾಪ್ತವಾಗಿದೆ.ಕಳೆದ ಐದ್ಹತ್ತು ವರ್ಷಗಳಲ್ಲಿ ರೂಪುಗೊಂಡ ಈ ಯುವ ಸಿನಿಮಾ ಆಸಕ್ತರನ್ನು ‘ಫಿಲ್ಮ್‌ ಫೆಸ್ಟಿವಲ್ ಜನರೇಷನ್‌’ ಎಂದು ಸಿನಿಮಾ ಸಂದರ್ಭದಲ್ಲಿ ಗುರ್ತಿಸಬಹುದು. ಇದ್ದಕ್ಕಿದ್ದಂತೆ ಎಲ್ಲಿಂದಲೋ ಎದ್ದು ಬಂದಂತೆ ಕಾಣಿಸುವ ಇವರಲ್ಲಿ ಕೆಲವರಿಗೆ, ‘ಥಿಯೇಟರ್ ಸಿಗದೆ ಇದ್ದರೂ ಪರ್ವಾಗಿಲ್ಲ ನಾವೂ ಸಿನಿಮಾ ಮಾಡ್ತೀವಿ’ ಎನ್ನುವ ಹುಮ್ಮಸ್ಸೂ ಇದೆ. ‘ಅವರು ಹಂಗೆ ಮಾಡಿದರು, ಇವರು ಹಿಂಗ್ ಮಾಡಿದರು’ ಎಂದೆಲ್ಲ ಗೊಣಗಿಕೊಳ್ಳುವವರು, ‘ಹೀಗೂ ಸಿನಿಮಾ ಮಾಡಬಹುದಲ್ವಾ?’ ಎನ್ನುವ ಪಾಠವನ್ನು ಚಿತ್ರೋತ್ಸವಗಳ ಮೂಲಕ ಕಲಿಯುತ್ತಾರೆ.

ಇದೆಲ್ಲ ಒಂದು ಸಿನಿಮಾ ನೋಡಿ ಆದ ಬದಲಾವಣೆ ಅಲ್ಲ. ಹಲವು ಸಿನಿಮಾಗಳನ್ನ, ಕೆಲವೊಮ್ಮೆ ಒಂದಕ್ಕೊಂದು ಸಂಬಂಧ ಇಲ್ಲದ ಸಿನಿಮಾಗಳನ್ನ ಒಂದೇ ದಿನ ನೋಡಿ, ಅವತ್ತಿಡೀ ಅದರ ಬಗ್ಗೆಯೇ ಯೋಚಿಸಿ, ಮತ್ತು ಅದರ ಯೋಚನೆಯಿಂದ ಹೊರಬರಲಾರದ ಸ್ಥಿತಿಯಲ್ಲಿ ಹುಟ್ಟುವ ಪ್ರಯತ್ನಗಳಿವು. ಅಂದಹಾಗೆ, ಚಿತ್ರೋತ್ಸವದಲ್ಲಿ ತೋರಿಸುವ ಸಿನಿಮಾಗಳನ್ನ ನಾವು ಬಿಡಿಬಿಡಿಯಾಗಿ ಡೌನಲೋಡ್ ಮಾಡಿಕೊಂಡು ನೋಡಲಿಕ್ಕೂ ಸಾಧ್ಯವಿದೆ. ಆದರೆ, ಉತ್ಸವದ ಅನುಭವ ಮನೆಯ ಚೌಕಟ್ಟಿನಲ್ಲಿ ಸಿಗುವುದಿಲ್ಲ. ಜಾತ್ರೆಯ ದಿನದ ಆರಾಧನೆಗೂ, ಉಳಿದ ದಿನಗಳಲ್ಲಿ ದೇಗುಲದ ಮುಂದೆ ಹೋಗುವಾಗ ಎದೆ ಹಣೆ ಮುಟ್ಟಿಕೊಳ್ಳುವ ಅನುಭವಕ್ಕೂ ಇರುವ ವ್ಯತ್ಯಾಸ ಇಲ್ಲೂ ಇದೆ.ಇಷ್ಟು ಮಾತ್ರವಲ್ಲದೆ, ಚಿತ್ರೋತ್ಸವದಿಂದ ನನ್ನಂಥವರು ಬಯಸುವ ಸಾಧ್ಯತೆಗಳು ಇನ್ನೂ ಇವೆ. ‘ಸನ್‌ಡಾನ್ಸ್’ (Sundance Film Festival) ಎನ್ನುವ ಒಂದು ಚಿತ್ರೋತ್ಸವ ಇದೆ. ಅವರು ಹೊಸ ದನಿಯ ನಿರ್ದೇಶಕರನ್ನು ಪ್ರತಿ ಉತ್ಸವದಲ್ಲೂ ಹುಡುಕುತ್ತಾರೆ. ಅ ಚಿತ್ರೋತ್ಸವದಿಂದ ಪ್ರತಿ ವರ್ಷ ಒಬ್ಬ ಹೊಸ Auteur ಹೊರ ಬರುತ್ತಲೇ ಇದ್ದಾನೆ/ಳೆ. ನಮ್ಮಲ್ಲೂ ಇಂಥ ಹುಡುಕಾಟಗಳು ಸಾಧ್ಯವಾಗಬೇಕು. ಒಬ್ಬ ಗಣಿತಜ್ಞ ‘ನಾಗಮಂಡಲ’ ಚಿತ್ರಕ್ಕೆ ಯಾವ ರೀತಿ ಪ್ರತಿಕ್ರಿಯಿಸುತ್ತಾನೆ? ಒಬ್ಬ ಬಾರ್ ಡ್ಯಾನ್ಸರ್ ‘ಝನಕ್ ಝನಕ್ ಪಾಯಲ್ ಬಾಂಜೆ’ಗೆ ನೀಡುವ ಪ್ರತಿಕ್ರಿಯೆ ಏನು? ಚಿತ್ರೋತ್ಸವಗಳಲ್ಲೇ ನಮಗೆ ಇಂತಹ ಕಾಣ್ಕೆ ಸಿಗಬಹುದು. ಅವರೊಂದಿಗೆ ಚರ್ಚಿಸುವ ಅವಕಾಶ ನಮಗೆ ಸಿಗಬೇಕು. ಚಿತ್ರೋತ್ಸವದ ಪ್ರೆೋಕ್ಷಕನಾಗಿ, ಇದು ನನ್ನ ಆಸೆ.

ಪ್ರತಿಕ್ರಿಯಿಸಿ (+)