ಶುಕ್ರವಾರ, ಏಪ್ರಿಲ್ 23, 2021
31 °C

ಚಿದಾನಂದಮೂರ್ತಿ ವಿರುದ್ಧ ದೂರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸಂಶೋಧಕ ಡಾ.ಎಂ.ಚಿದಾನಂದಮೂರ್ತಿ ಅವರು ಟಿಪ್ಪು ಸುಲ್ತಾನ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ಟಿಪ್ಪು ಸುಲ್ತಾನ್ ಸಂಯುಕ್ತ ರಂಗ ಸಂಘಟನೆಯು ನಗರದ ಕಬ್ಬನ್‌ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.

`ಮುಸ್ಲಿಂಮೇತರರ ವಿರೋಧಿಯಾಗಿದ್ದ ಟಿಪ್ಪು, ಶ್ರೀರಂಗಪಟ್ಟಣದಲ್ಲಿದ್ದ ಅನೇಕ ಹಿಂದೂ ದೇವಾಲಯಗಳನ್ನು ಧ್ವಂಸ ಮಾಡಿ ಮಸೀದಿಗಳನ್ನು ನಿರ್ಮಿಸಿದ್ದ. ಹಿಂದೂ ವಿರೋಧಿಯಾಗಿದ್ದ ಆತನ ಹೆಸರಿನಲ್ಲಿ ವಿಶ್ವವಿದ್ಯಾಲಯ ನಿರ್ಮಿಸಬಾರದು ಎಂದು ಚಿದಾನಂದಮೂರ್ತಿ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಆದ್ದರಿಂದ ಅವರ ವಿರುದ್ಧ ಕ್ರಮ ಕೈಗೊಳ್ಳಿ' ಎಂದು ಸಂಘಟನೆಯ ಅಧ್ಯಕ್ಷ ಸರ್ದಾರ್ ಅಹಮ್ಮದ್ ಖುರೇಷಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಚಿದಾನಂದಮೂರ್ತಿ ಅವರು ಈ ರೀತಿ ಹೇಳಿಕೆ ನೀಡುವ ಮೂಲಕ ಕೋಮುಗಳ ನಡುವೆ ದ್ವೇಷ ಮೂಡಿಸಲು ಯತ್ನಿಸಿದ್ದಾರೆ. ಪತ್ರಿಕಾಗೋಷ್ಠಿ ಮತ್ತು ಪತ್ರಿಕೆಯೊಂದಕ್ಕೆ ನೀಡಿರುವ ಸಂದರ್ಶನದಿಂದ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಅವರು ದೂರಿದ್ದಾರೆ.

`ಧರ್ಮ ಅಥವಾ ಭಾಷೆಯ ಆಧಾರದಲ್ಲಿ ಕೋಮುಗಳ ನಡುವೆ ದ್ವೇಷ ಮೂಡಿಸುವುದು (ಐಪಿಸಿ-153ಎ) ಮತ್ತು ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ (ಐಪಿಸಿ-295ಎ) ಆರೋಪದ ಮೇಲೆ ಚಿದಾನಂದಮೂರ್ತಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ' ಎಂದು ನಗರದ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್ ಟಿ.ಸುನಿಲ್‌ಕುಮಾರ್ ಗುರುವಾರ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

`ಚಿದಾನಂದಮೂರ್ತಿ ಅವರ ಬಗ್ಗೆ ತುಂಬಾ ಗೌರವವಿದೆ. ಆದರೆ, ಟಿಪ್ಪು ಬಗ್ಗೆ ಈ ರೀತಿ ಅವಹೇಳನಕಾರಿಯಾಗಿ ಮಾತನಾಡಿರುವುದು ಅವರಿಗೆ ಶೋಭೆ ತರುವುದಿಲ್ಲ. ಟಿಪ್ಪು ಹಿಂದೂ ವಿರೋಧಿ ಎಂಬುದಕ್ಕೆ ಅವರ ಬಳಿ ಪುರಾವೆಗಳಿದ್ದರೆ ಬಹಿರಂಗಪಡಿಸಲಿ' ಎಂದು ಖುರೇಷಿ `ಪ್ರಜಾವಾಣಿ'ಗೆ ತಿಳಿಸಿದರು.

ಟಿಪ್ಪು ಜನ್ಮ ದಿನ: ರಜೆ ಘೋಷಿಸಲು ಒತ್ತಾಯ

ಬೆಂಗಳೂರು: `ಟಿಪ್ಪು ಸುಲ್ತಾನ್‌ರ ಜನ್ಮ ದಿನಾಚರಣೆಯ ಪ್ರಯುಕ್ತ ನ.10 ರಂದು ರಜೆಯನ್ನು ಘೋಷಿಸಬೇಕು' ಎಂದು ರಯಾನ್ ಪ್ರತಿಷ್ಠಾನದ ಅಧ್ಯಕ್ಷ ಬಿ.ಎಸ್.ರಫೀವುಲ್ಲಾ ಒತ್ತಾಯಿಸಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಟಿಪ್ಪು ಸುಲ್ತಾನ್ ಬಗ್ಗೆ ಅವಹೇಳನಕಾರಿ ಮಾತುಗಳನ್ನು ಹೇಳಲಾಗುತ್ತಿದೆ. ಇದು ಇತಿಹಾಸವನ್ನು ತಿಳಿಯದೆ ಇರುವವರು ಹೇಳುವಂತಹ ಮಾತುಗಳಾಗಿವೆ. ಟಿಪ್ಪುವಿನ ತೇಜೋವಧೆಯನ್ನು ಮಾಡುತ್ತಿರುವುದು ಸರಿಯಲ್ಲ' ಎಂದರು.

`ದೇವನಹಳ್ಳಿ ವಿಮಾನ ನಿಲ್ದಾಣಕ್ಕೆ ಟಿಪ್ಪು ಸುಲ್ತಾನ್ ಅವರ ಹೆಸರನ್ನು ನಾಮಕರಣ ಮಾಡಬೇಕು. ಟಿಪ್ಪು ಸುಲ್ತಾನ್ ಅವರ ಜನ್ಮ ದಿನಾಚರಣೆಯನ್ನು ಸರ್ಕಾರ ಅರ್ಥಪೂರ್ಣವಾಗಿ ಆಚರಿಸಲು ಮುಂದಾಗಬೇಕು' ಎಂದು ಒತ್ತಾಯಿಸಿದರು. `ರಾಜ್ಯದ ದೇವನಹಳ್ಳಿ ಅಥವಾ ಚಿಕ್ಕಬಳ್ಳಾಪುರದಲ್ಲಿ ಟಿಪ್ಪು ಸುಲ್ತಾನ್ ಹೆಸರಿನಲ್ಲಿ ವಿಶ್ವವಿದ್ಯಾಲಯವನ್ನು ಸ್ಥಾಪಿಸಬೇಕು' ಎಂದು ಆಗ್ರಹಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.