ಗುರುವಾರ , ಏಪ್ರಿಲ್ 15, 2021
24 °C

ಚೀಲೂರು ಕಾಲುವೆಗೆ ಕಾಯಕಲ್ಪ

ಪ್ರಜಾವಾಣಿ ವಾರ್ತೆ/ Updated:

ಅಕ್ಷರ ಗಾತ್ರ : | |

ಕನಕಪುರ: ತಾಲ್ಲೂಕಿನಲ್ಲಿ ಹರಿಯುವ ವೃಷಭಾವತಿಗೆ ನದಿಗೆ ಅಡ್ಡಲಾಗಿ ಕಟ್ಟಲಾದ ಚೀಲೂರು ಚೆಕ್ ಡ್ಯಾಮ್ ನೀರಾವರಿ ಯೋಜನೆಗೆ ಶಾಸಕ ಡಿ.ಕೆ.ಶಿವಕುಮಾರ್ ಇದೀಗ ಕಾಯಕಲ್ಪ ನೀಡಿದ್ದಾರೆ. ಇದರಿಂದ ಕಸಬಾ ಹೋಬಳಿಯ ಬಹುತೇಕ ಗ್ರಾಮಗಳಿಗೆ ಶಾಶ್ವತ ನೀರಾವರಿ ಭಾಗ್ಯ ದೊರಕಿದಂತಾಗಿದೆ.ಇಲ್ಲಿನ ಸುವರ್ಣಮುಖಿ ನದಿಗೆ ದೇವರಾಜು ಅರಸು ಮುಖ್ಯಮಂತ್ರಿಗಳಾಗಿದ್ದಾಗ ಈ ಚೆಕ್ ಡ್ಯಾಮ್ ಕಟ್ಟಲಾಗಿತ್ತು. ಕನಕಪುರ ಗಾಂಧಿ ಎಂದೇ ಪ್ರಸಿದ್ಧಿಯಾಗಿದ್ದ ಎಸ್.ಕರಿಯಪ್ಪನವರು ಈ  ಮಹತ್ವಾಕಾಂಕ್ಷಿ ಯೊಜನೆ ಕೈಗೆತ್ತಿಕೊಳ್ಳುವಲ್ಲಿ ಶ್ರಮವಹಿಸಿದ್ದರು.  ಚೆಕ್ ಡ್ಯಾಮ್‌ನಿಂದ ಸುಮಾರು 12 ರಿಂದ 13 ಕಿಲೋ ಮೀಟರ್‌ವರೆಗೂ ಸುತ್ತಲಿನ ಹತ್ತಾರು ಗ್ರಾಮಗಳಿಗೆ ನೀರುಣಿಸಲಾಗುತ್ತಿತ್ತು. ಚೀಲೂರು ಮಾರ್ಗವಾಗಿ ಕಲ್ಲಹಳ್ಳಿ ಗ್ರಾಮದವರೆಗೂ ನೀರು ಪೂರೈಕೆಯಾಗುತ್ತಿತ್ತು. ಎರಡು ಸಾವಿರ ಎಕರೆಯಷ್ಟು ಭೂಮಿ ಇದರಿಂದ ಹಸನಾಗಿತ್ತು.ಆದರೆ ಹತ್ತಾರು ವರ್ಷಗಳಿಂದ ಕಾಲುವೆ ಹೂಳಿನಿಂದ ಮುಚ್ಚಿ ಕೇವಲ 2 ಕಿಲೋ ಮೀಟರ್ ಅಳತೆಯಲ್ಲಿ ಮಾತ್ರ ನೀರು ಲಭ್ಯವಾಗುವ ಸ್ಥಿತಿ ತಲುಪಿತ್ತು. ಈ ಚಾನೆಲ್‌ನ ನೀರು ನೆಚ್ಚಿಕೊಂಡಿದ್ದ ಇನ್ನುಳಿದ ಪ್ರದೇಶದ ಜನತೆ ಕ್ರಮೇಣ ನೀರಾವರಿ ಆಧಾರಿತ ಕೃಷಿಯನ್ನೇ ಕೈಬಿಟ್ಟಿದ್ದರು.ಪ್ರಸಕ್ತ ಸಾಲಿನಲ್ಲಿ ಸಕಾಲಕ್ಕೆ ಮಳೆಯಾಗದೆ ಈ ಭಾಗದ ಜನತೆಗೆ ಕುಡಿಯುವ ನೀರೇ ಸಿಗದಂತಹ ಪರಿಸ್ಥಿತಿ ಉದ್ಭವಿಸಿದಾಗ ಶಾಸಕ ಡಿ.ಕೆ.ಶಿವಕುಮಾರ್ ಇತ್ತ ಚಿತ್ತ ಹರಿಸಿದರು.ಕಲ್ಲಹಳ್ಳಿ ಮತ್ತು ತುಂಗಣಿ ಗ್ರಾಮ ಪಂಚಾಯಿತಿಗಳಲ್ಲಿ ಅವರು ಗ್ರಾಮ ಪ್ರವಾಸ ಕೈಗೊಂಡ್ದ್ದಿದಾಗ ಗ್ರಾಮಸ್ಥರು ತಮ್ಮೂರಿನ ನೀರಿನ ಬವಣೆಯನ್ನು ಶಾಸಕರಲ್ಲಿ ಅರುಹಿದರು. ಈ ಪ್ರದೇಶವನ್ನು ಶಾಶ್ವತ ನೀರಾವರಿ ಪ್ರದೇಶವಾಗಿ ಮಾಡುವಂತೆ ಮನವಿ ಮಾಡಿದ್ದರು.ಇದಕ್ಕೆ ತಕ್ಷಣವೇ ಸ್ಪಂದಿಸಿದ ಶಾಸಕರು ಚೀಲೂರು ಚೆಕ್ ಡ್ಯಾಮ್‌ಗೆ ಸಂಬಂಧಿಸಿದಂತೆ ಸ್ಥಳೀಯರೊಂದಿಗೆ ಚರ್ಚೆ ನಡೆಸಿದಾಗ, ಕಾಲುವೆ ದುರಸ್ತಿ ಮಾಡಿದರೆ ಈ ಭಾಗಕ್ಕೆ ಶಾಶ್ವತ ನೀರಾವರಿ ಕಲ್ಪಿಸಬಹುದೆಂಬ ಸಂಗತಿ ಅವರಿಗೆ ಮನದಟ್ಟಾಯಿತು.ಕೂಡಲೇ ಈ ದಿಸೆಯಲ್ಲಿ ಕಾರ್ಯತತ್ಪರವಾದ ಶಾಸಕರು ಜಿಲ್ಲಾಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು. ಕಾಲುವೆಯಲ್ಲಿ ಹೂಳು ತೆಗೆಸಿ ಸರಾಗವಾಗಿ ನೀರು ಹರಿಯುವಂತೆ ವ್ಯವಸ್ಥೆ ಮಾಡಲು ಏನೇನು ಕ್ರಮ ಕೈಗೊಳ್ಳಬೇಕೋ ಅದಕ್ಕೆ ಮುಂದಾಗುವಂತೆ ಸೂಚಿಸಿದರು.

 

ಈ ಮೂಲಕ ಕಲ್ಲಹಳ್ಳಿ, ತುಂಗಣಿ ವ್ಯಾಪ್ತಿಯ ಭಾಗದಲ್ಲಿರುವ ಸಣ್ಣ ಪುಟ್ಟ ಕೆರೆಗಳಿಗೂ ನೀರು ತುಂಬಿಸಬೇಕೆಂಬ ಪ್ರಸ್ತಾವನೆಯನ್ನು ಮುಂದಿಟ್ಟರು. ಈ ದಿಸೆಯಲ್ಲಿ ಜಿಲ್ಲಾಧಿಕಾರಿ ಶ್ರೀರಾಮರೆಡ್ಡಿ ಕಾಲುವೆಯ ಸ್ಥಳಕ್ಕೆ ಖುದ್ದು ಭೇಟಿ ನೀಡಿ ಪರಿಶೀಲಿಸಿದರು.ಟೊಂಕ ಕಟ್ಟಿದವರು: ಕಾಲುವೆಯ ಹೂಳೆತ್ತುವ ಕಾರ್ಯಕ್ಕೆ ಶಾಸಕರ ಸಹೋದರ ಹಾಗೂ ಕಾಂಗ್ರೆಸ್ ಯುವ ಮುಖಂಡ ಡಿ.ಕೆ.ಸುರೇಶ್, ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ರವಿ, ತಾ.ಪಂ. ಮಾಜಿ ಅಧ್ಯಕ್ಷ ಎಂ.ಪುರುಷೋತ್ತಮ್, ಸುಕನ್ಯಾ ರಂಗಸ್ವಾಮಿ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ನಟರಾಜ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎನ್.ದಿಲೀಪ್, ಕಲ್ಲಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ಪ್ರಕಾಶ್, ಮಾಜಿ ಅಧ್ಯಕ್ಷ ಮರಿಯಪ್ಪ, ಉಪಾಧ್ಯಕ್ಷ ವೈರಮುಡಿ, ಕಲ್ಲಹಳ್ಳಿ ರವಿಕುಮಾರ್, ತಿಗಳರಹಳ್ಳಿ ಕುಶ ಮೊದಲಾದವರು ಟೊಂಕಕಟ್ಟಿ ನಿಂತರು.ಪರಸ್ಪರ ಸಹಕಾರದೊಂದಿಗೆ ಸ್ವಂತ ಹಣದಿಂದಲೇ 12.8 ಕಿಲೋ ಮೀಟರ್ ಅಳತೆಯಲ್ಲಿ ಕಾಲುವೆ ಸ್ವಚ್ಛಗೊಳಿಸುವ ಕಾರ್ಯಕ್ಕೆ ಮುಂದಾದರು. ಅವರ ಈ ಇಚ್ಛಾಶಕ್ತಿ ಅತ್ಯಂತ ಕಡಿಮೆ ಅವಧಿಯಲ್ಲೇ ಯಶಸ್ವಿಯೂ ಆಯಿತು. ಇದೀಗ ಕಾಲುವೆಯನ್ನು ಅಚ್ಚುಕಟ್ಟಾಗಿ ಸ್ವಚ್ಛಗೊಳಿಸಲಾಗಿದೆ. ಇವರೆಲ್ಲರ ಪರಿಶ್ರಮದಿಂದಾಗಿ ಕಾಲುವೆಯಲ್ಲಿ ವೃಷಭಾವತಿ ನೀರು ಸರಾಗವಾಗಿ ಹರಿದು ಕಲ್ಲಹಳ್ಳಿ ಕೆರೆಯವರೆಗೂ ಬಂದು ತಲುಪುತ್ತಿದೆ.ಕಾಲುವೆಗೆ ಅಲ್ಲಲ್ಲಿ ಟ್ಯೂಬುಗಳನ್ನು ಜೋಡಿಸಿರುವುದರಿಂದ ಅಕ್ಕಪಕ್ಕದ ಜಮೀನುಗಳಿಗೂ ನೀರು ಪೂರೈಕೆಯಾಗುತ್ತಿದೆ. ಸಹಜವಾಗಿಯೇ ರೈತರ ಮುಖದಲ್ಲಿ ಈಗ ಮಂದಹಾಸ ಮೂಡಿದೆ. ಒಣಗಿ ಪಾಳು ಬಿದ್ದಿದ್ದ ಭೂಮಿಯನ್ನು ಹದಗೊಳಿಸಿ ಭತ್ತ, ರಾಗಿ, ರೇಷ್ಮೆ ಬೆಳೆ ಬೆಳೆಯಲು ಮುಂದಾಗಿದ್ದಾರೆ. ಕೃಷಿಗೆ ನೀರು ಕೊಡುವುದರ ಜೊತೆಗೆ ಗ್ರಾಮದಲ್ಲಿನ ಕೆರೆಗಳಿಗೂ ನೀರು ತುಂಬಿಸುವ ಕೆಲಸ ಸಾಗಿದ್ದು ಈ ಪ್ರದೇಶದ ಬಹುತೇಕ ಕೆರೆಗಳು ಈಗ ಭರ್ತಿಯಾಗಿವೆ.ಕಲ್ಲಹಳ್ಳಿ ಕೆರೆಯಲ್ಲಿ ಬಹುದಿನಗಳಿಂದ ಟ್ಯೂಬ್ ಹಾಳಾಗಿ ದುರಸ್ತಿಯಾಗದೆ ನೆನೆಗುದಿಗೆ ಬಿದ್ದಿತ್ತು. ಡಿ.ಕೆ.ಸುರೇಶ್ ಮುತುವರ್ಜಿ ವಹಿಸಿ 5 ಲಕ್ಷ ರೂ. ವೆಚ್ಚದಲ್ಲಿ ಹೊಸ ಟ್ಯೂಬ್ ನಿರ್ಮಿಸಿದ್ದಾರೆ. ಈ ಕೆರೆಗೂ ನೀರು ತುಂಬುವಂತೆ ನೋಡಿಕೊಂಡಿದ್ದಾರೆ. ಹೀಗಾಗಿ ಕೆರೆಯಲ್ಲಿ ನೀರು ತುಂಬಿ ತುಳುಕುತ್ತಿದೆ.ಕೆರೆಯಲ್ಲಿ ನೀರು ತುಂಬಿರುವುದರಿಂದ ಕಾಲುವೆ ಕೆಳಗಿನ ಪ್ರದೇಶಕ್ಕೂ ಈಗ ನೀರಾವರಿ ಸೌಭಾಗ್ಯ ದೊರೆತಿದೆ. ಎತ್ತರದ ಪ್ರದೇಶದಲ್ಲಿನ ರೈತರ ಕೃಷಿ ಬೋರ್‌ವೆಲ್‌ಗಳಲ್ಲಿ ಅಂತರ್ಜಲವೂ ಹೆಚ್ಚಾಗಿದೆ. ಬೇಸಿಗೆ ಬರದಿಂದ ಬತ್ತಿಹೋಗಿದ್ದ ನೂರಾರು ಕೊಳವೆ ಬಾವಿಗಳಲ್ಲಿ ನೀರು ಹೆಚ್ಚಿದ್ದು ಜಮೀನುಗಳಿಗೆ ಸಮೃದ್ಧತೆ ಕಾಣುತ್ತಿವೆ.`ಶಾಸಕ ಡಿ.ಕೆ.ಶಿವಕುಮಾರ್ ಮತ್ತು ಅವರ ಸಹೋದರ ಡಿ.ಕೆ.ಸುರೇಶ್ ಅವರ ಈ ಕಾರ್ಯ ಬಹುಕಾಲ ನೆನಪಿನಲ್ಲಿ ಉಳಿಯುವಂಥಾದ್ದು. ತಾಲ್ಲೂಕಿನಲ್ಲಿ ಅವರು ಮಾಡಿರುವ ಯಾವುದೇ ಅಭಿವೃದ್ಧಿ ಕೆಲಸಗಳಲ್ಲಿಈ ಕೆಲಸ ಕೆಲಸ ಎಲ್ಲಕ್ಕಿಂತ ಮಿಗಿಲಾದದ್ದು~ ಎನ್ನುತ್ತಾರೆ ಕಲ್ಲಹಳ್ಳಿ ಗ್ರಾಮಸ್ಥರು. ಸದ್ಯದಲ್ಲೇ ಶಾಸಕರು ಕೆರೆಗೆ ಬಾಗಿನ ಅರ್ಪಿಸಲಿದ್ದಾರೆ.`ಎಸ್.ಕರಿಯಪ್ಪನವರ ಆಸೆ ನೆರವೇರಿದೆ~

ನಿಸ್ಪ್ರಯೋಜಕವಾಗಿ ಹರಿದು ಹೋಗುತ್ತಿದ್ದ ವೃಷಭಾವತಿ ನದಿಗೆ ಚೀಲೂರು ಬಳಿ ಅಣೆಕಟ್ಟೆ ನಿರ್ಮಿಸಿ ಸಾವಿರಾರು ಎಕರೆ ಭೂ ಪ್ರದೇಶಕ್ಕೆ ನೀರು ಪೂರೈಕೆ ಮಾಡಬೇಕೆಂದಿದ್ದ  ಎಸ್.ಕರಿಯಪ್ಪನವರ ಆಸೆ ಇಂದು ನೆರವೇರಿದೆ. ಡಿ.ಕೆ.ಶಿವಕುಮಾರ್, ಡಿ.ಕೆ.ಸುರೇಶ್ ಪರಿಶ್ರಮದಿಂದ ಕೊನೆಯ ಗ್ರಾಮಕ್ಕೂ ನೀರಾವರಿ ಭಾಗ್ಯದೊರೆಯುವಂತಾಗಿದೆ. ಇದರಿಂದ ಬರಡಾಗಿದ್ದ ಜಮೀನಿನಲ್ಲಿ ವ್ಯವಸಾಯ ಮಾಡಲು ಸಹಕಾರಿಯಾಗಿದೆ. ಬತ್ತಿಹೋಗಿದ್ದ ಕೊಳವೆ ಬಾವಿಗಳಲ್ಲಿ ಅಂತರ್ಜಲ ಹೆಚ್ಚಾಗಿದೆ.

-ಎಂ.ಪುರುಷೋತ್ತಮ್, ತಾ.ಪಂ. ಮಾಜಿ ಅಧ್ಯಕ್ಷರು

`ಬರಗಾಲದ ದಣಿವು ನೀಗಿದಂತಾಗಿದೆ~

ಕಲ್ಲಹಳ್ಳಿ ಗ್ರಾಮದವರೆಗೂ ನೀರು ಪೂರೈಕೆಯಾಗುವಂತೆ ಕಾಲುವೆಯನ್ನು ಅಂದಿನ ಕಾಲದಲ್ಲೇ ನಿರ್ಮಿಸಲಾಗಿತ್ತು. ಆದರೆ ಇಲ್ಲಿಯ ತನಕ ನೀರು ಬಂದಿರಲಿಲ್ಲ. ಇಂದು ಕಾಲುವ ಸ್ವಚ್ಛಗೊಳಿಸಿದ್ದರಿಂದ ನೀರು ಸರಾಗವಾಗಿ ಹರಿದು ಬಂದು ಗ್ರಾಮವನ್ನು ಸೇರಿದೆ. ಕಲ್ಲಹಳ್ಳಿ ಕೆರೆಯನ್ನು ಅಭಿವೃದ್ಧಿಗೊಳಿಸಿ ಅದಕ್ಕೂ ನೀರು ತುಂಬಿಸಿರುವುದರಿಂದ ಇಂದು ಗ್ರಾಮದವರೆಲ್ಲಾ ವ್ಯವಸಾಯ ಮಾಡಬಹುದಾಗಿದ್ದು ಬರಗಾಲದ ದಣಿವನ್ನು ನೀಗಿದಂತಾಗಿದೆ, ಇದು ಒಂದು ಶಾಶ್ವತ ಕೆಲಸವಾಗಿದೆ.

-ಮರಿಯಣ್ಣ, ಕಲ್ಲಹಳ್ಳಿ ಗ್ರಾಮದ ಮುಖಂಡರು

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.