ಶನಿವಾರ, ಮೇ 8, 2021
18 °C

ಚುಂಚನಕಟ್ಟೆಗೆ ಶಾಪ ವಿಮೋಚನೆ ಎಂದು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಾಲಿಗ್ರಾಮ: ನೂರು ಬಸ್ ಬಂದು ಹೋದರೂ ಪ್ರಯಾಣಿಕರಿಗೆ ಬಸ್ ನಿಲ್ದಾಣ ಮಾತ್ರ ಇಲ್ಲ! ಬಿಸಿಲು ಮಳೆಯಿಂದ ರಕ್ಷಣೆ ಪಡೆದುಕೊಳ್ಳಲು  ಪ್ರಯಾಣಿಕರು ಬಸವ ಸರ್ಕಲ್ ಅನ್ನು ಆಶ್ರಯಿಸುತ್ತಿದ್ದಾರೆ. ಕಾವೇರಿ ನದಿಯ ದಂಡೆ ಮೇಲೆ ಪಟ್ಟಣವಿದ್ದರೂ ಇಲ್ಲಿಯ ಜನರಿಗೆ ಕುಡಿಯಲು  ಸಿಗುವುದು ಮಾತ್ರ ಕೊಳವೆಬಾವಿ ನೀರು. ಪ್ರವಾಸಿ ಕೇಂದ್ರಕ್ಕೆ ಹೇಳಿ ಮಾಡಿಸಿದ ಸ್ಥಳವಾಗಿದ್ದರೂ ಬರುವ ಪ್ರವಾಸಿಗರಿಗೆ ಮಾತ್ರ ಕನಿಷ್ಠ ಸೌಲಭ್ಯವೂ  ಸಿಗುವುದಿಲ್ಲ.ಇದು ಕೆ.ಆರ್.ನಗರ ತಾಲ್ಲೂಕಿನ ಪ್ರಸಿದ್ಧ ಪ್ರವಾಸಿ ಕೇಂದ್ರವಾದ ಚುಂಚನಕಟ್ಟೆ ಹಲವು ದಶಕಗಳಿಂದ ಅನುಭವಿಸುತ್ತಿರುವ   ನರಕಯಾತನೆಯಾಗಿದೆ.ಕಳೆದ ಹಲವು ದಶಕಗಳಿಂದ ಚುಂಚನಕಟ್ಟೆ ಹೋಬಳಿಯವರು ಪಿರಿಯಾಪಟ್ಟಣ ಕ್ಷೇತ್ರದ ಅಭ್ಯರ್ಥಿಗಳಿಗೆ ಮತ ಹಾಕುತ್ತಿದ್ದರು. ಆದರೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವಂತೆ ಕೆ.ಆರ್.ನಗರದ ಶಾಸಕರನ್ನು ಕೇಳಬೇಕಾಗಿತ್ತು. ಇದರಿಂದಾಗಿ ಪಟ್ಟಣದ ಜನರು ಕನಿಷ್ಠ ಸೌಲಭ್ಯವನ್ನು  ಅನುಭವಿಸಲು ಸಾಧ್ಯವಾಗದೆ ಪರದಾಡುವಂತಾಗಿತ್ತು.ಇಲ್ಲಿರುವ ಪುರಾಣ ಪ್ರಸಿದ್ಧ ಕೋದಂಡರಾಮನ ದೇವಾಲಯವನ್ನು ವೀಕ್ಷಣೆ ಮಾಡಲು ಪ್ರತಿ ದಿನ ನೂರಾರು ಪ್ರವಾಸಿಗರು ಬರುತ್ತಿದ್ದು, ಇವರಿಗೆ  ಕುಡಿಯಲು ನೀರು ಸಿಗದೆ ಕಾವೇರಿ ನದಿಗೆ ಇಳಿದು ಬೊಗಸೆಯಲ್ಲಿ ನೀರು ಕುಡಿದು ದಾಹವನ್ನು ನೀಗಿಸಿಕೊಳ್ಳುವ ಸ್ಥಿತಿ ಇದೆ. ಅಲ್ಲದೆ ಪ್ರವಾಸಿಗರಿಗೆ  ಮತ್ತು ಮಹಿಳಾ ಪ್ರಯಾಣಿಕರಿಗೆ ಸಾರ್ವಜನಿಕ ಶೌಚಾಲಯವಿಲ್ಲ.`ಕಳೆದ ವಿಧಾನಸಭಾ ಚುನಾವಣೆಯಿಂದ ಚುಂಚನಕಟ್ಟೆ ಹೋಬಳಿಯನ್ನು ಕೆ.ಆರ್.ನಗರ ಕ್ಷೇತ್ರಕ್ಕೆ ಸೇರಿಸಲಾಗಿದೆ. ಹಿನ್ನೆಲೆಯಲ್ಲಿ ಹಂತ  ಹಂತವಾಗಿ ಅಭಿವೃದ್ಧಿ ಕೆಲಸಗಳನ್ನು ಕೈಗೆತ್ತಿಕೊಂಡಿರುವೆ~ ಎಂದು ಶಾಸಕ ಸಾ.ರಾ.ಮಹೇಶ್ ಪ್ರಜಾವಾಣಿಗೆ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.