ಮಂಗಳವಾರ, ಜೂನ್ 15, 2021
22 °C

ಚುನಾವಣಾ ಪ್ರಚಾರ ಕಣಕ್ಕಿಳಿದ ಪತ್ನಿಯರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊನ್ನಾಳಿ/ನ್ಯಾಮತಿ:  ದಾವಣಗೆರೆ ಲೋಕಸಭಾ ಕ್ಷೇತ್ರದ ಚುನಾವಣಾ ಕಣ ಮತ್ತಷ್ಟು ರಂಗೇರಿದೆ.  ಶನಿವಾರ ಕಾಂಗ್ರೆಸ್‌ ಅಭ್ಯರ್ಥಿ ಎಸ್.ಎಸ್.ಮಲ್ಲಿಕಾರ್ಜುನ ಪರ ಅವರ ಪತ್ನಿ ಡಾ.ಪ್ರಭಾ ಹೊನ್ನಾಳಿ ಹಾಗೂ ನ್ಯಾಮತಿಯಲ್ಲಿ ಪ್ರಚಾರ   ಕಾರ್ಯ ಕೈಗೊಂಡರು.

ಮತ್ತೊಂದೆಡೆ ಬಿಜೆಪಿ ಅಭ್ಯರ್ಥಿ ಜಿ.ಎಂ.ಸಿದ್ದೇಶ್ವರ ಪರ ಅವರ ಪತ್ನಿ ಗಾಯತ್ರಿ ಹೊನ್ನಾಳಿ ತಾಲ್ಲೂಕಿನಲ್ಲಿ ಮತದಾರರ ಮನವೊಲಿಕೆ ನಡೆಸಿದರು.ಭ್ರಷ್ಟರಿಗೆ ಮಣೆ ಹಾಕಬೇಡಿ: ಡಾ.ಪ್ರಭಾ ತಾಲ್ಲೂಕಿನ ಮತದಾರರು ಪ್ರಜ್ಞಾವಂತರಾಗಿದ್ದು, ಭ್ರಷ್ಟಾಚಾರ ಆರೋಪಿಗಳಿಗೆ ಮಣೆ ಹಾಕುವುದಿಲ್ಲ ಎಂದು ಎಸ್‌.ಎಸ್‌.ಮಲ್ಲಿಕಾರ್ಜುನ್‌ ಪತ್ನಿ ಪ್ರಭಾ ಮಲ್ಲಿಕಾರ್ಜುನ್‌ ವಿಶ್ವಾಸ ವ್ಯಕ್ತಪಡಿಸಿದರು. ಹೊನ್ನಾಳಿ ತಾಲ್ಲೂಕಿನ ಬೇಲಿಮಲ್ಲೂರು ಗ್ರಾಮದಲ್ಲಿ ಶನಿವಾರ ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಎಸ್‌.ಎಸ್‌. ಮಲ್ಲಿಕಾರ್ಜುನ್‌ ಅವರ

ಪರ ಮತ ಯಾಚಿಸಿ ಅವರು ಮಾತನಾಡಿದರು.ಕಾಂಗ್ರೆಸ್‌ ಪಕ್ಷದ ತಾಲ್ಲೂಕು ಘಟಕದ ಅಧ್ಯಕ್ಷ ಎಚ್‌.ಬಿ.ಮಂಜಪ್ಪ ಮಾತನಾಡಿ, ಕಾಂಗ್ರೆಸ್‌ ಪಕ್ಷ ಕೇಂದ್ರ ಮತ್ತು ರಾಜ್ಯದಲ್ಲಿ ಉತ್ತಮ, ಜನಪರ ಆಡಳಿತ ನಡೆಸಿದೆ. ಮತದಾರರು ಕಾಂಗ್ರೆಸ್‌ ಪಕ್ಷವನ್ನು ಬೆಂಬಲಿಸುತ್ತಾರೆ. ಕೇಂದ್ರದಲ್ಲಿ ಮತ್ತೆ ಕಾಂಗ್ರೆಸ್‌ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಡಿಡಿಸಿಸಿ ಬ್ಯಾಂಕ್‌ ನಿರ್ದೇಶಕ ಡಿ.ಎಸ್‌.ಸುರೇಂದ್ರ, ಯುವ ಕಾಂಗ್ರೆಸ್‌ ಅಧ್ಯಕ್ಷ ಕೆ.ವಿ.ಶ್ರೀಧರ್‌, ಮುಖಂಡ ಮಾದೇನಹಳ್ಳಿ ಸೋಮಶೇಖರ್‌ ಇತರರು ಇದ್ದರು. ಸಿದ್ದೇಶ್ವರ ಪರ ಪತ್ನಿ ಗಾಯತ್ರಿ ಮತಯಾಚನೆ ಬಹುಕೋಟಿ ಭ್ರಷ್ಟಾಚಾರದ ಆರೋಪಿಗಳಿಗೆ ಬೇರೆ ಪಕ್ಷದವರ ಭ್ರಷ್ಟಾಚಾರದ ಬಗ್ಗೆ ಟೀಕಿಸುವ ನೈತಿಕ ಹಕ್ಕು ಇಲ್ಲ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೇಳಿದರು. ಹೊನ್ನಾಳಿ ತಾಲ್ಲೂಕಿನ ದಿಡಗೂರು ಗ್ರಾಮದಲ್ಲಿ ಶನಿವಾರ ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಿ.ಎಂ.ಸಿದ್ದೇಶ್ವರ್‌ ಅವರ ಪರ ಮತ ಯಾಚಿಸಿ ಅವರು ಮಾತನಾಡಿದರು.ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಎ.ಬಿ.ಹನುಮಂತಪ್ಪ ಮಾತನಾಡಿ, ಬಿಜೆಪಿ ದೇಶದ ಸರ್ವತೋಮುಖ ಅಭಿವೃದ್ಧಿಗೆ ಕಟಿಬದ್ಧವಾಗಿದೆ. ಅದಕ್ಕಾಗಿ ನರೇಂದ್ರ ಮೋದಿ ಅವರನ್ನು ಗೆಲ್ಲಿಸಬೇಕು ಎಂದು ವಿನಂತಿಸಿದರು.ಜಿ.ಎಂ.ಸಿದ್ದೇಶ್ವರ ಅವರ ಪತ್ನಿ ಗಾಯತ್ರಿ ಸಿದ್ದೇಶ್ವರ, ದಾವಣಗೆರೆ ಮಹಾನಗರ ಪಾಲಿಕೆ ಮಾಜಿ ಮೇಯರ್‌ ಸುಧಾ ಜಯರುದ್ರೇಶ್‌, ಜಿಲ್ಲಾ ಪಂಚಾಯ್ತಿ ಸದಸ್ಯೆ ಅಂಬಿಕಾ ರಾಜಪ್ಪ, ಶಾಂತರಾಜ್‌ ಪಾಟೀಲ್‌ ಇತರರು ಮಾತನಾಡಿದರು.ಬಿಸಾಟಿ ಸುರೇಶ್‌, ಸತ್ತಿಗೆ ಲೋಕೇಶ್‌, ಉಮಾ ಪ್ರಕಾಶ್‌, ಜಯಲಕ್ಷ್ಮಿ, ಜ್ಯೋತಿ ಸಿದ್ದೇಶ್ವರ್‌ ಇತರರು ಇದ್ದರು. ದಿಡಗೂರು ಗ್ರಾಮದ ಆಂಜನೇಯ ಸ್ವಾಮಿಗೆ ಪೂಜೆ ಸಲ್ಲಿಸಿದ ನಂತರ ಪ್ರಚಾರ ಪ್ರಾರಂಭವಾಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.